“ ನಮ್ಗೇ ಇರೋದು ಒಂದು ನದಿ ಸ್ವಾಮಿ.. ಅದನ್ನೇ ತಿರುಗಿಸ್ತೀವಿ ಅಂದ್ರೆ ಸುಮ್ಮನಿರೋಕ್ಕೆ ಸಾಧ್ಯನೇ ಇಲ್ಲ.. ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಾದರೂ ಹೋರಾಟ ನಡೆಸಿ ನಮ್ಮ ಜೀವನದಿ ನೇತ್ರಾವತಿ ಉಳಿಸ್ತೀವಿ ನೋಡಿ..” ಈ ಮಾತನ್ನು ಹೇಳಿರೋದು ಬೇರೆ ಯಾರೂ ಅಲ್ಲ, ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್.. ಅಂದಹಾಗೆ 2016 ರಲ್ಲಿ ಕರಾವಳಿಯಲ್ಲಿ ತೀವ್ರಗೊಂಡಿದ್ದ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಂದರ್ಭ ಈ ಡೈಲಾಗ್ ತೇಲಿ ಬಿಟ್ಟಿದ್ದರು. ಆ ಹೊತ್ತಿಗೆ ಅವರ ಅಬ್ಬರ ಯಾವ ರೀತಿಯಿತ್ತು ಅಂದರೆ ನೇತ್ರಾವತಿ ಉಳಿಸಿಕೊಳ್ಳುವುದಕ್ಕೆ ಪ್ರಾಣ ಬೇಕಾದರೂ ಕೊಡ್ತೀನಿ ಅನ್ನೋವಷ್ಟರ ಮಟ್ಟಿಗೆ. ಆದರೆ ಈಗ ಸರಕಾರ ಬದಲಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್, ಮೈತ್ರಿ ನಂತರ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಜೆಟ್ ಬೇರೆ ಮಂಡಿಸಿದ್ದಾರೆ. ಅದೇ ಬಜೆಟ್‌ನಲ್ಲಿ ಇದೇ ನಳಿನ್ ಕುಮಾರ್ ಕಟೀಲ್ ವಿರೋಧಿಸಿದ್ದ ಎತ್ತಿನಹೊಳೆ ಯೋಜನೆಗೆ ಮತ್ತೆ ಹಣ ಮೀಸಲಿರಿಸಲಾಗಿದೆ. ಅದಾಗಲೇ ಸಾವಿರಾರು ಕೋಟಿ ಹಣ ನುಂಗಿ ನೀರು ಕುಡಿದಿರುವ ಎತ್ತಿನಹೊಳೆ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಒಂದೂವರೆ ಸಾವಿರ ಕೋಟಿ ರೂಪಾಯಿ ಮತ್ತೆ ತೆಗೆದಿರಿಸಿದ್ದಾರೆ.
ಈಗಾಗಲೇ 2014 ರಲ್ಲಿ ಚಾಲನೆಗೊಂಡ ಈ ತಲೆಬುಡವಿಲ್ಲದ ಎತ್ತಿನಹೊಳೆ ಯೋಜನೆಗೆ ಆರಂಭದ ದಿನದಿಂದಾನೂ ಪರಿಸರ ಪ್ರೇಮಿಗಳ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಎತ್ತಿನಹೊಳೆಯಲ್ಲಿ 32 ಟಿಎಂಸಿ ನೀರು ಸಿಗುತ್ತೆ ಅಂತಾ ಬೋಂಗು ಬಿಡುತ್ತಲೇ ಬಂದಿರುವ ರಾಜ್ಯ ರಾಜಕಾರಣಿಗಳು ಅದನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸೋ ʼಒಂದೊಳ್ಳೆʼ ಯೋಜನೆ ಅಂತಾ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಬಂದಿದ್ದಾರೆ. ಆದರೆ ಈ ಎತ್ತಿನಹೊಳೆಯಲ್ಲಿ ಸರಿಯಾಗಿ 9 ಟಿಎಂಸಿ ನೀರು ಸಿಗಲ್ಲ ಅನ್ನೋದು ಪರಿಸರ ತಜ್ಞರ ವಾದ. ಆದರೆ ಇದೆಲ್ಲವನ್ನ ಕಿವಿಗೆ ಹಾಕಿಕೊಳ್ಳದ ಆವತ್ತಿನ ಸಿದ್ದರಾಮಯ್ಯ ಸರಕಾರ ನೇತ್ರಾವತಿ ಒಡಲಿಗೆ ಕೈ ಹಾಕಿತ್ತು. ಇದೀಗ ಯಡಿಯೂರಪ್ಪ ಸರಕಾರ ಮತ್ತೆ ಅದೇ ಕೆಲಸಕ್ಕೆ ಕೈ ಹಾಕಿದೆ. ಈಗಾಗಲೇ ಹೆಕ್ಟೇರ್‌ಗಟ್ಟಲೆ ಅರಣ್ಯ ಪ್ರದೇಶ ನುಂಗಿ ನೀರು ಕುಡಿದಿರುವ ಈ ಯೋಜನೆ ನಿರೀಕ್ಷಿತ ಪ್ರಗತಿಯೇ ಕಂಡಿಲ್ಲ. ಇದರ ಮಧ್ಯೆ ಮತ್ತೆ ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿರಿಸಿದ್ದು ಕರಾವಳಿಗರ ಕಣ್ಣು ಕೆಂಪಗಾಗಿಸಿದೆ..
ಹೌದು, ಮೊನ್ನೆ ಮೊನ್ನೆಯಷ್ಟೇ ಮಂಡನೆಯಾದ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ಹಣ ಮೀಸಲಿಟ್ಟಿರುವುದು ಕರಾವಳಿಯ ಪರಿಸರ ಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಒಂದು ಹಂತದವರೆಗೆ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡು ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿರೋ ಹೈಡ್ರಾಮಾಗಳು ಅಷ್ಟಿಷ್ಟಲ್ಲ. ಅಂದು ಸಿದ್ದರಾಮಯ್ಯ ಹಾಗೂ ಅವರ ಸಂಪುಟದಲ್ಲಿದ್ದ ರಮಾನಾಥ ರೈ, ಯುಟಿ ಖಾದರ್ ವಿರುದ್ದ ಹರಿಹಾಯ್ದಿದ್ದ ಇದೇ ನಳಿನ್ ಕುಮಾರ್ ತನ್ನ ಸರಕಾರದಲ್ಲಿ ಎತ್ತಿನಹೊಳೆಗೆ ನೀಡಲಾದ ಅನುದಾನದ ಬಗ್ಗೆ ಹೆಮ್ಮೆಯಿಂದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಯಾವ ಯೋಜನೆ ವಿರುದ್ಧ ʼಸರ್ಜಿಕಲ್ ಸ್ಟ್ರೈಕ್ʼ ಮಾದರಿ ಹೋರಾಟ ಮಾಡ್ತೀನಿ ಅಂತಾ ಬೊಗಳೆ ಬಿಟ್ಟಿದ್ದರೋ ಅದೇ ಯೋಜನೆಯನ್ನ ʼಸರಕಾರ ನೀರಾವರಿಗೆ ನೀಡಿದ ಆದ್ಯತೆʼ ಅಂತಾ ಬಾಯ್ತುಂಬ ಹೊಗಳಿಬಿಟ್ಟಿದ್ದಾರೆ. ಇದರಿಂದ ನಿರಾಶರಾದ ಕರಾವಳಿಯ ಮತದಾರರು ನಳಿನ್ ವಿರುದ್ಧ ಒಂದೇ ಸಮನೆ ಜಾಲತಾಣದಲ್ಲಿ ಮುಗಿ ಬಿದ್ದಿದ್ದಾರೆ. ಮೊದಲೇ ರಾಜಕೀಯ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ಪ್ರೊ. ಮಯ್ಯರಂತವರಿಗೆ ಇದೆಲ್ಲವೂ ನಿರೀಕ್ಷಿತ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಪರಿಣಾಮ, ಪರಿಸರ ಹೋರಾಟಗಾರರು ಬೆನ್ನಿಗೆ ಚೂರಿ ಹಾಕಿದ ಸಂಸದರ ವಿರುದ್ಧ ವಿಭಿನ್ನ ಪ್ರತಿಭಟನೆಗಿಳಿದಿದ್ದಾರೆ. ಮಂಗಳೂರು ಮಹಾನಗರದ ಎಲ್ಲೆಲ್ಲ ನಳಿನ್ ಕುಮಾರ್ ನಗುಮುಖ ತೋರಿಸೋ ಫ್ಲೆಕ್ಸ್‌ಗಳಿವೆಯೋ ಅದೆಕ್ಕೆಲ್ಲ ಮಸಿ ಸ್ಪ್ರೇ ಮಾಡಿ ಜೈ ನೇತ್ರಾವತಿ ಅಂತಾ ಬರೆದು ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ನಗರದ ಆರು ಕಡೆಗಳಲ್ಲಿ ತಲೆಯೆತ್ತಿ ನಿಂತಿದ್ದ ಫ್ಲೆಕ್ಸ್‌ಗಳಿಗೆ ಇಂತಹ ಗತಿ ತೋರಿಸಿದ್ದಾರೆ. ಸಹಜವಾಗಿಯೇ ಕಡಿಮೆ ಸಂಖ್ಯೆಯಲ್ಲಿರುವ ಹೋರಾಟಗಾರರಲ್ಲಿ ಈ ರೀತಿ ವಿಭಿನ್ನ ಪ್ರತಿಭಟನೆ ಮಾಡಿದವರು ಯಾರು ಅನ್ನೋದು ಫ್ಲೆಕ್ಸ್ ಹಾಕಿದವರಿಗೂ, ಕಮಲ ಪಕ್ಷದ ನಾಯಕರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಯಾರೂ ಚಕಾರವೆತ್ತಿಲ್ಲ. ಕಾರಣ, ಇವರೆಲ್ಲರೂ ಈ ಹಿಂದೆ ಇದೇ ಸಂಸದರ ʼಭಾರೀʼ(?) ಹೋರಾಟದ ಸಮಯದಲ್ಲಿ ಕಾವಲಾಳುಗಳಂತೆ ಅನುಸರಿಸಿದವರು. ಅಲ್ಲದೇ ಎತ್ತಿನಹೊಳೆ ಯೋಜನೆ ಬಗ್ಗೆ ʼಯೂ-ಟರ್ನ್ʼ ಹೊಡೆದಿರುವ ಸಂಸದರ ಬಗ್ಗೆ ಸ್ವತಃ ಅವರ ಪಕ್ಷದ ನಾಯಕರು, ಕಾರ್ಯಕರ್ತರೇ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ.
ಬಿಎಸ್‌ವೈ ಮಾಸ್ಟರ್ ಪ್ಲ್ಯಾನ್ , ನಳಿನ್ ಕುಮಾರ್‌ಗೆ ಮಂಗಳಾರತಿ..!
ಅಂದಹಾಗೆ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅಣತಿ ಮೇರೆಗೆ ಪಕ್ಷದ ರಾಜ್ಯಾಧ್ಯಕ್ಷನಾಗಿ ಹೈಕಮಾಂಡ್ ನಿಂದ ಆಯ್ಕೆಯಾಗಿ ಬಂದವರು. ಮೊದಲೇ ಬಿಎಲ್ ಸಂತೋಷ್ ಮತ್ತು ಬಿಎಸ್ ಯಡಿಯೂರಪ್ಪ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ರಾಜ್ಯದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಬಿಎಲ್ ಸಂತೋಷ್ ಗೆ ಅಡ್ಡಿಯಾಗುತ್ತಿರುವುದೇ ಬಿಎಸ್‌ವೈ. ಸದ್ಯ ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಎದುರು ಹಾಕಿಕೊಂಡು ಯಾವೊಬ್ಬನೂ ಮೂಗು ತೂರಿಸುವಂತಿಲ್ಲ. ಅಂತಹ ಪರಿಸ್ಥಿತಿ ಮಧ್ಯೆಯೇ ನಳಿನ್ ಕುಮಾರ್ ಕಟೀಲ್ ಬಿಎಲ್ ಸಂತೋಷ್ ಕೃಪಾಕಟಾಕ್ಷದಿಂದ ರಾಜ್ಯಾಧ್ಯಕ್ಷ ಪಟ್ಟ ಪಡೆದವರು. ಸ್ವತಃ ನಳಿನ್ ಕುಮಾರ್‌ಗೆ ರಾಜ್ಯ ರಾಜಕಾರಣದ ಮೇಲೆ ಆಸಕ್ತಿ ಇಲ್ಲದೇ ಹೋದರೂ ಬಿಎಲ್ ಸಂತೋಷ್‌ಗಾಗಿ ನಳಿನ್ ಒಪ್ಪಿಕೊಳ್ಳಲೇಬೇಕಾಯಿತು. ರಾಜ್ಯಾಧ್ಯಕ್ಷ ಸ್ಥಾನ ಪಡೆದ ಆರಂಭದಲ್ಲೇ ಸಿಎಂ ನಿವಾಸಕ್ಕೆ ಬಂದಿದ್ದ ನಳಿನ್‌ಗೆ ಬಿಎಸ್‌ವೈ ಲೆಫ್ಟ್ ರೈಟ್ ಮಾಡಿದ್ದು ಬಹುದೊಡ್ಡ ಸುದ್ದಿಯಾಗಿತ್ತು. ಈ ಮೂಲಕ ರಾಜಾಹುಲಿ ಬಿಎಲ್ ಸಂತೋಷ್‌ಗೆ ಟಾಂಗ್ ನೀಡಿದ್ದು ಹಳೇ ಇತಿಹಾಸ.
ಇದೀಗ ಮತ್ತೆ ನಳಿನ್ ವಿರುದ್ಧ ಕರಾವಳಿಗರು ಬಂಡಾಯ ಏಳುವಂತಹ ಸ್ಥಿತಿಯನ್ನ ಬಿಎಸ್‌ವೈ ತಂದಿಟ್ಟಿದ್ದಾರೆ. ತಾನು ಮಂಡಿಸಿದ ಬಜೆಟ್‌ನಲ್ಲೇ ಇಂತಹದ್ದೊಂದು ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಯಾವ ಯೋಜನೆಯನ್ನ ನಳಿನ್ ವಿರೋಧಿಸಿದ್ದರೋ ಅದೇ ಯೋಜನೆಗೆ ಹಣ ಮೀಸಲಿರಿಸಿದ್ದಾರೆ. ಇತ್ತ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಅನ್ನೋ ನೆಲೆಗಟ್ಟಿನಲ್ಲಿ ಅನಿವಾರ್ಯವಾಗಿ ರಾಜಾಹುಲಿ ಬಜೆಟ್‌ಗೆ ʼಭೇಷ್ʼ ಎಂದಿದ್ದಾರೆ. ಪರಿಣಾಮ ಕರಾವಳಿಯಲ್ಲಿ ಪರಿಸರ ಹೋರಾಟಗಾರರಿಗೆ ಶಾಕ್ ಆಗಿದೆ. ಅತ್ತ ಸಿಎಂ ನೀಡಿರುವ ಮಾಸ್ಟರ್ ಸ್ಟ್ರೋಕ್ ಗೆ ಇತ್ತ ಕರಾವಳಿಯಲ್ಲಿ ನಳಿನ್ ವಿರುದ್ಧವೇ ʼಸರ್ಜಿಕಲ್ ಸ್ಟ್ರೈಕ್ʼ ಆರಂಭವಾಗಿದೆ. ಸಂಸದರ ಫ್ಲೆಕ್ಸ್‌ಗಳ ಹುಡುಕಾಟ ಆರಂಭವಾಗಿದೆ. ಮಸಿ ಬಳಿಯುವ ಮೂಲಕ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ಕಮಲ ಪಕ್ಷದ ರಾಜ್ಯಾಧ್ಯಕ್ಷರಿಗೆ ಸದ್ಯ ಅಡಕತ್ತರಿಯಲ್ಲಿರುವ ಪರಿಸ್ಥಿತಿಯನ್ನ ತಂದೊಡ್ಡಿದೆ.
ಹೋರಾಟದ ಹೆಸರಲ್ಲಿ ಯೋಜನೆಯನ್ನೇ ʼವೋಟ್ ಬ್ಯಾಂಕ್ ʼ ಮಾಡಿಕೊಂಡ ನಳಿನ್..!
ನಳಿನ್ ಕುಮಾರ್ ಕಟೀಲ್ ಸಂಘಪರಿವಾರದಿಂದ ಬಂದ ಓರ್ವ ಸಾಮಾನ್ಯ ಕಾರ್ಯಕರ್ತ. ಮತದಾರರನ್ನು ಯಾವ ರೀತಿ ಮಾತಿನ ಮೂಲಕ ಮರಳು ಮಾಡಬಹುದೆನ್ನುವ ಚಾತುರ್ಯ ಹೊಂದಿರೋ ರಾಜಕಾರಣಿಯೂ. ಅಂತೆಯೇ 2014 ರಲ್ಲಿ ಸಿದ್ದರಾಮಯ್ಯ ಸರಕಾರ ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಮಾಡುತ್ತಿದ್ದಂತೆ, ಪಾಪ ಪರಿಸರ ಪ್ರೇಮಿ ಹೋರಾಟಗಾರರೆಲ್ಲ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಹೋರಾಟ ಸಂಘಟಿಸಿದ್ದರು. ಅದರ ಪರಿಣಾಮವೇ 2016 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುದೊಡ್ಡ ಮಟ್ಟಿನಲ್ಲಿ ಹೋರಾಟಗಳು ನಡೆದವು. ಕೇಂದ್ರ ಅರಣ್ಯ, ಪರಿಸರ ಸಚಿವರ ಬಳಿಗೂ ಹೋರಾಟಗಾರರ ನಿಯೋಗ ಭೇಟಿ ನೀಡಿ ಯೋಜನೆಯ ಕಾಮಗಾರಿ ನಿಲ್ಲಿಸುವಂತೆ ಕೇಳಿಕೊಂಡಿತ್ತು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅನ್ನೋ ಭೇದಭಾವವಿಲ್ಲದೇ ಹೋರಾಟಗಾರರು ಬೀದಿಗಿಳಿದಿದ್ದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟಕ್ಕೆ ಧುಮುಕಿದ್ದರು, ಒಂದು ದಿನವಿಡೀ ಜಿಲ್ಲಾ ಬಂದ್ ಆಗಿರೋ ಪ್ರಸಂಗವೂ ನಡೆದಿತ್ತು. ಅಂದು ಆ ಎಲ್ಲಾ ಹೋರಾಟಗಳಿಗೆ ಹಲವು ನಾಯಕರು ನೇತೃತ್ವ ನೀಡಿದ್ದರು. ಸ್ವತಃ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಕೂಡಾ ಮಂಗಳೂರು ದಕ್ಷಿಣ ಶಾಸಕರಾಗಿದ್ದ ಜೆಆರ್ ಲೋಬೋ ಕೂಡಾ ತಮ್ಮದೇ ಸರಕಾರದ ನಿಲುವಿನ ವಿರುದ್ಧ ನಿಂತಿದ್ದರು. ಇಂತಹ ಹೋರಾಟಗಳ ವೇದಿಕೆಯಲ್ಲಿ ಮುನ್ನುಗ್ಗಿ ಭಾಷಣ ಮಾಡುತ್ತಾ ಹೋರಾಟಕ್ಕೆ ಹುರಿದುಂಬಿಸಿದವರು ಇದೇ ನಳಿನ್ ಕುಮಾರ್ ಕಟೀಲ್.
ಇದಕ್ಕೂ ಜಾಸ್ತಿ ಸ್ವತಃ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲೇ 2016 ರ ಡಿಸೆಂಬರ್ ತಿಂಗಳಲ್ಲಿ ಮೂರು ದಿನ ಬೃಹತ್ ಪಾದಯಾತ್ರೆ ನಡೆದಿತ್ತು. ಜಿಲ್ಲೆಯಲ್ಲಿರುವ ಏಳು ಪುಣ್ಯ ಕ್ಷೇತ್ರ ಹಾಗೂ ಐದು ನದಿಗಳ ತೀರ್ಥ ಸಂಗ್ರಹ ನಡೆಸಿದ್ದರು. ಆ ಮೂಲಕ ನಳಿನ್ ಕುಮಾರ್ ಕಟೀಲ್ ಪರೋಕ್ಷವಾಗಿ ಸಿದ್ದರಾಮಯ್ಯ ಸರಕಾರ ವಿರುದ್ಧ ಪಕ್ಷಾತೀತವಾದ ಜನಾಂದೋಲನವನ್ನು ಹುಟ್ಟು ಹಾಕಿದ್ದರು. ಅದರ ಪರಿಣಾಮವೇ 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಖಾದರ್ ಹೊರತುಪಡಿಸಿ ಮತ್ತೆ ಉಳಿದ ಆರು ವಿಧಾನಸಭಾ ಕ್ಷೇತ್ರದ ಕೈ ಶಾಸಕರು ಮನೆ ಸೇರಿಕೊಳ್ಳುವಂತಾಗಿತ್ತು. ಆದರೆ ಈ ರೀತಿ ವ್ಯವಸ್ಥಿತವಾಗಿ ವೋಟ್ ಬ್ಯಾಂಕ್ ನಿರ್ಮಿಸಿಕೊಂಡ ನಳಿನ್ ಜಿಲ್ಲೆಯಲ್ಲಿ ಕಮಲ ಪತಾಕೆ ಅರಳಿಸಿದ್ದು ಈಗ ಇತಿಹಾಸ.
ಹೀಗೆ ಚಾಣಾಕ್ಷತನ ಪ್ರದರ್ಶಿಸುತ್ತಲೇ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎನಿಸಿಕೊಂಡಿರುವ ನೇತ್ರಾವತಿ ಮೇಲಿದ್ದ ಭಾವನೆಯನ್ನೇ ಮುಂದಿಟ್ಟುಕೊಂಡು ಇನ್ನಷ್ಟು ಅದನ್ನ ಗಟ್ಟಿಗೊಳಿಸಿದ ನಳಿನ್ ಈಗ ತನ್ನ ಸರಕಾರ ಮಾಡಿರುವ ಕೆಲಸದ ಪರವಹಿಸಿ ಮಾತನಾಡಿದ್ದಾರೆ. ಪ್ರಕೃತಿ ಮೇಲಿನ ಹೆಸರಲ್ಲಿ ಮಾಡಿರುವ ಮೋಸಕ್ಕೆ ಜನ ಕ್ಷಮಿಸಿಯಾರೂ ಆದರೆ ಪ್ರಕೃತಿ ಕ್ಷಮಿಸೀತೆ ಅನ್ನೋದೆ ಪರಿಸರ ಹೋರಾಟಗಾರರ ಪ್ರಶ್ನೆ.