ಈಶಾನ್ಯ ಭಾರತ, ಅದರಲ್ಲೂ ವಿಶೇಷವಾಗಿ ಅಸ್ಸಾಮಿನಲ್ಲಿ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಪ್ರತಿಭಟನೆಯ ಜ್ವಾಲೆಗಳು ಭುಗಿಲೆದ್ದಿವೆ. ಸುಲಭಕ್ಕೆ ತಣ್ಣಗಾಗುವ ಸೂಚನೆಗಳು ತೋರುತ್ತಿಲ್ಲ. ಇಪ್ಪತ್ತೈದು ವರ್ಷಗಳ ಹಿಂಸೆಯ ದಳ್ಳುರಿಗೆ ಅಸ್ಸಾಮ್ ಮತ್ತೆ ಜಾರುವ ಸಾಧ್ಯತೆಗಳು ದಟ್ಟವಾಗತೊಡಗಿವೆ.
ಈ ಅಪಾಯಗಳನ್ನು ಲೆಕ್ಕಿಸದೆ ಪೌರತ್ವ ತಿದ್ದುಪಡಿ ವಿಧೇಯಕವನ್ನು ನರೇಂದ್ರ ಮೋದಿ ಸರ್ಕಾರ ಸಂಸತ್ತಿನ ಉಭಯ ಸದನಗಳಿಂದ ಪಾಸು ಮಾಡಿಸಿಕೊಂಡು ಸಂಭ್ರಮಿಸಿದೆ. ರಾಷ್ಟ್ರಪತಿಯವರ ಅಂಕಿತ ದೊರೆತ ನಂತರ ಈ ವಿಧೇಯಕ ಶೀಘ್ರದಲ್ಲೇ ಕಾಯಿದೆಯಾಗಿ ಜಾರಿಯಾಗಲಿದೆ. ಜೊತೆ ಜೊತೆಗೆ ಎನ್.ಆರ್.ಸಿ.ಯನ್ನು ದೇಶಾದ್ಯಂತ ಜಾರಿ ಮಾಡುವ ತಮ್ಮ ನಿರ್ಧಾರ ಅಚಲವೆಂದು ಸಾರಿದ್ದಾರೆ ಗೃಹಮಂತ್ರಿ ಅಮಿತ್ ಶಾ.
ಎನ್.ಆರ್.ಸಿ. ಮತ್ತು ಪೌರತ್ವ ಕಾಯಿದೆ ತಿದ್ದುಪಡಿ ಎರಡನ್ನೂ ಒಂದು ಉದ್ದೇಶ ಸಾಧನೆಗೆಂದು ಪರಸ್ಪರ ಪೂರಕ ಅಸ್ತ್ರಗಳಂತೆ ಪ್ರಯೋಗ ಆಗಲಿವೆ. ಎನ್.ಆರ್.ಸಿ.ಯು ರಾಜ್ಯವಿಲ್ಲದ ಪ್ರಜೆಗಳನ್ನು ಸೃಷ್ಟಿಸಲಿದೆ. ಅವರು ಪಾಲಿಸುವ ಧರ್ಮವನ್ನೇ ಅವರ ಈ ಅತಂತ್ರ ಸ್ಥಿತಿಗೆ ಕಾರಣ ಮಾಡಲಾಗಿದೆ. ಇವರು ಮುಸ್ಲಿಮರು. ಎರಡನೆಯದಾಗಿ ಅದೇ ಧರ್ಮದ ಆಧಾರದ ಮೇಲೆ ಹಿಂದುಗಳೆಂಬ ಕಾರಣಕ್ಕಾಗಿ ರಾಜ್ಯವಿಲ್ಲದ ಪ್ರಜೆಗಳಿಗೆ ರಾಜ್ಯವನ್ನು ಅರ್ಥಾತ್ ಪೌರತ್ವವನ್ನು ನೀಡಲು ಪೌರತ್ವ ಕಾಯಿದೆ ತಿದ್ದುಪಡಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಇದು ಕೇವಲ ಅಕ್ರಮ ಮುಸ್ಲಿಂ ವಲಸೆಗಾರರ ಪ್ರಶ್ನೆಗೆ ಸೀಮಿತವಾಗಿ ಉಳಿಯುವುದಿಲ್ಲ. ಅಕ್ರಮ ವಲಸೆಕೋರರ ನೆವದಲ್ಲಿ ಎನ್.ಆರ್.ಸಿ ಮತ್ತು ಪೌರತ್ವ ತಿದ್ದುಪಡಿ ಕ್ರಮವು ಭಾರತದ ಮುಸ್ಲಿಂ ಪೌರರ ತಲೆ ಮೇಲೆ ಅಸುರಕ್ಷತೆಯ ಕತ್ತಿಯಾಗಿ ನೇತಾಡಲಿದೆ. ‘ನಾವು’ ಮತ್ತು ‘ಅವರು’ ಎಂಬ ಕಥನವನ್ನು ಬಲಿಷ್ಠಗೊಳಿಸಲಿದೆ. ಈಗಾಗಲೆ ಭಾರತೀಯ ಮುಸ್ಲಿಮ್ ಪೌರರು ಬಹುಸಂಖ್ಯಾತ ಪೌರರಿಗೆ ಸಮಾನವಲ್ಲ ಎಂಬ ಭಾವನೆಯನ್ನು ಹತ್ತು ಹಲವು ರೀತಿಯ ಭೇದ ಭಾವಗಳು ಮತ್ತು ಬೆದರಿಕೆಗಳಿಂದ ತುಂಬಲಾಗುತ್ತಿದೆ. ಈಗಾಗಲೆ ಸಾರ್ವಜನಿಕ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯ ಕುಸಿಯುತ್ತ ನಡೆದಿದೆ. ಅವರ ಮೇಲೆ ಹರಿಯಬಿಡಲಾಗುತ್ತಿರುವ ಹಿಂಸೆ ಮತ್ತು ಹಿಂಸೆ ನಡೆಸಿದವರಿಗೆ ದೊರೆಯುತ್ತಿರುವ ರಾಜಕೀಯ ರಕ್ಷಣೆ ಮತ್ತು ಸಾಮಾಜಿಕ ಸಮ್ಮಾನ ಏನನ್ನು ಸೂಚಿಸುತ್ತದೆ? ಅವರ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯ ಸೂಚ್ಯಂಕಗಳ ಕುರಿತು ನ್ಯಾಯಮೂರ್ತಿ ಸಚ್ಚರ್ ಆಯೋಗವು ಬಹಳ ಹಿಂದೆಯೇ ಗಮನ ಸೆಳೆದಿದೆ.
ದೇಶವಿಭಜನೆಯ ಹಳೆಯ ದ್ವೇಷ, ಆತಂಕ, ಭಯ, ಗಾಯ ಅಪನಂಬಿಕೆಗಳನ್ನು ಪೌರತ್ವ ತಿದ್ದುಪಡಿ ಮತ್ತು ಎನ್.ಆರ್.ಸಿ.ಗಳು ಪುನಃ ಕೆದಕಿವೆ. ಪೌರತ್ವವನ್ನು ಹಲವು ದರ್ಜೆಗಳಲ್ಲಿ ವಿಭಾಗಿಸಿ ಕನಿಷ್ಠ ಮತ್ತು ಶ್ರೇಷ್ಠತೆಯ ಅದೃಶ್ಯ ಮೊಹರುಗಳನ್ನು ಒತ್ತುವ ಹುನ್ನಾರ ಹೊಂದಿದೆ. ಪೌರತ್ವವು ಹಕ್ಕುಗಳು ಮತ್ತು ವಿಶೇಷಾಧಿಕಾರಗಳಿಗೆ ಸಂಬಂಧಿಸಿದ್ದು. ಸಮಾನ ಪೌರತ್ವ ಎಂಬ ಸಾಂವಿಧಾನಿಕ ತತ್ವ ಮಸಕಾಗಲಿದೆ.
ಭಾರತದಲ್ಲಿ ಜನಿಸಿದವರೆಲ್ಲರಿಗೂ ದೇಶದ ಪೌರತ್ವದ ಅರ್ಹತೆಯಿತ್ತು. ಬಾಂಗ್ಲಾದೇಶೀಯರ ಅಕ್ರಮ ವಲಸೆಯ ಹಿನ್ನೆಲೆಯಲ್ಲಿ ಈ ಕಾಯಿದೆಗೆ 1987ರಲ್ಲಿ ತಿದ್ದುಪಡಿ ತರಲಾಯಿತು. ಅದರ ಪ್ರಕಾರ ತಂದೆ ತಾಯಿಯ ಪೈಕಿ ಒಬ್ಬರಾದರೂ ಭಾರತೀಯ ಆಗಿರಬೇಕಿತ್ತು. 2004ರಲ್ಲಿ ಮಾಡಲಾದ ಮತ್ತೊಂದು ತಿದ್ದುಪಡಿಯ ಪ್ರಕಾರ ತಂದೆ ತಾಯಿಯ ಪೈಕಿ ಒಬ್ಬರು ಭಾರತೀಯ ಆಗಿರಬೇಕಿತ್ತು, ಆದರೆ ಮತ್ತೊಬ್ಬರು ಅಕ್ರಮ ವಲಸೆ ಬಂದವರಾಗಿರಕೂಡದು ಎಂದು ವಿಧಿಸಲಾಯಿತು.
ಅಸ್ಸಾಮಿನ ಮೊಟ್ಟ ಮೊದಲ ರಾಷ್ಟ್ರೀಯ ಪೌರತ್ವ ನೋಂದಣಿ ಯಾದಿಯನ್ನು 1951ರಷ್ಟು ಹಿಂದೆಯೇ ತಯಾರಿಸಲಾಗಿತ್ತು. ಕಾರಣಾಂತರಗಳಿಂದ ಮೂಲೆ ಗುಂಪಾಗಿತ್ತು. ಅಸ್ಸಾಮ್ ಒಪ್ಪಂದದ ಅಗತ್ಯಗಳ ಪೂರೈಸಲೆಂದು ಎನ್.ಆರ್.ಸಿ.ಯನ್ನು ಪರಿಷ್ಕರಿಸಬೇಕೆಂಬ ಸಂಗತಿ 2005ರಲ್ಲಿ ಅಖಿಲ ಅಸ್ಸಾಮ್ ವಿದ್ಯಾರ್ಥಿ ಒಕ್ಕೂಟ ಮತ್ತು ಪ್ರಧಾನಮಂತ್ರಿ ಮನಮೋಹನಸಿಂಗ್ ನಡುವಣ ಸಭೆಯಲ್ಲಿ ಮೇಲೆ ತೇಲಿತ್ತು.
ಎನ್.ಆರ್.ಸಿ. ಯಾದಿಯ ಪರಿಷ್ಕಾರ ಕೋರಿ 2009ರಲ್ಲಿ ಅಸ್ಸಾಮಿನ ಸ್ವಯಂಸೇವಾ ಸಂಸ್ಥೆಯೊಂದು ಸುಪ್ರೀಮ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಕೋರಿಕೆಯನ್ನು ಎತ್ತಿ ಹಿಡಿದ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿತು. 2015ರಲ್ಲಿ ಎನ್.ಆರ್.ಸಿ. ಪರಿಷ್ಕರಣೆಯ ಕಸರತ್ತು ಅಸ್ಸಾಮಿನಲ್ಲಿ ಆರಂಭ ಆಯಿತು. 1971ರ ಮಾರ್ಚ್ 24ರ ಮೊದಲು ತಾವಾಗಲೀ, ತಮ್ಮ ಪೂರ್ವಜರಾಗಲಿ ಭಾರತದಲ್ಲಿ ವಾಸಿಸಿದ್ದನ್ನು ರುಜುವಾತುಪಡಿಸುವ ದಾಖಲೆ ದಸ್ತಾವೇಜುಗಳಿದ್ದವರನ್ನು ಯಾದಿಗೆ ಸೇರಿಸುವುದು ಈ ಕಸರತ್ತಿನ ಉದ್ದೇಶವಾಗಿತ್ತು. ದಾಖಲೆ ದಸ್ತಾವೇಜುಗಳನ್ನು ಜತನ ಮಾಡಿ ಇಟ್ಟುಕೊಳ್ಳುವ ಸಂಸ್ಕೃತಿ ಬಹುತೇಕ ಇಲ್ಲದ ಸಮಾಜ ನಮ್ಮದು. ವಿಶೇಷವಾಗಿ ಪ್ರತಿ ವರ್ಷ ಪ್ರವಾಹ ಎದುರಿಸುವ ಅಸ್ಸಾಮಿನಲ್ಲಿ ಗುಡಿಸಿಲುಗಳು, ಮಣ್ಣಿನ ಮನೆಗಳಲ್ಲಿ ವಾಸಿಸುವ ಬಡಜನ ತಮ್ಮನ್ನೇ ಕಾಪಾಡಿಕೊಳ್ಳುವುದು ದುಸ್ತರವಾಗಿರುವಾಗ ದಾಖಲೆಗಳನ್ನು ಹೇಗೆ ಇಟ್ಟುಕೊಂಡಿದ್ದಾರು?
ರಾಷ್ಟ್ರೀಯ ಪೌರತ್ವ ನೋಂದಣಿ ಯಾದಿ (ಎನ್.ಆರ್.ಸಿ.) ವಿಷಯದ ಆಧಾರದಿಂದಲೇ ಬಿಜೆಪಿ 2016ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಗಳನ್ನು ಗೆದ್ದಿತ್ತು. ಅಧಿಕಾರ ಹಿಡಿದ ತಕ್ಷಣವೇ ಎನ್.ಆರ್.ಸಿ. ತಯಾರಿಕೆಗೆ ರಭಸದ ಚಾಲನೆ ನೀಡಿತು ಕೂಡ. ಆದರೆ ಏಳು ತಿಂಗಳ ಹಿಂದೆ ಹೊರಬಿದ್ದ ಎನ್.ಆರ್.ಸಿ.ಯ ಅಂತಿಮ ಯಾದಿಯು ಅಕ್ರಮ ವಲಸಿಗರ ಮಿಥ್ಯೆಯ ಗುಳ್ಳೆಯನ್ನು ಒಡೆದಿತ್ತು. ಅಮಿತ್ ಶಾ ಅವರು ಹೇಳಿದ್ದ 40 ಲಕ್ಷ ನುಸುಳುಕೋರರು ಪತ್ತೆಯಾಗಲಿಲ್ಲ. ಎನ್.ಆರ್.ಸಿ. ಕರಡು ಯಾದಿಯಲ್ಲಿ 40 ಲಕ್ಷ ಅಸ್ಸಾಮ್ ನಿವಾಸಿಗಳ ಹೆಸರುಗಳು ಬಿಟ್ಟು ಹೋಗಿದ್ದವು. ಆದರೆ ಈ ನಿವಾಸಿಗಳು ವಿಶೇಷ ನ್ಯಾಯಾಧಿಕರಣಗಳಿಗೆ ಮೇಲ್ಮನವಿಗಳನ್ನು ಹಾಕಿಕೊಂಡರು. ಮೇಲ್ಮನವಿಗಳು ಇತ್ಯರ್ಥ ಆದ ನಂತರ ಈ ಸಂಖ್ಯೆ ಅರ್ಧಕ್ಕರ್ಧ ತಗ್ಗಿತು. ಅಂತಿಮ ಯಾದಿಯು ಹೊರಗಿಟ್ಟವರ ಸಂಖ್ಯೆ 19 ಲಕ್ಷ. ಈ ಪೈಕಿ ಏಳು ಲಕ್ಷ ಮುಸಲ್ಮಾನರು ಮತ್ತು 12 ಲಕ್ಷ ಹಿಂದುಗಳು ಎನ್ನಲಾಗಿದೆ.
ಎನ್.ಆರ್.ಸಿ.ಗಾಗಿ ಪಟ್ಟು ಹಿಡಿದ ಬಿಜೆಪಿಯ ಕಾರಣದಿಂದಲೇ ಹಿಂದುಗಳು ಈ ಅತಂತ್ರ ಸ್ಥಿತಿ ಎದುರಿಸಬೇಕಾಗಿ ಬಂದಿದೆ. ಇತರರ ಜೊತೆಗೆ ಅವರನ್ನೂ ಬಂಧಿಸಲಾಗುವುದು, ವಿದೇಶೀಯರು ಎಂಬ ಹಣೆಪಟ್ಟಿಯನ್ನು ಅವರಿಗೂ ಹಚ್ಚಲಾಗುವುದು. ಇಂತಹ ಹಿಂದುಗಳನ್ನು ಸೆರೆಯಾಳುಗಳ ಶಿಬಿರಕ್ಕೆ ಕಳಿಸಲಾಗುವುದೇ, ಇಲ್ಲವಾದರೆ ಇವರ ಗತಿಯೇನು? ಮುಸಲ್ಮಾನರನ್ನು ಓಡಿಸುತ್ತೇವೆಂದು ಎನ್.ಆರ್.ಸಿ.ಗೆ ಆಗ್ರಹ ಮಾಡದೆ ಹೋಗಿದ್ದರೆ ಹಿಂದುಗಳ ಮೇಲೆ ಇಂತಹ ವಿಪತ್ತು ಎರಗುತ್ತಿರಲಿಲ್ಲ ಎಂಬ ಟೀಕೆಯನ್ನು ಬಿಜೆಪಿ ಎದುರಿಸಬೇಕಾಗಿ ಬಂತು. ಎನ್.ಆರ್.ಸಿ. ಕಸರತ್ತನ್ನು ಏರುದನಿಯಲ್ಲಿ ಬೆಂಬಲಿಸಿದ್ದ ಬಿಜೆಪಿಗೆ ಈ ಅಂಕಿ ಅಂಶಗಳು ಗಾಬರಿ ಹುಟ್ಟಿಸಿದವು.
ಭಾರತೀಯ ಸೇನೆಯಲ್ಲಿ, ಗಡಿ ಭದ್ರತಾ ಪಡೆಗಳಲ್ಲಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದವರು, ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ಸೈಯೆದಾ ಅನ್ವರಾ ತೈಮೂರ್ ಅವರ ರಕ್ತಸಂಬಂಧಿಗಳ ಹೆಸರುಗಳು ಎನ್.ಆರ್.ಸಿ. ಯಾದಿಯಿಂದ ಬಿಟ್ಟು ಹೋಗಿವೆ. ಮಕ್ಕಳ ಪೌರತ್ವದ ದಸ್ತಾವೇಜುಗಳನ್ನು ಒಪ್ಪಿಕೊಂಡು, ತಂದೆ ತಾಯಿಯರ ಪೌರತ್ವದ ದಾವೆಗಳನ್ನು ತಿರಸ್ಕರಿಸಿರುವ ಹಲವಾರು ಪ್ರಕರಣಗಳಿವೆ.
ಅಸ್ಸಾಮಿನಲ್ಲಿ ಎನ್.ಆರ್.ಸಿ.ಯ ನಂತರ 1145 ಮಂದಿಯನ್ನು ಆರು ಸೆರೆಯಾಳು ಶಿಬಿರಗಳಲ್ಲಿ ಇರಿಸಲಾಗಿದೆ. ಈ ಪೈಕಿ 335 ಮಂದಿ ಮೂರು ವರ್ಷಗಳಿಂದ ಈ ಶಿಬಿರಗಳಲ್ಲಿದ್ದಾರೆ. ವಿದೇಶೀಯರು ಎಂದು ಸಾರಲಾದ 25 ಮಂದಿ ಶಿಬಿರಗಳಲ್ಲೇ ಸತ್ತಿದ್ದಾರೆ. ಪೌರತ್ವ ಸಾಬೀತು ಮಾಡುವ ಕಾಗದ ಪತ್ರಗಳಿಲ್ಲವೆಂದು ಹೆದರಿ 33 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾನೇ ಸೃಷ್ಟಿಸಿಕೊಂಡ ಈ ಬಿಕ್ಕಟ್ಟಿನಿಂದ ಹೊರಬರಲು 2019ರ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕವನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಅಸ್ಸಾಮಿನ ಎನ್.ಆರ್.ಸಿ.ಪಟ್ಟಿಯಿಂದ ಹೊರಗುಳಿದಿರುವ ಹಿಂದುಗಳ ಸಮಸ್ಯೆ ತೀರುತ್ತದೆ. ಅವರು ಭಾರತೀಯ ಪೌರರಾಗಲಿದ್ದಾರೆ. ಆದರೆ ಹೊರಗುಳಿದಿರುವ ಮುಸಲ್ಮಾನರು ಸೆರೆಯಾಳುಗಳ ಶಿಬಿರಗಳ ಪಾಲಾಗಬೇಕಿದೆ.
ಭಾರತದ ಜಾತ್ಯತೀತ ಜನತಾಂತ್ರಿಕ ಸಂವಿಧಾನಕ್ಕೆ ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್.ಆರ್.ಸಿ. ಬಹುದೊಡ್ಡ ಬೆದರಿಕೆಯನ್ನು ಒಡ್ಡಿದ್ದು, ಇವುಗಳ ವಿರುದ್ಧ ದೇಶಾದ್ಯಂತ ನಾಗರಿಕ ಅಸಹಕಾರ ಆಂದೋಲನ ಆರಂಭ ಆಗಬೇಕಿದೆ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಹರ್ಷಮಂದಿರ್. ಈ ಹೋರಾಟದ ರೂಪುರೇಷೆಗಳನ್ನ ಜನರೇ ತೀರ್ಮಾನಿಸಬೇಕು. ಆದರೆ ತಾವು ಅದಕ್ಕಾಗಿ ಕಾಯುವುದಿಲ್ಲ. ಯಾರ ಪೌರತ್ವವನ್ನು ಸವಾಲಿಗೆ ಒಳಪಡಿಸಲಾಗುತ್ತಿದೆಯೋ ಅಂತಹ ಜನರ ಜೊತೆ ನಿಲ್ಲುವುದಾಗಿ ಸಾರಿದ್ದಾರೆ. ಮೊದಲು ತಾವು ತಮ್ಮನ್ನು ಮುಸ್ಲಿಂ ಎಂದು ಘೋಷಿಸಿಕೊಂಡು, ಎನ್.ಆರ್.ಸಿ.ಯನ್ನು ಜಾರಿಗೊಳಿಸಿದಾಗ ಯಾವುದೇ ದಾಖಲೆ ದಸ್ತಾವೇಜುಗಳನ್ನು ಹಾಜರುಪಡಿಸದೆ ಅದನ್ನು ಬಹಿಷ್ಕರಿಸುವುದಾಗಿಯೂ ಘೋಷಿಸಿದ್ದಾರೆ. ದಾಖಲೆ ದಸ್ತಾವೇಜುಗಳಿಲ್ಲದ ತಮ್ಮ ಮುಸ್ಲಿಂ ಸೋದರ ಸೋದರಿಯರಿಗೆ ಕೊಡಲಾಗುವ ಶಿಕ್ಷೆಯನ್ನು (ಸೆರೆಯಾಳು ಶಿಬಿರವಾಸ ಇಲ್ಲವೇ ಪೌರತ್ವ ಹಕ್ಕುಗಳ ರದ್ದು) ತಮಗೂ ನೀಡುವಂತೆ ಆಗ್ರಹಪಡಿಸುವುದಾಗಿ ಹೇಳಿದ್ದಾರೆ.
ಪೌರತ್ವ ಕಾಯಿದೆ ತಿದ್ದುಪಡಿ ನ್ಯಾಯಾಂಗದ ಪರೀಕ್ಷೆಯನ್ನು ಪಾಸು ಮಾಡುವುದು ಕಷ್ಟ ಎನ್ನುತ್ತಾರೆ ಸಂವಿಧಾನ ತಜ್ಞರು. ಈ ವಿಧೇಯಕವು ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದ 14, 15ನೆಯ ಅನುಚ್ಛೇದಗಳ ಉಲ್ಲಂಘನೆ. ಭಾರತದ ಸರಹದ್ದಿನೊಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಮತ್ತು ಕಾನೂನಿನ ಸಮಾನ ಸಂರಕ್ಷಣೆಯನ್ನು ಸರ್ಕಾರವು ನಿರಾಕರಿಸುವಂತಿಲ್ಲ ಎನ್ನುತ್ತದೆ 14ನೆಯ ಅನುಚ್ಛೇದ. ಯಾವುದೇ ವ್ಯಕ್ತಿಯನ್ನು ಧರ್ಮ, ಜನಾಂಗ, ಜಾತಿಯ ಆಧಾರದ ಮೇಲೆ ಭೇದ ಭಾವದಿಂದ ಕಾಣುವುದನ್ನು 15ನೆಯ ಅನುಚ್ಚೇದ ಪ್ರತಿಬಂಧಿಸಿದೆ. ಧಾರ್ಮಿಕ ಅಸ್ಮಿತೆಯನ್ನು ಪೌರತ್ವದಂತಹ ಮೂಲಭೂತ ಸಂಗತಿಯ ನಿರ್ಣಯದ ಮಾನದಂಡವನ್ನಾಗಿ ಗೊತ್ತು ಮಾಡುವ ಈ ನಡೆ ಪ್ರಶ್ನಾರ್ಹ.
ಒಂದು ವೇಳೆ ನ್ಯಾಯಾಂಗದ ಪರೀಕ್ಷೆಯಲ್ಲಿ ಈ ವಿಧೇಯಕ ಫೇಲಾದರೆ ಮೋಶಾ ಜೋಡಿ ಪರ್ಯಾಯ ಯೋಜನೆಯನ್ನು (ಪ್ಲ್ಯಾನ್ ಬಿ) ನಿಶ್ಚಿತವಾಗಿಯೂ ಸಿದ್ಧಪಡಿಸಿ ಇಟ್ಟುಕೊಂಡಿರುತ್ತಾರೆ. ಕಾಲಾನುಕ್ರಮದಲ್ಲಿ ಅಗತ್ಯ ಬಿದ್ದರೆ ಅದರ ಅನಾವರಣ ಆಗಲೇಬೇಕಿದೆ.