ವಿಧಾನಪರಿಷತ್ ಚುನಾವಣೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ ಮೂವರಿಗೆ ಟಿಕೆಟ್ ಸಿಕ್ಕಿದೆ ಎನ್ನುವುದು ಬಿ ಎಸ್ ಯಡಿಯೂರಪ್ಪ ಆಪ್ತ ಬಳಗದ ಸಂಭ್ರಮಕ್ಕೆ ಕಾರಣವಾಗಿತ್ತು. ಕಳೆದ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ವೇಳೆ ಬಿ ಎಸ್ ಯಡಿಯೂರಪ್ಪ ಅಂಡ್ ಟೀಂ ಆಯ್ಕೆ ಮಾಡಿದ ಪಟ್ಟಿಯನ್ನೇ ಸೈಡಿಗಿಟ್ಟು ಪ್ರತ್ಯೇಕ ಪಟ್ಟಿ ಕಳುಹಿಸಿದ್ದ ಬಿಜೆಪಿ ಹೈಕಮಾಂಡ್ ಬಿ ಎಸ್ ಯಡಿಯೂರಪ್ಪ ಅವರಿಗೆ ಮುಜುಗರ ಉಂಟಾಗುವಂತೆ ಮಾಡಿತ್ತು. ನಾಯಕತ್ವ ಬದಲಾವಣೆ ಕೂಗು ಎದ್ದಿದ್ದ ಸಮಯದಲ್ಲೇ ಬಿ ಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಈ ರೀತಿ ಬೇಕೆಂದೇ ಮಾಡಿದೆ ಎನ್ನುವ ಚೆರ್ಚೆಗಳು ನಡೆದಿದ್ದವು. ಆದರೆ ಇದೀಗ ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್ ಶಂಕರ್‌ಗೆ ಟಿಕೆಟ್ ಸಿಕ್ಕಿದೆ. ಈ ಇಬ್ಬರೂ ನಾಯಕರು ಬಿ ಎಸ್ ಯಡಿಯೂರಪ್ಪ ಅವರ ಆಯ್ಕೆ ಎನ್ನುವುದು ಸ್ಪಷ್ಟ.
ಕೆಜೆಪಿ ಕಟ್ಟಿದ್ದ ವೇಳೆ ಬಿ ಎಸ್ ಯಡಿಯೂರಪ್ಪ ಪರವಾಗಿ ನಿಂತಿದ್ದ ಸುನಿಲ್ ವಲ್ಯಾಪುರೆಗೂ ವಿಧಾನಪರಿಷತ್‌ನಲ್ಲಿ ಸ್ಥಾನ ಕೊಡಿಸುವಲ್ಲಿ ಬಿ ಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಪ್ರತಾಪ್ ಸಿಂಹ ನಾಯಕ್ ಅವರು ಸಂಘ ಪರಿವಾರದ ಆಯ್ಕೆ ಎನ್ನುವುದನ್ನು ಹೊರತುಪಡಿಸಿ ಉಳಿದ ಮೂವರ ಆಯ್ಕೆ ಬಿ ಎಸ್ ಯಡಿಯೂರಪ್ಪ ಅವರ ನಿರ್ಧಾರವನ್ನು ಸ್ವಾಗತಿಸಿದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಬಿಜೆಪಿಯಲ್ಲಿ ತಣ್ಣಗಾಗಿದ್ದ ಬಂಡಾಯಕ್ಕೆ ಮತ್ತೆ ಬೆಂಕಿ..!
ಬಿಜೆಪಿಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿಸುವ ಕಸರತ್ತು ಆರಂಭಗೊಂಡಿದೆ. ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲೇ ಬೇಕು ಎಂದು ಪಣತೊಟ್ಟಿರುವ ಒಂದು ವರ್ಗ ಒಟ್ಟುಗೂಡುತ್ತಿದೆ. ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಮಂತ್ರಿಯಾಗಲು ಸಾಧ್ಯವಾಗದೆ ಹಲ್ಲು ಕಡಿದರು. ಆ ನಂತರ ಮುರುಗೇಶ್ ನಿರಾಣಿಯವರದ್ದು ಅದೇ ಪರಿಸ್ಥಿತಿ. ಹಿರಿಯ ನಾಯಕನಾಗಿದ್ದರೂ, ಪ್ರಭಾವಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಸಚಿವ ಸಂಪುಟ ಸೇರುವಲ್ಲಿ ವಿಫಲರಾದರು. ಈ ಇಬ್ಬರು ನಾಯಕರು ಕಳೆದ ತಿಂಗಳು ಬಂಡಾಯ ಸಭೆ ನಡೆಸಿ ಭಾರೀ ಸದ್ದು ಮಾಡಿದ್ದರು. ಆದರೆ ಇದೀಗ ಈ ಇಬ್ಬರು ನಾಯಕರನ್ನು ಬಿಟ್ಟು ಮತ್ತೊಂದು ಗುಂಪು ಅಧ್ಯಕ್ಷರ ಬಳಿಗೆ ನೇರವಾಗಿ ದೂರನ್ನು ಹಿಡಿದು ಬಂದಿದೆ.
ಹರಿತವಾಗಿದ್ದ ಕತ್ತಿಯನ್ನು ಮೊಂಡು ಮಾಡಿದ್ದ ಬಿಎಸ್‌ವೈ..!
ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಸೋಲುಂಡಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ವಲಸೆ ಬಂದ ರಮೇಶ್ ಜಾರಕಿಹೊಳಿ ಅಂಡ್ ಟೀಂಗೂ ಸಚಿವ ಸ್ಥಾನ ಸೇರಿದಂತೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ 8 ಬಾರಿ ಶಾಸಕನಾಗಿರುವ ನನಗೆ ಸಚಿವ ಸ್ಥಾನ ಯಾಕಿಲ್ಲ ಎಂದು ನೇರವಾಗಿ ಪ್ರಶ್ಬೆ ಮಾಡಿದ್ದರು ಉಮೇಶ್ ಕತ್ತಿ. ಆ ಬಳಿಕ ಸಹೋದರ ರಮೇಶ್ ಕತ್ತಿಯನ್ನಾದರೂ ರಾಜ್ಯಸಭೆಗೆ ಕಳುಹಿಸಬೇಕು ಎಂದು ಆಗ್ರಹ ಮಾಡಿದ್ದರು. ಈ ಎರಡೂ ಸದ್ಯಕ್ಕೆ ಸಾಧ್ಯವಾಗಿಲ್ಲ. ಆದರೂ ಹರಿತವಾಗಿದ್ದ ಉಮೇಶ್ ಕತ್ತಿಯನ್ನು ಮೊಂಡು ಮಾಡಿ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾರೆ ಸಿಎಂ ಬಿ ಎಸ್ ಯಡಿಯೂರಪ್ಪ. ಉಮೇಶ್ ಕತ್ತಿ ಬಂಡಾಯ ಸದ್ಯಕ್ಕಿಲ್ಲ. ರಾಜ್ಯಸಭಾ ಟಿಕೆಟ್ ಕೈತಪ್ಪಿದ ವೇಳೆ ಮಾತನಾಡಿದ ರಮೇಶ್ ಕತ್ತಿ, ಟಿಕೆಟ್ ಸಿಗದೆ ಇರುವುದಕ್ಕೆ ಬೇಸರವಿಲ್ಲ. ಪಕ್ಷದ ನಿರ್ಧಾರವನ್ನು ನಾವು ಒಪ್ಪಿಕೊಳ್ತೇವೆ ಎಂದು ಹೇಳಿದ್ದರು. ಇದು ಪಕ್ಷ ವಿರೋಧಿಗಳಿಗೆ ಬಿಜೆಪಿ ಹೈಕಮಾಂಡ್ ಬಿಸಿ ಮುಟ್ಟಿಸಿದ ಪರಿಣಾಮವೋ ಅಥವಾ ಸಿಎಂ ಬಿ ಎಸ್ ಯಡಿಯೂರಪ್ಪ ತಣ್ಣಗೆ ಆಗುವಂತೆ ಏನಾದರೂ ಮಾಡಿದ್ದರೋ ಎನ್ನುವುದು ಮಾತ್ರ ಗೌಪ್ಯ.
ಸಕ್ಕರೆ ಕೊಟ್ಟು ನಿರಾಣಿ ಬಿಸಿಗೆ ನೀರಾಕಿದ ಸಿಎಂ..!
ಮುರುಗೇಶ್ ನಿರಾಣಿ ಹೇಳಿ ಕೇಳಿ ಉದ್ಯಮಿ. ಸಕ್ಕರೆ ಉದ್ಯಮ ಮುರುಗೇಶ್ ನಿರಾಣಿ ಕೈ ಹಿಡಿದಿದೆ. ಇದನ್ನೇ ಅಸ್ತ್ರ ಮಾಡಿಕೊಂಡ ಸಿಎಂ ಬಿ ಎಸ್ ಯಡಿಯೂರಪ್ಪ, ಮುರುಗೇಶ್ ನಿರಾಣಿ ಬಂಡಾಯಕ್ಕೆ ನೀರಾಕಿ ತಣ್ಣಗೆ ಮಾಡಿದ್ದಾರೆ. ಈಗಾಗಲೇ 6 ಸಕ್ಕರೆ ಕಾರ್ಖಾನೆಗಳ ಒಡೆಯನಾಗಿರುವ ಮುರುಗೇಶ್ ನಿರಾಣಿಗೆ ಮತ್ತೊಂದು ಕಾರ್ಖಾನೆ ಕೈ ಸೇರುವಂತೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ನಷ್ಟದಿಂದ 4 ವರ್ಷದ ಹಿಂದೆ ಬಾಗಿಲು ಹಾಕಿತ್ತು. ಈ ಸಕ್ಕರೆ ಕಾರ್ಖಾನೆ ಮುರುಗೇಶ್ ನಿರಾಣಿ ಕೈ ಸೇರುವಂತೆ ಮಾಡುವ ಮೂಲಕ ಬಂಡಾಯ ಶಮನವನ್ನು ಯಶಸ್ವಿಯಾಗಿ ಶಮನ ಮಾಡಿದ್ದಾರೆ. 40 ವರ್ಷಕ್ಕೆ 405 ಕೋಟಿ ರೂಪಾಯಿ ಬಿಡ್ ಮಾಡಿ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದಾರೆ. ಆದರೆ ಮುರುಗೇಶ್ ನಿರಾಣಿಗೆ ಗುತ್ತಿಗೆ ಸಿಗುವಂತೆ ಮಾಡಿದ್ದು ಬಿಜೆಪಿ ಸರ್ಕಾರ. ಬಂಡಾಯ ಎದ್ದಿದ್ದ ಮುರುಗೇಶ್ ನಿರಾಣಿಯನ್ನು ಸಮಾಧಾನ ಮಾಡಲು ಗುತ್ತಿಗೆ ಕೊಡಲಾಗಿದೆ ಎನ್ನುವುದು ಮಂಡ್ಯ ಜನಪ್ರತಿನಿಧಿಗಳ ಆರೋಪ.
ಬಂಡಾಯ ಶಮನ ಎನ್ನುವಾಗಲೇ ಮತ್ತೊಂದು ಸಭೆ..!
ಬಿಜೆಪಿಯಲ್ಲಿ ಬಂಡಾಯ ನಾಯಕರು ಎನ್ನಲಾಗ್ತಿದ್ದ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿಯನ್ನು ಸಮಾಧಾನ ಮಾಡಿದ ಬಳಿಕ ಬಂಡಾಯ ಶಮನವಾಯ್ತು ಎನ್ನಲಾಗಿತ್ತು. ಆದರೆ ಮತ್ತೇ ಬಂಡಾಯ ಆರಂಭವಾಗಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿರುವ ಶಾಸಕರ ತಂಡ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಅನುದಾನ ನೀಡುವುದರಲ್ಲಿ ಮುಖ್ಯಮಂತ್ರಿ ತಾರತಮ್ಯ ಮಾಡ್ತಿದ್ದಾರೆ ಎಂದು ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದಾರೆ. ನಳೀನ್ ಕುಮಾರ್ ಕಟೀಲ್ ಜೊತೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ಮಾಡಿರುವ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಅಭಯ್ ಪಾಟೀಲ್, ಅನಿಲ್ ಬೆನಕೆ ಸೇರಿದಂತೆ 8ಕ್ಕೂ ಹೆಚ್ಚು ಶಾಸಕರು ದೂರಿತ್ತಿದ್ದಾರೆ. ಕೂಡಲೇ ಪಕ್ಷ ಮಧ್ಯಪ್ರವೇಶ ಮಾಡುಬೇಕು ಎಂದು ಆಗ್ರಹ ಮಾಡಿದ್ದಾರೆ. ಶಾಸಕರ ದೂರನ್ನು ಆಲಿಸಿದ ನಳೀನ್ ಕುಮಾರ್ ಕಟೀಲ್, ಶಾಸಕರ ಸಭೆ ಕರೆಯುವಂತೆ ಸಿಎಂ ಬಿ ಎಸ್ ಯಡಿಯೂರಪ್ಪಗೆ ಹೇಳುತ್ತೇವೆ, ಬಳಿಕ ಶಾಸಕಾಂಗ ಸಭೆಯನ್ನೂ ಕರೆಯುವಂತೆ ತಿಳಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.

ಬಿ ಎಸ್ ಯಡಿಯೂರಪ್ಪ ಕುರ್ಚಿ ಖಾಲಿ ಮಾಡೋದು ಪಕ್ಕಾನಾ..?
ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಒಳಗೆ ಒಂದು ತಂಡ ಕೆಲಸ ಮಾಡುತ್ತಿದೆ ಎನ್ನುವುದು ಖಚಿತ. ಕಳೆದ ಬಾರಿ ಜಗದೀಶ್ ಶೆಟ್ಟರ್ ಅವರ ಮೇಲುಸ್ತುವಾರಿಯಲ್ಲೇ ಬಂಡಾಯ ಸಭೆ ನಡೆದಿತ್ತು, ಶಾಸಕರಾದ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಶೆಟ್ಟರ್ ಮಾತಿನಂತೆ ಸಭೆ ಸೇರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಆ ಇಬ್ಬರನ್ನೂ ಸಮಾಧಾನ ಮಾಡುವಲ್ಲಿ ಬಿ ಎಸ್ ಯಡಿಯೂರಪ್ಪ ಯಶಸ್ಸು ಸಾಧಿಸಿದ್ದರು. ಈ ಮೂಲಕ ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರವನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಮಾಡಿದ್ದರು. ಆದರೀಗ ಮತ್ತೊಂದು ತಂಡ ಅಖಾಡಕ್ಕೆ ಇಳಿದಿದೆ. ಈ ತಂಡದಲ್ಲಿ ಬಹುತೇಕ ಪಕ್ಷ ನಿಷ್ಠ ಹಾಗೂ ಸಂಘಪರಿವಾರದ ಶಾಸಕರು ಹೆಚ್ಚಾಗಿರುವುದು ಬಂಡಾಯಕ್ಕೆ ಬ್ರೇಕ್ ಬೀಳುವುದು ಕಷ್ಟ ಎನ್ನಲಾಗ್ತಿದೆ.
ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್, ಆಪ್ತ ಅರವಿಂದ ಬೆಲ್ಲದ್, ಮಂಗಳೂರು ಉತ್ತರ ಕ್ಷೇತ್ರದ ಡಾ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ ಕಾಮತ್ ಸಂಘಪರಿವಾರದ ನಾಯಕರಾಗಿರುವುದರಿಂದ ಈ ಬಾರಿ ನೇರವಾಗಿ ಸಂಘಪರಿವಾರವೇ ಅಖಾಡಕ್ಕೆ ಇಳಿದಿದೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಇದ್ದರೂ ಒಳಗೊಳಗೆ ಕಚ್ಚಾಟ ನಡಿಯುತ್ತಿದೆ. ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಇಳಿಯಬೇಕು ಎನ್ನುವುದು ಬಿಜೆಪಿಯ ಇಚ್ಛೆ ಎನ್ನುವುದು ಖಚಿತವಾಗುತ್ತಿದೆ.
ಅತೃಪ್ತ ಶಾಸಕರ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ:
ನಿನ್ನೆಯೂ ತಡ ರಾತ್ರಿ ಬಂಡಾಯ ಶಾಸಕರು ಸಭೆ ಮಾಡಿದ ನಂತರ ಎಚ್ಚೆತ್ತುಕೊಂಡಿರುವ ಸಿಎಂ ಯಡಿಯೂರಪ್ಪ ಎಲ್ಲಾ ಸಚಿವರಿಗೆ ಮತ್ತು ಡಿಸಿಎಂಗಳಿಗೆ ಸಿಎಂ ಪತ್ರ ಬರೆದಿದ್ದಾರೆ. ಜಿಲ್ಲಾ ಪ್ರವಾಸ ಮತ್ತು ಪ್ರಗತಿ ಪರಿಶೀಲನೆ ಸಭೆ ಬಗ್ಗೆ ಕಡ್ಡಾಯವಾಗಿ ಶಾಸಕರಿಗೆ ತಿಳಿಸಲೇಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇನ್ನು ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಕುರಿತಾಗಿ ಅಹವಾಲುಗಳನ್ನು ಸ್ವೀಕರಿಸಬೇಕೆಂದು ಹೇಳಲಾಗಿದೆ.
