ಕೇಂದ್ರದಲ್ಲೂ ನಮ್ಮದೇ ಪಕ್ಷದ ಸರ್ಕಾರ, ರಾಜ್ಯದಲ್ಲೂ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ರಾಜ್ಯ ಇನ್ನು ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೇನಿದ್ದರೂ ಅಭಿವೃದ್ಧಿ.. ಅಭಿವೃದ್ಧಿ.. ಅಭಿವೃದ್ಧಿ…
ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕರೆಲ್ಲಾ ಹೇಳಿದ್ದೇ, ಹೇಳಿದ್ದು.. ಜನರಿಗೂ ಈ ಮಾತುಗಳು ಹೌದಲ್ಲಾ ಎನ್ನಿಸುವಂತಿತ್ತು. ಆದರೆ, ನಾಯಕರು ಬೊಬ್ಬಿರಿದದ್ದೇ ಬಂತು. ರಾಜ್ಯದಲ್ಲಿ ಭಾರೀ ಪ್ರವಾಹದಿಂದಾಗಿ ಸಂತ್ರಸ್ತರಾದವರಿಗೆ ನೆರವಾಗುವ ವಿಚಾರದಲ್ಲಿ ಇವೆಲ್ಲವೂ ಮಾತಿಗಷ್ಟೇ ಸೀಮಿತ ಎನ್ನುವಂತಾಗಿದೆ. ಕೇಂದ್ರದಿಂದ ನಿರೀಕ್ಷಿತ ನೆರವೂ ಸಿಗುತ್ತಿಲ್ಲ. ಕೇಂದ್ರದ ನೆರವು ಪಡೆಯಲು ರಾಜ್ಯ ಸರ್ಕಾರದಿಂದ ಗಂಭೀರ ಪ್ರಯತ್ನಗಳೂ ಆಗುತ್ತಿಲ್ಲ. ಕೇಂದ್ರದಿಂದ ಕೆಲವೇ ದಿನಗಳಲ್ಲಿ ಪರಿಹಾರ ಹಣ ಬಿಡುಗಡೆಯಾಗುತ್ತದೆ, ಇನ್ನೆರಡು ದಿನಗಳಲ್ಲಿ ಹಣ ಬರುತ್ತದೆ ಎಂಬ ಭರವಸೆಯಲ್ಲೇ ಕಾಲ ಕಳೆಯುವಂತಾಗಿದೆ.
ರಾಜ್ಯದಲ್ಲಿ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿತ್ತು. ಮೊದಲ ಬಾರಿ ಪ್ರವಾಹ ಬಂದಾಗಲಂತೂ ಊರಿಗೂರೇ ಮುಳುಗಿಹೋಗಿತ್ತು. ಕೇಂದ್ರ ಹಣಕಾಸು ಸಚಿವರು, ಗೃಹ ಸಚಿವರು ರಾಜ್ಯದಲ್ಲಿ ಪ್ರವಾಸ ಮಾಡಿ ಪರಿಸ್ಥಿತಿ ಅವಲೋಕಿಸಿ ಹೋಗಿದ್ದರು. ಕೇಂದ್ರದಿಂದಲೂ ಅಧಿಕಾರಿಗಳ ತಂಡ ಬಂದು ಪರಿಶೀಲಿಸಿ ತೆರಳಿತ್ತು. ಆದರೆ, ಕೇಂದ್ರದಿಂದ ಬಂದಿರುವ ಪರಿಹಾರ ಮಾತ್ರ ದೊಡ್ಡ ಸೊನ್ನೆ. ಪರಿಸ್ಥಿತಿ ನೋಡಿದರೆ ಸದ್ಯ ಪರಿಹಾರದ ಹಣ ಬರುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೇಂದ್ರ ನಾಯಕರಾರೂ ಬಾಯಿ ಕೂಡ ಬಿಡುತ್ತಿಲ್ಲ. ಪ್ರಧಾನಿಯವರಿಂದ ಕೇವಲ ಟ್ವಿಟರ್ ಮೂಲಕ ಭರವಸೆಗಳು ಹೊರಬರುತ್ತಿವೆಯೇ ಹೊರತು ನೆರವು ಸಿಗುತ್ತಿಲ್ಲ.
ಇನ್ನು ಎಲ್ಲವನ್ನೂ ಸಂಭಾಳಿಸಿಕೊಂಡು ದೇಶದ ಜನರಿಗೆ ನೆರವಾಗುತ್ತಾ, ಅವರಲ್ಲಿ ಧೈರ್ಯ ತುಂಬುತ್ತಾ ಆಡಳಿತ ನಡೆಸಬೇಕಾದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು ನೋವಿಗೆ ಸ್ಪಂದಿಸುತ್ತಿಲ್ಲ. ನೆರೆ ಸಂತ್ರಸ್ತರಾಗಿ ಬದುಕು ಸಾಗಿಸಲು ಒದ್ದಾಡುತ್ತಿರುವ ಈ ಜನರಿಗೆ ಬೇಕಾಗಿರುವುದು ಟ್ವೀಟ್ ಭರವಸೆಗಳಲ್ಲ, ಬದುಕು ಕಟ್ಟಿಕೊಳ್ಳಲು ಬೇಕಾದ ಮಾನವೀಯತೆಯ ನೆರವು ಎಂಬುದನ್ನು ಅವರು ಮರೆತೇ ಬಿಟ್ಟಂತೆ ಕಾಣುತ್ತಿದೆ.
ಇನ್ನೂ ಕಮ್ಮಿ ಮಾಡಿ ಎಂದವರು ಕಮ್ಮಿ ಮಾಡಿದರೂ ಕೊಡುತ್ತಿಲ್ಲ:
ರಾಜ್ಯದಲ್ಲಿ ಪ್ರವಾಹದಿಂದ 100ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 2 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. 103 ತಾಲೂಕು ಪ್ರವಾಹಕ್ಕೆ ತುತ್ತಾಗಿದೆ. 7.82 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದ್ದು, 38 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ನಮಗೆ ಪರಿಹಾರ ಕೊಡಿ ಎಂದು ರಾಜ್ಯ ಸರ್ಕಾರ ಮೊದಲ ಬಾರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾವನೆಗೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರ, ನಷ್ಟದ ಮೊತ್ತ ಕಡಿಮೆ ಮಾಡಿ ಹೊಸದಾಗಿ ಪ್ರಸ್ತಾವನೆ ಕಳುಹಿಸಿ ಎಂದು ಸೂಚಿಸಿತ್ತು. ಅದರಂತೆ ಸುಮಾರು 35 ಸಾವಿರ ಕೋಟಿ ರೂ. ನಷ್ಟ ಅಂದಾಜು ಮಾಡಿ ಪರಿಷ್ಕೃತ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಯನ್ವಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡಗಳಡಿ ಕೇಂದ್ರ ಸರ್ಕಾರ ಸುಮಾರು 3,200 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಿತ್ತು. ಆದರೆ, ಹಣ ಒತ್ತಟ್ಟಿಗಿರಲಿ, ಬಿಡುಗಡೆ ಮಾಡುವ ಸ್ಪಷ್ಟ ಭರವಸೆಯೂ ಕೇಂದ್ರದಿಂದ ಸಿಕ್ಕಿಲ್ಲ.
ಟ್ರೋಲ್ ಆಗುತ್ತಿದೆ ಬಿಹಾರಕ್ಕೆ ನೆರವು ನೀಡುವ ಪ್ರಧಾನಿ ಟ್ವೀಟ್:
ಈ ಕಾರಣಕ್ಕಾಗಿಯೇ ಪ್ರವಾಹ ಸಂತ್ರಸ್ತ ಬಿಹಾರಕ್ಕೆ ಹಣಕಾಸು ನೆರವು ನೀಡುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್ ದೊಡ್ಡ ಜೋಕ್ ಆಗಿ ಪರಿವರ್ತನೆಯಾಗಿದೆ. ರಾಜ್ಯದಲ್ಲಿ ಪ್ರತಿಪಕ್ಷಗಳ ನಾಯಕರು ಟ್ವೀಟನ್ನೇ ಬಳಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ಜೋಕ್ ಮಾಡಬೇಡಿ ಎಂದು ಪ್ರಧಾನಿಯವರ ಕಾಲೆಳೆಯುತ್ತಿದ್ದಾರೆ. ಏಕೆಂದರೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗಲೂ ಟ್ವೀಟ್ ಮಾಡಿದ್ದ ಪ್ರಧಾನಿಯವರು, ಪರಿಹಾರ ಕಾರ್ಯಾಚರಣೆಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ಪ್ರವಾಹಪೀಡಿತ ಪ್ರದೇಶಗಳ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದರು. ಆದರೆ, ಇದುವರೆಗೂ ಕೇಂದ್ರದಿಂದ ಸ್ಪಂದನೆ ಸಿಕ್ಕಿಲ್ಲ.
ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿಯವರಿಗೆ ಟ್ವೀಟ್ ಮಾಡಿದ PM ಮೋದಿ
ಬಿಹಾರದ ಪ್ರವಾಹ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೆಂದ್ರ ಮೋದಿ, ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಿ ರಾಜ್ಯದಲ್ಲುಂಟಾಗಿರುವ ಪ್ರವಾಹದ ಕುರಿತು ಮಾಹಿತಿ ಪಡೆದುಕೊಂಡೆ. ಏಜೆನ್ಸಿಗಳು ಪ್ರವಾಹ ಸಂಸತ್ರಸ್ತರ ರಕ್ಷಣೆಗಾಗಿ ಸ್ಥಳೀಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿವೆ. ಕೇಂದ್ರ ಸರ್ಕಾರ ಕೂಡಾ ರಾಜ್ಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರ ಪ್ರವಾಹದ ಬಗ್ಗೆ ಮಿಡಿದ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ ಇದು 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ ಇಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಇರುವ ದ್ವೇಷವೇ ಎಂದು ಪ್ರಶ್ನಿಸಿದ್ದಾರೆ.
ಬಿಹಾರ ಪ್ರವಾಹದ ಕುರಿತು ಸಿಎಂ ನಿತೀಶ್ ಕುಮಾರ್ ರವರಿಗೆ ಟ್ವೀಟ್ ಮಾಡಿದ PM ಮೋದಿ
ಸಾಮಾಜಿಕ ಜಾಲ ತಾಣದಲ್ಲಂತೂ ಪ್ರಧಾನಿಯವರ ಟ್ವೀಟ್ ಟ್ರೋಲ್ ಆಗುತ್ತಿದೆ. ಟ್ವೀಟ್ ಮಾಡಿ ಭರವಸೆ ನೀಡಿದರೆ ಜನರ ಸಂಕಷ್ಟ ಬಗೆಹರಿಯುವುದಿಲ್ಲ. ಮೊದಲು ವಾಸ್ತವ ಅರ್ಥ ಮಾಡಿಕೊಂಡು ಪರಿಹಾರ ಕಾರ್ಯಗಳಿಗೆ ಬೇಕಾದ ಅನುದಾನ ನೀಡಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ವಿದೇಶದಲ್ಲಿ ಹೌಡಿ ಮೋದಿ ಕಾರ್ಯಕ್ರಮ ಮಾಡಿದರೆ, ಪಾಕಿಸ್ತಾನದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರೆ ರಾಷ್ಟ್ರಗಳ ಬೆಂಬಲ ಗಳಿಸಿದರೆ, ರಷ್ಯಾಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ನೀಡಿದರೆ ಸಂತ್ರಸ್ತರ ಸಮಸ್ಯೆಗಳು ಬಗೆಹರಿಯುತ್ತವೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಜನರ ಆಕ್ರೋಶಕ್ಕೆ ಕಾರಣಗಳೇನು?
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಬಹುದು ಎಂದು ಬಿಜೆಪಿಯವರು ಹೇಳಿದ್ದ ಮಾತನ್ನು ಜನ ನಂಬಿದ್ದರು. ಆದರೆ, ಒಂದೇ ಪಕ್ಷದ ಸರ್ಕಾರ ಇರುವುದೇ ಈಗ ಸಮಸ್ಯೆ ಎನ್ನುವಂತಾಗಿದೆ. ಬೇರೆ ಬೇರೆ ಪಕ್ಷಗಳಿದ್ದಾಗ ಹೋರಾಟ, ಒತ್ತಡದ ಮೂಲಕ ಕೇಂದ್ರದಿಂದ ಹೆಚ್ಚಿನ ಅನುದಾನ, ನೆರವು ಪಡೆಯಬಹುದಿತ್ತು. ಒಂದೇ ಸರ್ಕಾರ ಇರುವುದರಿಂದ ರಾಜ್ಯ ಸರ್ಕಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ, ಹೋರಾಟ ನಡೆಸುವುದಂತೂ ಕನಸಿನ ಮಾತು. ಇದರಿಂದ ಕೇಂದ್ರ ಸರ್ಕಾರವೂ ರಾಜ್ಯವನ್ನು `ಟೇಕನ್ ಫಾರ್ ಗ್ರಾಂಟೆಡ್’ ಎಂಬಂತೆ ಪರಿಗಣಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನರ ಆಕ್ರೋಶ ಹೆಚ್ಚಲು ಇದುವೇ ಮೂಲ ಕಾರಣ.
ಪ್ರವಾಹ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಆರಂಭದಲ್ಲಿ 128 ಕೋಟಿ ರೂ. ಒದಗಿಸಿತ್ತು. ನಂತರದಲ್ಲಿ 1500 ಕೋಟಿ ರೂ. ಮಂಜೂರು ಮಾಡಿ ಅದರಲ್ಲಿ 1000 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು ಜಿಲ್ಲಾಧಿಕಾರಿಗಳ ಪಿಡಿ ಕಾತೆಗಳಲ್ಲಿದ್ದ ಸುಮಾರು 100 ಕೋಟಿ ರೂ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ, ಮಳೆ ಮತ್ತು ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ 1000 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತ ಬೇಕಾಗಿದೆ. ಇತರೆ ಪರಿಹಾರ ಸೇರಿದಂತೆ ಒಟ್ಟಾರೆ ಸುಮಾರು 3500-4000 ಕೋಟಿ ರೂಪಾಯಿ ತಕ್ಷಣಕ್ಕೆ ಬೇಕಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಹಣ ಬಾರದೇ ಇರುವುದು ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರದೇ ಇರುವುದು ಜನ ರೊಚ್ಚಿಗೇಳುವಂತೆ ಮಾಡಿದೆ. ಇದಕ್ಕೆ ಪ್ರತಿಪಕ್ಷಗಳೂ ಕೈಜೋಡಿಸುತ್ತಿರುವುದರಿಂದ ದಿನಕಳೆದಂತೆ ಆಕ್ರೋಶ ಹೆಚ್ಚುತ್ತಲೇ ಇದೆ.