ಮೂರು ದಶಕಗಳಿಂದ ಪರಿಸರಾಸಕ್ತರ ಪ್ರಬಲ ವಿರೋಧದ ಕಾರಣಕ್ಕೆ ತಡೆಹಿಡಿಯಲ್ಪಿಟ್ಟಿದ್ದ ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ನಿರ್ಮಾಣ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ಶುಕ್ರವಾರ ಅನುಮತಿ ನೀಡಿದೆ. ಸುಮಾರು 600 ಎಕರೆ ಮಳೆಕಾಡಿನ ಬರೋಬ್ಬರಿ ಎರಡು ಲಕ್ಷ ಮರಗಳನ್ನು ಬಲಿತೆಗೆದುಕೊಳ್ಳುವ ಈ ಯೋಜನೆಗೆ ಹಸಿರು ನಿಶಾನೆ ತೋರುವ ಆ ಮೂಲಕ ಶನಿವಾರದ ವಿಶ್ವ ಅರಣ್ಯ ದಿನದ ಆಚರಣೆಗೆ ವನ್ಯಜೀವಿ ಮಂಡಳಿ ತನ್ನದೇ ವಿಶಿಷ್ಟ ಕೊಡುಗೆ ನೀಡಿದೆ.
ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟ ವ್ಯಾಪ್ತಿಗೆ ಸೇರಿರುವ ಉತ್ತರ ಕನ್ನಡ ಜಿಲ್ಲೆಯ ದುರ್ಗಮ ಅರಣ್ಯದ ನಡುವೆ ಹಾದುಹೋಗುವ ಈ ರೈಲು ಮಾರ್ಗ ನಿರ್ಮಾಣದ ವಿಷಯದಲ್ಲಿ ಪ್ರಮುಖ ಆಕ್ಷೇಪವಿದ್ದದ್ದೇ ಅದು ವನ್ಯಜೀವಿಗಳು ಮತ್ತು ಪರಿಸರದ ಮೇಲೆ ಅಪಾರ ಪರಿಣಾಮ ಬೀರುತ್ತದೆ, ಜೀವವೈವಿಧ್ಯ ನಾಶಕ್ಕೆ ಕಾರಣವಾಗುತ್ತದೆ, ಪರಿಸರ ಸಮತೋಲನಕ್ಕೆ ಪೆಟ್ಟು ನೀಡುತ್ತದೆ ಎಂಬುದು. ಆದರೆ, ವಿಪರ್ಯಾಸವೆಂದರೆ, ಯಾವ ಮಂಡಳಿ ಪರಿಸರದ ಪರ ವಕಾಲತು ವಹಿಸಬೇಕಾಗಿತ್ತೋ, ವನ್ಯಜೀವಿಗಳ ಪರ ಗಟ್ಟಿಯಾಗಿ ನಿಲ್ಲಬೇಕಿತ್ತೋ ಅದೇ ಮಂಡಳಿಯೇ ಅನಾಹುತಕಾರಿ ಯೋಜನೆಗೆ ಅನುಮೋದನೆ ನೀಡಿದೆ!
ಮೂಲಗಳ ಪ್ರಕಾರ, ಶುಕ್ರವಾರದ ಸಭೆಯಲ್ಲಿ ಹಾಜರಿದ್ದ ಮಂಡಳಿಯ ಸದಸ್ಯರಾದ ಕೆಲವು ಪರಿಸರವಾದಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸದಸ್ಯರಾದ ಶಿವಪ್ರಕಾಶ್, ಮಲ್ಲೇಶಪ್ಪ ಮತ್ತಿತರರು ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಸಮ್ಮತಿಸಿಲ್ಲ. ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ) ಕೂಡ ಯೋಜನೆ ಅನುಷ್ಠಾನಕ್ಕೆ ವಿರೋಧಿಸಿದೆ. ಹಾಗಾಗಿ ಅಪಾರ ಪರಿಸರ ಹಾನಿಯ ಯೋಜನೆಗೆ ಮಂಡಳಿ ಒಪ್ಪಿಗೆ ಕೊಡಬಾರದು ಎಂದು ತಮ್ಮ ವಿರೋಧ ದಾಖಲಿಸಿದರು. ಜೊತೆಗೆ ಕಾಂಗ್ರೆಸ್ ಶಾಸಕಿ ಹಾಗೂ ಮಂಡಳಿ ಸದಸ್ಯೆ ಸೌಮ್ಯ ರೆಡ್ಡಿ ಕೂಡ ತಮ್ಮ ವಿರೋಧ ದಾಖಲಿಸಿ ತಮ್ಮ ಸದಸ್ವತ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆಯ ವಿಷಯವನ್ನು ಸೌಮ್ಯ ರೆಡ್ಡಿ ಅವರು ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಯೋಜನೆ ವಿರೋಧಿ ಜನಾಭಿಪ್ರಾಯ ಮೂಡಿಸುವ ಯತ್ನವನ್ನೂ ಮಾಡಿದ್ದಾರೆ.

ಆದರೆ, ವಿಪರ್ಯಾಸವೆಂದರೆ; ಉತ್ತರಕನ್ನಡ ಜಿಲ್ಲೆಯ ಅರಣ್ಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಸಮಸ್ಯೆಗಳ ಬಗ್ಗೆ, ಮತ್ತು ಸಂರಕ್ಷಣೆಯ ಅಗತ್ಯದ ಬಗ್ಗೆ ನಾಲ್ಕಾರು ವರದಿಗಳನ್ನು ನೀಡಿರುವ ಐಐಎಸ್ಸಿ ವಿಜ್ಞಾನಿಗಳೇ ನೀಡಿದ ಒಂದು ವರದಿಯನ್ನು ಆಧಾರವಾಗಿಟ್ಟುಕೊಂಡೇ ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಿವರಾಮ್ ಹೆಬ್ಬಾರ್, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಮುಂತಾದವರು ಯೋಜನೆಗೆ ಅನುಮೋದನೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ! ಅದೂ ಮಂಡಳಿಯ ಒಟ್ಟು 13 ಸದಸ್ಯರ ಪೈಕಿ ಕೇವಲ ಐವರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಆ ಪೈಕಿ ಬಹುತೇಕ ಮಂದಿ ಅನುಮೋದನೆ ನೀಡಲು ವಿರೋಧ ವ್ಯಕ್ತಪಡಿಸಿದರು. ಆದರೂ ಮಂಡಳಿಯ ಸದಸ್ಯರಲ್ಲದ, ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವ ರೀತಿಯಲ್ಲೂ ಸಂಬಂಧಪಡದ ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಉತ್ತರಕರ್ನಾಟಕ ಭಾಗದ ಕೆಲವು ಜನಪ್ರತಿನಿಧಿಗಳ ಬೆಂಬಲದೊಂದಿಗೆ ಸಭೆ ಈ ನಿರ್ಣಯ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ!
ಈ ಹಿಂದೆ ಮೂರು ಬಾರಿ ಈ ಯೋಜನೆಗೆ ವಿರೋಧಿಸಿದ್ದ ವನ್ಯಜೀವಿ ಮಂಡಳಿ, ಈ ಬಾರಿ ಕೂಡ ಒಪ್ಪಿಗೆ ನೀಡುವುದಿಲ್ಲ ಎಂಬ ಸುಳಿವು ಮೊದಲೇ ಮುಖ್ಯಮಂತ್ರಿಗಳಿಗೆ ಇತ್ತು. ಏಕೆಂದರೆ, ಕಳೆದ ವಾರ(ಮಾ.9ರಂದು) ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದ್ದರೂ ಮಂಡಳಿಯ ಸದಸ್ಯರ ವಿರೋಧದ ಹಿನ್ನೆಲೆಯಲ್ಲಿ ಆ ಬಗ್ಗೆ ಹೆಚ್ಚಿನ ಚರ್ಚೆ ನಡೆಸದೆ ಬದಿಗೆ ಸರಿಸಲಾಗಿತ್ತು. ಆದರೆ, ಆ ಬಳಿಕ ಜಗದೀಶ್ ಶೆಟ್ಟರ್ ಮತ್ತು ಆರ್ ವಿ ದೇಶಪಾಂಡೆ ಸೇರಿದಂತೆ ಆ ಭಾಗದ ಹಲವು ಪ್ರಭಾವಿ ನಾಯಕರು ಸಿಎಂ ಮೇಲೆ ಒತ್ತಡ ಹೇರಿ ಒಂದೇ ವಾರದಲ್ಲಿ ಈ ಯೋಜನೆಗೆ ಅನುಮತಿ ಪಡೆಯುವ ಏಕೈಕ ಉದ್ದೇಶದಿಂದ ಮತ್ತೊಂದು ಸಭೆ ಕರೆಯುವಂತೆ ಮಾಡಿದ್ದರು. ಅದೂ ಕೂಡ ಸ್ವತಃ ಅರಣ್ಯ ಸಚಿವ ಆನಂದ್ ಸಿಂಗ್ ಅನುಪಸ್ಥಿತಿಯಲ್ಲಿ ಸಭೆ ನಡೆದು, ಪರಿಸರ ಮಾರಕ ಯೋಜನೆಗೆ ಅಸ್ತು ಎನ್ನಲಾಗಿದೆ! ಆ ಹಿನ್ನೆಲೆಯಲ್ಲಿ ಸಚಿವರ ಗೈರು ಹಾಜರಿ ಕೂಡ ಗಣಿ ಲಾಬಿಯ ಭಾಗವೇ ಎಂಬ ಅನುಮಾನವೆದ್ದಿದೆ.
ಒಟ್ಟು 168 ಕಿ.ಮೀ ಉದ್ದದ ಹುಬ್ಬಳ್ಳಿ ಮತ್ತು ಅಂಕೋಲ ನಡುವಿನ ಈ ರೈಲು ಮಾರ್ಗದಿಂದ ರಾಜ್ಯದ ಉತ್ತರಕರ್ನಾಟಕ ಮತ್ತು ಮಧ್ಯಕರ್ನಾಟಕ ಭಾಗಕ್ಕೆ ಕರಾವಳಿ ಪ್ರದೇಶದ ಬಂದರುಗಳ ನೇರ ಸಂಪರ್ಕ ಸಾಧ್ಯವಾಗಲಿದ್ದು, ಅದು ಆ ಭಾಗದ ಉದ್ಯಮ- ವ್ಯವಹಾರ- ಕೃಷಿ ಸೇರಿದಂತೆ ಒಟ್ಟಾರೆ ಅಭಿವೃದ್ಧಿಗೆ ಪೂರಕ ಎಂಬುದು ಯೋಜನೆಗಾಗಿ ಲಾಬಿ ಮಾಡುತ್ತಿರುವವರ ವಾದ. ಆದರೆ, ಸುಮಾರು 3750 ಕೋಟಿ ರೂ. ಮೊತ್ತದ ಭಾರೀ ಯೋಜನೆಯ ಹಿಂದೆ ಗುತ್ತಿಗೆದಾರರ ಸ್ವಹಿತಾಸಕ್ತಿ, ಸ್ವತಃ ಅರಣ್ಯ ಸಚಿವರ ಮುಖ್ಯ ಉದ್ಯಮ ಚಟುವಟಿಕೆಯಾಗಿರುವ ಗಣಿಗಾರಿಕೆಗೆ ಬಂದರು ಸಂಪರ್ಕದ ಉದ್ದೇಶ, ಬರೋಬ್ಬರಿ 2 ಲಕ್ಷ ಸಂಖ್ಯೆಯ ಸಾವಿರಾರು ಕೋಟಿ ಮೌಲ್ಯದ ಮರ ಕಬಳಿಕೆಯ ಹುನ್ನಾರ ಸೇರಿದಂತೆ ಹತ್ತು ಹಲವು ಸ್ವಾರ್ಥದ, ವೈಯಕ್ತಿಕ ಲಾಭದ ಮತ್ತು ರಾಜ್ಯದ ಸಂಪತ್ತು ಲೂಟಿಯ ಲೆಕ್ಕಾಚಾರಗಳು ಯೋಜನೆಯ ಕುರಿತ ಈ ಅಪಾರ ಆಸಕ್ತಿಯ ಹಿಂದಿವೆ ಎಂಬುದು ಪರಿಸರವಾದಿಗಳ ಆತಂಕ.

ತಿಂಗಳುಗಳ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಮತ್ತು ಸ್ವತಃ ಹಲವು ಅರಣ್ಯ ಅಕ್ರಮ ಪ್ರಕರಣಗಳನ್ನು ಎದುರಿಸುತ್ತಿರುವ ಬಳ್ಳಾರಿಯ ಗಣಿ ಸಾಮ್ರಾಜ್ಯದ ಭಾಗವಾಗಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದಾಗ ನಾಡಿನ ಉದ್ದಗಲಕ್ಕೆ ಪರಿಸರವಾದಿಗಳಷ್ಟೇ ಅಲ್ಲದೆ, ನೆಲ-ಜಲ-ವನದ ಕಾಳಜಿಯ ಜನ ವಿರೋಧ ವ್ಯಕ್ತಪಡಿಸಿದ್ದರು. ಆತಂಕಗೊಂಡಿದ್ದರು. ಅಂತಹ ವಿರೋಧ ಮತ್ತು ಆತಂಕದ ನಿಜ ಕಾರಣವೇನು ಎಂಬುದಕ್ಕೆ ಇದೀಗ ಪರಿಸರ ಅನಾಹುತಕಾರಿ ಯೋಜನೆಗೆ ಹೀಗೆ ಏಕಪಕ್ಷೀಯವಾಗಿ, ಒಂದು ರೀತಿಯ ಬಲವಂತದ ಒಪ್ಪಿಗೆ ಪಡೆದಿರುವುದೇ ಉತ್ತರ. ಹಿತಾಸಕ್ತಿ ಸಂಘರ್ಷ ಎಂಬುದು ಹೇಗೆ ನಾಡಿನ ನೈಜ ಹಿತಾಸಕ್ತಿಗೆ ಪೆಟ್ಟು ಕೊಡುತ್ತದೆ ಎಂಬುದಕ್ಕೂ ಈ ಪ್ರಕರಣದ ನಿದರ್ಶನ.
ಹತ್ತು ದಿನಗಳ ಹಿಂದೆ ಕೈಬಿಟ್ಟಿದ್ದ ಯೋಜನೆಗೆ ಮತ್ತೆ ಒಪ್ಪಿಗೆ ಪಡೆಯಲು ದಿಢೀರ್ ಸಭೆ ಕರೆದು, ಹಾಜರಿದ್ದ ಬೆರಳೆಣಿಕೆ ಸದಸ್ಯರ ಪೈಕಿ ಕೂಡ ಬಹುತೇಕರ ವಿರೋಧದ ಹೊರತಾಗಿಯೂ ಸಿಎಂ ಮತ್ತು ಕೆಲವು ಪ್ರಭಾವಿ ಸಚಿವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಯೋಜನೆಯ ಹಿಂದೆ ಇರಬಹುದಾದ ಲಾಬಿಗಳ ಒತ್ತಡಕ್ಕೆ ಸ್ಪಷ್ಟ ನಿದರ್ಶನ.
ಜೊತೆಗೆ, “ವನ್ಯಜೀವಿ ಮಂಡಳಿಯ ಪ್ರಸ್ತುತತೆಯ ಬಗ್ಗೆಯೇ ಪ್ರಶ್ನೆ ಏಳುವಂತೆ ಸರ್ಕಾರ ಮಂಡಳಿಯನ್ನು ನಡೆಸಿಕೊಂಡಿದೆ. ಮೂರ್ನಾಲ್ಕು ಬಾರಿ ವೈಜ್ಞಾನಿಕ ಆಧಾರದ ಮೇಲೆ ತಳ್ಳಿ ಹಾಕಲಾಗಿದ್ದ ಒಂದು ಯೋಜನೆಯ ಪ್ರಸ್ತಾವನೆಗೆ, ಅಂತಹ ಯಾವುದೇ ಮಾನ್ಯತೆ ಇರದ, ಕೇವಲ ಒಬ್ಬ ವಿಜ್ಞಾನಿ ನೀಡಿದ ವರದಿಯನ್ನು ಮುಂದಿಟ್ಟುಕೊಂಡು ಸದಸ್ಯರ ಬಹುತಮದ ಅಭಿಪ್ರಾಯಕ್ಕೆ ಮನ್ನಣೆ ನೀಡದೆ, ಅವರ ವಿರೋಧವನ್ನು ಲೆಕ್ಕಿಸದೆ ಸರ್ಕಾರ ತನ್ನ ಮೂಗಿನ ನೇರಕ್ಕೆ ತೀರ್ಮಾನ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಎಂಬುದು ಏಕೆ ಬೇಕು? ಮಂಡಳಿ ರಚನೆಯಾಗಿರುವುದೇ ಪರಿಸರ ಮತ್ತು ವನ್ಯಜೀವಿಗಳ ಹಿತಕಾಯಲು. ತನ್ನ ಅಸ್ತಿತ್ವದ ಪರಮ ಉದ್ದೇಶಕ್ಕೆ ವಿರುದ್ಧವಾಗಿ ತೀರ್ಮಾನ ಕೈಗೊಳ್ಳುವುದೇ ಆದರೆ, ಅಂತಹ ಮಂಡಳಿಯ ಅಗತ್ಯವೇನಿದೆ?” ಎಂಬುದು ಪರಿಸರವಾದಿ ಅಖಿಲೇಶ್ ಚಿಪ್ಪಳಿ ಅವರ ವಾದ.
ಆ ಹಿನ್ನೆಲೆಯಲ್ಲಿಯೇ ಈಗಾಗಲೇ ಯೋಜನೆಗೆ ಅನುಮತಿ ಪಡೆದುಕೊಂಡಿರುವ ಸರ್ಕಾರದ ವರಸೆ ಮತ್ತು ವನ್ಯಜೀವಿ ಮಂಡಳಿಯ ಅಸಹಾಯಕತೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗತೊಡಗಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ನೇಮಕದ ಉದ್ದೇಶ ಮತ್ತು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ. ತಮ್ಮ ತಜ್ಞ ಅಭಿಪ್ರಾಯ ಮತ್ತು ಅನುಭವದ ಸಲಹೆ-ಸೂಚನೆಗಳಿಗೆ ಸರ್ಕಾರ ಮೂರುಕಾಸಿನ ಬೆಲೆ ಕೊಡುತ್ತಿಲ್ಲ ಎಂದಾದರೆ, ಮಂಡಳಿಯಲ್ಲಿರುವ ಪರಿಸರವಾದಿಗಳು ಅಲ್ಲಿ ಮುಂದುವರಿಯುವ ಅಗತ್ಯವೇನಿದೆ? ಯಾವ ಪುರುಷಾರ್ಥಕ್ಕಾಗಿ ಜನರ ತೆರಿಗೆ ಹಣದಲ್ಲಿ ಈ ಮಂಡಳಿಯನ್ನು ಸಾಕಬೇಕಿದೆ ಎಂಬ ಪ್ರಶ್ನೆಗಳೂ ಎದ್ದಿವೆ. ಮತ್ತೊಂದು ಕಡೆ, ಮಂಡಳಿಯ ಒಳಗೆ ಇದ್ದುಕೊಂಡೇ ನೈಜ ಪರಿಸರ ಕಾಳಜಿಯ ಮಂದಿ ಸರ್ಕಾರದ ನಡೆಯ ವಿರುದ್ಧ ಬಹಿರಂಗ ಹೇಳಿಕೆ ನೀಡಬೇಕು. ಆ ಮೂಲಕ ಜನರಿಗೆ ಸತ್ಯ ಸಂಗತಿ ತಿಳಿಸಿ, ಪರಿಸರ ನಾಶ ತಡೆಯುವ ನಿಟ್ಟಿನಲ್ಲಿ ಜನರಿಗೆ ನೈತಿಕ ಬೆಂಬಲ ನೀಡಬೇಕು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಒಟ್ಟಾರೆ ಎರಡೂವರೆ ದಶಕದಿಂದ ನೆನಗುದಿಗೆ ಬಿದ್ದಿದ್ದ ಮತ್ತು ವಿವಾದಾತ್ಮವಾಗಿದ್ದ ಪರಿಸರನಾಶದ ಯೋಜನೆಯೊಂದಕ್ಕೆ ಪರಿಸರ ಕಾಯಬೇಕಾದ ಮಂಡಳಿಯೇ ಒಪ್ಪಿಗೆ ನೀಡಿರುವುದು ವಿಪರ್ಯಾಸ. ಹಾಗೆ ನೋಡಿದರೆ, ವನ್ಯಜೀವಿ ಮಂಡಳಿಯ ಇಂತಹ ವಿಪರ್ಯಾಸಕರ ನಡೆ ಇದೇ ಮೊದಲೇನಲ್ಲ. ಕೆಲವು ತಿಂಗಳ ಹಿಂದೆ ಶರಾವತಿ ಕಣಿವೆಯ ದುರ್ಗಮ ಅರಣ್ಯಪ್ರದೇಶದಲ್ಲಿ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಯ ಸಮೀಕ್ಷೆಯ ವಿಷಯದಲ್ಲಿಯೂ ಮಂಡಳಿ ಇದೇ ರೀತಿಯಲ್ಲಿ ಪರಿಸರ ಮಾರಕ ನಿಲುವು ತೆಗೆದುಕೊಂಡು, ಅನುಮತಿ ನೀಡಿತ್ತು! ಇದೀಗ ಅದೇ ಹಾದಿಯಲ್ಲಿ ಅದಕ್ಕಿಂತ ಹತ್ತಾರುಪಟ್ಟು ಅಪಾಯಕಾರಿಯಾದ ಯೋಜನೆಗೆ ತನ್ನದೇನೂ ಅಭ್ಯಂತರವಿಲ್ಲ ಎಂದು ಕೈತೊಳೆದುಕೊಂಡಿದೆ. ಹಾಗಾಗಿ ವನ್ಯಜೀವಿ ಮಂಡಳಿ ಎಂಬುದು ಸರ್ಕಾರದ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ನಾಮಕಾವಸ್ಥೆ ವ್ಯವಸ್ಥೆಗಳ ಸಾಲಿಗೆ ಸೇರಿದಂತಾಗಿದೆ.
ಆದ್ದರಿಂದ ಈಗ ಇರುವ ಪ್ರಶ್ನೆ, ಇಷ್ಟಾಗಿಯೂ ಮಂಡಳಿಯಲ್ಲಿರುವ ಪರಿಸರವಾದಿಗಳು(ನೈಜ ಪರಿಸರ ಕಾಳಜಿ ಉಳಿದಿದ್ದರೆ!) ಸರ್ಕಾರದ ಪರಿಸರವಿರೋಧಿ ನಡೆಯನ್ನು, ಮಂಡಳಿಯನ್ನು ಕೈಗೊಂಬೆ ಮಾಡಿಕೊಳ್ಳುವ ವರಸೆಯನ್ನು ಪ್ರಶ್ನಿಸದೇ ಮುಗುಮ್ಮಾಗಿ ಕೂತರೆ, ಅದರ ಅರ್ಥವೇನು? ಎಂಬುದು! ಉತ್ತರ ಸಿಗಬಹುದೆ?