ದೇಶದಲ್ಲಿ ಯಾರೂ ಸಹ ಹಸಿವಿನಿಂದ ಸಾಯಬಾರದು ಎನ್ನುವ ಏಕೈಕ ಕಾರಣಕ್ಕೆ ಒಂದು ಹೊಸ ಕಾನೂನನ್ನೇ ಜಾರಿ ಮಾಡಿದೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡುವ ಮೂಲಕ ಹಸಿವನ್ನು ನೀಗಿಸುವ ಕೆಲಸ ಮಾಡಿತ್ತು. ಈ ಕಾಯ್ದೆಯಂತೆ ದೇಶದ ಯಾವುದೇ ಒಂದು ರಾಜ್ಯ ತನ್ನ ರಾಜ್ಯದ ಪ್ರಜೆಗಳಿಗೆ ಆಹಾರ ದಾಸ್ತಾನು ಒದಗಿಸಲು ಕೇಂದ್ರ ಸರ್ಕಾರ ಸಹಾಯಕ್ಕೆ ನಿಲ್ಲಬೇಕಿದೆ. ಕಡಿಮೆ ಹಣಕ್ಕೆ ಧವಸ ಧಾನ್ಯ ಸರಭರಾಜು ಮಾಡಬೇಕಿದೆ. ಅದರಲ್ಲೂ 3 ರೂಪಾಯಿಗೆ ಅಕ್ಕಿ, 2 ರೂಪಾಯಿಗೆ ಗೋಧಿ ವಿತರಣೆ ಮಾಡುವ ಸಂಕಲ್ಪ ಮಾಡಲಾಗಿದೆ. ಕೇವಲ ಪಡಿತರ ಅಷ್ಟೇ ಅಲ್ಲದೆ ಗರ್ಭಿಣಿ, ಬಾಣಂತಿ, ಅಂಗನವಾಡಿ ಮಕ್ಕಳಿಗೂ ಪೌಷ್ಠಿಕಾಂಶಯುಕ್ತ ಆಹಾರ ನೀಡುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ.
2013ರಲ್ಲಿ ಅಧಿಕಾರಕ್ಕೆ ಬರುವ ಮುಂಚೆಯೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 1 ರೂಪಾಯಿಗೆ 1 ಕೆಜಿ ಅಕ್ಕಿ ಕೊಡುವ ಯೋಜನೆ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಮೊದಲು ಮಾಡಿದ ಕೆಲಸವೇ 1 ರೂಪಾಯಿಗೆ 1 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯ ಘೋಷಣೆ. ಆ ಬಳಿಕ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 2 ಕೆಜಿ ಅಕ್ಕಿ ಕಡಿಮೆ ಮಾಡುವ ಚಿಂತನೆ ನಡೆದಿತ್ತು. ಆದರೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಅನ್ನಭಾಗ್ಯಕ್ಕೆ ಕನ್ನ ಹಾಕುವುದು ಬೇಡ ಎಂದಿದ್ದ ಕಾರಣಕ್ಕೆ 7 ಕೆಜಿ ಅಕ್ಕಿಯ ಬದಲು 5 ಕೆಜಿ ನೀಡುವ ನಿರ್ಧಾರ ಬದಲು ಮಾಡಿಕೊಂಡಿತ್ತು. ಆದರೆ ಮೈತ್ರಿ ಸರ್ಕಾರ ಉರುಳಿ ಬಿ ಎಸ್ ಯಡಿಯೂರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಅಕ್ಕಿಯಲ್ಲಿ ಕಡಿತವಾಗುತ್ತಿದೆ. ಈ ಬಗ್ಗೆ ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿ ಆಗಿದೆ. ಆದರೆ ಅದಕ್ಕೆ ಬದಲಾಗಿ 2 ಕೆಜಿ ಅಕ್ಕಿ ಕೊಡುವ ನಿರ್ಧಾರ ಮಾಡಲಾಗಿದೆ.
ಅಕ್ಕಿ ಕಡಿತ ಮಾಡಿ ಗೋಧಿ ಕೊಡುತ್ತಿದ್ದಾರೆ ಎನ್ನುವ ಸಮಾಧಾನ ಜನರ ಪಾಲಿಗೆ. ಆದರೆ ಅಕ್ಕಿಗೆ ಕೊಡುವ 1 ರೂಪಾಯಿ ಹಣ ಉಳಿತಾಯ ಆಗುತ್ತದೆ ಎನ್ನುವ ಸಮಾಧಾನ ಸರ್ಕಾರದ ಪಾಲಿಗೆ. ಆದರೆ ಮತ್ತೊಂದು ಕಡೆಯಿಂದ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿರೋದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರೆಲ್ಲರೂ ಪಡಿತರ ಕೇಂದ್ರಕ್ಕೆ ತೆರಳಿ ಹೆಬ್ಬೆಟ್ಟು ಕೊಡಬೇಕು ಎಂದು ಸೂಚನೆ ಕೊಟ್ಟಿದೆ. ರಾಜ್ಯದ ಜನರು ಹೆಬ್ಬೆಟ್ಟು ಕೊಡದಿದ್ದರೆ ಅಕ್ಕಿ ಕೊಡುವುದಿಲ್ಲ, ತೊಂದರೆ ಮಾಡುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ರಾತ್ರಿ ಹಗಲು ಎನ್ನದೆ ಸರತಿ ಸಾಲಿನಲ್ಲಿ ನಿಂತು ಕುಟುಂಬ ಸದಸ್ಯರೆಲ್ಲರೂ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುತ್ತಾ ಇದ್ದಾರೆ. ಮಕ್ಕಳು ಬೆಂಗಳೂರಿನಲ್ಲಿ ಇದ್ದರೆ ಪೋಷಕರು ಕರೆ ಮಾಡಿ ಕರೆಸಿಕೊಳ್ಳುತ್ತಿದ್ದು, ಹೆಬ್ಬೆಟ್ಟು ಕೊಟ್ಟು ಬರಲು ಬೇರೆ ಬೇರೆ ಊರುಗಳಿಂದ ಹಳ್ಳಿಗಳತ್ತ ತೆರಳುತ್ತಿದ್ದಾರೆ. ಇವರಲ್ಲಿ ಯಾರಿಗೂ ಬಿಪಿಎಲ್ ಕಾರ್ಡ್ ರದ್ದು ಆಗುತ್ತದೆ ಎನ್ನುವ ಸುಳಿವು ಇನ್ನೂ ಸಿಕ್ಕಿಲ್ಲ.

ಆದರೆ, ಬಿಪಿಎಲ್ ಕಾರ್ಡ್ ಪಡೆಯಲು ರಾಜ್ಯ ಸರ್ಕಾರ ಕೆಲವೊಂದು ಮಾನದಂಡಗಳನ್ನು ರೂಪಿಸಿದೆ. ಅವುಗಳ ಆಧಾರದಲ್ಲೇ ಪಡಿತರ ವಿತರಣೆ ಮಾಡುವುದಾದರೆ ರಾಜ್ಯದ ಬಹುತೇಕ ಎಲ್ಲಾ ಕುಟುಂಬಗಳು ಅಕ್ಕಿಯನ್ನು ಇನ್ಮುಂದೆ ಕೊಂಡು ತಿನ್ನುವುದು ಅನಿರ್ವಾಯ ಆಗಲಿದೆ. ಯಾಕೆಂದರೆ, ಪಡಿತರ ಪಡೆಯುವುದಕ್ಕೆ ಅರ್ಹರಾಗಿರಬೇಕು ಎಂದರೆ, ವಾರ್ಷಿಕ 1 ಲಕ್ಷದ 20 ಸಾವಿರ ಆದಾಯ ಇರಬಾರದು ಎನ್ನುವುದು ಪ್ರಮುಖವಾಗಿದೆ. ಆದರೆ ಬೆಂಗಳೂರಿನಲ್ಲಿ ಕುಟುಂಬದ ಓರ್ವ ಸದಸ್ಯ ಕೆಲಸ ಮಾಡುತ್ತಿದ್ದರೆ, ಕನಿಷ್ಟ 10 ಸಾವಿರ ವೇತನ ಪಡೆದರೂ ವಾರ್ಷಿಕ ಸಂಪಾದನೆಯಾಗಿ 1 ಲಕ್ಷದ 20 ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ಬಂದು ಬಿದ್ದಿರುತ್ತದೆ. ಈಗಾಗಲೇ ಬ್ಯಾಂಕ್ ನಲ್ಲಿ ಆಧಾರ್ ಕಾರ್ಡ್ ಕೊಟ್ಟಿರುವ ಕಾರಣ ನಮ್ಮ ಬ್ಯಾಂಕ್ ಡೀಟೈಲ್ಸ್ ಸರ್ಕಾರದ ಕೈ ಸೇರುವುದಕ್ಕೆ ಬಹಳ ಸಮಯ ಹಿಡಿಯುವುದಿಲ್ಲ. ಇದೊಂದೇ ಅಂಶವನ್ನು ಪರಿಗಣಿಸಿದರೂ ಹಳ್ಳಿಗಾಡಿನ ಕುಟುಂಬಗಳು ಸೇರಿದಂತೆ ನಗರ ವಾಸಿಗಳು ಬಿಪಿಎಲ್ ಕಾರ್ಡ್ ನಿಂದ ಹೊರಬರುವ ಎಲ್ಲಾ ಸಾಧ್ಯತೆಗಳಿವೆ.
ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು, ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನ, ನಿಗಮ – ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುವ ಜನರು ಪಡಿತರ ಕಾರ್ಡ್ ಹೊಂದಬಾರದು ಎನ್ನುವುದು ಸೂಕ್ತ. ಆದರೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ ಎನ್ನುವುದು ಯಾವ ನ್ಯಾಯ ಎನ್ನುವ ಪ್ರಶ್ನೆ ಎದುರಾಗಿದೆ. ಈ ಮೊದಲು 20 ಸಾವಿರ ವೇತನ ಪಡೆಯುವ ನೌಕರ ಆದಾಯ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ವೇತನದಾರರು ಆದಾಯ ತೆರಿಗೆ ಪಾವತಿ ಮಾಡಲೇ ಬೇಕು ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಮಧ್ಯಮ ವರ್ಗದ ಜನರೂ ಬಿಪಿಎಲ್ ಕಾರ್ಡ್ ನಿಂದ ಹೊರಬರಬೇಕಾದ ಅನಿವಾರ್ಯತೆ ಸೃಷ್ಠಿ ಮಾಡಲಾಗುತ್ತಿದೆ.

ನಗರಪಾಲಿಕೆ ಪ್ರದೇಶಗಳಲ್ಲಿ 1000 ಚದರ ಅಡಿಗಳಿಗಿಂತ ಹೆಚ್ಚಿನ ಮತ್ತು ಬೇರೆ ಕಡೆ 1200 ಚದರ ಅಡಿಯ ಮನೆ ಹೊಂದಿದ್ದರೆ ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ ಎನ್ನಲಾಗಿದೆ. ಜೊತೆಗೆ ಪ್ರತಿ ತಿಂಗಳು 125 ಯುನಿಟ್‌ಗಿಂತಲೂ ಹೆಚ್ಚಿನ ವಿದ್ಯುತ್ ಬಳಕೆ ಮಾಡುವ ಕುಟುಂಬಗಳು ಬಿಪಿಎಲ್ ಕಾರ್ಡ್ ಬಳಸುವಂತಿಲ್ಲ. ಒಂದು ವೇಳೆ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರೆ ದಂಡ ಹಾಕುವ ನಿರ್ಧಾರ ಮಾಡಿದ್ದಾರೆ. ಒಟ್ಟಾರೆ ಅಂತಿಮವಾಗಿ ಸರ್ಕಾರ ನಿರ್ಧಾರ ಸ್ಪಷ್ಟವಾಗಿದ್ದು, ಬಿಪಿಎಲ್ ಕಾರ್ಡ್ ತೆಗೆಯುವುದಾಗಿದೆ. ಪಡಿತರ ಕೊಡಲು ಸಾಧ್ಯವಿಲ್ಲ ಎನ್ನುವುದನ್ನು ಹೇಳಲಾಗದೆ ನಿಧಾನವಾಗಿ ಎಲ್ಲರನ್ನೂ ಬಿಪಿಎಲ್ ಅರ್ಹತಾ ಪಟ್ಟಿಯಿಂದ ಹೊರತೆಗೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗ್ತಿದೆ. ಬಜೆಟ್‌ನಲ್ಲಿ ನೀಡಿರುವ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಆದಾಯ ಕ್ರೋಢಿಕರಣಕ್ಕಾಗಿ ಕೊನೆಯದಾಗಿ ಬಡವರ ಅನ್ನಕ್ಕೆ ಯಡಿಯೂರಪ್ಪ ನಿಧಾನವಾಗಿ ಕಲ್ಲು ಹಾಕುತ್ತಿದ್ದಾರೆ ಎಂದು ಅನಿಸುತ್ತದೆ.