ನಾನಿದನ್ನು ಬರೆಯುತ್ತಿರುವ ಜನವರಿ 22 ಮತ್ತು 23ರ ನಡುವಿನ ರಾತ್ರಿಯ ಹೊತ್ತಿಗೆ ಸರಿಯಾಗಿ 21 ವರ್ಷಗಳಗಳ ಹಿಂದೆ ನಡೆದ ಒಂದು ಕ್ರೂರ, ದಮನಕಾರಿ ಮತ್ತು ಫ್ಯಾಸಿಸ್ಟ್ ಕೃತ್ಯವನ್ನು ಬಹುತೇಕ ಎಲ್ಲರೂ ಮರೆತುಬಿಟ್ಟಿದ್ದೇವೆ- ಅದೂ ಕೂಡಾ ಇಡೀ ದೇಶವೇ ಫ್ಯಾಸಿಸಂ ಹೇರಿಕೆಯ ಪ್ರಯತ್ನದ ವಿರುದ್ಧ ಹೋರಾಡುತ್ತಿರುವ ಅಥವಾ ಹೋರಾಡಲು ಅಣಿಯಾಗುತ್ತಿರುವ ಹೊತ್ತಿನಲ್ಲಿ!
ಆ ಹೊತ್ತಿನಲ್ಲಿ ಗ್ರಹಾಂ ಸ್ಟೈನ್ಸ್ ಎಂಬ 58 ವರ್ಷ ಪ್ರಾಯದ ಆಸ್ಟ್ರೇಲಿಯಾ ಮೂಲದ ಕ್ರೈಸ್ತ ಮಿಷನರಿ ಮತ್ತು ಅವರ ಹತ್ತು ಮತ್ತು ಆರು ವರ್ಷ ಪ್ರಾಯದ ಮಕ್ಕಳಾದ ಫಿಲಿಫ್ ಮತ್ತು ತಿಮೋತಿಯನ್ನು ಹಿಂದೂ ಮೂಲಭೂತವಾದಿಗಳು ಧರ್ಮರಕ್ಷಣೆಯ ಹೆಸರಿನಲ್ಲಿ ಜೀವಂತ ಸುಟ್ಟುಹಾಕಿದ್ದರು. ಇವಾಂಜಲಿಕ್ ಕ್ರೈಸ್ತರ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಸ್ಟೈನ್ಸ್, ತನ್ನ ಮೂವರು ಮಕ್ಕಳಲ್ಲಿ ಇಬ್ಬರನ್ನು ಜೊತೆಗೆ ಒಯ್ದಿದ್ದರು. ರಾತ್ರಿಯ ವೇಳೆ ತುಂಬಾ ಚಳಿಯೆಂದು ಅವರು ದಾರಿ ಮಧ್ಯೆ ತಮ್ಮ ಜೀಪಿನಲ್ಲಿ ಮಲಗಿದ್ದಾಗ, ದಾಳಿ ನಡೆಸಿದ್ದ ಗುಂಪು, ಜೀಪಿಗೆ ಬೆಂಕಿಹಚ್ಚಿ, ಅವರು ಹೊರಬರದಂತೆ ಮಾಡಿತ್ತು. ಅವರು ಜೀಪಿನೊಳಗೆಯೇ ಸುಟ್ಟುಹೋಗಿದ್ದರು. ಮರುದಿನ ಅವರನ್ನು ಸೇರಿಕೊಳ್ಳಬೇಕಾಗಿದ್ದ ಪತ್ನಿ ಗ್ಲಾಡಿ ಸ್ಟೈನ್ಸ್ ಮತ್ತು ಮಗಳು ಎಸ್ತರ್ ಅದೃಷ್ಟವಶಾತ್ ಬದುಕಿ ಉಳಿದಿದ್ದರು. ಈ ಘಟನೆಯ ವಿವರಗಳನ್ನು ನೀಡುವುದು ಈ ಬರಹದ ಉದ್ದೇಶವಲ್ಲ. ಅದರ ಘೋರ ವಿವರಗಳು ಈಗಿನ ಇಂಟರ್ನೆಟ್ ಯುಗದಲ್ಲಿ ಸಾಕಷ್ಟು ಸಿಗುತ್ತವೆ.
ಈ ಭಯಾನಕ ಘಟನೆ ನಡೆದದ್ದು 1999ರಲ್ಲಿ ಒಡಿಸ್ಸಾದ ಮಯೂರ್‌ಬಂಜ್ ಜಿಲ್ಲೆಯ ಮುಖ್ಯಪಟ್ಟಣ ಬರಿಪಾಡದ ಬಳಿಯಿರುವ ಮನೋಹರ್‌ಪುರ್-ಕಿಯೋಂಜಾರ್ ಗ್ರಾಮಗಳ ನಡುವೆ ಇರುವ ಬಡ ಆದಿವಾಸಿಗಳ ವಾಸಸ್ಥಾನದ ಬಳಿ. ಅವರನ್ನು ಕೊಂದ ಸುಮಾರು ಐವತ್ತು- ಕೊಡಲಿ ಮತ್ತು ಮಾರಕಾಸ್ತ್ರಗಳಿಂದ ಸಜ್ಜಿತರಾದ ಜನರ ಹುಚ್ಚುಗುಂಪಿನ ನಾಯಕನಾಗಿದ್ದವನು ಮರಣದಂಡನೆ ತಪ್ಪಿಸಿಕೊಂಡು, ಜೀವಾವಧಿ ಶಿಕ್ಷೆಗೆ ಗುರಿಯಾದ ಬಜರಂಗದಳದ ಕಾರ್ಯಕರ್ತ ದಾರಾಸಿಂಗ್ ಯಾನೇ ರಬೀಂದ್ರ ಪಾಲ್ ಎಂಬಾತ. ಈ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದಾತ ಆಗ ಒಡಿಸ್ಸಾ ಬಜರಂಗದ ರಾಜ್ಯ ಸಂಚಾಲಕನಾಗಿದ್ದು, ಈಗ ಮೋದಿ ಸರಕಾರದಲ್ಲಿ ಮಂತ್ರಿಯಾಗಿರುವ ಪ್ರತಾಪಚಂದ್ರ ಸಾರಂಗಿ. ಈತನೇ ಆ ಘಟನೆಯ ರೂವಾರಿ ಎಂದು ಮಾಧ್ಯಮಗಳ ಒಂದು ಚಿಕ್ಕ ವಿಭಾಗ ಧ್ವನಿ ಎತ್ತಿತ್ತು. ಆದರೂ, ಆತ ಕೇವಲ ಸಾಕ್ಷಿಯಾದ! ಮುಖ್ಯ ಮಾಧ್ಯಮಗಳು ಬೆಂಬಲಿಸಿದವು.
ಯಾಕಾಗಿ ಈ ಕ್ರೂರ ಕೃತ್ಯ ನಡೆಯಿತು? ಈ ವಿಷಯಕ್ಕೆ ಬರುವ ಮೊದಲು ಸ್ಟೈನ್ಸ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಅಗತ್ಯವಿದೆ. ಇಂಟರ್ನೆಟ್ ಇಲ್ಲದ ಕಾಲದಲ್ಲಿ ಬಾಲ್ಯದಿಂದಲೇ ಪೆನ್‌ಫ್ರೆಂಡ್ ಅಥವಾ ಪತ್ರಮಿತ್ರನಾಗಿದ್ದ ಸಂತನು ಸತ್ಪತಿ ಎಂಬವರ ಆಹ್ವಾನದ ಮೇರೆಗೆ 1965ರಲ್ಲಿ ಬರಿಪಾಡಕ್ಕೆ ಪತ್ನಿ ಗ್ಲಾಡಿ ಸ್ಟೈನ್ಸ್ ಜೊತೆ ಬಂದಿದ್ದ ಸ್ಟೈನ್ಸ್, ಮತ್ತೆಂದೂ ತನ್ನ ನಾಡಾದ ಆಸ್ಟ್ರೇಲಿಯಾಕ್ಕೆ ಮರಳಿರಲಿಲ್ಲ. ಒಡಿಸ್ಸಾದ ಬಡವರಲ್ಲಿ ಬಡವರಾಗಿದ್ದ, ರೋಗರುಜಿನಗಳಿಂದ ಬಳಲುತ್ತಿದ್ದ ಆದಿವಾಸಿ ಸಮುದಾಯದ ಸೇವೆಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ ಈ ದಂಪತಿ, ಹೆಚ್ಚುಕಡಿಮೆ 35 ವರ್ಷಗಳ ಕಾಲ ಈ ಕಾರ್ಯದಲ್ಲಿ, ಮುಖ್ಯವಾಗಿ ಕುಷ್ಟರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿತ್ತು. ಅದನ್ನವರು ಸರಳವಾಗಿ ‘ದೇವರ ಸೇವೆ’ ಎಂದು ಕರೆಯುತ್ತಿದ್ದರು.
ಸರಳ ಜೀವನ ನಡೆಸುತ್ತಾ, ಎಲ್ಲರ ಜೊತೆ ಸ್ನೇಹದಿಂದ ಇದ್ದ ಗ್ರಹಾಂ, ಕ್ರೈಸ್ತ ಧರ್ಮಗುರುವೂ ಆಗಿದ್ದರು. ಈ ಕಾರ್ಯದಲ್ಲಿ ನೆರವಾಗಲೆಂದು ಒಡಿಯಾ ಮತ್ತು ಆದಿವಾಸಿ ಭಾಷೆಯಾದ ಸಂತಾಲನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರು ಕಗ್ಗೊಲೆಯ ಬಳಿಕ ಅವರ ಗೆಳೆಯರಾಗಿದ್ದ ಆಗಿನ ಜಿಲ್ಲಾಧಿಕಾರಿ ಆರ್. ಬಾಲಕೃಷ್ಣನ್ ಅವರ ಮಾತುಗಳಿಂದ ಸ್ಟೈನ್ಸ್ ಅವರ ವ್ಯಕ್ತಿತ್ವ ತಿಳಿಯುತ್ತದೆ. “ಅತ್ಯಂತ ಕಠಿಣ ಶಬ್ದಗಳಿಂದಲೂ ಬರಿಪಾಡದ ಜನರ ಕೋಪ, ಸಂತಾಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮಗೆಲ್ಲಾ ಇದು ವೈಯಕ್ತಿಕ ನಷ್ಟ. ಸರಳ ಉಡುಪಿನಲ್ಲಿ ಒಂದು ಟೊಪ್ಪಿ ಧರಿಸಿ, ಸೈಕಲಿನಲ್ಲಿ ಓಡಾಡುತ್ತಾ, ಬರಿಪಾಡದ ಹೊರಗಿರುವ ಒಂದು ಮನೆಯಲ್ಲಿ ಕುಷ್ಟರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ್ದರು. ಜನರು ಅವರನ್ನು ಪ್ರೀತಿಯಿಂದ ‘ಸಾಯಿಬೋ’ ಎಂದು ಕರೆಯುತ್ತಿದ್ದರು”.
ಮದರ್ ತೆರೆಸಾ ಆದರ್ಶವಾಗಿದ್ದ ಇಂತಹ ಒಬ್ಬ ಮನುಷ್ಯನನ್ನು ಇಷ್ಟು ನಿರ್ದಯವಾಗಿ ಕೊಂದದ್ದಾದರೂ ಏಕೆ ಎಂಬ ಪ್ರಶ್ನೆಯನ್ನು ಮತ್ತೆ ಕೇಳೋಣ. ಸ್ಟೈನ್ಸ್ ಅವರು ಆದಿವಾಸಿಗಳನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂದು ಅವರ ಹಂತಕರು ಭಾವಿಸಿದ್ದರು. ಈ ಆರೋಪವನ್ನು ಅವರ ಪತ್ನಿ ಗ್ಲಾಡಿ ಮತ್ತೆಮತ್ತೆ ನಿರಾಕರಿಸಿದ್ದಾರೆ. ಈ ಹತ್ಯೆಯ ಕುರಿತು ತನಿಖೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ವಾಧ್ವಾ ಆಯೋಗದ ಮುಂದೆ ಗ್ಲಾಡಿಯವರು ನೀಡಿದ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾರೆ: “ದೇವರು ಯಾವತ್ತೂ ನನಗೆ ದಾರಿ ತೋರಿಸುತ್ತಾನೆ. ಆದರೆ, ನನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಕೊಂದವರು ಯಾಕಾಗಿ ಹಾಗೆ ವರ್ತಿಸಿದರು ಎಂದು ಮತ್ತೆಮತ್ತೆ ಯೋಚಿಸುತ್ತೇನೆ. ಅವರ ಸಾವಿನ ಹೊಣೆಗಾರರಿಗೆ ಶಿಕ್ಷೆಯಾಗಬೇಕೆಂಬ ಬಯಕೆ ನನಗಿಲ್ಲ. ಅವರು ತಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪಪಡಲಿ, ಸುಧಾರಿಸಲಿ ಎಂಬುದೇ ನನ್ನ ಬಯಕೆ”. ತನ್ನ ಪತಿಯನ್ನು ಕೊಂದದ್ದು ಯಾಕೆಂದು ಅವರಿಗೆ ಅರ್ಥವಾಗಿಲ್ಲ ಎಂಬುದು ಸ್ಪಷ್ಟ. ಇಂದು- ದೇಶದಾದ್ಯಂತ ಅಮಾಯಕರನ್ನು ಹಾದಿ ಬೀದಿಯಲ್ಲಿ ಯಾಕೆ ಕೊಲ್ಲಲಾಗುತ್ತಿದೆ ಎಂದು ನಮಗೂ ಅರ್ಥವಾಗಿಲ್ಲ ತಾನೆ!?
ವಿಚಾರಣೆ ನಡೆದು ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಹೀನಾತಿಹೀನವೆಂದು ಪರಿಗಣಿಸಿ ಮುಖ್ಯ ಆರೋಪಿ ದಾರಾ ಸಿಂಗ್‌ನಿಗೆ ಮರಣದಂಡನೆಯಾಯಿತು. ಪ್ರಕರಣದ ರೂವಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದ, ಈಗಿನ ಕೇಂದ್ರ ಮಂತ್ರಿ ಪ್ರತಾಪಚಂದ್ರ ಸಾರಂಗಿ, ಸಾಕ್ಷಿಯಾಗಿ, ದಾರಾ ಸಿಂಗ್ ಬಜರಂಗದಳದ ಸದಸ್ಯನೇ ಅಲ್ಲ ಎಂದು ಆತನ ಕೈಬಿಟ್ಟರು. ಇಂದು ತಮ್ಮ ನಾಯಕರ ಪ್ರಚೋದನೆಯಿಂದ ಹೀನಕೃತ್ಯಗಳನ್ನು ನಡೆಸುವವರು ಯೋಚಿಸಬೇಕು- ತಾವು ಜೈಲಿಗೆ ಹೋಗುತ್ತೇವೆ; ಹಿಂದೆ ನಿಂತವರು ತಮ್ಮ ಕೈಬಿಟ್ಟು ಮೇಲೇರುತ್ತಾರೆ ಎಂಬುದನ್ನು. ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಹೀಗೆಯೇ ನಡೆದಿದೆ.
ಮುಂದೆ ಹೈಕೋರ್ಟಿನಲ್ಲಿ ಈ ಕ್ರೂರ ಪ್ರಕರಣವನ್ನು ಹೀನಾತಿಹೀನ ಅಥವಾ ಅಪರೂಪದ ಪ್ರಕರಣವೆಂದು ಪರಿಗಣಿಸಲು ನಿರಾಕರಿಸಿ ಮರಣದಂಡನೆಯನ್ನು ಜೀವನಪರ್ಯಂತ ಶಿಕ್ಷೆಗೆ ಇಳಿಸಲಾಯಿತು. ಮುಂದೆ ಸುಪ್ರೀಂಕೋರ್ಟ್ ಕೂಡಾ ಇದೇ ಅಭಿಪ್ರಾಯ ತಳೆದು ಜೀವನಪರ್ಯಂತ ಶಿಕ್ಷೆಯನ್ನು ಖಾಯಂಗೊಳಿಸಿತು. ಇದು ಯಾಕೆ ಹೀನಾತಿಹೀನ ಪ್ರಕರಣವಲ್ಲ?! ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು!
ದಾರಾ ಸಿಂಗ್ ಬಜರಂಗ ದಳದ ‘ಗೋ ರಕ್ಷಣೆ’ಯ ಹೆಸರಿನಲ್ಲಿ ಇದೇ ಮಯೂರ್‌ಬಂಜ್ ಜಿಲ್ಲೆಯ ಪಡಿಬೇಡ ಗ್ರಾಮದಲ್ಲಿ ನಡೆದ ಶೇಖ್ ರೆಹಮಾನ್ ಎಂಬವರ ಕೊಲೆಯಲ್ಲಿ ಆರೋಪಿಯಾಗಿದ್ದ. ಅದೇ ಜಿಲ್ಲೆಯ ಜಂಬೋನಿ ಗ್ರಾಮದಲ್ಲಿ ನಡೆದ ಅರುಲ್ ದಾಸ್ ಎಂಬ ಕ್ರೈಸ್ತ ಪಾದ್ರಿಯ ಕೊಲೆಯಲ್ಲಿಯೂ ಆತ ಆರೋಪಿ. ತನ್ನ ಚರ್ಚಿಗೆ ಬೆಂಕಿ ಕೊಟ್ಟಾಗ, ಪ್ರಾಣ ಉಳಿಸಲು ಓಡಿಹೋಗುತ್ತಿದ್ದ ಅರುಲ್ ದಾಸ್ ಅವರನ್ನು ಬಾಣ ಹೊಡೆದು ಕೊಲ್ಲಲಾಗಿತ್ತು. ದಾರಾ ಸಿಂಗ್‌ನನ್ನು ಈ ಪ್ರದೇಶದಲ್ಲಿ ಸಂಘ ಪರಿವಾರದ ಅತ್ಯಂತ ಹಿಂಸಾತ್ಮಕ ಮತ್ತು ಅಪಾಯಕಾರಿ ಅಸ್ತ್ರ ಎಂದು ಜನರು ಭಯಪಡುತ್ತಿದ್ದರು. ಆದರೂ, ವಾಧ್ವಾ ಆಯೋಗವು, ಬಜರಂಗದಳ ಒಂದು ಕಾನೂನುಬದ್ಧ ಅಹಿಂಸಾತ್ಮಕ ಸಂಘಟನೆ ಎಂದು ಪರಿಗಣಿಸಿ ದಾರಾ ಸಿಂಗ್ ಮತ್ತು ಬಜರಂಗದಳದ ಸಂಬಂಧವನ್ನು ಪರಿಶೀಲಿಸಲೇ ಇಲ್ಲ!
ಗ್ರಹಾಂ ಸ್ಟೈನ್ಸ್ ಮತ್ತು ಮಕ್ಕಳಿಬ್ಬರ ಮರಣಾನಂತರವೂ ಗ್ಲಾಡಿ ಧೃತಿಗೆಡದೆ, ಉಳಿದ ಮಗಳು ಎಸ್ತರ್ ಜೊತೆಯಲ್ಲಿ ಭಾರತದಲ್ಲಿಯೇ ಉಳಿದು ಕುಷ್ಟರೋಗಿಗಳ ಸೇವೆಯನ್ನು ಮುಂದುವರಿಸಿ 2004ರಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿದರು. 2005ರಲ್ಲಿ ಅವರ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಇದಾದ ಬಳಿಕವೂ ನಮ್ಮ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿದೆಯೇ?
ಹೌದು! ಆಗಿದೆ! ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಈ ಘಟನೆಯನ್ನು ಅತ್ಯಂತ ಕ್ರೂರ ಕೃತ್ಯವೆಂದು ಬಣ್ಣಿಸಿದ್ದರು. ಇಂದು ಅವರದ್ದೇ ಪಕ್ಷದ ಮೋದಿ ಸರಕಾರದಲ್ಲಿ ಅದೇ ಘಟನೆಯ ರೂವಾರಿ ಎಂದು ಶಂಕಿತನಾದ ವ್ಯಕ್ತಿಯೊಬ್ಬ ಮಂತ್ರಿಯಾಗುತ್ತಾನೆ ಮತ್ತು ದಾರಾ ಸಿಂಗ್‌ನಂತಹಾ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಶಿಬಿರಗಳಲ್ಲಿ ಭಾಗವಹಿಸುತ್ತಾನೆ! ಈತನಂತಹಾ ಮಂತ್ರಿಗಳು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಭಯೋತ್ಪಾದನೆಯ ಆರೋಪದಲ್ಲಿ ಜೈಲಿನಲ್ಲಿದ್ದವರು ಸಂಸದರಾಗುತ್ತಾರೆ. ಹಾದಿ ಬೀದಿಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತವೆ. ಇಂತಹಾ ಪ್ರಕರಣಗಳಿಗೆ ಪೊಲೀಸರು ಮೌನಪ್ರೇಕ್ಷಕರಾಗುತ್ತಾರೆ. ಆರೋಪಿಗಳು ಬಿಡುಗಡೆಯಾದಾಗ ಮಾಲೆ ಹಾಕಿ, ಮೆರವಣಿಗೆ ಮಾಡಿ ಸ್ವಾಗತಿಸಲಾಗುತ್ತದೆ. ಎಲ್ಲೆಲ್ಲೂ ದಾರಾ ಸಿಂಗ್‌ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇದು ನೈಜ ಭಾರತೀಯರೆಲ್ಲಾ ಗಂಭೀರವಾಗಿ ಯೋಚಿಸಬೇಕಾದ ವಿಚಾರ.