ರಾಜ್ಯ ವಿಧಾನಸಭೆ ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಯೂ ಹೊರಬಿದ್ದಿದೆ. ಅದರ ಪ್ರಕಾರ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಲಿದೆ. ಮತದಾನ ಪ್ರಮಾಣ ಮತ್ತು ಮತದಾನೋತ್ತರ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿಯನ್ನು ಖುಷಿಯಲ್ಲಿಟ್ಟಿದ್ದರೆ, ಬಿಜೆಪಿ ಸರ್ಕಾರ ಅಪಾಯದಲ್ಲಿ ಸಿಲುಕಿಕೊಳ್ಳಬಹುದು ಎಂದು ಕಾಯುತ್ತಿದ್ದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗಳಿಗೆ ನಿರಾಶೆಯಾಗಿದೆ.
ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸರಾಸರಿ ಶೇ. 67.90ಯಷ್ಟು ಮತದಾನವಾಗಿದೆ. ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ. 90.90ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 2008ರ ಚುನಾವಣೆಯಲ್ಲಿ 90.33ರಷ್ಟು ಮತದಾನವಾಗಿತ್ತು. ಹೊಸಕೋಟೆ ಮತ್ತು ಗೋಕಾಕ್ ಕ್ಷೇತ್ರದಲ್ಲಿ ಮತದಾನ ಪ್ರಮಾಣ 2018ಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಉಳಿದೆಲ್ಲಾ ಕ್ಷೇತ್ರಗಳಲ್ಲೂ ಕಡಿಮೆಯಾಗಿದ್ದು, ಅದರಲ್ಲೂ ಬೆಂಗಳೂರು ನಗರದಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು ಮತಗಟ್ಟೆಯತ್ತ ಸುಳಿಯಲು ಕೂಡ ಪ್ರಯತ್ನ ಮಾಡಿಲ್ಲ.
ಮತದಾನ ಪ್ರಮಾಣ ಮತ್ತು ಮತದಾನೋತ್ತರ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರುವಂತೆ ಮಾಡಿದೆ. ಏಕೆಂದರೆ, ಮತದಾನ ಪ್ರಮಾಣ ಹೆಚ್ಚಾದಷ್ಟು ಬಿಜೆಪಿಗೆ ಲಾಭ. ತೀರಾ ಕಡಿಮೆಯಾದರೆ ಸರ್ಕಾರ ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಎಂದು ಮತದಾನ ಪೂರ್ವ ಸಮೀಕ್ಷೆಯ ವೇಳೆ ಅಭಿಪ್ರಾಯ ವ್ಯಕ್ತವಾಗಿತ್ತು. ಗುಪ್ತಚರ ಇಲಾಖೆ ವರದಿಗಳೂ ಅದನ್ನೇ ಹೇಳಿದ್ದವು. ಅಂದರೆ, ಮತದಾರ ಪ್ರಮಾಣ ಶೇ. 60ರಿಂದ ಶೇ. 62ರ ಮಧ್ಯೆ ಇದ್ದರೆ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬರಲಾರವು. ಶೇ. 65ಕ್ಕಿಂತ ಹೆಚ್ಚಾದರೆ 9ರಿಂದ 11 ಸ್ಥಾನಗಳು ಬರಬಹುದು ಎಂದು ಹೇಳಲಾಗಿತ್ತು. ಇದೀಗ ಮತದಾನ ಪ್ರಮಾಣ ಸರಾಸರಿ ಸರಾಸರಿ ಶೇ. 68ರ ಸಮೀಪ ಇರುವುದರಿಂದ ಬಿಜೆಪಿ 8ರಿಂದ 10 ಸ್ಥಾನ ಗಲಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಉದಾಹರಣೆಗೆ ಹೊಸಕೋಟೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಮತದಾನ ನಡೆದರೆ ಅದರ ಲಾಭ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಅವರಿಗೆ ಸಿಗುತ್ತದೆ. ಅದೇ ರೀತಿ ಶಿವಾಜಿನಗರದಲ್ಲಿ ಶೇ. 50ಕ್ಕಿಂತ ಕಮ್ಮಿ ಮತದಾನವಾದರೆ ಬಿಜೆಪಿಯ ಶರವಣ ಒಂದು ಕೈ ನೋಡಬಹುದು ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಶಿವಾಜಿನಗರ ಕ್ಷೇತ್ರದಲ್ಲಿ ಮುಸ್ಲಿಮರು ಮತದಾನ ಕೇಂದ್ರಗಳ ಕಡೆ ಹೋಗಬೇಡಿ ಎಂದು ಕಾಂಗ್ರೆಸ್ ನ ಅನರ್ಹ ಶಾಸಕ ರೋಷನ್ ಬೇಗ್ ಕರೆ ನೀಡಿದ್ದರು. ಮತದಾನ ಕಡಿಮೆಯಾಗಿರುವುದರಿಂದ ರೋಷನ್ ಬೇಗ್ ಕೋರಿಕೆ ಈಡೇರಿದೆಯೇ ಎಂಬ ಅನುಮಾನ ಉಂಟಾಗಿದೆ.

ಅದೇ ರೀತಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಸ್ಪರ್ಧೆ ಇದ್ದ ಗೋಕಾಕ್, ರಾಣೆಬೆನ್ನೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲೂ ಮತದಾನ ಪ್ರಮಾಣ 2018ರ ಮತದಾನದ ಆಸುಪಾಸು ಇದ್ದರೆ ಬಿಜೆಪಿಗೆ ಅನುಕೂಲ ಎಂದೂ ಭಾವಿಸಲಾಗಿತ್ತು. ಈ ಕಾರಣಕ್ಕಾಗಿ ತೀವ್ರ ಪೈಪೋಟಿಯಿದ್ದ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬಿಜೆಪಿ ಶತಾಯ-ಗತಾಯ ಪ್ರಯತ್ನ ಮಾಡಿತ್ತಲ್ಲದೆ, ಮತದಾರರಿಗೆ ಮತದಾನ ಕೇಂದ್ರಗಳಿಗೆ ತೆರಳಲು ವಾಹನದ ವ್ಯವಸ್ಥೆಯನ್ನೂ ಮಾಡಿತ್ತು. ಈ ಪ್ರಯತ್ನಕ್ಕೆ ಮತದಾರರು ಕೂಡ ಸಾಥ್ ಕೊಟ್ಟಿರುವುದರಿಂದಲೇ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದ್ದು, ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳುತ್ತಿದೆ.
ಈ ಬಾರಿಯ ಚುನಾವಣೆ ರಾಜಕೀಯ ಪಕ್ಷಗಳ ಪೈಪೋಟಿಗಿಂತ ಅನರ್ಹರು ಮತ್ತು ಕಾಂಗ್ರೆಸ್-ಜೆಡಿಎಸ್ ನಡುವಿನ ಸಮರ ಎಂಬಂತಿದೆ. ಅನರ್ಹರನ್ನು ಸೋಲಿಸಲು ಎರಡೂ ಪಕ್ಷಗಳು ಟೊಂಕ ಕಟ್ಟಿ ನಿಂತಿದ್ದವು. ಹೀಗಾಗಿ ಅನರ್ಹರು ಗೆದ್ದು ಅರ್ಹರಾಗಿ ಬಿಜೆಪಿ ಸರ್ಕಾರವನ್ನು ಉಳಿಸುವರೇ ಅಥವಾ ಸೋತು ಅನರ್ಹರಾಗಿಯೇ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ನೆನ್ನೆ ಮತದಾರರು ಉತ್ತರ ಬರೆದಾಗಿದೆ. ಫಲಿತಾಂಶಕ್ಕಾಗಿ ಡಿಸೆಂಬರ್ 9ರವರೆಗೆ ಕಾಯಬೇಕು.
ಸಮೀಕ್ಷೆಗಳು ಏನು ಹೇಳಿವೆ?
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರಲಿದ್ದು, ಸರ್ಕಾರ ಸುಭದ್ರವಾಗುತ್ತದೆ. ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 9ರಿಂದ 12 ಸ್ಥಾನಗಳು, ಕಾಂಗ್ರೆಸ್- 3ರಿಂದ 6, ಜೆಡಿಎಸ್ 1 ಸ್ಥಾನ ಗಳಿಸಲಿದೆ. ಖಾಸಗಿ ವಾಹಿನಿಗಳ ಸಮೀಕ್ಷೆ ಪ್ರಕಾರ ಬಿಜೆಪಿ 8ರಿಂದ 10, ಕಾಂಗ್ರೆಸ್ 3ರಿಂದ 5, ಜೆಡಿಎಸ್ ಗೆ 1ರಿಂದ 2 ಸ್ಥಾನಗಳು ಬರಬಹುದು. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಬಿಜೆಪಿ 10, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 2 ಹಾಗೂ ಪಕ್ಷೇತರರು ಒಂದು ಸ್ಥಾನಗಳಲ್ಲಿ ಗೆಲ್ಲಬಹುದು. ಕಾಂಗ್ರೆಸ್ ಆಂತರಿಕ ಸಮೀಕ್ಷೆಯೇ ಆ ಪಕ್ಷಕ್ಕೆ ಹತ್ತು ಸ್ಥಾನಗಳು ಸಿಗುತ್ತವೆ ಎಂಬುದನ್ನು ಹೇಳಿಲ್ಲ ಎಂದ ಮೇಲೆ ಪರಿಸ್ಥಿತಿ ಹೇಗಿದೆ ಎಂದು ಊಹಿಸಬಹುದು.
ಸಿದ್ದರಾಮಯ್ಯ ಹೊರತುಪಡಿಸಿ ಪ್ರತಿಪಕ್ಷಗಳಲ್ಲಿ ಕುಂದಿದ ಉತ್ಸಾಹ
ಮತದಾನದ ಪ್ರಮಾಣ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಉತ್ಸಾಹ ಕಳೆಗುಂದುವಂತೆ ಮಾಡಿವೆ. ಮತದಾನ ಮುಕ್ತಾಯದವರೆಗೂ ಮತ್ತೆ ಮೈತ್ರಿ ಕುರಿತು ಪ್ರಸ್ತಾಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆಯೂ ಹುಣಸೂರು ಮತ್ತು ಕೆ.ಆರ್.ಪೇಟೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಸಮೀಕ್ಷೆಗಳು ಹೇಳಿರುವುದು ಜೆಡಿಎಸ್ ನಾಯಕರಲ್ಲಿ, ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಖುಷಿ ತಂದಿರಬಹುದು. ಏಕೆಂದರೆ, ಜೆಡಿಎಸ್ ನಾಯಕರಿಗೆ ಈ ಚುನಾವಣೆ ಗೆಲ್ಲುವುದಕ್ಕಿಂತಲೂ ಈ ಇಬ್ಬರು ಸೋಲುವುದು ಮುಖ್ಯವಾಗಿತ್ತು. ಅದು ಸಾಧ್ಯವಾಗುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ.

ಒಟ್ಟು 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪ್ರಮಾಣ ಈ ರೀತಿ ಇದೆ. (ಆವರಣದಲ್ಲಿರುವುದು 2018ರ ಮತದಾನ ಪ್ರಮಾಣ)
ಅಥಣಿ- ಶೇ. 75.37 (ಶೇ. 79.45)
ಕಾಗವಾಡ- ಶೇ. 76.24 (ಶೇ. ಶೇ. 80)
ಗೋಕಾಕ್- ಶೇ.73.03 (ಶೇ. 71.77)
ಯಲ್ಲಾಪುರ- ಶೇ.77.53 (ಶೇ. 82.27)
ಹಿರೇಕೆರೂರು- ಶೇ. 79.03 (ಶೇ. 83.99)
ರಾಣೆಬೆನ್ನೂರು- ಶೇ. 73.93 (ಶೇ. 77.85)
ವಿಜಯನಗರ (ಹೊಸಪೇಟೆ)- ಶೇ. 65.02 (ಶೇ. 72.47)
ಚಿಕ್ಕಬಳ್ಳಾಪುರ- ಶೇ. 86.84 (ಶೇ. 87.69)
ಕೆ.ಆರ್.ಪುರ- ಶೇ. 46.74 (ಶೇ. 54.56)
ಯಶವಂತಪುರ- ಶೇ. 59.10 (ಶೇ. 60.49)
ಮಹಾಲಕ್ಷ್ಮಿ ಲೇಔಟ್- ಶೇ. 51.21 (ಶೇ. 54.69)
ಶಿವಾಜಿನಗರ- ಶೇ. 48.05 (ಶೇ. 55.16)
ಹೊಸಕೋಟೆ- ಶೇ. 90.90 (ಶೇ. 90.33)
ಕೆ.ಆರ್.ಪೇಟೆ- ಶೇ. 80.52 (ಶೇ. 84.65)
ಹುಣಸೂರು- ಶೇ. 80.59 (ಶೇ. 82.91)