ವಿಶ್ವದ ದೈತ್ಯ ತಂಪುಪಾನೀಯ ಕಂಪನಿಗಳಾದ ಪೆಪ್ಸಿ, ಕೋಕ್ ಹಾಗೂ ನೆಸ್ಲೆ ವಿರುದ್ಧ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಪರಿಸರವಾದಿಗಳ ತಂಡ ಈ ಕಂಪನಿಗಳು ಬೇಕಾಬಿಟ್ಟಿ ಪ್ಲಾಸ್ಟಿಕ್ ಬಾಟಲ್ ಉತ್ಪಾದನೆ ಮಾಡುವುದರ ಜೊತೆ, ಬಾಟಲ್ ಮೇಲೆ ಪುನರ್‌ಬಳಕೆ ಮಾಡಬಹುದೆಂದು ಹೇಳಿ ಗ್ರಾಹಕರಿಗೆ ತಪ್ಪು ಸಂದೇಶ ನೀಡಿವೆ ಎಂದು ದೂರಿದೆ.
ಬುಧವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೋದ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಪ್ರಕರಣ ದಾಖಲಿಸಿದ ಅರ್ಥ್ ಐಲ್ಯಾಂಡ್ ಸಂಸ್ಥೆಯ ಸ್ವಯಂಸೇವಕರು ನ್ಯಾಯಾಧೀಶರ ಮುಂದೆ ವಾದಿಸಿ, ಈ ಕಂಪನಿಗಳಿಂದ ದಿನಕ್ಕೆ ಲಕ್ಷಾಂತರ ಬಾಟಲ್‌ಗಳನ್ನ ತಯಾರಿಸುತ್ತದೆ, ಇವೆಲ್ಲ ಸಾಗರ-ಸಮುದ್ರದಂಚಿನಲ್ಲಿ ರಾಶಿ ರಾಶಿ ಬಿದ್ದಿರುತ್ತವೆ. ಪರಿಸರ ಹಾಳುಗೆಡವಲು ಈ ಕಂಪನಿಗಳ ಪಾತ್ರವೇ ಹೆಚ್ಚು, ನಾವ್ಯಾಕೆ ಈ ಕಂಪನಿಗಳನ್ನ ಪರಿಸರ ವಿನಾಶಕ್ಕೆ ಕಾರಣೀಭೂತರು ಎಂದು ಪರಿಗಣಿಸಬಾರದು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದೆ. ಅರ್ಥ್ ಐಲ್ಯಾಂಡ್ ಕಾರ್ಯಕರ್ತರು ಮುಂದುವರಿದು, ತಮ್ಮ ಮೊಕದ್ದಮೆಯಲ್ಲಿ ಈ ಕಂಪನಿಗಳು ಪರಿಸರ ಹಾನಿ ನಷ್ಟ ಭರಿಸಬೇಕು ಹಾಗೂ ಈ ಬಾಟಲ್‌ಗಳನ್ನ ಪುನರ್‌ಬಳಕೆ ಮಾಡಲು ಯಾವುದೇ ಆಸಕ್ತಿ ತೋರದೇ ಬಾಟಲ್ ಮೇಲೆ ಪುನರ್‌ಬಳಕೆ ಮಾಡಬಹುದು ಎಂದು ಮುದ್ರಿಸುತ್ತಿವೆ, ಈ ಪೊಳ್ಳು ಜಾಹಿರಾತನ್ನೂ ನಿಲ್ಲಿಸಲಿ ಎಂದು ತಾಕೀತು ಮಾಡಿವೆ.

ದಿ ಗಾರ್ಡಿಯನ್ ಈ ಸುದ್ದಿಯನ್ನ ಬಿತ್ತರಿಸಿದ್ದು ಅರ್ಥ್ ಐಲ್ಯಾಂಡ್‌ನ ಡೇವಿಡ್ ಫಿಲಿಪ್ ಎಂಬಾತನ ಹೇಳಿಕೆಯನ್ನ ದಾಖಲಿಸಿದೆ. ಫಿಲಿಪ್ ಪ್ರಕಾರ ಯೆಥೇಚ್ಚವಾಗಿ ಈ ಕಂಪನಿಗಳು ಪ್ಲಾಸ್ಟಿಕ್ ಬಾಟಲ್‌ಗಳನ್ನ ತಯಾರು ಮಾಡುವುದರಿಂದ ಇವುಗಳನ್ನ ಹೊಣೆ ಮಾಡಬೇಕು, ಆ ಕಂಪನಿಗಳಿಗೂ ಈ ಬಾಟೆಲ್‌ಗಳು ಮರುಬಳಕೆಯಾಗುವುದಿಲ್ಲ ಎಂಬ ಕಟು ಸತ್ಯ ಗೊತ್ತಿದೆ. ಆದರೆ, ಯಾರೂ ಈ ಬಾಟಲ್‌ಗಳನ್ನ ಸಂಗ್ರಹಿಸುವುದಿಲ್ಲ, ಅಂತಹ ಕೆಲಸಕ್ಕೆ ಈ ಸಂಸ್ಥೆಗಳಿಂದಲೂ ಯಾವುದೇ ನೆರವು ಇಲ್ಲ. ಆದರೂ ಬಾಟಲ್ ಲೇಬಲ್ ಮೇಲೆ ಪುನರ್ ಬಳಕೆ ಮಾಡಬಹುದು ಎಂದು ಮುದ್ರಿಸುತ್ತವೆ, ಮೊದಲು ಆ ಜಾಹೀರಾತನ್ನೂ ನಿಲ್ಲಿಸಬೇಕು. ಯಾಕೆಂದರೆ, ಜನರ ಮನಸ್ಸಿನಲ್ಲಿ ಈ ಬಾಟಲ್‌ಗಳು ಪುನರ್ ಬಳಕೆಯಾಗುತ್ತವೆ ಎಂಬ ಭಾವನೆ ಬರುತ್ತೆ, ಎನ್ನುತ್ತಾರೆ ಫಿಲಿಪ್.

ಕಳೆದ ವರ್ಷ ಸುಮಾರು ಎಪ್ಪತ್ತೆರಡು ಸಾವಿರ ಸ್ವಯಂಸೇವಕರ ತಂಡ ವಿಶ್ವದೆಲ್ಲೆಡೆ ಸಾಗರ ಸಮುದ್ರದ ಕಿನಾರೆಯಲ್ಲಿ ಬಿದ್ದಿರುವ ಬಾಟಲ್‌ಗಳನ್ನ ಸಂಗ್ರಹಿಸಿದಾಗ ವಿಶ್ವದ ಹತ್ತು ಪ್ರತಿಷ್ಠಿತ ತಂಪು ಪಾನೀಯ ಕಂಪನಿಗಳ ಬಾಟಲ್‌ಗಳೇ ಹೆಚ್ಚಿದ್ದವು, ಅದರಲ್ಲಿ ಪೆಪ್ಸಿ, ಕೋಕ್ ಹಾಗೂ ನೆಸ್ಲೇ ಮೊದಲ ಮೂರು ಸ್ಥಾನದಲ್ಲಿದ್ದವು. ಸದ್ಯ ಮೊಕದ್ದಮೆ ಹೇರಿಕೊಂಡಿರುವ ಈ ಕಂಪನಿಗಳು ಇನ್ನೂ ಪ್ರಕರಣದ ಗಹನತೆಯನ್ನ ವಿಶ್ಲೇಷಣೆ ಮಾಡುತ್ತಿವೆ. ವಿಶ್ವದೆಲ್ಲೆಡೆ ಶೇ. 10ರಷ್ಟು ಮಾತ್ರ ಈ ಬಾಟಲ್‌ಗಳು ಮರುಬಳಕೆಯಾಗುತ್ತವೆ ಅಂದರೆ ಅದೆಷ್ಟರ ಮಟ್ಟಿಗೆ ಬಾಟೆಲ್‌ಗಳು ಪರಿಸರಕ್ಕೆ ಸುರಿಯುತ್ತಿರಬಹುದು ಯೋಚಿಸಿ. ಅದೂ ಕಾನೂನುಗಳನ್ನ ಪಾಲನೆ ಮಾಡುವ ಅಮೆರಿಕದಲ್ಲೇ ಹೀಗಾದರೆ ಭಾರತದಲ್ಲಿ ಇದರ ಪರಿಣಾಮ ಎಷ್ಟರಮಟ್ಟಿಗಿದೆ ಎಂಬುದನ್ನ ಯೋಚಿಸಿದರೆ ಸ್ವಲ್ಪ ವರ್ಷಗಳಲ್ಲಿ ಕಾಲಿಟ್ಟಲ್ಲೆಲ್ಲಾ ಪ್ಲಾಸ್ಟಿಕ್ ಬಾಟಲ್‌ಗಳೇ ತುಂಬಿ ಹೋಗುತ್ತವೆ.
ಭಾರತದಂತಹ ರಾಷ್ಟ್ರದಲ್ಲಿ ಏನೂ ಬೇಕಾದರೂ ಮಾಡಬಹುದು, ಇಲ್ಲಿನ ಕಂಪನಿಗಳಿಗೆ ಕಾನೂನಿನ ಹೆದರಿಕೆ ಇಲ್ಲ, ಸರ್ಕಾರಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಮ್ಮೆ ನೋಡಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ ಬಿದ್ದಿರುತ್ತವೆ, ಹೆದ್ದಾರಿಯಲ್ಲಂತೂ ಹತ್ತು ಅಡಿ ಅಂತರದಲ್ಲೊಂದು ಬಾಟಲ್ ಬಿದ್ದಿರುತ್ತದೆ. ಗಿರಿಧಾಮ, ಜಲಪಾತ, ದೇವಸ್ಥಾನದ ಸುತ್ತಮುತ್ತಲೆಲ್ಲಾ ಬಾಟಲ್‌ಗಳದ್ದೇ ರಾಶಿ, ನಮ್ಮ ದೇಶದಲ್ಲೂ ಇಂತಹ ಪ್ರಕರಣಗಳನ್ನೇಕೆ ದಾಖಲಿಸುವುದಿಲ್ಲ? ಪರಿಸರ ಪರ ಹೋರಾಟಗಳು ಪರಿಣಾಮಕಾರಿಯಾಗಿಲ್ಲವೇ? ಅಥವಾ ನ್ಯಾಯಾಲಯಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುತ್ತಿಲ್ಲವೇ?