ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದ ರತಿನ್ ರಾಯ್ ಮತ್ತು ಶಮಿಕಾ ರವಿ ಅವರನ್ನು ಕೈ ಬಿಡಲಾಗಿದೆ. ಕಾರಣಗಳನ್ನು ಕೇಂದ್ರ ಸರ್ಕಾರ ತಿಳಿಸಿಲ್ಲವಾದರೂ ಸ್ಪಷ್ಟವೇದ್ಯ.
ಸರ್ಕಾರ ಯಾವುದಾದರೂ ಸರಿ. ಬಿಜೆಪಿಯದೇ ಇರಲಿ, ಕಾಂಗ್ರೆಸ್ಸಿನದೇ ಆಗಲಿ. ಸರ್ಕಾರಗಳು ಸರ್ಕಾರಗಳೇ. ಟೀಕೆ ಟಿಪ್ಪಣಿಗಳನ್ನು ಸಹಿಸದಿರುವುದು ಅವುಗಳ ಜಾಯಮಾನ. ಪ್ರತಿಪಕ್ಷಗಳ ರಚನಾತ್ಮಕ ಟೀಕೆಗಳನ್ನೇ ನಿತ್ತರಿಸುವುದಿಲ್ಲ. ಇನ್ನು ತಾವೇ ನೇಮಕ ಮಾಡಿದವರಿಂದ ಟೀಕೆ ಟಿಪ್ಪಣಿ ವಿಮರ್ಶೆಗಳನ್ನು ಸಹಿಸುತ್ತವೆಂದು ಹೇಗೆ ನಿರೀಕ್ಷಿಸಲು ಬಂದೀತು? ಟೀಕಿಸಿದವರಿಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಅರ್ಧಚಂದ್ರ ಪ್ರಯೋಗ ಮಾಡಿರುವ ಪ್ರಕರಣಗಳು ಭಾರತದ ಆಡಳಿತದ ಇತಿಹಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಇವುಗಳ ಸಾಲಿಗೆ ರತಿನ್ ರಾಯ್ ಮತ್ತು ಶಮಿಕ ರವಿ ಪ್ರಕರಣವೂ ಸೇರಿತು ಅಷ್ಟೇ.
ರಿಸರ್ವ್ ಬ್ಯಾಂಕಿನ ಅತ್ಯುತ್ತಮ ಗೌರ್ನರ್ ಗಳಲ್ಲಿ ಒಬ್ಬರೆನಿಸಿದ್ದ ರಘುರಾಮ ರಾಜನ್ ಅವರನ್ನು ಉಳಿಸಿಕೊಳ್ಳುವ ಔಪಚಾರಿಕ ಪ್ರಯತ್ನ ಕೂಡ ನಡೆಯಲಿಲ್ಲ. ಅವರ ಸ್ಥಾನಕ್ಕೆ ಮೋದಿ ಸರ್ಕಾರವೇ ಆರಿಸಿ ನೇಮಕ ಮಾಡಿದ ಉರಿಜಿತ್ ಪಟೇಲ್ ರಿಸರ್ವ್ ಬ್ಯಾಂಕ್ ಮೀಸಲು ನಿಧಿಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವ ವಿಚಾರದಲ್ಲಿ ತಣ್ಣಗೆ ತಿರುಗಿಬಿದ್ದರು. ತಾವಾಗಿಯೇ ನಿರ್ಗಮಿಸುವ ಸ್ಥಿತಿ ಸೃಷ್ಟಿಸಲಾಯಿತು. ಅರ್ಥಸ್ಥಿತಿಯ ಆರೋಗ್ಯ ಕುರಿತು ವಸ್ತುನಿಷ್ಠವಾಗಿ ಮಾತಾಡಿದ ಉಪಗೌರ್ನರ್ ವಿರಲ್ ಆಚಾರ್ಯ ಕೂಡ ಮನೆಗೆ ಹೋದರು. ಆಳುವವರು ದೇಶವನ್ನು ಮತ್ತು ಅದರ ಆಡಳಿತ ವ್ಯವಹಾರಗಳನ್ನು ಸ್ವಪ್ರತಿಷ್ಠೆಯ, ಅಹಂಕಾರದ ಹಾಗೂ ಆತ್ಮರತಿಯ ವಿಷಯವಾಗಿಸಿಕೊಂಡಿರುವುದೇ ಈ ವ್ಯಾಧಿಯ ತಾಯಿಬೇರು. ಎಲ್ಲ ಪಕ್ಷಗಳೂ ಒಟ್ಟಿಗೆ ಕುಳಿತು ಈ ವ್ಯಾಧಿಗೆ ಮದ್ದು ಅರೆಯುವ ತನಕ, ದೇಶವನ್ನು ಕಾಡುವ ಸಮಸ್ಯೆಗಳನ್ನು ಪಕ್ಷಪಾತದ, ಸ್ವಪ್ರತಿಷ್ಠೆಯ ಪಕ್ಷ ರಾಜಕಾರಣದಿಂದ ಎಲ್ಲಿಯವರೆಗೆ ಮೇಲೆತ್ತದೆ ಇರುವ ತನಕ ಈ ವ್ಯಾಧಿಯಿಂದ ಬಿಡುಗಡೆ ಇಲ್ಲ.

ಕೈಬಿಡಲಾದ ಸದಸ್ಯ ರತಿನ್ ರಾಯ್ ಅವರು ಇತ್ತೀಚೆಗೆ `ಸದ್ದುಗದ್ದಲವಿಲ್ಲದೆ ಬಂದು ನಿಂತಿರುವ ವಿತ್ತೀಯ ಬಿಕ್ಕಟ್ಟಿನ’ ಕುರಿತು ಮಾತಾಡಿದ್ದರು. ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯಿಂದ ಹಣ ಎತ್ತಲು ಸಾಗರೋತ್ತರ ಬಾಂಡ್ ಗಳನ್ನು ವಿತರಿಸುವ ಇತ್ತೀಚಿನ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ಟೀಕಿಸಿದ್ದು ಎಚ್ಚರಿಕೆಯ ಹೆಜ್ಜೆಯಿರಿಸುವಂತೆ ಸೂಚಿಸಿದ್ದರು. ದೇಶ ಸಂರಚನಾತ್ಮಕ ಮಂದಗತಿಯನ್ನು ಎದುರಿಸಿದೆ ಎಂದು ಶಮಿಕಾ ರವಿ ಕೂಡ ಅರ್ಥಸ್ಥಿತಿಯ ಕುರಿತು ಆತಂಕ ಪ್ರಕಟಿಸಿದ್ದರು. ಮಂದಗತಿಯನ್ನು ಎದುರಿಸಲು ಭಾರೀ ಸುಧಾರಣೆಗಳ ಅಗತ್ಯವಿದೆ. ಸಣ್ಣಪುಟ್ಟ ಕ್ರಮಗಳಿಂದ ಪ್ರಯೋಜನವಿಲ್ಲ. ದೇಶದ ಆರ್ಥಿಕ ಸ್ಥಿತಿಗತಿಯನ್ನು ಕೇವಲ ಹಣಕಾಸು ಮಂತ್ರಾಲಯಕ್ಕೆ ಒಪ್ಪಿಸಿ ಕೈಕಟ್ಟಿ ಕುಳಿತುಕೊಳ್ಳಲು ಬರುವುದಿಲ್ಲ. ಕಂಪನಿಯೊಂದರ ಪ್ರಗತಿಯನ್ನು ಅದರ ಲೆಕ್ಕಪತ್ರ ಶಾಖೆಗೆ ಒಪ್ಪಿಸಿ ಕೈ ಕಟ್ಟಿ ಕುಳಿತುಕೊಳ್ಳುವುದು ಎಷ್ಟು ಅವಿವೇಕವೋ ಅಷ್ಟೇ ಅವಿವೇಕ ಇದು ಕೂಡ ಎಂದು ಶಮಿಕಾ ವಿಮರ್ಶಿಸಿದ್ದರು.
2014ರಲ್ಲಿ ಮನಮೋಹನ್ ಸರ್ಕಾರದ ನಿರ್ಗಮನದ ಜೊತೆಗೆ ಸಿ. ರಂಗರಾಜನ್ ಅಧ್ಯಕ್ಷತೆಯ ಸಲಹಾ ಮಂಡಳಿಯ ಅಧಿಕಾರಾವಧಿಯೂ ತೀರಿತ್ತು. ಮೋದಿ ಸರ್ಕಾರ ಈ ಮಂಡಳಿಗೆ ಬಿಬೇಕ್ ದೇವ್ರಾಯ್ ಅಧ್ಯಕ್ಷತೆಯಲ್ಲಿ ಪುನಃ ಜೀವ ನೀಡಿದ್ದು 2017ರ ಕಡೆಯ ಭಾಗದಲ್ಲಿ. ಪ್ರಧಾನಿ ತನಗೆ ವಹಿಸಿದ ಅಥವಾ ತನಗೆ ಸೂಕ್ತವೆಂದು ತೋರಿದ ಆರ್ಥಿಕ ಮತ್ತಿತರೆ ವಿಷಯಗಳು ದೇಶದ ಅರ್ಥನೀತಿಯ ಮೇಲೇ ಉಂಟು ಮಾಡಬಹುದಾದ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಅವರಿಗೆ ಸಲಹೆ ನೀಡುವುದು ಈ ಮಂಡಳಿಯ ಕರ್ತವ್ಯ.

ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಮೊದಲ ಬಾರಿಗೆ ರೂಪು ತಳೆದದ್ದು ಮೂರೂವರೆ ದಶಕಗಳ ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲಿ. ಅವರು 1980ರಲ್ಲಿ ಅಧಿಕಾರಕ್ಕೆ ಮರಳಿದ್ದ ಸಂದರ್ಭ. ಜಾಗತಿಕ ತೈಲ ಬಿಕ್ಕಟ್ಟು ಮತ್ತು ಬರಗಾಲದಿಂದ ರಾಷ್ಟ್ರೀಯ ಆದಾಯ ಕುಗ್ಗಿತ್ತು. ಬೆಲೆ ಏರಿಕೆ ಕಾಡಿತ್ತು. ಅಂದಿನ ಅರ್ಥಮಂತ್ರಿ ಆರ್. ವೆಂಕಟರಾಮನ್. ದೆಹಲಿ ಅರ್ಥಶಾಸ್ತ್ರಶಾಲೆಯಲ್ಲಿ ಅಮರ್ತ್ಯಸೇನ್ ಮತ್ತು ಮನಮೋಹನಸಿಂಗ್ ಅವರೊಂದಿಗೆ ಪಾಠ ಹೇಳುತ್ತಿದ್ದ ಪ್ರೊ. ಸುಖಮೊಯ್ ಚಕ್ರವರ್ತಿ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡರು ಇಂದಿರಾಗಾಂಧಿ. ಚಕ್ರವರ್ತಿ ಅವರು ಇಂದಿರಾ ನಂತರ ರಾಜೀವ್ ಗಾಂಧೀ ಕಾಲದಲ್ಲೂ ಮುಂದುವರೆದರು. ವಿ. ಪಿ. ಸಿಂಗ್ ಅಂದಿನ ಹಣಕಾಸು ಮಂತ್ರಿ. ಈ ಅವಧಿಯಲ್ಲೂ ಸಲಹಾ ಮಂಡಳಿ ಗುರುತರ ಕಾರ್ಯ ನಿರ್ವಹಿಸಿತು. ಸಿ. ರಂಗರಾಜನ್ ಮತ್ತು ಕೆ. ಎನ್. ರಾಜ್ ಅವರು ಆರಂಭದ ದಿನಗಳಲ್ಲಿ ಈ ಮಂಡಳಿಯ ಸದಸ್ಯರಾಗಿದ್ದರು. ಚಂದ್ರಶೇಖರ್ ಕೆಲ ಕಾಲ ಪ್ರಧಾನಿಯಾಗಿದ್ದಾಗ ಮನಮೋಹನ ಸಿಂಗ್ ಕೂಡ ಈ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
1998ರಲ್ಲಿ ಈ ಸಲಹಾ ಮಂಡಳಿಗೆ ಖುದ್ದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಅಧ್ಯಕ್ಷರಾದರು. ಐಜಿ ಪಟೇಲ್, ಪಿ. ಎನ್. ಧಾರ್, ಅರ್ಜುನ್ ಸೇನ್ ಗುಪ್ತಾ, ಅಶೋಕ್ ದೇಸಾಯಿ, ಮಾಂಟೆಕ್ ಸಿಂಗ್ ಆಹ್ಲುವಾಲಿಯಾ, ಬ್ರಜೇಶ್ ಮಿಶ್ರಾ, ಎನ್. ಕೆ. ಸಿಂಗ್, ಜಿ. ವಿ. ರಾಮಕೃಷ್ಣ, ಕಿರೀಟ್ ಪಾರೀಖ್ ಮುಂತಾದ ಹೇಮಾಹೇಮಿಗಳು ಈ ಮಂಡಳಿಯ ಸದಸ್ಯರಾಗಿದ್ದರು.
2004ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರಚಿಸಿದ್ದ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಗೆ ರಂಗರಾಜನ್ ಅವರಂತಹ ಘಟಾನುಘಟಿ ಅಧ್ಯಕ್ಷರಾಗಿದ್ದರು. ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಹಣಕಾಸು ಮಂತ್ರಿಗಳಾಗಿದ್ದ ಅವಧಿ. ಮಾಂಟೆಕ್ ಸಿಂಗ್ ಆಹ್ಲೂವಾಲಿಯಾ ಯೋಜನಾ ಆಯೋಗದ ಉಪಾಧ್ಯಕ್ಷರು. ಈ ಹತ್ತು ವರ್ಷಗಳ ಅವಧಿಯಲ್ಲಿ ಅರ್ಥಸ್ಥಿತಿ ಮತ್ತು ಇತರೆ ಹಲವು ವಿಷಯಗಳ ಕುರಿತು ಪ್ರಧಾನಿ ಅರ್ಥಿಕ ಸಲಹಾ ಮಂಡಳಿಯು ತನ್ನದೇ ಪ್ರತ್ಯೇಕ ವಿಮರ್ಶೆಯನ್ನು ಹೊರತಂದದ್ದು ಉಂಟು.
ಮಂಡಳಿಯ ಮೂರು ದಶಕಗಳ ಇತಿಹಾಸದಲ್ಲಿ ಮನಮೋಹನ್ ಸಿಂಗ್ ಕಾಲದ ಈ ಮಂಡಳಿಯಷ್ಟು ಸಬಲ ಮತ್ತು ಪ್ರಭಾವಿಯಾದದ್ದು ಮತ್ತೊಂದಿಲ್ಲ ಎನ್ನಲಾಗಿದೆ. ಪ್ರಧಾನಮಂತ್ರಿಯವರ ಸಂಪೂರ್ಣ ವಿಶ್ವಾಸವನ್ನು ಹೊಂದಿದ್ದ ಕಾರಣಕ್ಕಾಗಿಯೇ ಅದು ಅಷ್ಟು ಸದೃಢವಾಗಿತ್ತು. ಇಂತಹ ಪರಂಪರೆಯ ಮಂಡಳಿಯೊಂದಕ್ಕೆ ಅರೆ ಸ್ವಾಯತ್ತ ಅಧಿಕಾರವನ್ನಾದರೂ ದಯಪಾಲಿಸುವುದು ಜನತಾಂತ್ರಿಕ ದೇಶವೊಂದಕ್ಕೆ ಕ್ಷೇಮಕರ.