ಕಪ್ಪು, ಏಷ್ಯನ್ ಹಾಗೂ ಇತರ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯಗಳ ಜನರ ಕೊಡುಗೆಗಳನ್ನು ಸ್ಮರಿಸುವ ಅಭಿಯಾನ ಬ್ರಿಟನ್ನಲ್ಲಿ ಹೆಚ್ಚುತ್ತಿದೆ. ಇದರ ನಡುವೆ ಮಹಾತ್ಮ ಗಾಂಧಿಯವರ ಸ್ಮರಣಾರ್ಥ ನಾಣ್ಯವನ್ನು ಟಂಕಿಸಲು ಬ್ರಿಟನ್ ಚಿಂತನೆ ನಡೆಸಿದೆ.
ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್, ಕಪ್ಪು, ಏಷ್ಯನ್ ಹಾಗೂ ಇತರ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯಗಳ ವ್ಯಕ್ತಿಗಳಿಗೆ ಮಾನ್ಯತೆ ನೀಡಲು ಇದು ಸುಸಮಯ ಎಂದಿದ್ದಾರೆ. ಅಲ್ಲದೆ ಗಾಂಧೀಜಿಯವರ ಚಿತ್ರದ ನಾಣ್ಯ ಬಿಡುಗಡೆಗೊಳಿಸಬೇಕೆಂದು ರಾಯಲ್ ಮಿಂಟ್ ಸಲಹಾ ಸಮಿತಿಯನ್ನು (RMAC)ಗೆ ಪತ್ರ ಬರೆದಿದ್ದಾರೆ ಎಂದು ಯುನೈಟೈಡ್ ಕಿಂಗ್ಡಮ್ ಖಜಾನೆ ಇಲಾಖೆ ಹೇಳಿದೆ.
“RMAC ಪ್ರಸ್ತುತ ಗಾಂಧಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸುವುದನ್ನು ಪರಿಗಣಿಸುತ್ತಿದೆ” ಎಂದು ಬ್ರಿಟನ್ ಖಜಾಂಜಿ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಹಾತ್ಮ ಗಾಂಧಿಯವರ 150 ನೇ ಹುಟ್ಟುಹಬ್ಬದ ನೆನಪಿಗಾಗಿ ಬ್ರಿಟನ್ ಸರ್ಕಾರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದೆ ಎಂದು ಬ್ರಿಟಿಷ್ ಮಾಜಿ ಹಣಕಾಸು ಸಚಿವ ಸಾಜಿದ್ ಜಾವಿದ್ 2019 ರಲ್ಲಿಯೇ ಹೇಳಿದ್ದರು.
ಅಮೇರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಕೊಲೆಯ ಬಳಿಕ ಇತಿಹಾಸ, ವಸಾಹತುಶಾಹಿ ಮತ್ತು ವರ್ಣಭೇದ ನೀತಿಯ ಜಾಗತಿಕ ಪುನರ್ವಿಮರ್ಶೆಯ ಭಾಗವಾಗಿ, ಕೆಲವು ಬ್ರಿಟಿಷ್ ಸಂಸ್ಥೆಗಳು ತಮ್ಮ ಪೂರ್ವಜರ ಕೃತ್ಯವನ್ನು ಮರೆಯದಿರಲು ಹಾಗೂ ಅದನ್ನು ಪಾಠವಾಗಿ ಸ್ವೀಕರಿಸಲು ಮರು ಚಿಂತನೆ ಪ್ರಾರಂಭಿಸಿವೆ. ಕಪ್ಪು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಜನಾಂಗೀಯ ಸಮುದಾಯಗಳಿಗೆ ಸಹಾಯ ಮಾಡಲು ಹಾಗೂ ಜನಾಂಗೀಯ ವೈವಿಧ್ಯತೆಯನ್ನು ಪ್ರೋತ್ಸಾಹಿಸಲು ಹೂಡಿಕೆ ಮಾಡಲು ಅನೇಕ ಸಂಸ್ಥೆಗಳು ಉಪಕ್ರಮಗಳನ್ನು ಕೈಗೊಂಡಿವೆ.









