ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ವಿರುದ್ಧ ಕಠಿಣ ನಿಲುವು ತಳೆದಿರುವ ಸುಪ್ರೀಂಕೋರ್ಟ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಾಂಗದ ಕುರಿತ ಅವರ ಎರಡು ಟ್ವೀಟ್ ಗಳು ನ್ಯಾಯಾಂಗ ನಿಂದನೆಯಾಗಿದ್ದು, ಅವರು ತಪ್ಪಿತಸ್ಥರು ಎಂದು ಘೋಷಿಸಿದೆ. ಆದರೆ, ಸುಪ್ರೀಂಕೋರ್ಟಿನ ಈ ತೀರ್ಪು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ದೇಶದ ನಿವೃತ್ತ ಮುಖ್ಯನ್ಯಾಯಮೂರ್ತಿಗಳು, ನ್ಯಾಯಾಧೀಶರು, ಹಿರಿಯ ವಕೀಲರು, ಭಾರತೀಯ ವಕೀಲರ ಸಂಘದ ಸದಸ್ಯರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಲೇಖಕರು ಸೇರಿದಂತೆ ವಿವಿಧ ವಲಯಗಳ ಸಾವಿರಾರು ಮಂದಿ ಪ್ರಮುಖರು ತೀರ್ಪಿನ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ಈ ಪ್ರಕರಣ, ಇದೀಗ ನ್ಯಾಯಾಂಗ ನಿಂದನೆ ಕಾನೂನಿನ ಕುರಿತ ಸಾರ್ವಜನಿಕ ಜಿಜ್ಞಾಸೆಗೂ, ಅದೇ ಹೊತ್ತಿಗೆ ನ್ಯಾಯಾಂಗದ ಪ್ರಶ್ನಾತೀತ ಅಧಿಕಾರದ ಕುರಿತ ಆತಂಕಕ್ಕೂ, ವ್ಯವಸ್ಥೆಯ ಲೋಪಗಳನ್ನು ಎತ್ತಿಹಿಡಿಯುವ, ತಪ್ಪುಗಳನ್ನು ಪ್ರಶ್ನಿಸುವ ವ್ಯಕ್ತಿಯ ವಾಕ್ ಸ್ವಾತಂತ್ರ್ಯದ ಸಂವಿಧಾನಿಕ ಮಿತಿಗಳ ಕುರಿತ ಚರ್ಚೆಗೂ ಚಾಲನೆ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಅಧಿಕಾರದಲ್ಲಿರುವಾಗಲೇ, ಒಂದು ಕಡೆ ಸುಪ್ರೀಂಕೋರ್ಟಿನ ಕಲಾಪಗಳನ್ನು ಸ್ಥಗಿತಗೊಳಿಸಿ, ಜನಸಾಮಾನ್ಯರ ಪಾಲಿಗೆ ನ್ಯಾಯಾಂಗವನ್ನು ದೂರ ಮಾಡಿ, ಮತ್ತೊಂದು ಕಡೆ ಆಡಳಿತ ಪಕ್ಷದ ನಾಯಕರೊಬ್ಬರಿಗೆ ಸೇರಿದ ಐಷಾರಾಮಿ ಬೈಕನ್ನು ಏರಿದ್ದು ಮತ್ತು ಹೆಲ್ಮೆಟ್ ಕಡ್ಡಾಯ ಎಂಬ ತನ್ನದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಹೆಲ್ಮೆಟ್ ರಹಿತವಾಗಿ ಬೈಕ್ ಚಲಾಯಿಸಿದ್ದು ಸರಿಯೇ ಎಂಬುದು ಪ್ರಶಾಂತ್ ಭೂಷಣ್ ಅವರ ಒಂದು ಟ್ವೀಟ್ ಸಾರಾಂಶವಾಗಿತ್ತು. ಮತ್ತೊಂದು ಟ್ವೀಟ್ ನಲ್ಲಿ ಅವರು, “ಮುಂದೊಂದು ದಿನ ಇತಿಹಾಸಕಾರರು, ಕಳೆದ ಆರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಯಾವುದೇ ಅಧಿಕೃತ ತುರ್ತುಪರಿಸ್ಥಿತಿ ಘೋಷಿಸದೆಯೂ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲಾಯಿತು ಎಂಬುದನ್ನು ಗಮನಿಸುವಾಗ, ಖಂಡಿತವಾಗಿಯೂ ಈ ನಾಶದಲ್ಲಿ ಸುಪ್ರೀಂಕೋರ್ಟಿನ ಪಾತ್ರವೇನು? ಅದರಲ್ಲೂ ಮುಖ್ಯನ್ಯಾಯಮೂರ್ತಿಗಳ ಕೊಡುಗೆ ಏನು ಎಂಬುದನ್ನು ಗುರುತಿಸದೇ ಇರಲಾರರು” ಎಂದು ಹೇಳಿದ್ದರು.

ಈ ಎರಡು ಟ್ವೀಟ್ ಗಳು ಸಿಜೆಐ ಮತ್ತು ಸುಪ್ರೀಂಕೋರ್ಟ್ ಘನತೆ ಮತ್ತು ವಿಶ್ವಾಸಕ್ಕೆ ಧಕ್ಕೆ ತಂದಿವೆ ಎಂಬ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು ಮತ್ತು ಶೀಘ್ರ ವಿಚಾರಣೆ ನಡೆಸಿ ಪ್ರಕರಣದಲ್ಲಿ ಭೂಷಣ್ ತಪ್ಪಿತಸ್ಥರು ಎಂದು ಕಳೆದ ವಾರ ತೀರ್ಪು ನೀಡಿದ್ದು, ಆಗಸ್ಟ್ 20ರಂದು ಆ ಸಂಬಂಧ ಅವರ ಶಿಕ್ಷೆ ಪ್ರಮಾಣ ನಿರ್ಧರಿಸಿ ಅಂತಿಮ ಆದೇಶ ನೀಡುವುದಾಗಿ ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ಆದರೆ, ಪ್ರಮುಖವಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲಿನ ನೈಜ ಕಾಳಜಿಯಿಂದ ಮಾಡಿದ ಟ್ವೀಟನ್ನು ಸುಪ್ರೀಂಕೋರ್ಟ್, ನ್ಯಾಯಾಂಗ ನಿಂದನೆ ಎಂದು ಗಂಭೀರವಾಗಿ ಪರಿಗಣಿಸಿರುವ ವರಸೆ ಮತ್ತು ಕರೋನಾ ಲಾಕ್ ಡೌನ್ ಅವಧಿಯಲ್ಲಿ ನ್ಯಾಯಾಲಯದ ಭೌತಿಕ ಕಲಾಪಗಳು ನಡೆಯದೇ ಇರುವಾಗ, ದೇಶದ ಹಿರಿಯ ವಕೀಲರೊಬ್ಬರಿಗೆ ಸಂಬಂಧಿಸಿದಂತೆ ಇಷ್ಟು ತುರ್ತಾಗಿ, ತೀರಾ ತರಾತುರಿಯಲ್ಲಿ ಈ ಪ್ರಕರಣವನ್ನು ವಿಚಾರಣೆ ನಡೆಸಿ, ಅತ್ಯಂತ ಶೀಘ್ರಗತಿಯಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟಿನ ಕ್ರಮದ ಬಗ್ಗೆ ದೇಶವ್ಯಾಪಿ ಕಾನೂನು ಪರಿಣಿತರು, ನಿವೃತ್ತ ನ್ಯಾಯಮೂರ್ತಿಗಳು, ವಕೀಲರುಗಳು ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಇತ್ತೀಚಿನ ವರ್ಷಗಳಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಮೇಲೆ ಜನಸಾಮಾನ್ಯರು ಇಟ್ಟಿರುವ ಭರವಸೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳಲಾಗುತ್ತಿದೆ. ಜನಸಾಮಾನ್ಯರ ಭರವಸೆಯಾಗಿ ಕೆಲಸ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆ, ಆ ನಿಟ್ಟಿನಲ್ಲಿ ಎಡವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2018ರ ಜನವರಿಯಲ್ಲಿ ಸ್ವತಃ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಸುಪ್ರೀಂಕೋರ್ಟಿನ ವ್ಯವಹಾರಗಳಲ್ಲಿ ಆಡಳಿತ ವ್ಯವಸ್ಥೆ ಮೂಗು ತೂರಿಸುತ್ತಿದೆ ಎಂದು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದ ಆ ನ್ಯಾಯಮೂರ್ತಿಗಳು, ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನ ದಿಗಿಲುಗೊಳ್ಳುವಂತೆ ಮಾಡಿದ್ದರು.
ವಿಪರ್ಯಾಸವೆಂದರೆ; ಹಾಗೆ ನ್ಯಾಯಾಂಗದ ಸ್ವಾಯತ್ತತೆ ಮತ್ತು ಘನತೆಗಾಗಿ ಸಾರ್ವಜನಿಕವಾಗಿ ದೇಶದ ಜನತೆಯ ಮುಂದೆ ಅಹವಾಲು ಇಟ್ಟಿದ್ದ ಆ ನಾಲ್ವರು ನ್ಯಾಯಾಧೀಶರ ಪೈಕಿ ಒಬ್ಬರಾದ ನ್ಯಾ. ರಂಜನ್ ಗೋಗಾಯ್ ಮುಂದೆ ಸುಪ್ರೀಂಕೋರ್ಟಿನ ಸಿಜೆಐ ಆಗಿ ನೇಮಕವಾದರು. ಅಯೋಧ್ಯೆ ಭೂ ವಿವಾದ ಪ್ರಕರಣವೂ ಸೇರಿದಂತೆ ಆಡಳಿತರೂಢ ಬಿಜೆಪಿಗೆ ಸಂಬಂಧಿಸಿದ ಹಲವು ಮಹತ್ವದ ಪ್ರಕರಣಗಳನ್ನು ವಿಲೇ ಮಾಡಿದ ಅವರು, ಸಿಜೆಐ ಸ್ಥಾನದಿಂದ ನಿವೃತ್ತರಾದ ಕೆಲವೇ ದಿನಗಳಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ನೇಮಕವಾದರು. ಇಡೀ ನ್ಯಾಯಾಂಗಕ್ಕೆ ಕಪ್ಪು ಚುಕ್ಕೆಯಾದ ಈ ನಡವಳಿಕೆ ನ್ಯಾಯಾಂಗದ ಘನತೆಗೆ, ವಿಶ್ವಾಸಕ್ಕೆ ಪೆಟ್ಟು ನೀಡಲಿಲ್ಲವೆ? ಆಡಳಿತ ಪಕ್ಷದ ಹಿತಾಸಕ್ತಿ ಇರುವ ಅತ್ಯಂತ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ಸಿಜೆಐ ಒಬ್ಬರು, ನಿವೃತ್ತಿಯಾಗುತ್ತಲೇ ಅದೇ ಆಡಳಿತ ಪಕ್ಷ ಅವರಿಗೆ ಲಾಭದಾಯಕ ಹುದ್ದೆಗಳನ್ನು ನೀಡಿದರೆ, ಆಗ ಅವರ ಅಧಿಕಾರವಧಿಯಲ್ಲಿನ ತೀರ್ಪು, ಆದೇಶಗಳನ್ನು ಜನಸಾಮಾನ್ಯರು ಹೇಗೆ ಪರಿಭಾವಿಸಬೇಕು? ಇಂತಹ ಹೇಯ ಸಂದರ್ಭಗಳು ದೇಶದ ನ್ಯಾಯಾಂಗದ ಮೇಲೆ ಜನಸಾಮಾನ್ಯರು ಇಟ್ಟಿರುವ ಭರವಸೆ ಮತ್ತು ನಂಬಿಕೆಯನ್ನು ಮಣ್ಣುಪಾಲು ಮಾಡುವುದಿಲ್ಲವೆ? ಯಾಕೆ ಅಂತಹ ಸಂಧರ್ಭದಲ್ಲಿ ಘನ ನ್ಯಾಯಾಲಯ ಅಂತಹ ನಡವಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬಾರದು? ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದರೆ, ಕರೋನಾದ ನೆಪದಲ್ಲಿ ಕಳೆದ ಮಾರ್ಚ್ 23ರಿಂದ ಸತತ ಐದು ತಿಂಗಳ ಕಾಲ ದೇಶದ ಸಂಸತ್ತನ್ನು ಪರೋಕ್ಷ ಅಮಾನತಿನಲ್ಲಿಟ್ಟು ಯಾವುದೇ ಬಗೆಯ ವರ್ಚುವಲ್ ಸಭೆ- ಚರ್ಚೆಗಳನ್ನೂ ನಡೆಸದೆ ಆಡಳಿತ ಪಕ್ಷದ ಕೆಲವೇ ಮಂದಿ ಏಕಪಕ್ಷೀಯವಾಗಿ ಕಾಯ್ದೆ-ಕಾನೂನುಗಳ ಮೇಲೆ ಸವಾರಿ ಮಾಡುತ್ತಿರುವಾಗ, ನೀತಿ-ನಿಯಮಗಳನ್ನು ಅನುಕೂಲಕ್ಕೆ ತಕ್ಕಂತೆ ಹೊಸೆಯುತ್ತಿರುವಾಗ, ಪ್ರಮುಖ ನಿರ್ಧಾರಗಳ ವಿಷಯದಲ್ಲಿ ಪ್ರತಿಪಕ್ಷಗಳಿರಲಿ, ತಮ್ಮದೇ ಪಕ್ಷದ ಎಲ್ಲ ಸಂಸದರ ಅಭಿಪ್ರಾಯವನ್ನು ಕೂಡ ಕೇಳದೆ ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಚಲಾಯಿಸುತ್ತಿರುವಾಗ, ನಿಜವಾದ ಪ್ರಜಾಪ್ರಭುತ್ವ ಬುಡಮೇಲಾಗಿ ಸರ್ವಾಧಿಕಾರಿ ಆಡಳಿತದ ವರಸೆ ಚಾಲ್ತಿಗೆ ಬಂದಿದೆ. ಇಂತಹ ಹೊತ್ತಲ್ಲಿ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವಂತೆ ಖಾತರಿಪಡಿಸಬೇಕಾದ ನ್ಯಾಯಾಂಗ, ಸಂಸತ್ತನ್ನು ಸಕ್ರಿಯಗೊಳಿಸಲು ಸ್ವಯಂಪ್ರೇರಿತ ಕಾಳಜಿ ವಹಿಸಬೇಕಿತ್ತು. ಆದರೆ, ಸುಪ್ರೀಂಕೋರ್ಟ್ ಆ ಬಗ್ಗೆ ಆಸಕ್ತಿ ವಹಿಸುವ ಬದಲು, ಲಾಕ್ ಡೌನ್ ನೆಪದಲ್ಲಿ ಒಂದು ಕಡೆ ಭೌತಿಕ ಕಲಾಪಗಳಿಗೆ ಬ್ರೇಕ್ ಹಾಕಿದ್ದು, ಜನಸಾಮಾನ್ಯರ ಪಾಲಿಗೆ ನ್ಯಾಯಾಂಗ ಕೂಡ ಭರವಸೆಯಾಗಿ ಉಳಿಯದ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಇಂತಹ ಹೊತ್ತಲ್ಲೂ ದೇಶದ ಬಡವರ ಪರ, ಶೋಷಿತ, ದಮನಿತರ ಪರ ಸದಾ ಕಾನೂನು ಮತ್ತು ಬೀದಿ ಹೋರಾಟದ ಮೂಲಕ ಜನರ ಭರವಸೆಯಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆಯಂತಹ ಅಸ್ತ್ರ ಬಳಸಿ ಅವರನ್ನು ಹಣಿಯುವುದು ಎಷ್ಟರಮಟ್ಟಿಗೆ ನ್ಯಾಯಸಮ್ಮತ ಎಂಬುದು ಈ ಕುರಿತ ಆತಂಕ ವ್ಯಕ್ತಪಡಿಸಿರುವ ಎಲ್ಲರ ಪ್ರಶ್ನೆ.
Also Read: ದೆಹಲಿ- ಪತ್ರಕರ್ತರ ಮೇಲಿನ ಗೂಂಡಾಗಿರಿ ಫ್ಯಾಸಿಸಂ ಲಕ್ಷಣ: ಅರುಂಧತಿ ರಾಯ್
ಸುಪ್ರೀಂಕೋರ್ಟ್ ಸಂಕಷ್ಟದ ಹೊತ್ತಲ್ಲಿ ಜನರ ದನಿಯಾಗಿ ಕೆಲಸ ಮಾಡಬೇಕಿದೆ. ಒಂದು ಸದೃಢ ನ್ಯಾಯಾಂಗವಾಗಿ ಕೆಲಸ ಮಾಡಲು ಮುಕ್ತ ಮತ್ತು ಸ್ವಾಯತ್ತ ವಕೀಲರು ಅನಿವಾರ್ಯ. ಆದರೆ, ವಕೀಲರ ಬಾಯಿ ಮುಚ್ಚಿಸಿ, ಒಂದು ಸದೃಢ ನ್ಯಾಯಾಂಗವನ್ನು ಕಾಣಲು ಸಾಧ್ಯವಿಲ್ಲ ಎಂದಿರುವ ದೇಶದ ವಿವಿಧ ವಕೀಲರ ಸಂಘಗಳು ಮತ್ತು ಹಿರಿಯ ವಕೀಲರು, ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆಯ ತೀರ್ಪನ್ನು ಖಂಡಿಸಿವೆ. ಶ್ಯಾಮ್ ದಿವಾನ್, ವೃಂದಾ ಗ್ರೋವರ್, ಶ್ರೀರಾಮ್ ಪಂಚು, ಅರವಿಂದ್ ದಾತಾರ್, ಮನೇಕಾ ಗುರುಸ್ವಾಮಿ, ಕರುಣಾ ನಂದಿ, ಇಕ್ಬಾಲ್ ಚಗ್ಲಾ, ಕಾಮಿನಿ ಜಸ್ವಾಲ್ ಸೇರಿದಂತೆ ಸುಮಾರು 1800ಕ್ಕೂ ಅಧಿಕ ವಕೀಲರ ಸಹಿಯೊಂದಿಗೆ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ನ್ಯಾಯಾಂಗದ ಸ್ವಾಯತ್ತತೆ ಎಂದರೆ, ನ್ಯಾಯಾಧೀಶರು ಪ್ರಶ್ನಾತೀತರು, ಯಾವುದೇ ಟೀಕೆ- ವಿಮರ್ಶೆಗೆ ಹೊರತಾದವರು ಎಂದೇನಲ್ಲ. ನ್ಯಾಯಾಂಗ ನಿಂದನೆಯ ಅಪರಾಧದ ಕುರಿತು ಮಾನದಂಡಗಳ ಪರಾಮರ್ಶೆಗೆ ಅವಕಾಶ ನೀಡಬೇಕಿದೆ. ಅದಕ್ಕಾಗಿ ಈ ಕರೋನಾ ಸಂಕಷ್ಟ ಮುಗಿದು, ಭೌತಿಕವಾಗಿ ಕಲಾಪಗಳು ಆರಂಭವಾಗಬೇಕಿದೆ. ಅಲ್ಲಿಯವರೆಗೆ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ತಡೆಹಿಡಿಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಅದೇ ಹೊತ್ತಿಗೆ, ಈ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತರಾತುರಿಯ ಬಗ್ಗೆ ಪ್ರಶ್ನಿಸಿರುವ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್ ಎಂ ಲೋಧಾ ಕೂಡ, “ಸ್ವರ್ಗ ಕಳಚಿಬೀಳುವಂತಹ ತುರ್ತೇನು ಇರಲಿಲ್ಲ. ಕರೋನಾ ಸಂಕಷ್ಟದ ಹೊತ್ತಲ್ಲಿ ಇಂತಹದ್ದೊಂದು ಪ್ರಕರಣವನ್ನು ಆದ್ಯತೆಯಾಗಿ ಪರಿಗಣಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಭೌತಿಕ ಕಲಾಪಗಳು ನಡೆಯದೇ ಇರುವಾಗ, ಇಂತಹ ತುರ್ತು ಇರಲಿಲ್ಲ. ಆದರೆ, ಹೀಗೆ ಬಹಳ ತರಾತುರಿಯಲ್ಲಿ ಈ ಪ್ರಕರಣವನ್ನು ವರ್ಚುವಲ್ ಹಿಯರಿಂಗ್ ಮೂಲಕ ವಿಚಾರಣೆ ನಡೆಸಿ ತೀರ್ಪು ನೀಡಿದ್ದು ಆತಂಕಕಾರಿ ಸಂಗತಿ” ಎಂದು ಹೇಳಿದ್ದಾರೆ.
Also Read: ಕುಟುಕಿದ ಭೂಷಣ್ ಗೆ ‘ಸುಪ್ರೀಂ’ ನ್ಯಾಯಾಂಗ ನಿಂದನೆ ಛಡಿಯೇಟು
ಹಾಗೇ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ರಾಜು ರಾಮಚಂದ್ರನ್, ಸಂಜಯ್ ಹೆಗಡೆ, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ರುಮಾ ಪಾಲ್, ಬಿ ಸುದರ್ಶನ್ ರೆಡ್ಡಿ, ಅಫ್ತಾಬ್ ಆಲಂ, ಜಿ ಎಸ್ ಸಿಂಘ್ವಿ, ಮದನ್ ಬಿ ಲೋಕೂರ್, ಜೆ ಗೋಪಾಲಗೌಡ, ಸಾಮಾಜಿಕ ಕಾರ್ಯಕರ್ತರಾದ ಅರುಣಾ ರಾಯ್, ಹರ್ಷ ಮಂದರ್, ಲೇಖಕಿ ಅರುಂಧತಿ ರಾಯ್, ಹಿರಿಯ ಪತ್ರಕರ್ತ ಎನ್ ರಾಮ್, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಸೇರಿದಂತೆ ಹಲವು ಪ್ರಮುಖರು ಕೂಡ, “ಪ್ರಶಾಂತ್ ಭೂಷಣ್ ಅವರ ಹೇಳಿಕೆಯಂತಹ ಸಂಗತಿಗಳು ಘನ ನ್ಯಾಯಾಲಯದ ಅಡಿಪಾಯವನ್ನೇ ಅಲುಗಾಡಿಸುತ್ತವೆ, ಅದರ ಘನತೆ ಮತ್ತು ವಿಶ್ವಾಸಾರ್ಹತೆಗೆ ಪೆಟ್ಟು ಕೊಟ್ಟಿದೆ ಎಂಬ ತ್ರಿಸದಸ್ಯ ಪೀಠದ ಅಭಿಪ್ರಾಯ, ಅತಿರಂಜಿತ ಪ್ರಕ್ರಿಯೆಯಾಗಿದ್ದು, ಇಂತಹ ಪ್ರತಿಕ್ರಿಯೆಗಳು ನಿಜಕ್ಕೂ ನ್ಯಾಯಾಂಗದ ಘನತೆಗೆ ಮಸಿ ಬಳಿಯುತ್ತವೆ ವಿನಃ ಕೇವಲ ಟೀಕೆ, ವಿಮರ್ಶೆಗಳಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಪ್ರಕರಣದ ಕುರಿತು ಆತಂಕ ವ್ಯಕ್ತಪಡಿಸಿರುವ ಕಾಮನ್ ವೆಲ್ತ್ ಮಾನವ ಹಕ್ಕು ಉಪಕ್ರಮ, “ಇದೊಂದು ಆಘಾತಕಾರಿ ಸಂದೇಶವನ್ನು ರವಾನಿಸಿದ್ದು, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಅಪಾಯಕ್ಕೆ ಈ ಪ್ರಕರಣ ಜ್ವಲಂತ ನಿದರ್ಶನ” ಎಂದು ವ್ಯಾಖ್ಯಾನಿಸಿದೆ.
ಈ ನಡುವೆ, 2009ರಲ್ಲಿ ತೆಹಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಸ್ತೃತ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಕಾನೂನಿನ ಕುರಿತು ವ್ಯಾಪಕ ಚರ್ಚೆ ಮತ್ತು ಪುನರ್ ವ್ಯಾಖ್ಯಾನದ ಅಗತ್ಯವಿದೆ ಎಂಬ ಪ್ರಶಾಂತ್ ಭೂಷಣ್ ಪರ ವಕೀಲರಾದ ರಾಜೀವ್ ಧವನ್, ಶಾಂತಿಭೂಷಣ್ ಮತ್ತು ಕಪಿಲ್ ಸಿಬಲ್ ಅವರ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಪ್ರಕರಣದ ವಿಚಾರಣೆಯನ್ನು ಆ.24ಕ್ಕೆ ಮುಂದೂಡಲಾಗಿದೆ. ಹನ್ನೊಂದು ವರ್ಷ ಹಿಂದಿನ ಈ ಪ್ರಕರಣ ಕೂಡ ಇದೀಗ ಕುತೂಹಲ ಕೆರಳಿಸಿದೆ.
Also Read: ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು ಸಿಜೆಐ ಬೈಕ್ ಏರಿದ್ದು
ಒಟ್ಟಾರೆ, ಈ ಇಡೀ ಪ್ರಕರಣ ಸುಪ್ರೀಂಕೋರ್ಟ್ ಸೇರಿದಂತೆ ದೇಶದ ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ ಮತ್ತು ಘನತೆಯ ವಿಷಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದು, ನ್ಯಾಯಾಂಗ ನಿಂದನೆ ಎಂಬುದು ಯಾವ ಉದ್ದೇಶಕ್ಕೆ ಪ್ರಯೋಗವಾಗಬೇಕಿತ್ತು ಮತ್ತು ವಾಸ್ತವವಾಗಿ ಈಗ ಹೇಗೆ ಪ್ರಯೋಗವಾಗುತ್ತಿದೆ ಎಂಬ ಕುರಿತು ಆತಂಕವನ್ನೂ ಹುಟ್ಟಿಸಿದೆ. ಆ ಹಿನ್ನೆಲೆಯಲ್ಲಿ ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ನ್ಯಾಯಾಲಯದ ತೀರ್ಪಿನ ಕುರಿತು ವಿವಿಧ ವಲಯದ ಅನುಭವಿಗಳು ಆತಂಕದ ಪ್ರಶ್ನೆಗಳನ್ನು ಎತ್ತಿದ್ದಾರೆ. ಜನದನಿಯ ಪ್ರತಿಧ್ವನಿಯೂ, ಅದೇ ಹೊತ್ತಿಗೆ ದೇಶದ ನೈಜ ಪ್ರಜಾಪ್ರಭುತ್ವದ ದನಿಯೂ ಆಗಿರುವ ಈ ಆತಂಕದ ದನಿಗಳ ಕೂಗು ಬೀರುವ ಪರಿಣಾಮವೇನು ಮತ್ತು ದೇಶದ ಪ್ರಜಾಪ್ರಭುತ್ವದ ಭವಿಷ್ಯವೇನು ಎಂಬುದನ್ನು ಬಹುಶಃ ಮುಂದಿನ ಎರಡು ದಿನಗಳು ನಿರ್ಧರಿಸಲಿವೆ.

