ಕಳೆದ ವರ್ಷ ಉತ್ತರ ಕರ್ನಾಟಕದ ಹಲವು ತಾಲೂಕುಗಳಲ್ಲಿ ನದಿ ಹಳ್ಳಗಳು ಉಕ್ಕಿ ಹರಿದು ಹೊಲ ಹಳ್ಳಿಗಳಿಗೆ ನುಗ್ಗಿ ಭಾರೀ ಪ್ರಮಾಣದ ಅನಾಹುತವನ್ನೇ ಮಾಡಿತು. ನೆರೆ ಪ್ರವಾಹವೇನೊ ಹೋಯಿತು ಈಗ ಉಳಿದಿದ್ದು ಏನು!. ಕೆಲವು ಕಡೆಗೆ ಮಾತ್ರ ಅಧಿಕಾರಿಗಳು ತಾವೇ ನಿಂತು ಎಲ್ಲ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರೆ ಹಲವು ಕಡೆಗೆ ಜನರ ಗೋಳು ಕೇಳಲು ಯಾರೂ ಇಲ್ಲ.
ಆಗ ಅಬ್ಬರಿಸಿ ಬೊಬ್ಬಿರಿದವರಿಗೂ ಕೆಲವು ರಾಜಕೀಯ ಮುಖಂಡರು ಟಿವಿ ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಿರಾ ಎಂದು ಬೆದರಿಸಿದ್ದು ಇದೆ. ಪ್ರತಿಧ್ವನಿ ತಂಡ ಕೇಳಿದಾಗ ವಿಡಿಯೋದಲ್ಲಿ ಮಾತನಾಡಲು ಗ್ರಾಮಸ್ಥರು ನಿರಾಕರಿಸಿದ್ದು, ಹೋಗಿ ಸರ್ ಬೇಡ ನೀವು ಹೋದ ಮೇಲೆ ಅವರು (ರಾಜಕೀಯ ಮುಖಂಡರು) ನಮ್ಮನ್ನು ಗೋಳಾಡಿಸುತ್ತಾರೆ. ಮೊದಲೇ ಪರಿಹಾರ ವಿಳಂಬವಾಗುತ್ತಿದೆ. ಇನ್ನೇನಾದರೂ ಹೇಳಿಕೆ ಗೀಳಿಕೆ ಅಂದರೆ ನಮ್ಮ ಕಥೆ ಅಷ್ಟೇ…….
ಸದ್ಯ ಹೇಗಿದೆ?
ಬಹುತೇಕ ಜಿಲ್ಲೆಗಳಲ್ಲಿನ ಜನರು ನವಗ್ರಾಮಗಳಿಗೆ ತೆರಳಿದ್ದಾರೆ. ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಅಧಿಕೃತ ಮನೆಯೇ ಸಿಕ್ಕಿಲ್ಲ ಎಂದು ಗೋಳಿಡುತ್ತಿದ್ದಾರೆ. ಸರ್ಕಾರಿ ನೌಕರರು ಸರ್ವೇ ಕಾರ್ಯ ವಿಳಂಬ ಮಾಡುತ್ತಿದ್ದಾರೆ ಎಂಬುದು ಪ್ರವಾಹ ಪೀಡಿತ ಎಲ್ಲ ಜಿಲ್ಲೆಗಳ ಗ್ರಾಮಸ್ಥರ ಅಭಿಪ್ರಾಯ. ಬೇಗ ಮಾಡಲು ಹೇಳಿದರೆ ಆಧಾರ ಕಾರ್ಡ್ ಅದೂ ಇದೂ ಕೇಳುತ್ತಾರೆ. ಎಲ್ಲ ಕೊಟ್ಟರೂ ಏನಾದರೂ ನೆಪ ಹೇಳುತ್ತಾರೆ.
ಈಗ ಬೆಳಗಾವಿ, ಧಾರವಾಡ, ಬಾಗಲಕೋಟೆ, ರಾಯಚೂರು ಹಾಗೂ ಗದಗ್ ಜಿಲ್ಲೆಗಳಲ್ಲಿ ನೆಲ ಒಣಗಿದರೂ ಗ್ರಾಮಸ್ಥರ ಬದುಕು ಇನ್ನೂ ಸುಗಮ ಸ್ಥಿತಿಗೆ ಬಂದಿಲ್ಲ, ಅದಕ್ಕೆ ಇನ್ನೂ ನಾಲ್ಕೈದು ತಿಂಗಳ ಕಾಲಾವಕಾಶ ಬೇಕು. ಕೆಲವು ಕಡೆಗೆ ಗ್ರಾಮಸ್ಥರ ನವ ಗ್ರಾಮಗಳಿಗೆ ಸ್ಥಳಾಂತರಿಸಿದ್ದರೆ ಕೆಲವು ಕಡೆಗೆ ತಾತ್ಕಾಲಿಕ ಶೆಡ್ ಗಳಲ್ಲಿ ಅವಕಾಶ ನೀಡಿದ್ದಾರೆ. ಕೆಲವು ಕಡೆಗೆ ಊರ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇತ್ತ ಕಡೆ ಮನೆ ಸರ್ವೇ ಕಾರ್ಯ ಮುಗಿದು ಇವರಿಗೆ ಪರಿಹಾರ ಸಿಗುವುದು ವಿಳಂಬವಾಗುತ್ತಿದೆ. ಕೃಷಿ ಕೆಲಸಗಳು ಕಡಿಮೆಯಾಗಿದ್ದರಿಂದ ಬಹಳಷ್ಟು ಜನರು ಗುಳೆ ಹೋಗಿದ್ದು ಮಾತ್ರ ಆತಂಕ ಕಾರಿ ವಿಷಯವಾಗಿದೆ. ನೆರೆಪೀಡಿತ ಜಿಲ್ಲೆಗಳು ಅನೇಕ ಗ್ರಾಮಗಳ ರಸ್ತೆ ಇನ್ನೂ ದುರಸ್ತಿ ಕಾಣದೇ ಬಸ್ ಸೌಕರ್ಯವಿಲ್ಲದೆ ಪರಿತಪಿಸುತ್ತಿದ್ದಾರೆ ಗ್ರಾಮಸ್ಥರು. ಎಲ್ಲ ಕಡೆಗೆ ಸಮರ್ಪಕ ಡಿಡಿಟಿ ಹಾಗೂ ಕ್ರಮಿ ನಾಶಕಗಳನ್ನು ಸಿಂಪಡಿಸಿಲ್ಲ, ಆದ್ದರಿಂದ ಸಾಂಕ್ರಾಮಿಕ ರೋಗಗಳ ಭಯದಿಂದ ತತ್ತರಿಸುತ್ತಿದ್ದಾರೆ ಜನರು. ಡೇಂಘೀ ಮತ್ತಿ ಚಿಕೂನ್ ಗುನ್ಯಾ ರೋಗಗಳು ಮಾರಿಯಾಗಿ ಬಂದು ಹಲವು ಜೀವಗಳನ್ನು ಬಲಿ ಪಡೆದಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಪೈರು ಕೈಗೆ ಬಂದರೂ ನೆರೆಯಿಂದ ಹಾಳಾಗಿಹೋಗಿದ್ದು, ಪ್ರಾಥಮಿಕ ವರದಿಯ ಅಂದಾಜಿನ ಪ್ರಕಾರ ಚಿಕ್ಕೋಡಿ, ಅಥಣಿ, ಕಾಗವಾಡ, ಕುಡಚಿ, ರಾಯಭಾಗ ಹಾಗೂ ನಿಪ್ಪಾಣಿ ಭಾಗದಲ್ಲಿ ಸುಮಾರು 90 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಕಬ್ಬಿನ ಬೆಳೆ ಹಾಣಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಪ್ರತಿ ಧ್ವನಿ ತಂಡಕ್ಕೆ ತಿಳಿಸಿದವು.
ಬೆಳಗಾವಿ ಜಿಲ್ಲೆಯಲ್ಲಿ ಹಾನಿ ವಿತರಣೆಯಲ್ಲಿ ಗೊಂದಲಗಳುಂಟಾಗಿದ್ದು, ಸಾಫ್ಟ್ ವೇರ್ ಹಾಗೂ ಇನ್ನಿತರ ಕಾರಣಗಳನ್ನು ನೀಡಲಾಗುತ್ತಿದೆ. ಪ್ರವಾಹ ಸಂದರ್ಭದಲ್ಲಿ ಒಟ್ಟು ಈ ಜಿಲ್ಲೆಯಲ್ಲಿ 38 ಜನರು ಮೃತರಾಗಿದ್ದು, ಬಹುತೇಕ ಜನರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ. ಪರಿಹಾರಕ್ಕೆಂದು ಬಿಡುಗಡೆಯಾದ 867 ಕೋಟಿಗಳಲ್ಲಿ ಎಷ್ಟು ವೆಚ್ಚವಾಗಿದೆ ಎಂದು, ಯಾರಿಗೆ ಸಿಕ್ಕಿದೆ, ನನಗಿಲ್ಲ, ನಿಮಗಿಲ್ಲ ಎಂದು ಜನರು ಗೊಂದಲದಲ್ಲಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿ, ಮನೆಗಳ ದುರಸ್ತಿ ಕಾರ್ಯ ಹಾಗೂ ಬೆಳೆ ಹಾನಿ ಸಮಪರ್ಕವಾಗಿ ಹಾಗೂ ಶೀಘ್ರವೇ ಎಲ್ಲರಿಗೂ ತಲುಪಲಿ ಎಂಬುದನ್ನೇ ಕಾಯುತ್ತ ಕುಳಿತಿದ್ದಾರೆ.
ಧಾರವಾಡದ ಕುಂದಗೋಳ ಹಾಗೂ ನವಲಗುಂದ ಕೆಲವು ಗ್ರಾಮಗಳ್ಲಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲೆಯ ಹಲವು ಪ್ರಮುಖ ನೀರಿನ ಸರಬುರಾಜು ಪೈಪ್ ಗಳು ಒಡೆದು ಹೋಗಿದ್ದು ಇನ್ನೂ ದುರಸ್ತಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 108 ಶಂಕಿತ ಡೆಂಘೀ ಕಂಡು ಬಂದಿದ್ದು ಜನರು ಆತಂಕದಲ್ಲಿ ಜೀವಿಸುತ್ತಿದ್ದಾರೆ. ಹುಬ್ಬಳ್ಳಿ ಜನ ಜೀವನ ಈಗ ಸುಧಾರಿಸುತ್ತಿದೆ.
ಬಾಗಲಕೋಟೆಯ ಹಲವು ಗ್ರಾಮಗಳಲ್ಲಿ ಜಾನುವಾರಗಳ ಮೇವಿನ ಸಮಸ್ಯೆ ಹೆಚ್ಚಾಗಿದ್ದು ರೈತರ ಮೇವಿನ ಸಂಗ್ರಹಕ್ಕಾಗಿ ಅಲೆದಾಡುತ್ತಿದ್ದಾರೆ. ಬಾದಾಮಿ ಹಾಗೂ ಜಮಖಂಡಿಯ ಹಲವು ಗ್ರಾಮಗಳಲ್ಲಿ ಜನಜೀವನ ಇನ್ನೂ ಸುಧಾರಿಸಿಲ್ಲ. ಹಲವು ಜನರು ಇನ್ನೂ ನೆರೆಯ ಬರೆಯಿಂದ ಹೊರಬಂದಿಲ್ಲ. ಇಲ್ಲೂ ಗುಡಿಸಲು ಹಾಕಿಕೊಂಡು ಕೂಡುವ ಪರಿಸ್ಥಿತಿ ಎದುರಾಗಿದೆ.
ರಾಯಚೂರಿನ ಹಲವು ಭಾಗಗಳಲ್ಲಿ ಸಜ್ಜೆ, ಎಳ್ಳು, ತೊಗರಿ, ಸೂರ್ಯಕಾಂತಿ ಬೆಳೆ ಇನ್ನೇನು ಕೈಗೆ ಬರುವಷ್ಟರಲ್ಲಿಗೆ ಕೃಷ್ಣೆಯ ಆರ್ಭಟದಿಂದಾಗಿ ಹೊಲಗದ್ದೆಗಳಲ್ಲಿ ನೀರು ನಿಂತು ಬಹುತೇಕ ಹೊಲಗಳು ಈಗ ಕೃಷಿ ಮಾಡಲು ಯೋಗ್ಯವಾಗುತ್ತಿವೆ, ಹೀಗಾಗಿ ಬದುಕುವುದೇ ದುಸ್ತರ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಗದಗ್ ನ ನರಗುಂದ ಹಾಗೂ ರೋಣ ತಾಲೂಕಿನ 22 ಗ್ರಾಮಗಳಲ್ಲಿ ಈಗ ನೀರು ಸಂಪೂರ್ಣ ಕಡಿಮೆಯಾಗಿದ್ದು, ಜನರಿಗೆ ಕೆಲವು ಕಡೆಗಳಲ್ಲಿ ಅಂದರೆ 2009ರ ಪ್ರವಾಹದ ನಂತರ ದಲ್ಲಿ ನವ ಗ್ರಾಮಗಳಲ್ಲಿ ಮನೆ ಕಟ್ಟಿಸಿದ್ದು ಈಗ ಗ್ರಾಮಸ್ಥರು ಅಲ್ಲಿ ನೆಲೆಸುತ್ತಿದ್ದಾರೆ. ಕೆಲವು ಕಡೆಗೆ ರಸ್ತೆಗಳು ಇನ್ನೂ ದುರಸ್ತಿಯಾಗದ ಕಾರಣ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ವೀರಣ್ಣ ಪಾಟೀಲ್ ಪ್ರಕಾರ, “ಪ್ರವಾಹದಿಂದ ಆದ ಬೆಳೆ ನಷ್ಟದ ವಿವರಣೆಯನ್ನು ಅಧಿಕಾರಿಗಳು ತಪ್ಪಾಗಿ ನಮೂದಿಸಿದ್ದಾರೆ. 2 ಹೆಕ್ಟರ್ ಪ್ರದೇಶದ ವರೆಗೆ ಪರಿಹಾರ ಕೋಡಲು ಸರ್ಕಾರವೇ ಒಪ್ಪಿಕೊಂಡಿದೆ. ಅಧಿಕಾರಿಗಳನ್ನು ಕೇಳಿದರೆ 1.5 ಹೆಕ್ಟರ್ ಎಂದು ನಮೂದಿಸಿಕೊಳ್ಳುತ್ತಾರೆ. ಇದು ತಪ್ಪು, ಅವರನ್ನು ಕೇಳಿದರೆ ಉದಾಸೀನತೆ ಉತ್ತರ ಖಾತ್ರಿ. ಮಲಪ್ರಭಾ ನದಿ ಉಕ್ಕಿ ಮುನವಳ್ಳಿ ಸುತ್ತಮುತ್ತ ಸಾಕಷ್ಟು ಹಾನಿಯಾಘಿದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ, ಆದರೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸವದತ್ತಿ ತಾಲೂಕು ನಮೂದಾಗಿದೆಯೇ ಎಂಬುದೇ ಸಂಶಯ”.
ಬೆಳಗಾವಿಯ ಶಾಂತವೀರ ಸುರಕೋಡ, ಖಾಸಗಿ ಸಂಸ್ಥೆಯ ನೌಕರರು ಹೇಳುವ ಪ್ರಕಾರ, “ಗ್ರಾಮಸ್ಥರಿಗೆ ಇನ್ನೂ ಸರಿಯಾಗಿ ಪರಿಹಾರ ದೊರಕಿಲ್ಲ, ನಾವು ಮೊನ್ನೆ ಮುನವಳ್ಳಿ ಹತ್ತಿರ ಚರಗ ಚೆಲ್ಲಲು ಸ್ನೇಹಿತರ ಹೊಲಕ್ಕೆ ಹೋದಾಗ ತಿಳಿದು ಬಂದಿದ್ದು, ಬಹುತೇಕರಿಗೆ ಇನ್ನೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಆಗ ಮಾಧ್ಯಮಗಳ ಮೂಲಕ ಕೇಳುತ್ತಿದ್ದರು. ಈಗ ಎಲ್ಲರೂ ಸಂತ್ರಸ್ತರನ್ನು ಮರೆತಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಂತ್ರಸ್ತರೆಂದರೆ ತಲೆನೋವೆಂಬ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿಯ ಜಿಲ್ಲಾಧಿಕಾರಿಗಳ ಅಧಿಕಾರಿಗಳ ಪ್ರಕಾರ, “ಜಿಲ್ಲೆಯಲ್ಲಿ ಒಟ್ಟು 44,166 ಮನೆಗಳು ಹಾನಿಯಾಗಿವೆ ಅದರಲ್ಲಿ 43,174 ಫಲಾನಿಭವಿಗಳಿಗೆ ಒಟ್ಟು ರೂ. 301.49 ಮೊತ್ತವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಕೆಲವರು ಸರಿಯಾದ ದಾಖಲೆಗಳನ್ನು ಹೊಂದಿರುವುದಿಲ್ಲ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದೇವೆ”.
ಇನ್ನೂ ಬಾಗಲಕೋಟೆ ಹಾಗೂ ಗದಗ್ ಭಾಗದಲ್ಲಿ ಶಾಲೆಗಳನ್ನು ಶೆಡ್ ಗಳಲ್ಲಿ ನಡೆಸಲಾಗುತ್ತಿದ್ದರೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ಹಾಗೆ ಶಿಕ್ಷಕರು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕ್ರಮವನ್ನು ತೆಗೆದುಕೊಂಡಿದ್ದಾರೆ.
ರೋಣ ತಾಲೂಕಿನ ಪ್ರಭುರಾಜಗೌಡ ಪಾಟೀಲ್ ಅವರ ಪ್ರಕಾರ, “ರಸ್ತೆಗಳು ಅಭಿವೃದ್ಧಿಯಾಗಿಲ್ಲ, ಪರಿಹಾರ ಹಣ ದೊರಕಿಲ್ಲ, ಜನಪ್ರತಿನಿಧಿಗಳು ಗ್ರಾಮಸ್ಥರ ಹತ್ತಿರ ಸುಳಿಯುತ್ತಿಲ್ಲ. ಹೊಸ ಮನೆಗಳು ಕೊಟ್ಟಿದ್ದಾರೆ ಆದರೂ ಅವುಗಳು ಶಿಥಿಲಾವಸ್ತೆಯಲ್ಲಿವೆ. 2009 ರಲ್ಲೆ ಕಟ್ಟಿದ ಆ ಮನೆಗಳು ಯಾರೂ ವಾಸವಾಗಿದ್ದಿಲ್ಲ. ಈಗ ವಿಧಿಯಿಲ್ಲದೇ ಸಂತ್ರಸ್ತರು ಅಲ್ಲಿ ಜೀವನ ನಡೆಸುತ್ತಿದ್ದಾರೆ. ಮನೆಗಳ ಗೋಡೆಗಳು ತಂಪು ಹಿಡಿದಿವೆ. ಮನೆಯ ಸುತ್ತಮುತ್ತ ಚರಂಡಿಗಳ ಪ್ರತ್ಯಕ್ಷವಾಘಿವೆ, ಅಲ್ಲಲ್ಲಿ ನೀರು ನಿಂತಿವೆ. ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿವೆ. ಸಂತ್ರಸ್ತರು ಗ್ರಾಮಕ್ಕಿಂತ ಹೆಚ್ಚು ಆಸ್ಪತ್ರೆಗಳಲ್ಲಿ ಕಾಣಸಿಗುತ್ತಿದ್ದಾರೆ”.
ಗದಗ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ್ ಪ್ರಕಾರ, “ಪ್ರವಾಹ ಪೀಡಿತ ಗ್ರಾಮಸ್ಥರ ಒಂದು ವರ್ಷದ ಕರ ಬೇಡ ಎಂದು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಸಾಮಗ್ರಿ ಒದಗಿಸಲು ಪ್ರಥಮ ಆಧ್ಯತೆ ನೀಡಲಾಗಿದೆ. ಈಗ ಬಹುತೇಕ ಸಮಸ್ಯೆಗಳು ಪರಿಹಾರ ಕಂಡಿದ್ದು, ಇನ್ನೂ ಸ್ವಲ್ಪ ಸಮಸ್ಯೆಗಳಿದ್ದು, ಅಧಿಕಾರಿಗಳು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ”.
ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಹೋದ ಮೇಲೆ ಬಹುತೇಕ ಬೆಳೆಗಳು ನಷ್ಟವಾಗಿದ್ದು ಈಗ ಹೊಲಗದ್ದೆಗಳು ಒಣಗುತ್ತಿವೆ. ಆದರೆ ಜೋಳ, ಕಡಲೆ ಹಾಗೂ ಇನ್ನಿತರ ಬೆಳೆಗಳು ತಡವಾಗಿ ಕೈಸೇರುತ್ತಿದ್ದು, ರೈತರಿಗೆ ತಕ್ಕ ಫಲ ನೀಡುತ್ತಿಲ್ಲ.
ನೆರೆ ಬಂದು ಹೋದ ಮೇಲೆ ಅದರ ನಷ್ಟ ಆಗಲೇ ಗೊತ್ತಾಗುವುದಿಲ್ಲ. ಬೆಲೆ ಹೆಚ್ಚಾಗುತ್ತದೆ. ಇನ್ನು ಎರಡು ಮೂರು ತಿಂಗಳು ಸಮಯ ಬೇಕಾಗುತ್ತದೆ. ಜನರ ಆರ್ಥಿಕ ಹೊರೆಯಿಂದ ತತ್ತರಿಸಿ ಹೋಗಿದ್ದಾರೆ. ಬೆಳೆ ವಿಮೆ ಅಥವಾ ಹಾನಿ ಸರಿಯಾಗಿ ಸಿಗದಿದ್ದರೆ ಮತ್ತೆ ರೈತರ ಆತ್ಮ ಹತ್ಯೆಗಳಿಗೆ ಕಾರಣವಾಗಬಾರದು, ನಮ್ಮ ರೈತರನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ನೊಂದವರಿಗೆ ಮನ ಮಿಡಿದರಷ್ಟೇ ಸಾಲದು ಅವರೆಲ್ಲರಿಗೂ ದೊರಕಬೇಕಾದ ಪರಿಹಾರ ಸರಿಯಾದ ಸಮಯದಲ್ಲಿ ದೊರಕಿದರೆ ಸಾಕು ಎಂಬುದಷ್ಟೇ ನಮ್ಮ ಸದಾಶಯ.
ಏನಾಗಿತ್ತಂದು ?
ಅದು 2019 ರ ಅಗಸ್ಟ್ ಮೊದಲನೆಯ ವಾರ. ನೆರೆ ಬರುತ್ತೆ ಎಂದು ಎಳ್ಳಷ್ಟೂ ಎಣಿಸದೆ ನೆಮ್ಮದಿ ಜೀವನ ನಡೆಸುತ್ತಿದ್ದ ಅನೇಕ ಗ್ರಾಮಗಳು ಇಂದು ಕೊಚ್ಚಿ ಹೋದವು. ಕೃಷ್ಣೆ, ಮಲಪ್ರಭೆ, ಘಟಪ್ರಭಾ ಹಾಗೂ ತುಪ್ಪರಿ ಮತ್ತು ಬೆಣ್ಣೆ ಹಳ್ಳಗಳು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದವು. ಮಲಪ್ರಭಾ ಹಾಘೂ ಘಟಪ್ರಭಾ ಕೇವಲ ಮೂರು ನಾಲ್ಕು ದಿನ ಹರಿದರೂ ನೂರಕ್ಕೂ ಹೆಚ್ಚು ಹಳ್ಳಿಗಳನ್ನು ಜಲಾವೃತಗೊಳಿಸಿದವು. ಕೃಷ್ಣೆಯ ಅಬ್ಬರವಂತೂ ಹದಿನೈದು ದಿನಗಳ ಮೀರಿ 80 ಕ್ಕೂ ಹೆಚ್ಚು ಹಳ್ಳಿಗಳನ್ನು ಜನ ಬಂಧನದಲ್ಲಿರಿಸಿತು. ಈ ಮೂರು ನದಿಗಳ ಪ್ರವಾಹದಿಂದ ಉತ್ತರ ಕರ್ನಾಟಕದ ಹಲವು ಹಳ್ಳಿಗರ ಜೀವನ ತತ್ತರಿಸಿ ಹೋಯಿತು.