ದೇಶದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂಬ ಬಗ್ಗೆ ಆಗ್ರಹ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವ ಮಾತೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ನಡುವೆ ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕೈಗೊಂಡಿರುವ ಕೆಲಸಗಳ ಬಗ್ಗೆ ಕೋರ್ಟ್‌ನಲ್ಲಿ ಸರ್ಕಾರಗಳಿಗೆ ಹಿನ್ನಡೆ ಆಗುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಪರೋಕ್ಷ ಚಾಟಿ ಬೀಸಿದೆ. ಮಂಗಳೂರು ಗಲಭೆ ಪ್ರಕರಣದಲ್ಲಿ ಬಂಧನವಾಗಿದ್ದವರಿಗೆ ಜಾಮೀನು ಮಂಜೂರಾಗಿದೆ.
ಜನವರಿ 19ರಂದು ಪ್ರತಿಭಟನೆಗೆ ಮುಂದಾಗುತ್ತಿದ್ದ ಹಾಗೆ ರಾಜ್ಯಾದ್ಯಂರ ೧೪೪ ಸೆಕ್ಷನ್ ಜಾರಿ ಮಾಡಿದ್ದು ತಪ್ಪು ಎಂದು ಈ ಹಿಂದೆ ಹೈಕೋರ್ಟ್ ಆದೇಶ ಮಾಡಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡಿದ ಕಾರಣಕ್ಕೆ ದೇಶದ್ರೋಹಿಗಳು ಎಂದು ಪಟ್ಟ ಕಟ್ಟುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್ ಆದೇಶ ಮಾಡಿತ್ತು. ದೆಹಲಿಯ ಶಾಹಿನ್‌ಭಾಗ್‌ನಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡುವುದನ್ನು ತಡೆಯುವುದು ಸರಿಯಲ್ಲ. ಹೋರಾಟ ಜನರ ಮೂಲಭೂತ ಹಕ್ಕು. ಬೇಕಿದ್ದರೆ ಬೇರೆ ಸ್ಥಳವನ್ನು ಗುರುತು ಮಾಡಿ ಎಂದು ದೆಹಲಿ ಹಾಗು ಕೇಂದ್ರ ಸರ್ಕಾರಕ್ಕೆ ದೆಹಲಿ ಕೋರ್ಟ್ ಸೂಚನೆ ಕೊಟ್ಟಿತ್ತು. ಇದೀಗ ಮಂಗಳೂರಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ವಿರೋಧ ಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.
ಹೈಕೋರ್ಟ್ ಆದೇಶದಲ್ಲಿ ಉಲ್ಲೇಖ ಮಾಡಿರುವ ಅಂಶಗಳು ಸರ್ಕಾರಕ್ಕೆ ಮುಜುಗರ ಆಗುವಂತೆ ಮಾಡಿದೆ. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಕೆ ಮಾಡಿರುವ ಫೋಟೋಗಳಲ್ಲಿ ಯಾರೊಬ್ಬರೂ ಕಲ್ಲು ತೂರಾಟ ಮಾಡಿರುವುದು ಪತ್ತೆಯಾಗಿಲ್ಲ. ಓರ್ವ ವ್ಯಕ್ತಿ ಮಾತ್ರ ಬಾಟೆಲ್ ಹಿಡಿದು ನಿಂತಿದ್ದಾರೆ. ಅದರಲ್ಲೂ ಪೊಲೀಸ್ ಠಾಣೆ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ತೂರಾಟ ಅಥವಾ ಶಸ್ತ್ರಾಸ್ತ್ರ ಹಿಡಿದಿರುವುದು ಪತ್ತೆಯಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ಅರ್ಜಿದಾರರು ಸಲ್ಲಿಕೆ ಮಾಡಿರುವ ಫೋಟೋಗಳಲ್ಲಿ ಪೊಲೀಸರೇ ಕಲ್ಲು ತೂರಾಟ ಮಾಡುತ್ತಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಮೇಲ್ನೋಟಕ್ಕೆ ಪಕ್ಷಪಾತ ಆಗಿರುವುದು ಕಾಣಿಸುತ್ತಿದೆ ಎಂದಿರುವ ಹೈಕೋರ್ಟ್, ಮಂಗಳೂರು ಪೊಲೀಸರು ಬಂಧಿಸಿದ್ದ 22 ಮಂದಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಹೈಕೋರ್ಟ್ ವ್ಯಕ್ತಪಡಿಸಿರುವ ಅಂಶಗಳು ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಸರ್ಕಾರದ ವಿರುದ್ಧ ಗುಡುಗಿರುವ ವಿರೋಧ ಪಕ್ಷಗಳು, ಪೊಲೀಸ್ ಆಯುಕ್ತರು ಯಾರ ಅನುಮತಿ ಮೇಲೆ 144 ಸೆಕ್ಷನ್ ಆದೇಶ ಮಾಡಿದ್ರು ಹೈಕೋರ್ಟ್ ಪ್ರತಿಭಟನಾಕಾರರ ಬಳಿ ಏನೂ ಇಲ್ಲ ಎಂದಿದೆ. ಹಾಗಾದರೆ ಅವರು ಅಮಾಯಕರಲ್ಲವೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೋರ್ಟ್ ಆದೇಶದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದೆ. ಪ್ರತಿಭಟನಾಕಾರರ ಬಳಿ ಯಾವುದೇ ಆರ್ಮ್ ವೆಪನ್ಸ್ ಇರಲಿಲ್ಲ. ಅವರ ಬಳಿ ಕಲ್ಲುಗಳೂ ಇರಲಿಲ್ಲ, ಯಾರೋ ಒಬ್ಬನ ಬಳಿ ಬಾಟೆಲ್ ಇತ್ತು, ಪೊಲೀಸರೇ ಕಲ್ಲನ್ನ ಎಸೆಯುತ್ತಿದ್ದರು ಎಂದು ಸ್ಪಷ್ಟಪಡಿಸಿದೆ.
ಸಮರ್ಥನೆ ಮಾಡಿಕೊಳ್ಳಲು ಪರದಾಡಿದ ಕಾನೂನು ಸಚಿವ ಮಾಧುಸ್ವಾಮಿ, ಎಫ್‌ಐಆರ್ ಮೇಲೆ ಹೈಕೋರ್ಟ್ ಆದೇಶ ಮಾಡಿದೆ. ನಾವಿನ್ನೂ ಚಾರ್ಜ್ ಶೀಟ್ ಹಾಕಿಲ್ಲ. ಈಗಲೇ ಕೋರ್ಟ್ ಹೇಳಿದೆ ಅಂತ ಚರ್ಚಿಸೋಕೆ ಆಗಲ್ಲ ಎಂದು ಪಲಾಯನ ಮಾಡಿದ್ದಾರೆ. ಆಗಿದ್ದರೆ ಹೈಕೋರ್ಟ್ ಆದೇಶದಲ್ಲೇ ಲೋಪ ಎನ್ನುತ್ತೀರಾ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ನಿಮ್ಮ ಅಡ್ವೋಕೇಟ್ ಸರಿಯಾಗಿ ವಾದ ಮಾಡಿಲ್ಲ. ಕಾನೂನು ಇಲಾಖೆ ವೈಫಲ್ಯ ಎನ್ನುತ್ತೀರಾ..? ಎಂದು ಕಿಚಾಯಿಸಿದ್ದಾರೆ. ಒಟ್ಟಾರೆ ಬುಧವಾರದ ಅಧಿವೇಶನದಲ್ಲಿ ಮತ್ತಷ್ಟು ಗಲಭೆ ಗದ್ದಲ ನಡೆಯುವುದು ಬಾಕಿ ಇದೆ. ಸರ್ಕಾರ ತೆಗೆದುಕೊಂಡ ನಿರ್ಧಾರ ತಪ್ಪು, ಪಕ್ಷಪಾತ ಮಾಡಿದ್ದಾರೆ ಎನಿಸುತ್ತಿದೆ ಎಂದಿರುವ ಹೈಕೋರ್ಟ್ ಹೇಳಿಕೆ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿರೋದಂತು ಸತ್ಯ.