ದೇಶದಲ್ಲಿ ನೆಲದ ಕಾನೂನು ಅಂತ ಒಂದಿರುತ್ತದೆ. ಈ ಕಾನೂನಿಗೆ ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ, ಆ ಧರ್ಮ-ಈ ಧರ್ಮ ಎಂಬ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ಕಾನೂನಿಗೆ ಬದ್ಧರಾಗಿರಬೇಕು. ರಾಜ್ಯ ದೇಶವನ್ನಾಳುವ ರಾಜಕಾರಣಿಗಳೂ ಇದಕ್ಕೆ ಹೊರತಾಗಿಲ್ಲ.
ಅವರು ಎಷ್ಟೇ ಪ್ರಭಾವಿಯಾಗಿದ್ದರೂ, ತಮ್ಮ ಪ್ರಭಾವವನ್ನು ಬೀರಿ ಏನೇ ಅಕ್ರಮ ನಡೆದಿದ್ದರೂ ಒಂದಲ್ಲಾ ಒಂದು ದಿನ ಈ ಕಾನೂನಿಗೆ ತಲೆ ಬಾಗಲೇಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಇದೇ ಕಾನೂನಿಗೆ ಮಣ್ಣೆರಚಿ ಜೀವನ ಸಾಗಿಸುವುದು ತಾತ್ಕಾಲಿಕವಾಗಿರುತ್ತದೆಯೇ ಹೊರತು ಅದು ಎಂದಿಗೂ ಸುಖದ ಸುಪ್ಪತ್ತಿಗೆಯನ್ನು ನೀಡುವುದಿಲ್ಲ.
ನಮ್ಮ ರಾಜ್ಯದಲ್ಲಿ ಗಣಿಯನ್ನು ಲೂಟಿ ಹೊಡೆದು ಕೆಲ ವರ್ಷಗಳ ಕಾಲ ರಾಜರಂತೆ ಮೆರೆದಿದ್ದ ಜಿ.ಜನಾರ್ದನ ರೆಡ್ಡಿಯಂತಹ ಮಹಾನ್ ಕುಳವೇ ಈ ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಕುಣಿಕೆಯಿಂದ ಹೊರಬರಲು ಮತ್ತದೇ ವಾಮಮಾರ್ಗವನ್ನು ತುಳಿದು ಅದರಿಂದಲೂ ಆರೋಪ ಹೊತ್ತ ಜನಾರ್ದನ ರೆಡ್ಡಿ ಇಂದು ಏನಾಗಿದ್ದಾರೆ ಎಂಬುದು ನಮ್ಮ ಕಣ್ಣೆದುರು ಕಾಣುತ್ತಿದೆ.
ಹೀಗಾಗಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಇದೀಗ ಇಂತಹ ಕಾನೂನಿನ ಕುಣಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಲೆ ಕೊಡಲೇಬೇಕಾಗಿದೆ.
ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 54 ಎಕರೆ ಗೋಮಾಳ ಮತ್ತು ಹಿಂದುಳಿದ ವರ್ಗದವರ ಭೂಮಿಯನ್ನು ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ತಮ್ಮಣ್ಣನವರ ಸಂಬಂಧಿಗಳು ಕಬಳಿಕೆ ಮಾಡಿಕೊಂಡಿದ್ದರು.

ಸಮಾಜದಲ್ಲಿ ತಮ್ಮದೇ ಆದ ಹೆಸರನ್ನು ಪಡೆದಿರುವ ಕುಮಾರಸ್ವಾಮಿ ಇದುವರೆಗೆ ತಾವು ಯಾವುದೇ ಒಂದಿಂಚೂ ಸರ್ಕಾರದ್ದಾಗಲೀ ಅಥವಾ ಹಿಂದುಳಿದ ವರ್ಗದವರಿಗೆ ಸೇರಿದ್ದ ಜಮೀನನ್ನು ಕಬಳಿಕೆ ಮಾಡಿಕೊಂಡಿಲ್ಲ ಎಂದು ಹೇಳುತ್ತಲೇ ಬಂದಿದ್ದರು.
ಆದರೆ, ಮಂಡ್ಯದ ಸಂಸದ ಜಿ.ಮಾದೇಗೌಡ ಅವರು ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಸೇರಿ ಹೇಗೆಲ್ಲಾ ಗೋಮಾಳ ಭೂಮಿಯನ್ನು ಲಪಟಾಯಿಸಿದ್ದಾರೆಂದು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರನ್ನು ನೀಡಿದ್ದರು.
ಈ ದೂರಿನನ್ವಯ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಕೋರ್ಟ್ ಕಬಳಿಕೆ ಮಾಡಿಕೊಂಡಿರುವ 54 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ನೀಡುವಂತೆ 2014ರ ಆಗಸ್ಟ್. 5 ರಂದು ಆದೇಶ ಮಾಡಿತ್ತು. ಈ ಭೂಮಿಯನ್ನು ವಶಪಡಿಸಿಕೊಂಡ ಬಗ್ಗೆ ವರದಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿತ್ತು.
ಆದರೆ, ಇದುವರೆಗೆ ಸರ್ಕಾರವಾಗಲೀ ಅಥವಾ ಸಂಬಂಧಪಟ್ಟ ಕಂದಾಯ ಇಲಾಖೆಯಾಗಲೀ ಕುಮಾರಸ್ವಾಮಿ ಅವರಿಂದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮನಸ್ಸು ಮಾಡಲೇ ಇರಲಿಲ್ಲ.
ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಅವರು ರಾಜ್ಯ ಹೈಕೋರ್ಟಿನಲ್ಲಿ ಸರ್ಕಾರದ ಈ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟವನ್ನು ಮುಂದುವರಿಸಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯ ಸನಿಹದಲ್ಲಿಯೇ ಇರುವ ಜಮೀನು ಪ್ರಸ್ತುತ ಪ್ರತಿ ಎಕರೆಗೆ 75 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಬೆಲೆ ಬಾಳುತ್ತದೆ. ಇಷ್ಟೊಂದು ಬೆಲೆ ಬಾಳುವ ಜಮೀನನ್ನು ಕುಮಾರಸ್ವಾಮಿ ಮತ್ತಿತರರು ಸೇರಿ ಪ್ರತಿ ಎಕರೆಗೆ ಕೇವಲ 5 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದಾರೆ. ಇದು ಭೂ ಕಂದಾಯ ಕಾನೂನಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ಸರ್ಕಾರದ ಬೊಕ್ಕಸಕ್ಕೆ ಅಪಾರವಾದ ನಷ್ಟವನ್ನುಂಟು ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯಲ್ಲಿರುವ ಕೇತಗಾನಹಳ್ಳಿಯ ವಿವಿಧ ಸರ್ವೇ ನಂಬರ್ ಗಳಲ್ಲಿರುವ ಸರ್ಕಾರಕ್ಕೆ ಸೇರಿದ 110 ಗೋಮಾಳ ಸೇರಿದಂತೆ ಒಟ್ಟು 200 ಕ್ಕೂ ಹೆಚ್ಚು ಎಕರೆ ಜಮೀನು ಒತ್ತುವರಿಯಾಗಿದೆ. ಈ ಪೈಕಿ ಕುಮಾರಸ್ವಾಮಿ ಮತ್ತಿತರರು ತಮ್ಮ ಪ್ರಭಾವ ಬೀರಿ 54 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದರು.

ಈ ಬಗ್ಗೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದ ಜಿ.ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯವು 15 ದಿನದಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಮತ್ತು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು 2014 ರ ಆಗಸ್ಟ್ 5 ರಂದು ಆದೇಶ ನೀಡಿತ್ತು.
ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ್ದ ಎಸ್.ಆರ್.ಹಿರೇಮಠ ಅವರು ಸಮಾಜ ಪರಿವರ್ತನ ಸಮುದಾಯದ ಹೆಸರಿನಲ್ಲಿ ರಾಜ್ಯ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಲೋಕಾಯುಕ್ತ ನ್ಯಾಯಾಲಯ ನೀಡಿದ ಆದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಲ್ಲಿ ಕುಮಾರಸ್ವಾಮಿ ಮತ್ತಿತರರು ಭೂಕಬಳಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಅಂತಹ ಜಮೀನನ್ನು ವಶಪಡಿಸಿಕೊಳ್ಳುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ದೂರಿದ್ದರು.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಏಕೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರದ ಪರ ವಕೀಲರು ಮುಂದಿನ ಮೂರು ತಿಂಗಳಲ್ಲಿ ಲೋಕಾಯುಕ್ತ ನ್ಯಾಯಾಲಯ ನೀಡಿರುವ ಆದೇಶವನ್ನು ಜಾರಿಗೆ ತರಲಾಗುತ್ತದೆ ಮತ್ತು ಕ್ರಮ ತೆಗೆದುಕೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದಾಗಿ ಭರವಸೆ ನೀಡಿದ್ದಾರೆ.