ಚೀನಾದಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ವಿಶ್ವದಾದ್ಯಂತ ತನ್ನ ಪ್ರಭಾವಳಿ ಹೆಚ್ಚಿಸಿಕೊಂಡಿದೆ. ನಿಧಾನವಾಗಿ ಭಾರತಕ್ಕೂ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಬಂದಿರುವ ಕೊರೋನಾ ವೈರಸ್ ಇದೀಗ ಕರುನಾಡಿಗೆ ಲಗ್ಗೆ ಹಾಕಿದೆ ಅನ್ನೋ ಮಾಹಿತಿ ಸಿಕ್ಕಿದೆ.
ಚೀನಾದಲ್ಲಿ ಕಾಣಿಸಿಕೊಂಡ ದಿನದಿಂದಲೂ ವಿಶ್ವಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಚೀನಾ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಚೀನಾ ಪ್ರವಾಸ ಕೈಗೊಂಡು ತವರಿಗೆ ವಾಪಸ್ ಬರುವ ಪ್ರವಾಸಿಗರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿ ಕೊರೋನಾ ವೈರಸ್ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಬಳಿಕವಷ್ಟೇ ಕಳುಹಿಸಲಾಗ್ತಿದೆ. ಇದೀಗ ಚೀನಾ ಪ್ರವಾಸಿ ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ವೈರಸ್ ಇರುವ ಬಗ್ಗೆ ತೀವ್ರ ತಪಾಸಣೆ ಮಾಡಲಾಗ್ತಿದೆ.
ಈಗಾಗಲೇ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೂವರು ಶಂಕಿತ ಪ್ರಕರಣಗಳು ದಾಖಲಾಗಿವೆ. ನಿನ್ನೆ ರಾತ್ರಿ ಆಗಮಿಸಿರುವ ಓರ್ವ ಚೀನಾ ಪ್ರವಾಸಿಗೆ ಶೀತವಿರುವ ಕಾರಣ ಕೊರೋನಾ ವೈರಸ್ ಇರಬಹುದು ಎನ್ನುವ ಅನುಮಾನ ದಟ್ಟವಾಗಿದೆ. ರೋಗಿಯ ಮೇಲೆ ನಿಗಾ ವಹಿಸಿರುವ ಆಸ್ಪತ್ರೆ ವೈದ್ಯರು, ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ದಾಳಿಯಾದ ದಿನಂದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ 3 ಸಾವಿರ ಪ್ರವಾಸಿಗರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ನಗರದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾ ವೈರಸ್ ದಾಳಿಗೆ ಚೀನಾ ನಲುಗಿಹೋಗಿದ್ದು, ನಿನ್ನೆ ಒಂದೇ ದಿನದಲ್ಲಿ ವೈರಸ್ ದಾಳಿಗೆ ತುತ್ತಾದವರ ಸಂಖ್ಯೆ ಡಬಲ್ ಆಗಿದೆ ಎಂದು ಚೀನಾ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಜನವರಿ 27 ರ ತನಕ 2835 ಜನರು ಕೊರೋನಾವೈರಸ್ ದಾಳಿಗೆ ತುತ್ತಾಗಿದ್ದರು. ಇವತ್ತಿಗೆ ಅದರ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 4515 ತಲುಪಿದೆ.
ಅದರ ಜೊತೆಗೆ ಸಾವಿನ ಸಂಖ್ಯೆ ಸೆಂಚ್ಯೂರಿ ಬಾರಿಸಿ ಮುನ್ನುಗ್ಗುತ್ತಿದ್ದು ಇಲ್ಲೀವರೆಗೂ ಕೊರೋನಾ ಬಲಿ ಪಡೆದಿದ್ದು 106 ಜನರನ್ನು ಎಂದು ವರದಿ ಹೇಳಿದೆ. ಚೀನಾ ರಸ್ತೆಗಳೆಲ್ಲಾ ಖಾಲಿ ಹೊಡೆಯುತ್ತಿದ್ದು ರಸ್ತೆಯುದ್ದಕ್ಕೂ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 18 ನಗರಗಳು ಸ್ತಬ್ಧವಾಗಿದ್ದು, ಯಾವುದೇ ಬಹಿರಂಗ ಸಮಾವೇಶ, ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸರ್ಕಾರದ ಕೊರೋನಾ ಜಾಗೃತಿ ಕಾರ್ಯಕ್ರಮ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಸದ್ಯಕ್ಕೆ ಚೀನಾ ಸ್ಥಿತಿ ಸ್ವಯಂ ಬಂಧಿಖಾನೆ ಅನುಭವ ನೀಡುತ್ತಿದೆ ಎನ್ನುತ್ತಿದ್ದಾರೆ ಅಲ್ಲಿನ ಸ್ಥಳೀಯರು. ಮನೆಯಿಂದ ಹೊರ ಬಂದರೆ ಕೊರೋನಾ ವೈರಸ್ ದಾಳಿಗೆ ತುತ್ತಾಗುವ ಭೀತಿ. ಮನೆಯಲ್ಲೇ ಇದ್ದರೆ ಬೇರೊಂದು ಕಾಯಿಲೆಗೆ ತುತ್ತಾಗುವ ಭೀತಿಯೂ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೀನಾ ಸರ್ಕಾರ ದೇಶಾದ್ಯಂತ ಶಾಲಾ ಕಾಲೇಜುಗಳ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ. ಇಲ್ಲೀವರೆಗೂ ಬೀಜಿಂಗ್ ಕೊರೋನಾ ವೈರಸ್‌ನಿಂದ ದೂರ ಉಳಿದಿತ್ತು. ಆದ್ರೀಗ ಬೀಜಿಂಗ್‌ನಲ್ಲೂ ಕೊರೋನಾ ವೈರಸ್ ದಾಳಿಗೆ ಮೃತಪಟ್ಟಿದ್ದಾನೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ವೈರಸ್ ಹೇಗೆ ಹರಡುತ್ತೆ..?
ಕೊರೋನಾ ವೈರಸ್ ದೇಶಗಳ ಗಡಿ ದಾಟಿಕೊಂಡು ಬೇರೆ ಬೇರೆ ದೇಶಳಗಳಿಗೂ ತನ್ನ ಕದಂಬ ಬಾಹುಗಳನ್ನು ಚಾಚುತ್ತಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮೂವರಿಗೆ ಕೊರೋನಾ ವೈರಸ್ ಇರೋದು ಪತ್ತೆಯಾಗಿದೆ. ಹಾಗೆಯೇ ಜಪಾನ್‌ನಲ್ಲೂ ಕೊರೋನಾ ವೈಸರ್ ಇದೆ ಅನ್ನೋದು ಗೊತ್ತಾಗಿದೆ. ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಜನ ಹೆಣಗಾಡುತ್ತಿದ್ದಾರೆ.
ಈ ಮಧ್ಯೆ, ಕೆಲವು ಜಿಲ್ಲಾಡಳಿತಗಳು ಸಾರ್ವಜನಿಕರಿಗೆ ಸುತ್ತೋಲೆ ಹೊರಡಿಸಿದ್ದು, ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿವೆ.
* ಗಾಳಿಯ ಕಣಗಳ ಜೊತೆಗೆ ಸೇರಿಕೊಂಡು ವೈರಸ್ ಒಬ್ಬರಿಂದ ಒಬ್ಬರನ್ನು ತಲುಪುತ್ತಿದೆ.
* ಸ್ನೇಹಿತರು ಹಸ್ತಲಾಘವ ಮಾಡಿದಾಗಲೂ ವೈರಸ್ ತನ್ನ ಸಂತಾನೋತ್ಪತಿ ಮುಂದುವರಿಸುತ್ತಿದೆ.
* ಗುಂಪು ಗುಂಪು ಸಭೆಗಳಲ್ಲಿ ಕೊರೋನಾ ವೈರಸ್ ಅಟ್ಯಾಕ್ ತುಸು ಹೆಚ್ಚು .
*ತಪ್ಪಿಸಿಕೊಳ್ಳುವ ಮಾರ್ಗ ಯಾವುದು..?*
* ಕೊರೋನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಕಡ್ಡಾಯ
* ಶೀತ, ನೆಗಡಿ ಕಾಣಿಸಿಕೊಂಡರೆ ಕೂಡಲೇ ಆರೋಗ್ಯ ಇಲಾಖೆ ಸಂಪರ್ಕಿಸಬೇಕು
* ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಸೌಲಭ್ಯ ಇರುವಂತಹ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಉತ್ತಮ
* ಶೀತ, ನೆಗಡಿ, ಜ್ವರ, ತಲೆ ನೋವು ಕಾಣಿಸಿಕೊಂಡ ಕೂಡಲೇ ಮಕ್ಕಳಿಂದ ದೂರ ಉಳಿಯುವುದು ಒಳ್ಳೆಯದು.
* ಬಿಸಿ ನೀರು ಕುಡಿಯುವುದು ಕಾಯಿಲೆಯಿಂದ ದೂರ ಉಳಿಯಲು ಇರುವ ಶ್ರೇಷ್ಠ ಮಾರ್ಗ.
ಒಟ್ಟಾರೆ ವಿಶ್ವವನ್ನೇ ಆರ್ಥಿಕ ಬಲಾಢ್ಯತೆಯಲ್ಲಿ ಬಗ್ಗೆ ಬಡಿಯುತ್ತಾ, ದುಬಾರಿಯಲ್ಲದ ವಸ್ತುಗಳನ್ನು ತಯಾರು ಮಾಡುತ್ತಾ, ಮಾಹಿತಿ ತಂತ್ರಜ್ಞಾದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದುವ ಮೂಲಕ ವಿಶ್ವ ಮಾರುಕಟ್ಟೆಯನ್ನೇ ತನ್ನಡೆಗೆ ತಿರುಗುವಂತೆ ಮಾಡಿದ್ದ ಚೀನಾ ಕೊರೋನಾ ವೈರಸ್ ದಾಳಿಯಿಂದ ಕಂಗಾಲಾಗಿದೆ.
ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ನಿನ್ನೆ ಒಂದೇದಿನ 2 ಸಾವಿರಕ್ಕೂ ಅಧಿಕ ಮಂದಿಯಲ್ಲಿ ವೈರಸ್ ಇರುವುದು ಪತ್ತೆಯಾಗಿದ್ದು, ಸ್ಮಶಾನವನ್ನೇ ಸ್ವಾಗತ ಮಾಡಿದ ಅನುಭವ ಅಲ್ಲಿನ ಜನರದ್ದು. ಅಭಿವೃದ್ಧಿ ಹಿಂದೆ ಬಿದ್ದಿರುವ ಚೀನಾ ಆತಂಕಕ್ಕೆ ಕಾರಣವಾಗಿರೋದು ಕೊರೋನಾ ವೈರಸ್. ಈಗಲೇ ಭಾರತ ಎಚ್ಚೆತ್ತುಕೊಳ್ಳದಿದ್ದರೆ ಸಾವಿರ ಸರಣಿ ನಮ್ಮ ದೇಶದಲ್ಲೂ ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.