ನಿಷ್ಕ್ರಿಯ ಸಾಲದ ಸಂಕಷ್ಟಗಳಿಂದ ಬ್ಯಾಂಕುಗಳು ಹೊರಬರುತ್ತಿವೆ, ಬ್ಯಾಂಕುಗಳ ಸಾಲ ನೀಡಿಕೆ ವ್ಯವಸ್ಥೆ ಹೆಚ್ಚು ಸುರಕ್ಷಿತ ಮತ್ತು ಸದೃಢವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಾಗ್ಗೆ ಹೇಳುತ್ತಾ ಬಂದಿದ್ದರೂ ಅಂಕಿಅಂಶಗಳು ಬೇರೆಯದೇ ಸತ್ಯವನ್ನು ಹೇಳುತ್ತಿವೆ. ದೇಶದ ಅಗ್ರ ಹತ್ತು ಬ್ಯಾಂಕುಗಳಲ್ಲಿನ 1 ಲಕ್ಷ ಕೋಟಿ ಒತ್ತಡದ ಸಾಲವು ಈಗ ನಿಷ್ಕ್ರಿಯ ಸಾಲವಾಗಿ ಪರಿವರ್ತನೆಗೊಂಡಿದೆ.
ಪ್ರಸಕ್ತ ವಿತ್ತೀಯ ವರ್ಷದ ಪೂರ್ವಾರ್ಧದಲ್ಲೇ ಇಷ್ಟು ದೊಡ್ಡಪ್ರಮಾಣದ ಸಾಲವು ನಿಷ್ಕ್ರಿಯ ಸಾಲವಾಗಿ ಪರಿವರ್ತನೆ ಆಗಿರುವುದು ಆತಂಕಕ್ಕೆ ಎಡೆ ಮಾಡಿದೆ. ಪ್ರಸ್ತುತ ದೇಶದ ಆರ್ಥಿಕ ಸ್ಥಿತಿ ಎದುರಿಸುತ್ತಿರುವ ಸವಾಲುಗಳಿಂದಾಗಿ ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಮತ್ತಷ್ಟು ಒತ್ತಡದ ಸಾಲವು ನಿಷ್ಕ್ರಿಯ ಸಾಲವಾಗಿ ಪರಿವರ್ತನೆಯಾಗುವ ಭೀತಿ ಎದುರಾಗಿದೆ. ಯಾವ ಸಾಲವು ಸಕಾಲದಲ್ಲಿ ಮರುಪಾವತಿಯಾಗುವುದಿಲ್ಲವೋ ಮತ್ತು ನಿಯಮಿತವಾಗಿ ಸಾಲದ ಮೇಲಿನ ಬಡ್ಡಿಯೂ ಪಾವತಿಯಾಗುವುದಿಲ್ಲವೋ ಅದು ಒತ್ತಡದಲ್ಲಿರುವ ಸಾಲ. ಈ ಒತ್ತಡದಲ್ಲಿರುವ ಸಾಲದ ಕಾಲಮಿತಿ ಮೀರಿದರೆ ಅದು ನಿಷ್ಕ್ರಿಯ ಸಾಲವಾಗಿ ಪರಿವರ್ತನೆಯಾಗುತ್ತದೆ. ಯಾವ ಸಾಲವು ಅಸಲು ಮರುಪಾವತಿ ಮತ್ತು ಮತ್ತು ಬಡ್ಡಿ ಪಾವತಿ ಆಗದೇ ಸುಧೀರ್ಘ ಅವಧಿಗೆ ಸುಸ್ತಿಯಾಗುತ್ತದೋ ಅದನ್ನು ನಿಷ್ಕ್ರಿಯ ಸಾಲವೆಂದು ಘೋಷಿಸಲಾಗುತ್ತದೆ. ನಿಷ್ಕ್ರಿಯ ಸಾಲವು ಬ್ಯಾಂಕುಗಳಿಗೆ ಹೊರೆ. ಒಂದರ್ಥದಲ್ಲಿ ಅದು ಬ್ಯಾಂಕುಗಳಿಗೆ ಶಾಪವೂ ಹೌದು. ನಿಷ್ಕ್ರಿಯ ಸಾಲ ಬ್ಯಾಂಕುಗಳಿಗೆ ಹೇಗೆ ಹೊರೆ ಮತ್ತು ಶಾಪವೋ ಹಾಗೆಯೇ ಬೃಹದಾರ್ಥಿಕತೆ ಪಾಲಿಗೂ ಅದು ಶಾಪವಾಗಿ ಪರಿಣಮಿಸುತ್ತದೆ.
ಇಷ್ಟು ಬೃಹತ್ ಪ್ರಮಾಣದಲ್ಲಿ ನಿಷ್ಕ್ರಿಯ ಸಾಲದ ಪ್ರಮಾಣ ಏರಿಕೆ ಆಗಲು ಕಾರಣವೇನು? ದೇಶದ ಆರ್ಥಿಕತೆ ಎದುರಿಸುತ್ತಿರುವ ಸಂಕಷ್ಟ ಒಂದು ಕಾರಣವಾದರೆ ಮತ್ತೊಂದೆಡೆ ಒತ್ತಡದ ಸಾಲಗಳ ವ್ಯಾಜ್ಯ ವಿಲೇವಾರಿಯಲ್ಲಾಗುತ್ತಿರುವ ವಿಳಂಬವೂ ಮತ್ತೊಂದು ಕಾರಣ. ಪ್ರಸಕ್ತ ವಿತ್ತೀಯ ವರ್ಷದ ಪೂರ್ವಾರ್ಧದಲ್ಲಿ ಅಂದರೆ ಏಪ್ರಿಲ್- ಸೆಪ್ಟೆಂಬರ್ ತಿಂಗಳ ನಡುವೆ 1 ಲಕ್ಷ ಕೋಟಿ ರುಪಾಯಿ ನಿಷ್ಕ್ರಿಯ ಸಾಲವಾಗಿ ಪರಿವರ್ತನೆಯಾಗಿದೆ. ಇದು ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿದ್ದ 90,000 ಕೋಟಿಗೆ ಹೋಲಿಸಿದೆ ಸುಮಾರು ಶೇ.11ರಷ್ಟು ಹೆಚ್ಚಳವಾಗಿದೆ.
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ 25,017 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ 13,531 ಕೋಟಿ, ಬ್ಯಾಂಕ್ ಆಫ್ ಬರೋಡ 11,584 ಕೋಟಿ, ಯೆಸ್ ಬ್ಯಾಂಕ್ 12,175 ಕೋಟಿ, ಆಕ್ಸಿಸ್ ಬ್ಯಾಂಕ್ 9,781 ಕೋಟಿ, ಎಚ್ಡಿಎಫ್ಸಿ ಬ್ಯಾಂಕ್ 7,939 ಕೋಟಿ, ಬ್ಯಾಂಕ್ ಆಫ್ ಇಂಡಿಯಾ 6,849 ಕೋಟಿ, ಕೆನರಾ ಬ್ಯಾಂಕ್ 6,278 ಕೋಟಿ, ಐಸಿಐಸಿಐ ಬ್ಯಾಂಕ್ 5,261 ಕೋಟಿ,ಕೋಟಕ್ ಮಹಿಂದ್ರಾ ಬ್ಯಾಂಕ್ 1800 ಕೋಟಿ ಸೇರಿದಂತೆ ನಿಷ್ಕ್ರಿಯ ಸಾಲದ ಮೊತ್ತವು 1,00,215 ಕೋಟಿಗೆ ಏರಿದೆ.
ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪಾಲು ಶೇ.63ರಷ್ಟಿದೆ. ಒಟ್ಟಾರೆ ನಿಷ್ಕ್ರಿಯ ಸಾಲದ ಪೈಕಿ ದೇಶದ ಅತಿದೊಡ್ಡ ಸಾರ್ಜಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾಲು ಶೇ.25ರಷ್ಟು ದಾಟಿದೆ. ಖಾಸಗಿ ವಲಯದ ಬ್ಯಾಂಕುಗಳ ಪೈಕಿ ಇತ್ತೀಚೆಗೆ ತೀವ್ರ ವಿವಾದಕ್ಕೆ ಈಡಾಗಿರುವ ಯೆಸ್ ಬ್ಯಾಂಕ್ ಪಾಲು 12,175 ಕೋಟಿಗಳಷ್ಟಿದೆ.
ಆರ್ಬಿಐ ಮಾರ್ಗ ಸೂಚಿಗಳ ಪ್ರಕಾರ ಬ್ಯಾಂಕುಗಳು ನಿಯಮಿತವಾಗಿ ನಿಷ್ಕ್ರಿಯ ಸಾಲದ ಪ್ರಮಾಣವನ್ನು ಘೋಷಣೆ ಮಾಡಬೇಕು ಮತ್ತು ಆಯಾ ತ್ರೈಮಾಸಿಕಗಳಲ್ಲಿನ ಲಾಭನಷ್ಟ ಪಟ್ಟಿಯಲ್ಲಿ ನಿಷ್ಕ್ರಿಯ ಸಾಲದ ಹೊರೆ ತಗ್ಗಿಸಲು ಲಾಭದ ಪ್ರಮಾಣವನ್ನು ಮೀಸಲಿಡಬೇಕು.
ಹೀಗಾಗಿ ನಿಷ್ಕ್ರಿಯ ಸಾಲದ ಪ್ರಮಾಣವು ಹೆಚ್ಚಾದಂತೆ ಬ್ಯಾಂಕು ತಾನುಗಳಿಸುವ ಲಾಭದ ಪೈಕಿ ಅತಿ ದೊಡ್ಡ ಪಾಲನ್ನು ಈ ನಿಷ್ಟ್ರಿಯ ಸಾಲದ ಭಾರವನ್ನು ತಗ್ಗಿಸಲು ಮೀಸಲಿಡಬೇಕಾಗುತ್ತದೆ. ಹೀಗಾಗಿಯೇ ಸಾರ್ವಜನಿಕ ವಲಯದ ಬ್ಯಾಂಕುಗಳು ಹಲವು ತ್ರೈಮಾಸಿಕಗಳಿಂದ ವಾಸ್ತವಿಕವಾಗಿ ಲಾಭವನ್ನು ಗಳಿಸುತ್ತಿದ್ದರೂ ನಿಷ್ಕ್ರಿಯ ಸಾಲದ ಹೊರೆ ತಗ್ಗಿಸಲು ಲಾಭದ ಮೊತ್ತದ ಜತೆಗೆ ಹೆಚ್ಚುವರಿ ಮೊತ್ತವನ್ನು ಮೀಸಲಿಡುತ್ತಿರುವುದರಿಂದ ನಷ್ಟವನ್ನು ಘೋಷಣೆ ಮಾಡುತ್ತಿವೆ.
ಒತ್ತಡದ ಸಾಲಗಳ ವಸೂಲಾತಿಗಾಗಿ ರೂಪಿಸಿರುವ ಪರಿಹಾರ ಕ್ರಮಗಳ ಜಾರಿಯಲ್ಲಿ ವಿಳಂಬವಾಗುತ್ತಿರುವುದರಿಂದಾಗಿ ಬ್ಯಾಂಕುಗಳ ಸಾಲದ ಮೇಲಿನ ವೆಚ್ಚವು ಹೆಚ್ಚಾಗುತ್ತಿದೆ. ಹೀಗಾಗಿ ಲಾಭದ ಪ್ರಮಾಣವು ತಗ್ಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದಿವಾಳಿ ಸಂಹಿತೆ (ಐಬಿಸಿ) ಮತ್ತು ಅಂತರ ಸಾಲದಾತರ ಒಡಂಬಡಿಕೆ (ಐಸಿಎ)ಯ ನಂತರವೂ ಒತ್ತಡದ ಸಾಲದ ವ್ಯಾಜ್ಯ ವಿಲೇವಾರಿ ವಿಳಂಬವಾಗಿ, ಅದು ನಿಷ್ಕ್ರಿಯ ಸಾಲವಾಗಿ ಪರಿಣಮಿಸುತ್ತಿದೆ.
ವ್ಯತಿರಿಕ್ತ ಪರಿಣಾಮ ಹೇಗೆ?
ಒಂದು ಲಕ್ಷ ಕೋಟಿ ರುಪಾಯಿ ನಿಷ್ಕ್ರಿಯ ಸಾಲವಾಗಿ ಪರಿವರ್ತನೆಗೊಂಡರೆ, ಅದು ಸಾಲ ನೀಡಿದ ಬ್ಯಾಂಕಿಗೆ ಹೊರೆ ಆಗುವುದಷ್ಟೇ ಅಲ್ಲ, ಆ ಒಂದು ಲಕ್ಷ ಕೋಟಿ ರುಪಾಯಿ ವಹಿವಾಟಾಗದೇ ಇರುವುದರಿಂದ ಅಷ್ಟರ ಮಟ್ಟಿಗೆ ಅದು ಆರ್ಥಿಕ ಚಟುವಟಿಕೆಗಳ ಮುಖ್ಯವಾಹಿನಿಯಿಂದ ದೂರ ಉಳಿಯುತ್ತದೆ. ಹೀಗಾಗಿ ಅದು ಆರ್ಥಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದು ಲಕ್ಷ ಕೋಟಿ ರುಪಾಯಿಗಳು ಸಾಲ ನೀಡಿಕೆಗೆ ಲಭ್ಯವಾಯಿತು ಎಂದಿಟ್ಟುಕೊಳ್ಳಿ. ಅದನ್ನು ತಲಾ 50 ಲಕ್ಷ ರುಪಾಯಿಗಳಂತೆ ಎರಡು ಲಕ್ಷ ಜನರಿಗೆ ಗೃಹಸಾಲವಾಗಿ ನೀಡಿದರೆ, ಈಗ ಮಾರಾಟವಾಗದೇ ಉಳಿದಿರುವ 2 ಲಕ್ಷ ವಸತಿ ಘಟಕಗಳು (ಫ್ಲ್ಯಾಟ್ ಗಳು) ಮಾರಾಟವಾಗುತ್ತವೆ. ಆಗ ರಿಯಲ್ ಎಸ್ಟೇಟ್ ವಲಯದಲ್ಲಿ ಬೇಡಿಕೆ ಕುದುರುತ್ತದೆ. ಹೊಸ ಯೋಜನೆಗಳು ಪ್ರಾರಂಭವಾಗುತ್ತವೆ. ಸಹಜವಾಗಿಯೇ ಹೊಸ ಯೋಜನೆಗಳು ಉದ್ಯೋಗವನ್ನು ಸೃಷ್ಟಿಸುತ್ತವೆ. ಉದ್ಯೋಗ ಸೃಷ್ಟಿಯು ಅಂತಿಮವಾಗಿ ಆರ್ಥಿಕ ಚಟುವಟಿಕೆ ಉತ್ತೇಜಿಸುತ್ತದೆ. ಅದು ಆಯಾ ತ್ರೈಮಾಸಿಕ ಮತ್ತು ವಾರ್ಷಿಕ ಜಿಡಿಪಿಯಲ್ಲಿ ಪ್ರತಿಫಲನಗೊಳ್ಳುತ್ತದೆ. ನಿಷ್ಕ್ರಿಯ ಸಾಲದ ಪ್ರಮಾಣವು ಹೆಚ್ಚಾದಂತೆ ಬ್ಯಾಂಕಿಂಗ್ ವ್ಯವಸ್ಥೆಗಷ್ಟೇ ಹಾನಿಕಾರಕವಲ್ಲ, ಇಡೀ ಆರ್ಥಿಕ ವ್ಯವಸ್ಥೆಗೆ ಹಾನಿಕಾರಕವಾಗುತ್ತದೆ. ನಿಷ್ಕ್ರಿಯ ಸಾಲದ ಪ್ರಮಾಣ ಬೆಳೆಯುತ್ತಿರುವುದು ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಭಾರತದ ಆರ್ಥಿಕತೆ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ!