ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ ಸಾವಿರಾರು ರೈತರು ಹಾಗೂ ಬಡವರು ನಿರ್ಗತಿಕರಾದರು. ಈ ಕುರಿತು ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ತರಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಲಿಲ್ಲ ಎಂಬ ಕೂಗು ಇನ್ನೂ ಕೇಳುತ್ತಲೇ ಇದೆ. ಆದರೆ, ಸಿಕ್ಕಿರುವ ಅನುದಾನವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ, ಅಧಿಕಾರಿಗಳು ತಮ್ಮ ಕಿಸೆಯನ್ನು ತುಂಬಲು ಮುಂದಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
2019ರಲ್ಲಿ ಹಾವೇರಿ ಜಿಲ್ಲೆಯಲ್ಲಿ ಉಂಟಾದ ನೆರೆಯಿಂದಾಗಿ ಹಲವು ಮಂದಿ ಮನೆ ಹಾಗೂ ಬೆಳೆ ಕಳೆದುಕೊಂಡು ಬೀದಿಗೆ ಬಂದಿದ್ದರು. ಇವರಿಗೆ ಸರ್ಕಾರದಿಂದ ಅನುದಾನವೂ ಲಭ್ಯವಾಗಿತ್ತು. ಸರ್ಕಾರಿ ನಿಯಮಗಳ ಪ್ರಕಾರ ಪರಿಹಾರ ತಂತ್ರಾಂಶದಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಒದಗಿಸಿ ಆಯಾ ಫಲಾನುಭವಿಗಳಿಗೆ ಪರಿಹಾರವನ್ನು ಒದಗಿಸುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳ ಮೇಲಿತ್ತು. ಆದರೆ, ಹಾವೇರಿಯ ಸವಣೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ನೆರೆ ಪರಿಹಾರ ನೀಡುವಲ್ಲಿ ತಹಶಿಲ್ದಾರರು, ಗ್ರಾಮಲೆಕ್ಕಾಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್‌ಗಳು ಹಾಗೂ ಕೆಲವು ಅಕ್ರಮ ಫಲಾನುಭವಿಗಳು ಪರಿಹಾರ ಧನವನ್ನು ತಮ್ಮ ಕಿಸೆಗೆ ಇಳಿಸಿಕೊಂಡಿದ್ದಾರೆ. ಇನ್ನೊಂದೆಡೆ ನೆರೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರು ಪರಿಹಾರ ಸಿಕ್ಕಿಲ್ಲವೆಂದು ಕಂಗಾಲಾಗಿ ಹೋಗಿದ್ದಾರೆ.
ಈ ಕುರಿತಾಗಿ ಪ್ರತಿಧ್ವನಿಗೆ ಲಭ್ಯವಾಗಿರುವ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಮುಖೇನ ಮಾಹಿತಿ ಸಲ್ಲಿಸಲಾಗಿದ್ದು, ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆಯೆಂದು ಪತ್ರದಲ್ಲಿ ತಿಳಿಸಲಾಗಿದೆ. ಪರಿಹಾರ ವಿತರಣೆಯಲ್ಲಿ ಆಗಿರುವ ಲೋಪದೋಷಗಳ ಕುರಿತು ತಪಾಸಣೆ ನಡೆಸುವಂತೆ ಹಾವೇರಿಯ ಅಪರ ಜಿಲ್ಲಾಧಿಕಾರಿಗಳು ಪ್ರದೇಶಿಕ ಆಯುಕ್ತರಲ್ಲಿ ಕೇಳಿಕೊಂಡಿದ್ದಾರೆ.
ಅಷ್ಟಕ್ಕೂ ಇಲ್ಲಿ ಆಗಿರುವುದೇನೆಂದರೆ, ಅರ್ಹ ಫಲಾನುಭವಿಗಳು ತಮ್ಮ ಭೂ ದಾಖಲೆ (ಆರ್.ಟಿ.ಸಿ)ಯೊಂದಿಗೆ, ಆಧಾರ್ ಕಾರ್ಡ್‌ನ್ನು ಪರಿಹಾರ ಕೋರಿ ಅರ್ಜಿ ಸಲ್ಲಿಸುವ ವೇಳೆ ನೀಡಬೇಕು. ಆ ದಾಖಲೆಗಳ ಆಧಾರದ ಮೇಲೆ, ತಹಶಿಲ್ದಾರರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕಾ ನಿರ್ದೇಶಕರು ನೆರೆ ಪೀಡಿತ ಪ್ರದೇಶವನ್ನು ಖುದ್ದು ಪರಿಶೀಲನೆ ಮಾಡಿ ಬೆಳೆ ಹಾನಿಯ ಪ್ರಮಾಣವನ್ನು ಡಾಟಾ ಎಂಟ್ರಿ ಆಪರೇಟರ್‌ಗಳ ಮೂಲಕ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಬೇಕು. ಈ ರೀತಿ ದಾಖಲಿಸುವಾಗ ಆಪರೇಟರ್‌ಗಳು ತಮಗೆ ನೀಡಿರುವ Login ID ಹಾಗೂ Passwordಗಳನ್ನು ಬಳಸಿ login ಆಗಬೇಕು. RTC ಹಾಗೂ ಆಧಾರ್ ಕಾರ್ಡ್‌ನಲ್ಲಿರುವ ಭೂ ಮಾಲಿಕನ ಹೆಸರನ್ನು ಪರಿಶೀಲಿಸಬೇಕು. ಪರಿಹಾರ ತಂತ್ರಾಂಶದಲ್ಲಿ ಬರುವ Match score 1.5ಕ್ಕಿಂತ ಕಡಿಮೆಯಿದ್ದಲ್ಲಿ, ಮರು ಪರಿಶೀಲನೆಗೆ ಕಳುಹಿಸಬೇಕು. ಹೆಸರುಗಳು ಸರಿ ಇದ್ದಲ್ಲಿ ಆ ಅರ್ಜಿಯನ್ನು ಪುರಸ್ಕರಿಸಿ ತಹಶಿಲ್ದಾರರ ಪರಿಶಿಲನೆಗೆ ಕಳುಹಿಸಬೇಕು. ತಹಶಿಲ್ದಾರರು ಪರಿಶೀಲಿಸಿದ ನಂತರ ಆ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಬೇಕು. ಅಂತಹ ಅರ್ಜಿಗಳಿಗೆ ಮಾತ್ರ ನೆರೆ ಪರಿಹಾರ ಧನ ಲಭಿಸುವುದು.
ಆದರೆ, ಇಷ್ಟೆಲ್ಲಾ ಕಷ್ಟಪಡುವ ಗೋಜಿಗೆ ಹೋಗದೇ, ಕೆಲವು ತಹಶಿಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರಿ ಭೂಮಿಯ ದಾಖಲೆಗಳನ್ನು ಒದಗಿಸಿ, ತಮ್ಮ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ನೆರೆ ಪರಿಹಾರದ ಹಣವನ್ನು ವರ್ಗಾಯಿಸಿದ್ದಾರೆ. ಕೆಲವು ಕಂಪ್ಯೂಟರ್ ಆಪರೇಟರ್‌ಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ ತಮ್ಮ ಹಂತದಲ್ಲಿಯೇ ಹಣ ಬಿಡುಗಡೆ ಮಾಡಿದ್ದಾರೆ. ಪರಿಹಾರ ತಂತ್ರಾಂಶದಲ್ಲಿ match score 0 ಇದ್ದಾಗಲೂ ಹಣ ಪಾವತಿಯಾಗಿದೆ ಎಂಬ ಆತಂತಕಕಾರಿ ವಿಷಯ ಬಯಲಾಗಿದೆ. ಇಂತಹ ಸಾವಿರಕ್ಕೂ ಮಿಕ್ಕಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಕ್ರಮದಲ್ಲಿ ತಹಶಿಲ್ದಾರರು, ಗ್ರಾಂ ಲೆಕ್ಕಾಧಿಕಾರಿಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳು ನೇರ ಭಾಗಿಯಾಗಿದ್ದಾರೆ.
ಈ ಪರಿಹಾರ ತಂತ್ರಾಂಶದಲ್ಲಿ ಕೂಡಾ ಲೋಪ ದೋಷಗಳಿದ್ದು, ಅವುಗಳನ್ನು ಬಳಸಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಹಾವೇರಿಯಲ್ಲಿ ದೇವಸ್ಥಾನ, ಮಸೀದಿ ಹಾಗೂ ಹುಲ್ಲುಗಾವಲುಗಳಿಗೆ ಕೂಡಾ ನೆರೆ ಪರಿಹಾರದ ಹಣ ಸಲ್ಲಿಕೆಯಾಗಿದೆ. ಇದರಿಂದಾಗಿ ನಿಜಕ್ಕೂ ಬೆಳೆ ಕಳೆದುಕೊಂಡು ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರ ರೋಧನೆ ಇನ್ನಷ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ರೈತರ ಕಷ್ಟಕ್ಕೆ ಶೀಘ್ರವೇ ಸ್ಪಂದಿಸಬೇಕಾಗಿದೆ.