ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಎನ್ಆರ್ ಸಿ-ಸಿಎಎ ಜಾರಿ ವಿಚಾರದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರೀ ಹೊಡೆತ ಕೊಟ್ಟಿದ್ದಾರೆ. ಬಿಹಾರದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ ಸಿ)ಯನ್ನು ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಎನ್ ಡಿಎ ಮೈತ್ರಿಕೂಟದಲ್ಲಿನ ಪಕ್ಷವೊಂದರ ಮೊದಲ ವಿರೋಧ ಕಟ್ಟಿಕೊಂಡಂತಾಗಿದೆ.
ಗೃಹ ಸಚಿವ ಅಮಿತ್ ಶಾ ಅವರು ಎನ್ಆರ್ ಸಿಯನ್ನು ಇಡೀ ದೇಶದಲ್ಲಿ ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ, ನಿತೀಶ್ ಕುಮಾರ್ ಎನ್ಆರ್ ಸಿ ಯಾಕೆ? ನಾವು ಬಿಹಾರದಲ್ಲಿ ಎನ್ ಆರ್ ಸಿಯನ್ನು ಜಾರಿಗೆ ತರುವುದಿಲ್ಲ ಎಂದಿದ್ದಾರೆ.
ಆಶ್ಚರ್ಯವೆಂದರೆ ಸಂಸತ್ತಿನಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿ ಒಂದು ಮೈತ್ರಿಪಕ್ಷವಾಗಿರುವ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿತ್ತು. ಈ ಮಸೂದೆ ಅಂಗೀಕಾರವಾದ ನಂತರ ರಾಷ್ಟ್ರಪತಿಗಳು ಅಂಕಿತ ಹಾಕಿದ ಮೇಲೆ ಜೆಡಿಯುನಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳು ಬರಲು ಆರಂಭಿಸಿದವು. ಜೆಡಿಯುನ ಚುನಾವಣೆ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಪ್ರಧಾನ ಕಾರ್ಯದರ್ಶಿ ಮತ್ತು ಬರಹಗಾರ ಪವನ್ ಕೆ.ವರ್ಮಾ ಅವರು ಮಸೂದೆಗೆ ಬೆಂಬಲ ನೀಡುವ ಜೆಡಿಯು ನಿರ್ಧಾರವನ್ನು ವಿರೋಧಿಸಿದ್ದರು. ಈ ನಿರ್ಧಾರ ಪಕ್ಷದ ಜಾತ್ಯತೀತ ತತ್ತ್ವಗಳಿಗೆ ವಿರೋಧವಾಗಿದೆ. ಇದನ್ನು ಬೆಂಬಲಿಸಿದರೆ ನಾವು ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಕೇಂದ್ರ ಸರ್ಕಾರದ ಇಂತಹ ಧರ್ಮಾಧಾರಿತ ನಿಲುವುಗಳಿಗೆ ಸಮ್ಮತಿ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇವರಲ್ಲದೇ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕರು ಮತ್ತು ಅಲ್ಪಸಂಖ್ಯಾತ ನಾಯಕರಾದ ರಾಮ್ ಚಂದ್ರ ಪ್ರಸಾದ್ ಸಿಂಗ್ ರಾಜೀವ್ ರಂಜನ್ ಪ್ರಸಾದ್ ಅವರೂ ಸಹ ಈ ಬಗ್ಗೆ ಭಿನ್ನ ರಾಗ ಎಳೆದಿದ್ದರು. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಪ್ರಶಾಂತ್ ಅವರು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಈ ನಿರ್ಧಾರಗಳಿಗೆ ಬೆಂಬಲವಾಗಿ ಜೆಡಿಯು ನಿಲ್ಲಬಾರದು. ಒಂದು ವೇಳೆ ನಾವು ಬೆಂಬಲವಾಗಿ ನಿಂತರೆ ಅಲ್ಪಸಂಖ್ಯಾತ ವರ್ಗದಿಂದ ತೀವ್ರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಅಲ್ಲದೇ, ಎನ್ಆರ್ ಸಿ ಬಗ್ಗೆ ನಾವು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದನ್ನೇ ಈಗಲೂ ಮುಂದುವರಿಸುವುದು ಸೂಕ್ತ ಎಂಬ ಮಾತುಗಳನ್ನು ಹೇಳಿದ್ದರು.
ಸಂಸತ್ತಿನಲ್ಲಿ ಪಕ್ಷ ಏಕೆ ಸಿಎಬಿಗೆ ಬೆಂಬಲ ನೀಡಿತು ಎಂಬ ಪ್ರಶ್ನೆ ಈಗ ಉದ್ಭವವಾಗುತ್ತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಂಮೇತರ ಸಮುದಾಯಕ್ಕೆ ಭಾರತೀಯ ಪೌರತ್ವ ನೀಡುವ ತಾರತಮ್ಯದ ಸಿಎಎಯನ್ನುನಿತೀಶ್ ಕುಮಾರ್ ಒಪ್ಪಿಕೊಂಡರೇ? ಜೆಡಿಯು ಸಂಸದೀಯ ಪಕ್ಷ ಸಿಎಬಿಗೆ ಬೆಂಬಲವಾಗಿ ನಿಂತಿತೇ? ನಿತೀಶ್ ಕುಮಾರ್ ಅವರ ಸಮಾಜವಾದಿ, ಸಮಾನತೆ, ನ್ಯಾಯದ ತತ್ತ್ವಗಳ ಬದ್ಧತೆಯ ಭಾಗವಾಗಿದೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡಿವೆ.
ಈ ಎಲ್ಲಾ ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ ಮತ್ತು ಈ ಪ್ರಶ್ನೆಗಳಿಗೆ ನಿತೀಶ್ ಕುಮಾರ್ ಅವರೇ ಉತ್ತರ ನೀಡಬೇಕಿದೆ. ಒಂದು ವಾದದ ಪ್ರಕಾರ ನಿತೀಶ್ ಕುಮಾರ್ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಲ್ಲಿ ಅವರು ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಲೆಂದೇ ತಮ್ಮೆಲ್ಲಾ ತತ್ತ್ವಾದರ್ಶಗಳನ್ನು ಗಾಳಿಗೆ ತೂರಿ ಶರಗಾತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಕಳೆದ ನಲವತ್ತು ವರ್ಷಗಳಿಂದ ನಿಕಟವರ್ತಿಯಾಗಿರುವ ಹಿರಿಯ ಸಮಾಜವಾದಿ ನಾಯಕ ಮತ್ತು ಆರ್ ಜೆಡಿ ಉಪಾಧ್ಯಕ್ಷ ಶಿವಾನಂದ ತಿವಾರಿ ಅವರು ಹೇಳುವಂತೆ, ಬಿಹಾರ ಸಿಎಂ (ನಿತೀಶ್ ಕುಮಾರ್) ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದಾರೆ.
ಜೆಡಿಯು ನಾಯಕರಾದ ಪವನ್ ವರ್ಮಾ ಮತ್ತು ಪ್ರಶಾಂತ್ ಕಿಶೋರ್ ಅವರೇ ಈ ಹಿಂದೆ, ನಿತೀಶ್ ಕುಮಾರ್ ಅವರು ಪಕ್ಷದ ಆಂತರಿಕ ಸಭೆಯಲ್ಲಿ ಸಿಎಎಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಲೋಕಸಭೆಯಲ್ಲಿ ಜೆಡಿಯು ಇದ್ದಕ್ಕಿದ್ದಂತೆ ಸಿಎಎಗೆ ಬೆಂಬಲ ವ್ಯಕ್ತಪಡಿಸಿರುವುದು ಆಶ್ಚರ್ಯ ತಂದಿದೆ ಎಂದು ತಿವಾರಿ ಹೇಳಿದ್ದಾರೆ.
ಸಮಾಜವಾದ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ತಟಸ್ಥವಾದ ವೀಕ್ಷಕರಾಗಿರುವ ಶಿವಾನಂದ ತಿವಾರಿ ಅವರು ನಿತೀಶ್ ಕುಮಾರ್ ಅವರ ಈ ದ್ವಂದ್ವ ನಿಲುವುಗಳು ಸರಿಯಲ್ಲ ಎಂದಿದ್ದಾರೆ.
ಹೀಗಿದ್ದಾಗ್ಯೂ ಕಳೆದ 18 ವರ್ಷಗಳಿಂದ ಬಿಜೆಪಿ ಜತೆ ಸೇರಿ ಸರ್ಕಾರ ನಡೆಸುತ್ತಿರುವ ನಿತೀಶ್ ಕುಮಾರ್ ಅವರ ರಾಜಕೀಯ ತತ್ತ್ವಗಳು ಹಾಲಿನಿಂದ ನೀರನ್ನು ಬೇರ್ಪಡಿಸದ ರೀತಿಯಲ್ಲಿ ಅವರ ಸಮಾಜವಾದ ಮತ್ತು ಜಾತ್ಯತೀತವಾದ ಹಾಗೆಯೇ ಉಳಿದಿವೆ. ಅವರ ಸೆಕ್ಯುಲರ್ ಇಮೇಜ್ ಗೆ ಇನ್ನೂ ಯಾವುದೇ ರೀತಿಯ ಧಕ್ಕೆಯಾಗಿಲ್ಲ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಯೂಟರ್ನ್ ಹೊಡೆದಿದ್ದು, ಎನ್ಆರ್ ಸಿಗೆ ವಿರುದ್ಧವಾಗಿ ನಿಂತಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ನಿತೀಶ್ ಕುಮಾರ್ ಅವರನ್ನು ಮನವೊಲಿಸುವ ಸಾಧ್ಯತೆಗಳು ಕಡಿಮೆ ಇವೆ ಎಂದೇ ವಿಶ್ಲೇಷಿಸಲಾಗುತ್ತಿದೆ.