ಮಗಳಿಗೆ ತವರಿನ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಗಂಡನ ಮನೆಯಿಂದ ತವರು ಮನೆಗೆ ಹೋಗುವುದು ಎಂದರೆ ಸಂತಸವೋ ಸಂತಸ. ಆದ್ರೆ ತವರಿನಲ್ಲೇ ಉಳಿದುಕೊಂಡರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಗೂ ತವರು ರಾಜ್ಯ ಗುಜರಾತ್ ಮೇಲೆ ಎಲ್ಲಿಲ್ಲದ ಪ್ರೀತಿ. ಅದನ್ನು ಬೇಡ ಎನ್ನುವುದು ಕೂಡ ಅಸಾಧ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ದೇಶದ ಅಭಿವೃದ್ಧಿ ಯಾವಾಗ ಎಂದು ಪ್ರಶ್ನೆ ಮಾಡಲೇ ಬೇಕಾಗುತ್ತದೆ.
ಭಾರತಕ್ಕೆ ವಿದೇಶಗಳಿಂದ ಆಗಮಿಸುವ ಗಣ್ಯಾತಿಗಣ್ಯರನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ, ನೇರವಾಗಿ ಗುಜರಾತ್‌ಗೆ ಕರೆದೊಕೊಂಡು ಹೋಗ್ತಾರೆ. ಗುಜರಾತ್‌ನ ಗಾಂಧಿ ನಗರ ಸೇರಿದಂತೆ ಮಹಾತ್ಮಾ ಗಾಂಧಿ ವಾಸಿಸುತ್ತಿದ್ದ ಸಾಬರಮತಿ ಆಶ್ರಮಗಳಿಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬರುತ್ತಾರೆ. ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣ ಮೋದಿ ಪ್ರಧಾನಿಯಾದ ಬಳಿಕ ವಿದೇಶಿ ಗಣ್ಯರನ್ನು ಸ್ವಾಗತಿಸುತ್ತಿರುವ ಅದೃಷ್ಟವಂತ ವಿಮಾನ ನಿಲ್ದಾಣ. ಗುಜರಾತ್ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲವೊಂದು ಅಭಿವೃದ್ಧಿ ಯೋಜನೆಗಳಿಗೆ ಸಹಿ ಹಾಕುತ್ತಾರೆ. ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತ ಮಾಡಲು ರೆಡ್ ಕಾರ್ಪೆಟ್ ಹಾಕಿಕೊಂಡು ಕಾಯುತ್ತಿದ್ದಾರೆ. ತವರಿನ ಮೇಲೆ ಎಲ್ಲಾ ರಾಜಕಾರಣಿಗಳಿಗೂ ತನ್ನದೇ ಆದ ಕೊಡುಗೆ ನೀಡಬೇಕು ಎನ್ನುವ ಆಕಾಂಕ್ಷೆ ಇದ್ದೇ ಇರುತ್ತದೆ. ಆದರೆ ಪ್ರಧಾನಿ ಆಗುವ ಮುನ್ನ 15 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದಾಗ ಅಭಿವೃದ್ಧಿ ಮಾಡಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕ್ಸಿ ಜಿನ್‌ಪಿಂಗ್ ಅವರನ್ನು ಗುಜರಾತ್‌ಗೆ ಕರೆದೊಯ್ದಿದ್ದರು. ಸೆಪ್ಟೆಂಬರ್ 17, 2018ರಂದು ಅಹ್ಮದಾಬಾದ್‌ಗೆ ಬಂದಿಳಿದಿದ್ದ ಕ್ಸಿ ಜಿನ್‌ಪಿಂಗ್, ನರೇಂದ್ರ ಮೋದಿ ಹುಟ್ಟೂರಾದ ವಾದ್‌ನಗರಕ್ಕೂ ಭೇಟಿ ನೀಡಿದ್ದರು. ಈ ವೇಳೆ ರೈಲ್ವೆ, ವಿದ್ಯುತ್, ಬಂದರು ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಮಾಡಿದ್ದರು. ಮಹಾತ್ಮ ಗಾಂಧಿ ವಾಸ ಮಾಡುತ್ತಿದ್ದ ಸಾಬರಮತಿ ನದಿ ತೀರದ ಆಶ್ರಮಕ್ಕೂ ಭೇಟಿ ನೀಡಿ ಸಂತಸ ಪಟ್ಟಿದ್ದರು. ಆ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿ, ಅಲ್ಲಿಂದ ಚೀನಾಗೆ ಸೆಪ್ಟೆಂಬರ್ 19ರಂದು ವಾಪಸ್ ಆಗಿದ್ದರು.
2017ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ, ಗುಜರಾತ್‌ನ ಅಹ್ಮದಾಬಾದ್ ಏರ್‌ಪೋರ್ಟ್‌ಗೆ ಬಂದಿಳಿದದ್ದರು. ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಶಿಂಜೋ ಅಬೆ, ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಮುಂಬೈ ಹಾಗು ಅಹ್ಮದಾಬಾದ್ ನಡುವೆ ಬುಲೆಟ್ ರೈಲು ಓಡಿಸುವ ಮೋದಿ ಕನಸಿಗೆ ಅಡಿಗಲ್ಲು ಹಾಕಿದ್ದರು.
ಜಪಾನ್ ಪ್ರಧಾನಿ ಬಳಿಕ 2018ರಲ್ಲಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಕೂಡ ಭಾರತ ಪ್ರವಾಸ ಕೈಗೊಂಡಿದ್ದರು. ಭಾರತಕ್ಕೆ ಬಂದಿದ್ದ ಇಸ್ರೇಲ್ ಪ್ರಧಾನಿ ನೇತನ್ಯಾಹು ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ಬರೋಬ್ಬರಿ 8 ಕಿಲೋ ಮೀಟರ್ ರೋಡ್ ಶೋ ಮಾಡಿದ್ದರು. 130 ಜನ ಇಸ್ರೇಲ್ ಅಧಿಕಾರಿಗಳ ಜೊತೆ 6 ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನೇತನ್ಯಾಹು, ವ್ಯಾಪಾರ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಸಹಿ ಹಾಕಿದ್ದರು.

ಭಾರತ ಸಮೃದ್ಧ ಭರಿತ ರಾಷ್ಟ್ರ. ಗುಜರಾತ್ ಮೀರಿಸುವಂತೆ ಸಾಕಷ್ಟು ರಾಜ್ಯಗಳು ಭಾರತದಲ್ಲಿವೆ. ನರೇಂದ್ರ ಮೋದಿ ಭಾರತಕ್ಕೆ ಬರುವ ವಿದೇಶಿ ಗಣ್ಯರನ್ನು ಗುಜರಾತ್‌ಗೆ ಸ್ವಾಗತಿಸುತ್ತಾರೆ. ಅಲ್ಲಿಗೆ ಕೆಲವೊಂದಿಷ್ಟು ಯೋಜನೆಗಳನ್ನು ವಿದೇಶಗಳ ಜೊತೆಗೂಡಿ ಮಾಡುತ್ತಾರೆ. ಅಂದರೆ ಬೇರೆ ರಾಜ್ಯಗಳ ಮೇಲೆ ನರೇಂದ್ರ ಮೋದಿಯವರ ಚಿತ್ತ ಯಾಕೆ ಹರಿಯುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಗುಜರಾತ್ ರಾಜ್ಯಕ್ಕೆ ಮಾತ್ರ ನರೇಂದ್ರ ಮೋದಿ ಪ್ರಧಾನಿ ಆಗಿಲ್ಲ. ಇಡೀ ದೇಶಕ್ಕೆ ಪ್ರಧಾನಿ ಆಗಿರುವ ನರೇಂದ್ರ ಮೋದಿ ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಮುಂಬೈ ಸೇರಿದಂತೆ ಬೇರೆ ಬೇರೆ ನಗರಗಳ ಕಡೆಗೂ ನೋಡುವಂತಾಗಬೇಕು. ಇಲ್ಲದಿದ್ದರೆ ನರೇಂದ್ರ ಮೋದಿ ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯ ನಾಯಕ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.