ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವ ನರೇಂದ್ರ ಮೋದಿ ಸರ್ಕಾರವು ಜನಜೀವನವನ್ನು ಸ್ತಬ್ಧಗೊಳಿಸಿರುವ ನಡುವೆಯೇ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಐವರನ್ನು ಅತ್ಯಂತ ಕರಾಳ ಕಾಯ್ದೆ ಎಂದು ಬಣ್ಣಿಸಲಾದ ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ (ಪಿಎಸ್‌ಎ) ಬಂಧಿಸಿರುವುದು ವಿವಾದ ಎಬ್ಬಿಸಿದೆ. “ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರ ಬದುಕು ಸಹಜತೆಯತ್ತ ಮರಳುತ್ತಿದೆ” ಎಂದು ಹೇಳುತ್ತಲೇ ರಾಜಕೀಯ ಮುಖಂಡರನ್ನು ಪಿಎಸ್‌ಎ ಅಡಿ ಕೇಂದ್ರ ಸರ್ಕಾರ ಬಂಧಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು “ಮೋದಿಯವರನ್ನು ಸರ್ವಾಧಿಕಾರಿ” ಎಂದು ಉಗ್ರವಾಗಿ ಟೀಕಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವಿರುವಾಗ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ 370ನೇ ವಿಧಿ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿತ್ತು. ಆನಂತರ ಪರಿಸ್ಥಿತಿ ಕೈಮೀರಬಹುದು ಎಂದು ಕಣಿವೆ ರಾಜ್ಯದಲ್ಲಿ ಸುಮಾರು 10 ಲಕ್ಷ ಸೇನೆ ಹಾಗೂ ಪೊಲೀಸರನ್ನು ನಿಯೋಜಿಸಿ ನಾಗರಿಕ ಬದುಕನ್ನು ಮೋದಿ ಸರ್ಕಾರವು ದುಸ್ತರಗೊಳಿಸಿದೆ. ಶಾಂತಿ, ಸುವ್ಯವಸ್ಥೆಯ ನೆಪವೊಡ್ಡಿ ಮುಖ್ಯವಾಹಿನಿಯಲ್ಲಿನ ರಾಜಕೀಯ ಮುಖಂಡರು, ವಕೀಲರು, ಹೋರಾಟಗಾರರನ್ನು ಪಿಎಸ್‌ಎ ಅಡಿ ಬಂಧಿಸಿ, ಜೈಲಿಗಟ್ಟಲಾಗಿದೆ. 2019ರಲ್ಲಿ ಸುಮಾರು 662 ಮಂದಿಯನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಮೋದಿ ಸರ್ಕಾರದ ವಿವೇಚಾನರಹಿತ ನಿರ್ಧಾರದಿಂದ ಅಲ್ಲಿನ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದ್ದು ಅಂದಾಜು 18 ಸಾವಿರ ಕೋಟಿ ರುಪಾಯಿ, ಲಕ್ಷಾಂತರ ಉದ್ಯೋಗ ನಷ್ಟವಾಗಿದೆ ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸರ್ಕಾರವು ಮಾನವ ಹಕ್ಕುಗಳ ಮಾರಣಹೋಮ ನಡೆಸುತ್ತಿದೆ ಎಂದು ದೇಶ-ವಿದೇಶಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ. ದೇಶದೊಳಗೆ ಮೋದಿ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳು ಹಾಗೂ ಪ್ರಜ್ಞಾವಂತ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ನೀತಿ-ನಿಯಮಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟುಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಸರ್ಕಾರವು ಯೂರೋಪಿಯನ್ ಯೂನಿಯನ್ ಸಂಸತ್ತಿನ ಬಲಪಂಥೀಯ ವಿಚಾರಧಾರೆಗಳ ಸಂಸದರನ್ನು ಕಾಶ್ಮೀರಕ್ಕೆ ಕೊಂಡೊಯ್ದು ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸರಿಯಿದೆ ಎಂದು ಬಿಂಬಿಸಲು ಯತ್ನಿಸಿ ಬೆತ್ತಲಾಗಿತ್ತು. ವಿಶೇಷವೆಂದರೆ ದೇಶದ ವಿರೋಧ ಪಕ್ಷಗಳ ನಾಯಕರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು.
ಈಗ ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿತರಾಗಿರುವ ಪಿಡಿಪಿಯ ಮೆಹಬೂಬ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಅವರನ್ನು ಗರಿಷ್ಠ ಎರಡು ವರ್ಷಗಳವರೆಗೆ ಯಾವುದೇ ವಿಚಾರಣೆ ನಡೆಸದೇ ಗೃಹ ಬಂಧನದಲ್ಲಿ ಇಡಬಹುದಾಗಿದೆ. ಟಿಂಬರ್ ದಂಧೆಕೋರರನ್ನು ಹದ್ದುಬಸ್ತಿನಲ್ಲಿಡಲು ಫಾರೂಕ್ ಅಬ್ದುಲ್ಲಾ ಅವರ ತಂದೆ ಶೇಖ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಿದ್ದಾಗ ಪಿಎಸ್‌ಎ ಕಾನೂನು ಜಾರಿಗೊಳಿಸಿದ್ದರು. ಆನಂತರ ಪಿಎಸ್‌ಎಗೆ ಹಲವು ಮಾರ್ಪಾಡುಗಳನ್ನು ಮಾಡಿ ದೇಶವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ಬಂಧಿಸಲು ಅವಕಾಶ ಮಾಡಲಾಗಿತ್ತು. ಈಗ ಅದೇ ಕಠಿಣ ಕಾನೂನುಗಳ ದುರ್ಬಳಕೆಗೆ ಇಳಿದಿರುವ ಬಿಜೆಪಿಯು ಮುಖ್ಯ ವಾಹಿನಿಯ ನಾಯಕರ ವಿರುದ್ಧ ಕ್ರೂರ ಕಾನೂನು ಪ್ರಯೋಗಿಸುತ್ತಿರುವುದು “ರಾಜಕೀಯ ದುರುದ್ದೇಶ”ವಲ್ಲದೆ ಮತ್ತೇನು? ತೀರ ಈಚೆಗೆ ಅಧಿಕಾರ ಅನುಭವಿಸಲು ಅವರ ನೆರವು ಪಡೆದ ಬಿಜೆಪಿಯು ಏಕಾಏಕಿ ಈ ರಾಜಕೀಯ ನಾಯಕರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಿರುವುದೇಕೆ? ಜಮ್ಮು ಮತ್ತು ಕಾಶ್ಮೀರದಲ್ಲಾದ ಬೆಳವಣಿಗೆಯನ್ನೇ ಮಾದರಿಯಾಗಿಸಿಕೊಂಡು ವಿರೋಧ ಪಕ್ಷಗಳ ಸದ್ದು ಅಡಗಿಸಲು ಬಿಜೆಪಿಯು ಇದೇ ಮಾದರಿಯ ಕರಾಳ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂಬುದಕ್ಕೆ ಭದ್ರತೆ ಏನು? ಎಂಬ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ.

2017ರ ವರೆಗೆ ಬಿಜೆಪಿ ಜೊತೆಗೂಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಿದ್ದ ಮೆಹಬೂಬ ಮುಫ್ತಿ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಒಬ್ದುಲ್ಲಾ ರಾಜ್ಯ ಖಾತೆ ಸಚಿವರಾಗಿದ್ದರು. ಈಗ ಇಬ್ಬರೂ ನಾಯಕರ ವಿರುದ್ಧ ದೊಂಬಿ ಹಾಗೂ ಅದಕ್ಕೆ ಕುಮ್ಮಕ್ಕು, ಸರ್ಕಾರದ ವಿರುದ್ಧ ಪಿತೂರಿ ನಡೆಸುವುದು, ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಚಲಾಯಿಸಲಾಗುವ ಪಿಎಸ್‌ಎ ಜಾರಿಗೊಳಿಸಲಾಗಿದೆ. ತೀರ ಈಚೆಗೆ ರಾಜ್ಯಸಭಾ ಸದಸ್ಯ, ಓಮರ್ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ 82 ವರ್ಷದ ಫಾರೂಕ್ ಅಬ್ದುಲ್ಲಾ ಅವರನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ.
ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಅವರನ್ನು ಪಿಎಸ್‌ಎ ಅಡಿ ಬಂಧಿಸುವ ಮುನ್ನ ಸಂಸತ್ತಿನಲ್ಲಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸುತ್ತಾ ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಕುರಿತ ಆಡಿದರನ್ನೆಲಾದ ಹೇಳಿಕೆಗಳನ್ನು ಉಲ್ಲೇಖಿಸಿದ್ದರು. “370ನೇ ವಿಧಿ ರದ್ದುಗೊಳಿಸಿದರೆ ಭೂಕಂಪ ಸಂಭವಿಸಲಿದೆ. ಇದು ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಲಿದೆ” ಎಂದು ಓಮರ್ ಅಬ್ದುಲ್ ಹೇಳಿದ್ದರು ಎಂದು ಮೋದಿ ಪ್ರಸ್ತಾಪಿಸಿದ್ದರು. ಮೋದಿಯವರು ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕೆಲವೇ ತಾಸುಗಳಲ್ಲಿ ಓಮರ್ ಮತ್ತು ಮುಫ್ತಿ ಹಾಗೂ ಇತರರನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ ಎಂದು ಸ್ಥಳೀಯಾಡಳಿತ ಪ್ರಕಟಿಸಿರುವುದು ಕಾಕತಾಳೀಯವಲ್ಲ. ಇದೊಂದು ಪೂರ್ವ ನಿಯೋಜಿತ ಷಡ್ಯಂತ್ರ ಎಂಬುದು ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಸೂಕ್ಷ್ಮವಾಗಿ ಅರ್ಥವಾಗುವಂಥದ್ದು.
ಆಗಸ್ಟ್ 5ರಂದು ಗೃಹ ಬಂಧನಕ್ಕೆ ಒಳಗಾಗಿದ್ದ ಮುಫ್ತಿ, ಓಮರ್ ಹಾಗೂ ಇತರೆ ನಾಯಕರು ಗುರುವಾರ ಬಿಡುಗಡೆಯಾಗಬೇಕಾಗಿತ್ತು. ಒಂದೊಮ್ಮೆ ಅವರು ಬಿಡುಗಡೆಯಾಗಿ ರಾಜಕೀಯ ಚಟುವಟಿಕೆ ಆರಂಭಿಸಿದರೆ ಕಂಟಕ ಎದುರಾಗಲಿದೆ ಎಂದು ಅರಿತ ಮೋದಿ ಸರ್ಕಾರವು ಮುಫ್ತಿ, ಓಮರ್ ಸೇರಿದಂತೆ ಇತರೆ ನಾಯಕರ ವಿರುದ್ಧ ಪಿಎಸ್‌ಎ ಅಸ್ತ್ರ ಝಳಪಿಸಿರುವುದು ಸ್ಪಷ್ಟವಾಗಿದೆ.
ಓಮರ್ ವಿರುದ್ಧ ಪಿಎಸ್‌ಎ ಜಾರಿ ಮಾಡಲು ಮೋದಿಯವರು ವಿಡಂಬನಾತ್ಮಕ ಸುದ್ದಿಗಳಿಗೆ ಹೆಸರಾದ “ಫೇಕ್ ನ್ಯೂಸ್” ಎಂಬ ವೆಬ್ ಸೈಟ್‌ನಲ್ಲಿ ಪ್ರಕಟವಾದ ಹೇಳಿಕೆಯನ್ನು ಪ್ರಸ್ತಾಪಿಸಿ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಮೋದಿಯವರ ಟೀಕಾಕಾರರು ಪ್ರಧಾನಿ ಸುಳ್ಳು ಹೇಳಿದ್ದಾರೆ ಎಂದು ಮುಗಿಬಿದ್ದಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಪಿಆರ್) ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನರೇಂದ್ರ ಮೋದಿಯವರು ಸಿಕ್ಕಿಬಿದ್ದು ತೀವ್ರ ಮುಜುಗರ ಅನುಭವಿಸಿದ್ದರು. ಕಾಂಗ್ರೆಸ್. ಇತಿಹಾಸ ಹಾಗೂ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ವಿಚಾರದಲ್ಲಿ ಮೋದಿಯವರು ಹಲವು ಸಂದರ್ಭಗಳಲ್ಲಿ ವಾಸ್ತವಕ್ಕೆ ದೂರವಾದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಪ್ರಧಾನಿ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಅಮಿತ್ ಶಾ, ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಸ್ಮೃತಿ ಇರಾನಿ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೇರಿದಂತೆ ಹಲವು ನಾಯಕರು ಸುಳ್ಳು ಸುದ್ದಿ ಹಾಗೂ ವಿಡಿಯೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಹರಿಯಬಿಡುವ ಮೂಲಕ ಸಿಕ್ಕಿಬಿದ್ದು ತೀವ್ರ ಮುಜುಗರ ಅನುಭವಿಸಿದ್ದಾರೆ. ಈಗ ಪ್ರಧಾನಿ ಮೋದಿಯವರು ಫೇಕ್ ನ್ಯೂಸ್ ಪೋರ್ಟಲ್ ನಲ್ಲಿ ಪ್ರಕಟವಾದ ಅಂಶವನ್ನು ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಕಳನಾಯಕನಂತೆ ಬಿಂಬಿಸಿದ್ದಾರೆ. ಇದರ ಬೆನ್ನಲ್ಲೇ ಪಿಎಸ್‌ಎ ಅಡಿ ಓಮರ್ ಅಬ್ದುಲ್ಲಾ ಅವರನ್ನು ಗೃಹ ಇಲಾಖೆ ಬಂಧಿಸಿರುವುದು ಎಷ್ಟು ಸರಿ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್‌ಗೆ ನಿರ್ಬಂಧ ಹೇರಲಾಗಿದೆ. ಇಂದಿಗೂ ಕಣಿವೆ ರಾಜ್ಯದಲ್ಲಿ ಮಾಧ್ಯಮಗಳು ಹಾಗೂ ಉದ್ಯಮಿಗಳು ಮುಕ್ತವಾಗಿ ಕೆಲಸ ನಿರ್ವಹಿಸುವ ವಾತಾವರಣವಿಲ್ಲ. ಇಂಟರ್ ನೆಟ್ ಇಲ್ಲದೇ ಇರುವುದರಿಂದ ಸರ್ಕಾರ ಸ್ಥಾಪಿಸಿರುವ ಮಾದ್ಯಮ ಕೇಂದ್ರದ ಮೂಲಕವೇ ವ್ಯವಹರಿಸುವ ಸಂದರ್ಭ ನಿರ್ಮಾಣವಾಗಿದೆ. ಉದ್ಯಮಿಗಳಿಗೆ ತೀರ ತೊಂದರೆಯಾಗಿದೆ.
ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಸಮರ್ಥಿಸಲಾಗದು ಎಂದು ಕೆಲವು ತಿಂಗಳ ಹಿಂದೆ ಭಾರತದ ಪ್ರವಾಸದಲ್ಲಿದ್ದ ಜರ್ಮನ್ ಛಾನ್ಸೆಲರ್ ಏಂಜೆಲಾ ಮಾರ್ಕೆಲ್ ಹೇಳಿದ್ದರು. ಭಾರತದಲ್ಲಿ ಅತಿ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಇರುವ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ನಿರ್ಧಾರ ಖಂಡನೀಯ ಎಂದು ಮಲೇಷ್ಯಾ, ಟರ್ಕಿ, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿವೆ. ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದನ್ನು ಅರ್ಥಮಾಡಿಕೊಳ್ಳದ ನರೇಂದ್ರ ಮೋದಿಯವರ ಸರ್ಕಾರವು ಒಂದಾದ ಮೇಲೊಂದರಂತೆ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕೆಟ್ಟ ಹೆಜ್ಜೆಗಳನ್ನು ಇಡುತ್ತಿದೆ ಎಂದು ವಿದೇಶಾಂಗ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿರುವ ಬಿಜೆಪಿಯು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಹಂತಕ್ಕೆ ಕೊಂಡೊಯ್ತುತ್ತಿದೆ ಎಂಬ ಆರೋಪ ಬಲಗೊಳ್ಳುತ್ತಿದೆ. ಬಿಜೆಪಿಯ ನೀತಿ-ನಿರ್ಧಾರಗಳು ಅದಕ್ಕೆ ಇಂಬುಗೊಡುವಂತಿವೆ. ಅಂದಹಾಗೆ, ಸರ್ವಾಧಿಕಾರಿ ದುರ್ಬಲನಾದಷ್ಟು ಕ್ರೂರಿಯಾಗುತ್ತಾನೆ ಎಂಬ ಮಾತು ದಿಟವೇ?