ಕರೋನಾ ಅಬ್ಬರ ಇಡೀ ದೇಶದಲ್ಲಿ ಆರ್ಭಟಿಸುತ್ತಿದೆ. ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಉತ್ತುಂಗದತ್ತ ತೆರಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಜಗತ್ತು ಅತಿದೊಡ್ಡ ವಿಪತ್ತು ಎದುರಿಸುತ್ತಿದೆ. ನೈಸರ್ಗಿಕ ವಿಕೋಪ ಉಂಟಾದರೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ಆದರೆ ಕರೋನಾ ಮಹಾಮಾರಿ ಇಡೀ ಮನುಕುಲವನ್ನೇ ಅಪಾಯದ ಅಂಚಿಗೆ ತಳ್ಳಿದೆ. ಭಾರತದ ನಾಗರಿಕರು ನಾನು ಏನನ್ನು ಬಯಸಿದರೂ ನಿರಾಸೆ ಮಾಡಿಲ್ಲ. ನಿಮ್ಮ ಆಶೀರ್ವಾದದಿಂದಲೇ ನಾವು ಗುರಿಯತ್ತ ಹೋಗುತ್ತಿದ್ದೇವೆ. ಇದೀಗ ಭಾರತೀಯ ನಾಗರಿಕರಲ್ಲಿ ಒಂದು ಮನವಿ ಮಾಡುತ್ತಿದ್ದೇನೆ. ಆದಷ್ಟು ಜನರು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದರು. ಮುಂದಿನ ಭಾನುವಾರ ಮಾರ್ಚ್ 22 ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ತನಕ ಜನತಾ ಕರ್ಫ್ಯೂ ಮಾಡಲು ಪ್ರಧಾನಿ ಕರೆ ನೀಡಿದ್ದಾರೆ.
ಕರೋನಾ ವೈರಸ್‌ಗೆ ಜಗತ್ತಿನಲ್ಲಿ ಔಷಧವಿಲ್ಲ. ಹೀಗಾಗಿ ನೈಸರ್ಗಿಕ ಮಾದರಿಯಲ್ಲಿ ನಾವು ಅದನ್ನು ಹಿಮ್ಮೆಟ್ಟಿಸಬೇಕಿದೆ ಕರೋನಾ ವೈರಸ್ ಬಗ್ಗೆ ಭಾರತೀಯರು ಎಚ್ಚರಿಕೆಯಿಂದ ಇರಬೇಕಾಗಿದೆ. ನೀವು ಅಂದಕೊಂಡಷ್ಟು ಸುಲಭವಾಗಿಲ್ಲ ಈ ಸಮಸ್ಯೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಭಾನುವಾರ ತೀರ ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಕ್ಕೆ ಬನ್ನಿ. ಅದನ್ನು ಬಿಟ್ಟರೆ ಸಮಾಜದ ಸಂಪರ್ಕದಿಂದ ದೂರವಿರಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ. ಕರೋನಾ ತಡೆಗಟ್ಟಲು ನಾವು ಮಾಡಬೇಕಿರುವುದು ಇಷ್ಟೇ. ಒಂದು ಸಂಕಲ್ಪ ಮತ್ತೊಂದು ಸಂಯಮ. ಭಾನುವಾರ ಜನತಾ ಕರ್ಫ್ಯೂ. ನೀವಾಗಿಯೇ ನಿಮ್ಮ ಮೇಲೆ ಕರ್ಫ್ಯೂ ಹೇರಿಕೊಳ್ಳಿ. ಮನೆಯಿಂದ ಯಾರೂ ಹೊರಕ್ಕೆ ಬಾರದೆ ಮನೆಯಲ್ಲಿಯೇ ಇರಿ ಎಂದು ದೇಶದ ನಾಗರಿಕರಲ್ಲಿ ಮನವಿ ಮಾಡಿದರು.
ಜನತಾ ಕರ್ಫ್ಯೂ ಮಾಡುವ ಮೂಲಕ ನಾವು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಯಾವುದೇ ಸಮಸ್ಯೆ ಎದುರಿಸಲು ಸಜ್ಜಾಗಬೇಕಿದೆ. ಇವತ್ತಿನಿಂದ ಎಲ್ಲ ಸಂಘಟನೆಗಳ ಸದಸ್ಯರು ಮಾರ್ಚ್ 22ರ ಭಾನುವಾರ ಜನತಾ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಜನ ಜಾಗೃತಿ ಮಾಡಿ. ಒಬ್ಬೊಬ್ಬರು ಕನಿಷ್ಟ ಪಕ್ಷ 10 ಜನರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದು ವಿನಂತಿ ಮಾಡಿಕೊಂಡರು. ಭಾನುವಾರ ಸಂಜೆ 5 ಗಂಟೆಗೆ ಮನೆ ಮೇಲಿನ ಬಾಲ್ಕಾನಿ ಅಥವಾ ಕಿಟಕಿ, ಬಾಗಿಲುಗಳ ಬಳಿ 5 ನಿಮಿಷಗಳ ಕಾಲ ನಿಂತು ಚಪ್ಪಾಳೆ ತಟ್ಟುವ ಮೂಲಕ ಕರೋನಾ ವೈರಸ್ ತಡೆಗೆ ಬೆಂಬಲಿಸಿ ಜನತಾ ಕರ್ಫ್ಯೂವಿನಲ್ಲಿ ಭಾಗಿಯಾಗಿದ್ದಕ್ಕೆ ಧನ್ಯವಾದ ತಿಳಿಸೋಣ ಎಂದಿದ್ದಾರೆ. ಜನತಾ ಕರ್ಫ್ಯೂ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಿ. ಆದರೆ ಜನತಾ ಕರ್ಫ್ಯೂ ಘೋಷಿಸಿದ್ದ ಮಾತ್ರಕ್ಕೆ ಯಾರೂ ಆತಂಕಕ್ಕೆ ಒಳಗಾಗಬೇಡಿ. ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಮುಗಿಬೀಳಬೇಡಿ. ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ ಇಲ್ಲ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಕರೋನಾ ವೈರಸ್ ವಿರುದ್ಧ ನಾವು ಯುದ್ಧ ಮಾಡಬೇಕಿದೆ. ಈ ಯುದ್ಧದಲ್ಲಿ ಎಲ್ಲರೂ ಕೈಜೋಡಿಸಿ. ಮಾನವ ಧರ್ಮಕ್ಕೆ ಜಯವಾಗಬೇಕು. ಭಾರತಕ್ಕೆ ಜಯವಾಗಬೇಕು. ನಾವೂ ಸುರಕ್ಷಿತರಾಗಿ ಇರೋಣ, ನಮ್ಮವರನ್ನೂ ರಕ್ಷಿಸೋಣ. ಅಗತ್ಯ ಇದ್ದರೆ ಮಾತ್ರ ಆಸ್ಪತ್ರೆಗೆ ತೆರಳಬೇಕು. ಸಾಮಾನ್ಯ ಪರೀಕ್ಷೆಗಾಗಿ ಯಾರೂ ಆಸ್ಪತ್ರೆಗೆ ತೆರಳಬೇಡಿ. ಅನಿವಾರ್ಯ ಇಲ್ಲದ ಆಪರೇಷನ್‌ಗಳನ್ನು ಮುಂದೂಡಿ. ಆಸ್ಪತ್ರೆ ಸಿಬ್ಬಂದಿ, ವೈದ್ಯರ ಮೇಲಿನ ಒತ್ತಡವನ್ನೂ ಕಡಿಮೆ ಮಾಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಮೊದಲ ಮತ್ತು ಎರಡನೇ ವಿಶ್ವ ಯುದ್ಧದ ಸಮಯದಲ್ಲೂ ನಮ್ಮ ಜನರು ಇಷ್ಟು ಪ್ರಮಾಣದಲ್ಲಿ ಹೆದರಿರಲಿಲ್ಲ. ಇದೀಗ ಕರೋನಾ 130 ಕೋಟಿ ಜನರನ್ನು ಬೆಚ್ಚಿ ಬೀಳಿಸಿದೆ. ನಾನು ಸ್ವಾಸ್ಥ ಆಗಿದ್ರೆ ಜಗತ್ತೇ ಸ್ವಾಸ್ಥವಾಗಿರುತ್ತೆ. ಸಂಕಲ್ಪ ಮಾಡಿ ಸಂಯಮದಿಂದ ಇರುವ ಮೂಲಕ ಇದೊಂದೇ ಮಂತ್ರ ಪಠಿಸಿ ಎಂದು ಜನತೆಗೆ ತಿಳಿಸಿದ್ರು.
ಏನಿದು ಜನತಾ ಕರ್ಫ್ಯೂ..?
ಯಾವುದೇ ಒಂದು ಪ್ರದೇಶದಲ್ಲಿ ಹೆಚ್ಚು ಮಂದಿ ಗುಂಪುಗೂಡುವುದನ್ನು ತಡೆಗಟ್ಟಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕರ್ಫ್ಯೂ ವಿಧಿಸುತ್ತವೆ. ಸೆಕ್ಷನ್ 144 ಕಲಂ ಪ್ರಕಾರ ಪೊಲೀಸರು ಕರ್ಫ್ಯೂ ಜಾರಿ ಮಾಡುತ್ತಾರೆ. ಯಾವ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡುತ್ತಾರೋ ಆ ಪ್ರದೇಶದಲ್ಲಿ ಜನರು ಮನೆಗಳಿಂದ ಹೊರಕ್ಕೆ ಬರುವಂತಿಲ್ಲ. ಗುಂಪು ಸೇರುವಂತಿಲ್ಲ. ಕರ್ಫ್ಯೂ ಉಲ್ಲಂಘನೆ ಮಾಡಿದರೆ, ಪೊಲೀಸರು ಬಂಧಿಸುವ ಅಥವಾ ಗುಂಡು ಹಾರಿಸುವ ಅವಕಾಶವೂ ಕಾನೂನಲ್ಲಿ ಇದೆ. ಆದರೆ ಇದು ಜನತಾ ಕರ್ಫ್ಯೂ. ಇದು ಪೊಲೀಸರು ಜನರ ಮೇಲೆ ಹೇರುತ್ತಿರುವ ಕಾನೂನು ಅಲ್ಲ. ಜನರಿಂದ ಜನರಿಗಾಗಿ ಜನರಿಗೋಸ್ಕರ ಜನರೇ ಸ್ವಯಂ ಗೃಹಬಂಧನಕ್ಕೆ ಒಳಗಾಗುವ ಕರ್ಫ್ಯೂ. ಇದನ್ನು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯೇ ಕರೆ ಕೊಟ್ಟಿರುವ ಬಂದ್. ಈ ಮುಷ್ಕರದಲ್ಲಿ ಜನರು ಸ್ವಯಂ ತಮಗೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಂಡು ಭಾನುವಾರ ಮಾರ್ಚ್ 22 ರಂದು ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಆ ಮೂಲಕ ಕರೋನಾ ವೈರಸ್ ತಡೆಗಟ್ಟಲು ಬೆಂಬಲ ಕೊಡಬೇಕು ಎಂದಿದ್ದಾರೆ. ಆದರೆ ಪೊಲೀಸರು, ಪತ್ರಕರ್ತರು, ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಈ ಕರ್ಫ್ಯೂನಿಂದ ಹೊರಗೆ ಉಳಿಯಬಹುದು ಎಂದಿದ್ದಾರೆ.
ಭಾರತ, ಸಣ್ಣ ಸಣ್ಣ ಕುಟುಂಬಗಳ ದೇಶವಾಗಿದ್ದು, ಮನೆಮಂದಿಯೆಲ್ಲಾ ಒಟ್ಟಿಗೆ ಮಲಗುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಕುಟುಂಬ ಪ್ರತ್ಯೇಕವಾಗುವ ತನಕ ಕುಟುಂಬದ ತಂದೆ ತಾಯಿ ಮಕ್ಕಳ ಜೊತೆಯಲ್ಲೇ ಮಲಗುತ್ತಾರೆ. ಮಕ್ಕಳು ವಯಸ್ಕರಾದ ಬಳಿಕ ಪ್ರತ್ಯೇಕ ಕೋಣೆಗೆ ಹೋಗುತ್ತಾರೆ. ಅದರಲ್ಲೂ ಭಾರತದಲ್ಲಿ ಎಲ್ಲರಿಗೂ ಪ್ರತ್ಯೇಕ ಮಲಗುವ ಕೋಣೆಗಳೇ ಇಲ್ಲ. ಕೇವಲ 4 ಕೋಟಿ ಮನೆಗಳಲ್ಲಿ ಮಾತ್ರ ಪ್ರತ್ಯೇಕ ಕೊಠಡಿಗಳಿವೆ. ಅದೇ ಕಾರಣದಿಂದ ಸರ್ಕಾರಕ್ಕೆ ಕರೋನಾ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕರೋನಾ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಲುಕಿರುವ ಇಟಲಿ, ಚೀನಾ, ಇರಾನ್‌ನಲ್ಲೂ ನಮ್ಮ ಭಾರತದಂತೆಯೇ ಜನಸಾಂದ್ರತೆ ಹೆಚ್ಚಾಗಿರುವ ಕಾರಣ ಸಾವಿನ ಸುರಿಮಳೆ ಸುರಿಯುತ್ತಿದೆ. ಭಾರತದಲ್ಲೂ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಾಯ ಎದುರಾಗುವ ಎಲ್ಲಾ ಸಾಧ್ಯತೆಗಳಿದ್ದು, ಭಾರತ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮುಂದಿನ ದಿನಗಳಲ್ಲಿ ಎದುರಾಗುವ ಎಲ್ಲಾ ಸಂಕಟಗಳನ್ನು ಹೆದರಿಸಲು ನಾವು ಜನತಾ ಕರ್ಫ್ಯೂ ಮೂಲಕ ಸಜ್ಜಾಗಬೇಕಿದೆ ಎಂದಿದ್ದಾರೆ.