ಫೆಬ್ರವರಿ 1 ರಂದು ಕೇಂದ್ರ ಆಯವ್ಯಯ ಪಟ್ಟಿ ಮಂಡನೆಯ ಸಲುವಾಗಿ ದೇಶದ ಜನ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ದೇಶದ ಆರ್ಥಿಕ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲದ್ದರಿಂದ ಆರ್ಥಿಕತೆಯನ್ನು ಸರಿಯಾದ ದಾರಿಗೆ ತರುವುದು ಮೋದಿ ಸರಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಹೊಸತನವೇನಿರಲಿಲ್ಲ, ಹಾಗಾಗಿ ಈ ಬಾರಿಯಾದರೂ ದೇಶದ ಸಾಮಾನ್ಯ ವರ್ಗಕ್ಕೆ ಮುಂಬರುವ ಬಜೆಟ್‌ನಲ್ಲಿ ಹಲವು ರೀತಿಯ ನಿರೀಕ್ಷೆಗಳಿವೆ.
ನಿರುದ್ಯೋಗ ಸಮಸ್ಯೆ
ನಿರುದ್ಯೋಗ ಸಮಸ್ಯೆಯು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಶಿಕ್ಷಣದಿಂದಾಗಿ ಉದ್ಯೋಗ ದಕ್ಕಿಸಿಕೊಳ್ಳಬಹುದು ಎಂದುಕೊಂಡು ಅನೇಕ ವಿದ್ಯಾರ್ಥಿಗಳು ಶಿಕ್ಷಣ ಸಾಲವನ್ನು ಪಡೆದುಕೊಂಡಿರುತ್ತಾರೆ. ಅನೇಕ ಮಂದಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡು ಹೊರಬರುವಾಗ ಇತ್ತ ಉದ್ಯೋಗವೂ ಇಲ್ಲದೇ ಅತ್ತ ಸಾಲವನ್ನೂ ತೀರಿಸಲಾಗದ ಪರಿಸ್ಥಿತಿ ಎದುರಾಗಿದೆ. ಸರಕಾರವು ಉದ್ಯೋಗ ಸೃಷ್ಠಿಸುವ ಯೋಜನೆಗಳನ್ನು ದಿನೇ ದಿನೇ ಜಪಿಸುತ್ತಿದೆ. ಆದರೆ ಯಾವುದೇ ರೀತಿಯ ಯೋಜನೆ ಅನುಷ್ಠಾನಗೊಂಡಿಲ್ಲ, ಉದ್ಯೋಗ ಸೃಷ್ಠಿಯಿಂದ ಆರ್ಥಿಕ ಹೊಡೆತದಿಂದ ಪಾರಾಗಬಹುದೆಂದು ಕೇಂದ್ರ ಹಣಕಾಸು ಸಚಿವರ ಯೋಚನೆಯಾಗಿದ್ದರೆ ಒಳಿತು. ಕೇಂದ್ರ ಸರಕಾರವು ಈ ಸಮಸ್ಯೆಗೆ ಹಲವಾರು ರೀತಿಯ ಕಾರಣಗಳನ್ನು ನೀಡುತ್ತಿದೆ. ಆದರೆ ಸಮಸ್ಯೆಗೆ ಪರಿಹಾವಂತೂ ಸಿಕ್ಕಿಲ್ಲ, ಹಾಗಾಗಿ ಮುಂಬರುವ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂದು ನಿರುದ್ಯೋಗಿ ಯುವಕರ ಮತ್ತು ವಿದ್ಯಾರ್ಥಿಗಳ ನಿರೀಕ್ಷೆಯಾಗಿದೆ.
ಸಣ್ಣ ಕೈಗಾರಿಕೆಗಳಲ್ಲಿ ಶೇ 5೦%ರಷ್ಟು ಮುಚ್ಚಿಹೋಗಿವೆ. ಇದರಿಂದಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳನ್ನು ಮತ್ತೆ ಪುನಃಶ್ಚೇನಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್ಥಿಕತೆಯ ಕುಸಿತದೊಂದಿಗೆ, ಅಟೋಮೊಬೈಲ್ ಉತ್ಪಾದಕ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಹತಾಷರಾಗಿದ್ದಾರೆ. ಗಾರ್ಮೆಂಟ್ ಉದ್ಯಮ ಸೇರಿದಂತೆ ಹಲವಾರು ಕೈಗಾರಿಕೋದ್ಯಮಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಆರ್ಥಿಕತೆಯ ಕುಸಿತದಿಂದಾಗಿ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಠಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲೂ ಕೈಗಾರಿಕೋದ್ಯಮಕ್ಕೆ ಆದ್ಯತೆಯನ್ನು ಕಲ್ಪಿಸಬೇಕು. ಇದರಿಂದ ಆರ್ಥಿಕತೆಯ ಮೇಲೆ ಸ್ವಲ್ಪ ಮಟ್ಟಿಗಾದರೂ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು.
ಕೃಷಿ ವಲಯ
ಭಾರತವು ವರ್ಷದಲ್ಲಿ 200 ದಿನದಿಂದ 240 ದಿನಗಳವರೆಗೆ ದುಡಿಮೆಯನ್ನು ಮಾಡುವಂತಹ ಹವಾಮಾನವನ್ನು ಹೊಂದಿದೆ. ಈ ವ್ಯವಸಾಯವನ್ನು ನಂಬಿಕೊಂಡು ಶೇ 4೦%ರಷ್ಟು ಕೂಲಿಗಾರರು, ಶೇ 45%ರಷ್ಟು ಸಣ್ಣ ಅತಿ ಸಣ್ಣ ರೈತರು ಹಾಗೂ ಶೇ 7.5% ರಷ್ಟು ಮಂದಿ ಇದನ್ನೇ ಜೀವಾಳವಾಗಿ ನಂಬಿದ್ದಾರೆ. ಕೃಷಿಯಲ್ಲಿನ ಹಿನ್ನಡೆ ಮತ್ತು ಉತ್ತಮ ಬೇಡಿಕೆಯ ಕೊರತೆಯಿಂದಾಗಿ ಸಾಕಷ್ಟು ಮಂದಿ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರಲ್ಲಿ ಪ್ರಮುಖವಾಗಿ ರೈತರ ಆದಾಯ ದುಪ್ಪಟ್ಟುಗೊಳಿಸುವ ಇರಾದೆ ಇದೆ. ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಈಗಾಗಲೇ ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ 75 ಸಾವಿರ ಕೋಟಿ ರೂ. ಹೊರೆ ಬೀಳುತ್ತಿದೆ. ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೃಷಿಗೆ ಯುವ ಸಮುದಾಯವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ರೈತಾಪಿ ವರ್ಗದ ಅಭಿವೃದ್ಧಿ ಯೋಜನೆಗಳು ರಾಷ್ಟ್ರ ಮಟ್ಟಕ್ಕಿಂತಲೂ ಹೆಚ್ಚಾಗಿ ಪ್ರಾದೇಶಿಕ ಮಟ್ಟದಲ್ಲಿ ರೂಪುಗೊಳ್ಳಬೇಕಾಗಿದೆ. ಕೇಂದ್ರದ ರೈತಪರ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಗಳು ಉತ್ತಮ ಸಹಕಾರ ನೀಡಬೇಕು ಸರಿಯಾದ ನಿಟ್ಟಿನಲ್ಲಿ ಅನುಷ್ಠಾನಗೊಳಿಸಬೇಕು. ಹಾಗಾಗಿ ರೈತಾಪಿ ವರ್ಗವೂ ಈ ಬಾರಿಯ ಬಜೆಟ್‌ನಲ್ಲಿ ಉತ್ತಮ ಯೋಜನೆಗಳನ್ನು ನಿರೀಕ್ಷಿಸುತ್ತಿದೆ.
ಇವೆಲ್ಲಾ ಕ್ಷೇತ್ರಗಳಲ್ಲಿ ಆಗಬೇಕಾದ ಸುಧಾರಣೆಗಳು ಬಹಳಷ್ಟಿವೆ. ಅತೀ ಮುಖ್ಯವಾಗಿ, ಯುವ ಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಉದ್ಯೋಗಗಳನ್ನು ಸೃಷ್ಟಿಸುವಂತಹ ಯೋಜನೆಗಳು ಜಾರಿಗೆ ಬಂದಲ್ಲಿ, ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕತೆಯನ್ನು ಕೂಡ ಸ್ಥಿರಗೊಳಿಸುವ ಅವಕಾಶ ಕೇಂದ್ರ ಸರ್ಕಾರಕ್ಕಿದೆ. ಹಾಗಾಗಿ, ನಿರುದ್ಯೋಗ ಮತ್ತು ಕೃಷಿ ವಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಇರಬಹುದು ಎಂಬ ಆಶಾ ಭಾವನೆ ಯುವಕರಲ್ಲಿ ಹಾಗೂ ಕೃಷಿಕರಲ್ಲಿ ಮೂಡಿದೆ.