ಭ್ರಷ್ಟಾಚಾರ ತಡೆ ವಿಚಾರ ಬಂದಾಗ ರಾಜಕೀಯ ಪಕ್ಷಗಳ ಹಣೆಬರಹ ಒಂದೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಎಂದು ಹೇಳಿದವರು ಕೂಡ ಅಧಿಕಾರಕ್ಕೆ ಬಂದ ಮೇಲೆ ಆ ವಿಚಾರದಲ್ಲಿ ಸಂಪೂರ್ಣ ಸಹಿಷ್ಣುಗಳಾಗುತ್ತಾರೆ. ಇದಕ್ಕೆ ಯಾವುದೇ ಪಕ್ಷವೂ ಹೊತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರದಲ್ಲಿ ವೇದಾಂತ ಹೇಳೋಕೆ, ಬದನೇಕಾಯಿ ತಿನ್ನೋಕೆ ಎಂಬ ಗಾದೆಮಾತು ರಾಜಕೀಯ ನಾಯಕರಿಗೆ ಹೇಳಿ ಮಾಡಿದಂತಿದೆ.
ಹೌದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ವಿಚಾರದಲ್ಲಿ ಸದ್ಯದ ಮಟ್ಟಿಗೆ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಒಂದೇ ದೋಣಿಯ ಪ್ರಯಾಣಿಕರಂತಾಗಿವೆ. ಸಿದ್ದರಾಮಯ್ಯ ಅವರ ಸರ್ಕಾರ 2016ರಲ್ಲಿ ಲೋಕಾಯುಕ್ತ ಸಂಸ್ಥೆಯ ಸ್ವಾಯತತ್ತೆಗೆ ಕಡಿವಾಣ ಹಾಕಿ ಎಸಿಬಿ ಸಂಸ್ಥೆಯನ್ನು ಹುಟ್ಟುಹಾಕಿದಾಗ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕೂಡ ತಾವೇನೂ ಕಾಂಗ್ರೆಸ್ಸಿಗಿಂತ ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಿವೆ. ಇದಕ್ಕೆ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಬುಲಿಂಗ ನಾವದಗಿ ಅವರು ಹೈಕೋರ್ಟ್ ಮುಂದೆ ಶುಕ್ರವಾರ ಮಂಡಿಸಿದ ವಾದವೇ ಸಾಕ್ಷಿ.
ಎಸಿಬಿ ರಚನೆಯಾಗಿರುವುದರಿಂದ ಲೋಕಾಯುಕ್ತ ಸಂಸ್ಥೆಯ ಸ್ವಾಯತ್ತೆಗೆ ಯಾವುದೇ ಧಕ್ಕೆಯಾಗಿಲ್ಲ. ಎಸಿಬಿ ಎಂಬುದು ಲೋಕಾಯುಕ್ತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆಯೇ ಹೊರತು ಲೋಕಾಯುಕ್ತವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರ ಎಸಿಬಿ ರದ್ದುಗೊಳಿಸುತ್ತಿದೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಅಷ್ಟೇ ಅಲ್ಲ, ಇಂತಹ ಸಂಸ್ಥೆಗಳನ್ನು (ಲೋಕಾಯುಕ್ತ ಮತ್ತು ಎಸಿಬಿ) ಎಂತಹ ಪ್ರಾಮಾಣಿಕ ಅಧಿಕಾರಿಗಳು ನಡೆಸಿಕೊಂಡು ಹೋಗುತ್ತಾರೆ ಎಂಬುದರ ಮೇಲೆ ಅವುಗಳ ಯಶಸ್ಸು ಅಡಗಿದೆ ಎಂದು ಹೇಳಿರುವ ಅಡ್ವೋಕೇಟ್ ಜನರಲ್, ಭ್ರಷ್ಟಾಚಾರ ವಿಚಾರದಲ್ಲಿ ಎಲ್ಲವೂ ಅಧಿಕಾರಿಗಳ ಕೈಯ್ಯಲ್ಲಿದೆ. ರಾಜಕೀಯ ಪಕ್ಷಗಳು ಅಥವಾ ಅವುಗಳ ನಾಯಕರಿಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಪ್ರತಿಪಾದಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶದಲ್ಲೇ ಮಾದರಿ ಎಂಬ ಖ್ಯಾತಿ ಹೊಂದಿದ್ದರೂ ಲೋಕಾಯುಕ್ತ ಕಾಯ್ದೆಯು ಸಾರ್ವಜನಿಕ ನೌಕರರ ಹಾಗೂ ಇತರರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಕ್ರಿಮಿನಲ್ ತನಿಖೆಗಳನ್ನು ನಡೆಸುವ ಅಧಿಕಾರ ಹೊಂದಿರಲಿಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಭ್ರಷ್ಟಾಚಾರ ತಡೆ ಅಧಿನಿಯಮದಡಿ ನಡೆಸುವ ಕ್ರಿಮಿನಲ್ ಪ್ರಕರಣಗಳ ಮೇಲುಸ್ತುವಾರಿ ನಡೆಸಲು ಲೋಕಾಯುಕ್ತರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಅನೇಕ ಸಂದರ್ಭಗಳಲ್ಲಿ ಹೇಳಿತ್ತು. ಹೀಗಾಗಿ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿ ಬಗ್ಗೆ ಗೊಂದಲ ಇತ್ತು. ಇದರ ನಡುವೆಯೂ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿತ್ತು.
ಆದರೆ, ಇರುವ ಗೊಂದಲಗಳನ್ನು ಬಗೆಹರಿಸಿ ಲೋಕಾಯುಕ್ತ ಪೊಲೀಸ್ ಮತ್ತು ಲೋಕಾಯುಕ್ತರಿಗೆ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಲು ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡುವ ಬದಲು 2016ರಲ್ಲಿ ಸಿದ್ದರಾಮಯ್ಯ ಸರ್ಕಾರ ಎಸಿಬಿಯನ್ನು ಆರಂಭಿಸಿತ್ತು. ಜತೆಗೆ ಲೋಕಾಯುಕ್ತ ಪೊಲೀಸ್ ನಡೆಸುತ್ತಿರುವ ಭ್ರಷ್ಟಾಚಾರ ಕುರಿತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸುವಂತೆಯೂ ಆದೇಶಿಸಿತ್ತು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಈ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೋರಾಟಗಳನ್ನೂ ನಡೆಸಿದ್ದವು. ಅಷ್ಟೇ ಅಲ್ಲ, 2018ರ ವಿಧಾನಸಭೆ ಚುನಾವಣೆ ವೇಳೆ ಈ ವಿಚಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರಕ್ಕೆ ಪ್ರಮುಖ ಅಸ್ತ್ರವೂ ಆಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದಾಗಿ ಎರಡೂ ಪಕ್ಷಗಳೂ ಘೋಷಣೆ ಮಾಡಿದ್ದವು.
ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಅಧಿಕಾರ ಸಿಗದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದವು. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಎಸಿಬಿ ರದ್ದುಗೊಳಿಸುವ ಪ್ರಶ್ನೆ ಬಂದಾಗ, ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಹೀಗಾಗಿ ಈ ವಿಚಾರದಲ್ಲಿ ನಾನು ಅಸಹಾಯಕ ಎಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜಾರಿಕೊಂಡಿದ್ದರು. ಸುಮಾರು 14 ತಿಂಗಳು ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರದಲ್ಲಿತ್ತಾದರೂ ಒಮ್ಮೆಯೂ ಎಸಿಬಿ ರದ್ದುಗೊಳಿಸುವ ವಿಚಾರ ಪ್ರಸ್ತಾಪವಾಗಲೇ ಇಲ್ಲ. ಸರ್ಕಾರದ ಮಟ್ಟದಲ್ಲಿ ಇರಲಿ, ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆಗಳಲ್ಲೂ ಈ ಬಗ್ಗೆ ಜೆಡಿಎಸ್ ನಾಯಕರಾರೂ ಸೊಲ್ಲೆತ್ತಿರಲಿಲ್ಲ.
ಇದನ್ನೇ ಈಗ ಬಿಜೆಪಿ ಸರ್ಕಾರವೂ ಮುಂದುವರಿಸಿದೆ. 2018ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಎಸಿಬಿ ರದ್ದುಗೊಳಿಸುವ ಚಿಂತನೆ ಇದೆ, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇವೆ ಎಂದು ಈಗ ಮುಖ್ಯಮಂತ್ರಿಗಳಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ್ದರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸಿಬಿ ರದ್ದುಗೊಳ್ಳುವುದು ಖಚಿತ ಎಂದು ಭಾವಿಸಲಾಗಿತ್ತು. ಸಂಪುಟ ರಚನೆ ಬಳಿಕ ನಡೆಯುವ ಮೊದಲ ಸಭೆಯಲ್ಲೇ ಎಸಿಬಿ ಭವಿಷ್ಯದ ಕುರಿತು ಸರ್ಕಾರದ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದುವರೆಗೂ ನಿರೀಕ್ಷೆ ಈಡೇರಲಿಲ್ಲ. ಅದರ ಬದಲಾಗಿ, ಎಸಿಬಿ ರಚನೆಯಾಗಿರುವುದರಿಂದ ಲೋಕಾಯುಕ್ತ ಸಂಸ್ಥೆಯ ಸ್ವಾಯತ್ತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಹೈಕೋರ್ಟ್ ನಲ್ಲಿ ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದೆ.
ಎಸಿಬಿ ಕಾರ್ಯವೈಖರಿಯೂ ಪ್ರಶ್ನಾರ್ಹ
ಈ ಮಧ್ಯೆ ಎಸಿಬಿಯ ಕಾರ್ಯವೈಖರಿಯೂ ಪ್ರಶ್ನಾರ್ಹವಾಗಿದೆ. ದಾಳಿ ವೇಳೆ ಸಿಕ್ಕಿಬಿದ್ದ ಪ್ರಮುಖ ಪ್ರಕರಣಗಳನ್ನು ಬದಿಗಿಟ್ಟು ಸಣ್ಣ ಪುಟ್ಟ ಪ್ರಕರಣಗಳಲ್ಲಿ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸುವ ಆರೋಪ ಕೇಳಿಬರುತ್ತಿದೆ. 2016ರಲ್ಲಿ ಎಸಿಬಿ ಆರಂಭವಾದ ಮೇಲೆ ಇದುವರೆಗೆ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಲಂಚ ಸ್ವೀಕಾರ ಪ್ರಕರಣಗಳೇ ಜಾಸ್ತಿ. ಇವುಗಳಲ್ಲಿ ಸಣ್ಣ ಪುಟ್ಟ ಪ್ರಕರಣಗಳ ಬಗ್ಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆಯೇ ಹೊರತು ಬಿಡಿಎ ಇಂಜಿನಿಯರ್ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯೂಡಿ ಇಂಜಿನಿಯರ್ಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ವಿುಕ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಸೇರಿ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳ ಮೇಲಿನ ದಾಳಿ ನಡೆದು ಲಕ್ಷಾಂತರ ರೂ. ಮೌಲ್ಯದ ಆಸ್ತಿ, ಹಣ ಪತ್ತೆಯಾದ ಒಂದೇ ಒಂದು ಪ್ರಕರಣಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಹ್ಯೂಬ್ಲೋಟ್ ವಾಚ್ ಪ್ರಕರಣ, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಲೀಕನಿಗೆ ಸೂಕ್ತ ರಕ್ಷಣೆ ಒದಗಿಸುವ ವಿಚಾರವಾಗಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಹಾಗೂ ಎಫ್ಎಸ್ಎಲ್ ನಿರ್ದೇಶಕ ವಿ.ಜಿ.ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣ, ಉತ್ತರ ಕನ್ನಡದ ಈ ಹಿಂದಿನ ಎಸ್.ಪಿ. ವಿರುದ್ಧ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಬಿ- ರಿಪೋರ್ಟ್ ಸಲ್ಲಿಕೆಯಾಗಿದೆ. ಸಾಕಷ್ಟು ಪ್ರಕರಣಗಳಿಗೆ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕಿಲ್ಲ.
ಎಸಿಬಿ ರಚನೆಯಾದ ಬಳಿಕ ಎಸಿಬಿಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ಇದೇ ಅವಧಿಯಲ್ಲಿ ಲೋಕಾಯುಕ್ತದ ಮುಂದೆ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದರೆ, ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಇಲ್ಲದೇ ಇದ್ದರೂ ಎಸಿಬಿಗಿಂತ ಜನ ಲೋಕಾಯುಕ್ತ ಸಂಸ್ಥೆಯನ್ನೇ ನಂಬುತ್ತಿದ್ದಾರೆ ಎಂಬುದು ಸ್ಪಷ್ಟ.
ಎಸಿಬಿ ರಚನೆ ವಿಚಾರದಲ್ಲಿ ಅಡ್ವೋಕೇಟ್ ಜನರಲ್ ಮಂಡಿಸಿದ ವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಸ್ಪಷ್ಟನೆ ನೀಡಬಹುದು. ಯಾವ ಪಕ್ಷವೇ ಅಧಿಕಾರದಲ್ಲಿರಲಿ, ಸರ್ಕಾರದ ನಿಲುವು ಸಮರ್ಥಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಹೈಕೋರ್ಟ್ ನಲ್ಲಿ ನಮ್ಮ ವಾದ ಮಂಡಿಸಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳಬಹುದು. ಆದರೆ, ಇದೇ ವೇಳೆ ಎಸಿಬಿ ಕುರಿತು ಕೋರ್ಟ್ ನಲ್ಲಿ ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ಹೇಳದ ಕಾರಣ ಬಿಜೆಪಿ ಸರ್ಕಾರಕ್ಕೂ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಉದ್ದೇಶ ಇದ್ದಂತಿಲ್ಲ ಎಂಬುದು ಗೊತ್ತಾಗುತ್ತಿದೆ.