ವಿಶ್ವದ ಸಿರಿವಂತ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲ ತಲೆದೋರಿದ್ದು, ಕುಡಿಯುವ ಒಂದು ಹನಿ ನೀರಿಗೂ ತತ್ವಾರ ಎದ್ದಿದೆ. ಪ್ರಾಣಿಗಳು ಕುಡಿಯುವ ನೀರಿಲ್ಲದೇ ಎಸಿ ಡಕ್ಟ್ ಗಳಿಂದ ತೊಟ್ಟಿಕ್ಕುವ ನೀರಿನ ಹನಿಯನ್ನೇ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಪರಿಣಾಮ 10,000 ಕ್ಕೂ ಅಧಿಕ ಒಂಟೆಗಳನ್ನು ಗುಂಡಿಟ್ಟು ಕೊಲ್ಲುವಂತೆ ಆದೇಶ ನೀಡಲಾಗಿದೆ. ಒಂದು ಕಡೆ ಬಿಸಿ ಹವೆ, ಮತ್ತೊಂದು ಕಡೆ ಬರಗಾಲದಿಂದ ಕುಡಿಯುವ ನೀರಿಲ್ಲದಿರುವುದು ಈ ಬಡಪಾಯಿ ಒಂಟೆಗಳನ್ನು ಪರಿತಪಿಸುವಂತೆ ಮಾಡಿದೆ. ಒಂದು ಹನಿ ನೀರೂ ಸಿಗದ ಪರಿಣಾಮ ಒಂಟೆಗಳು ಮನೆಗಳಲ್ಲಿ ಹಾಕಲಾಗಿರುವ ಎಸಿ ಡಕ್ಟ್ ನಿಂದ ತೊಟ್ಟಿಕ್ಕುವ ನೀರನ್ನು ಕುಡಿಯಲು ಯತ್ನಿಸಿ ಆ ಹವಾನಿಯಂತ್ರಕ ಯಂತ್ರಗಳನ್ನು ಹಾಳು ಮಾಡುತ್ತಿವೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಒಂಟೆಗಳನ್ನು ಕೊಲ್ಲುವಂತೆ ಸ್ಥಳೀಯ ಆಡಳಿತವೊಂದು ಆದೇಶ ನೀಡಿದೆ.
ಈ ವಿಚಿತ್ರ ಆದೇಶಕ್ಕೆ ಆಸ್ಟ್ರೇಲಿಯಾದ ಅನಂಗು ಪಿಟ್ಜಂತ್ಜತ್ಜಾರ ಯಂಕುಂನೈಟ್ಜಟ್ಜಾರ ಪ್ರದೇಶ ಸಾಕ್ಷಿಯಾಗಿದೆ. ದಕ್ಷಿಣ ಆಸ್ಟ್ರೇಲಿಯಾದ ವಾಯುವ್ಯ ಪ್ರಾಂತ್ಯದಲ್ಲಿರುವ ಈ ಪ್ರದೇಶದಲ್ಲಿ ಬರಗಾಲ ಕಿತ್ತು ತಿನ್ನುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಬಿಸಿಗಾಳಿ ಬಲವಾಗಿ ಬೀಸುತ್ತಿದೆ. ಇಲ್ಲಿ 42 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಜನರು ಮನೆಗಳಿಗೆ ಹಾಕಿಸಿಕೊಂಡಿರುವ ಎಸಿಯನ್ನೇ ಅವಲಂಬಿಸಿದ್ದಾರೆ.
ಆದರೆ, ಕುಡಿಯಲು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಒಂಟೆಗಳು ನೀರಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಒಂಟೆಗಳು ಮನೆಗಳ ಕಾಂಪೌಂಡ್ ನೊಳಗೆ ನುಗ್ಗಿ ಪ್ರವೇಶ ದ್ವಾರಗಳನ್ನು ಹಾನಿಗೊಳಿಸಿ ನೇರವಾಗಿ ಮನೆಯ ಕಿಟಕಿಗಳಲ್ಲಿ ಕಾಣಿಸುವ ಎಸಿ ಡಕ್ಟ್ ಗಳನ್ನು ನೀರಿನ ಸೆಲೆಯಾಗಿ ಕಂಡುಕೊಂಡಿವೆ. ಇವುಗಳಲ್ಲಿ ತೊಟ್ಟಿಕ್ಕುವ ಹನಿ ನೀರನ್ನೇ ಹೀರಿಕೊಂಡು ದಾಹ ತಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹೀಗೆ ಮಾಡುವಾಗ ಹಲವಾರು ಡಕ್ಟ್ ಗಳೂ ಸಹ ಹಾನಿಗೊಂಡಿವೆ.
ಇದಿಷ್ಟೇ ಅಲ್ಲ, ಅಲ್ಲಲ್ಲಿ ಬೆಳೆದು ನಿಂತಿರುವ ಹಸಿರು ಪೈರು, ಹಣ್ಣು ತರಕಾರಿ ಗಿಡಗಳನ್ನೂ ತಿಂದ ದಾಹ ತೀರಿಸಿಕೊಳ್ಳುತ್ತಿವೆ. ಇದರಿಂದ ನಷ್ಟ ಅನುಭವಿಸುತ್ತಿರುವ ಇಲ್ಲಿನ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿರುವ ಸ್ಥಳೀಯ ಆಡಳಿತ ಸಾವಿರಾರು ಸಂಖ್ಯೆಯಲ್ಲಿರುವ ಒಂಟೆಗಳಿಗೆ ನೀರುಣಿಸುವುದು ಕಷ್ಟಸಾಧ್ಯದ ಕೆಲಸ ಎಂದು ಭಾವಿಸಿ ಅವುಗಳನ್ನು ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಿದೆ.
ಕಳೆದ ವರ್ಷದಂತೆಯೇ ಈ ಬಾರಿಯೂ ಆಸ್ಟ್ರೇಲಿಯಾದಲ್ಲಿ ಬಿಸಿಗಾಳಿ ಬೀಸುತ್ತಿದೆ. ಅಲ್ಲದೇ, ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ಭಾರೀ ಕಾಡ್ಗಿಚ್ಚನ್ನು ಎದುರಿಸಿದೆ. ವಿಶೇಷವಾಗಿ ನ್ಯೂ ಸೌತ್ ವೇಲ್ಸ್ ಮತ್ತು ದಕ್ಷಿಣ ಆಸ್ಟ್ರೇಲಿಯಾ ಭಾಗದಲ್ಲಿ ಬಿಸಿಗಾಳಿಯ ಹೊಡೆತ ಜನರನ್ನು ಮತ್ತು ಪ್ರಾಣಿಗಳನ್ನು ಜರ್ಝರಿತರನ್ನಾಗಿ ಮಾಡಿದೆ.
ಕಾಡ್ಗಿಚ್ಚಿನಿಂದ ಉಂಟಾಗಿರುವ ಹೊಗೆ ನಿಲ್ಲುವ ಪರಿಸ್ಥಿತಿಯಲ್ಲಿಲ್ಲ. ಇದರ ಪರಿಣಾಮ ಇಲ್ಲಿನ ನಗರಗಳಲ್ಲಿ ಸ್ಥಳೀಯ ಹವಾಮಾನದ ಭಾರೀ ಪ್ರಮಾಣದಲ್ಲಿ ವ್ಯತ್ಯಾಸವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಹಲವಾರು ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದೂ ಎಚ್ಚರಿಕೆ ನೀಡಿದೆ.
ಇನ್ನು ಒಂಟೆಗಳ ವಿಚಾರದಲ್ಲಿ ಸ್ಥಳೀಯ ಆಡಳಿತ ಕಠೋರ ನಿಲುವನ್ನು ತೆಗೆದುಕೊಂಡಿದೆ. ನೀರನ್ನು ಅರಸಿ ಬರುವ ಒಂಟೆಗಳ ಉಪಟಳಕ್ಕೆ ಜನ ಬೇಸತ್ತು ಹೋಗಿದ್ದಾರೆ. ತರಕಾರಿ, ಆಸ್ತಿಪಾಸ್ತಿಯನ್ನು ಹಾನಿಗೊಳಿಸುತ್ತಿರುವ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡುವಂತೆ ಆದೇಶ ನೀಡಲಾಗಿದೆ. ಈ ಕಾರ್ಯ ಬುಧವಾರ ಆರಂಭವಾಗಿದ್ದು, ಹೆಲಿಕಾಪ್ಟರ್ ನಲ್ಲಿ ಬರುವ ಅಗ್ನಿಶಾಮಕ ದಳದ ತಜ್ಞರು ಒಂಟೆಗಳನ್ನು ಗುರುತಿಸಿ ಅವುಗಳಿಗೆ ಗುಂಡಿಟ್ಟು ಕೊಲ್ಲುವ ಕಾರ್ಯವನ್ನು ಆರಂಭಿಸಿದ್ದಾರೆ. ಮುಂದಿನ ಐದು ದಿನಗಳವರೆಗೆ ಈ ಮಾರಣಹೋಮ ಪ್ರಕ್ರಿಯೆ ನಡೆಯಲಿದ್ದು, ಗುಂಡೇಟು ತಿಂದು ಸಾವನ್ನಪ್ಪುವ ಒಂಟೆಗಳನ್ನು ಸುಟ್ಟು ಹಾಕಲು ಅಗ್ನಿಶಾಮಕ ಇಲಾಖೆಗೆ ಸೂಚಿಸಲಾಗಿದೆ.
ಕೃಪೆ: ದಿ ವೈರ್