ಸಾರ್ವಜನಿಕ ರಂಗದಲ್ಲಿ ಬರೋಬ್ಬರಿ 114 ವರುಷಗಳನ್ನ ಕಾರ್ಪೊರೇಷನ್ ಬ್ಯಾಂಕ್ ಪೂರೈಸಿದೆ. ಅಂತೆಯೇ ದೇಶದ ಉದ್ದಗಲಕ್ಕೂ ಇರುವ ಸಾವಿರಾರು ಕಾರ್ಪ್ ಶಾಖೆಗಳಲ್ಲಿ ಸಂಸ್ಥಾಪನಾ ದಿನದ ಸಂಭ್ರಮ. ಬಹುಶಃ ಇದು ಕಾರ್ಪೊರೇಷನ್ ಬ್ಯಾಂಕ್ ಆಚರಿಸುತ್ತಿರುವ ಕೊನೆಯ ಸಂಸ್ಥಾಪನಾ ದಿನವೂ ಆಗಿರುವ ಸಾಧ್ಯತೆ ಇದೆ. ಕಾರಣ, ರಾಜ್ಯದ ಕರಾವಳಿ ಭಾಗದಲ್ಲಿ ಜನ್ಮ ತಾಳಿದ ಕಾರ್ಪೊರೇಷನ್ ಬ್ಯಾಂಕ್ ಮುಂದಿನ ನೂತನ ಹಣಕಾಸು ವರುಷಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಳ್ಳಲಿದೆ. ಅಲ್ಲಿಗೆ ವಿಜಯಾ ಬ್ಯಾಂಕ್ ಅನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟು ಪಡೆದ ಇನ್ನೊಂದು ಬ್ಯಾಂಕ್ ಅನ್ಯ ರಾಜ್ಯದ ಬ್ಯಾಂಕ್ ಜೊತೆ ವಿಲೀನಗೊಂಡಂತಾಗಲಿದೆ. ಕಳೆದ ವರುಷ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಇಂತಹದ್ದೊಂದು ಆದೇಶ ಹೊರಡಿಸುತ್ತಲೇ ದೇಶದ ಹತ್ತು ಬ್ಯಾಂಕ್ ಗಳು ನಾಲ್ಕು ಬ್ಯಾಂಕ್ ಗಳಾಗಿ ವಿಲೀನಗೊಂಡಿದೆ. ಮುಂದಿನ ಏಪ್ರಿಲ್ 1 ಕ್ಕೆ ಎಲ್ಲಾ ಪ್ರಕ್ರಿಯೆಗಳು ಮುಗಿದು ಕಾರ್ಪೊರೇಷನ್ ಬ್ಯಾಂಕ್ ಹೆಸರಿಗೆ ಬದಲಾಗಿ ಅಷ್ಟೇನೂ ಪರಿಚಿತವಲ್ಲದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೆಸರು ಮುನ್ನಲೆಗೆ ಬರಲಿದೆ. ಆದ್ರೆ ಬ್ಯಾಂಕ್ ವಿಲೀನ ವಿಚಾರ ಅಷ್ಟಕ್ಕೆ ಇರಲಿ ; ಕಾರ್ಪೊರೇಷನ್ ಬ್ಯಾಂಕ್ 115 ನೇ ಸಂಸ್ಥಾಪನಾ ದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದೆ. ಕಾರ್ಪೊರೇಷನ್ ಬ್ಯಾಂಕ್ ಸ್ಥಾಪನೆ ಆಗೋ ಹೊತ್ತಿಗೆ ಅದರ ಸಂಸ್ಥಾಪಕ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹದ್ದೂರ್ ಅವರು ಏನು ಚಿಂತನೆಯನ್ನು ಬಿತ್ತಿದ್ದರೋ ಅದರಂತೆಯೇ ಅವರನ್ನ ಸ್ಮರಿಸಲಾಗಿದೆ. ಈ ಮೂಲಕ ಕರಾವಳಿಯಲ್ಲಿ ಹುಟ್ಟಿದ ಬ್ಯಾಂಕ್‌ನ ಸಂಸ್ಥಾಪಕನನ್ನು ಬೆಂಗಳೂರು ನಗರದ ಎನ್‌ಟಿ ರೋಡ್ ಕಾರ್ಪ್ ಬ್ಯಾಂಕ್ ಸಿಬ್ಬಂದಿಗಳು ಕೋಮು ಸೌಹಾರ್ದತೆಯ ದ್ಯೋತಕವಾಗಿಯೂ ನೆನಪಿಸಿಕೊಂಡಂತಾಗಿದೆ.
ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬರು ಬ್ಯಾಂಕ್ ಸ್ಥಾಪಿಸುವ ಹೊತ್ತಿಗೆ ಅವರಿಗೆ ಕೇವಲ 24 ರ ಹರೆಯ. ಆ ಹರೆಯದಲ್ಲೇ 5 ಸಾವಿರ ರೂಪಾಯಿ ಬಂಡವಾಳ ಹೂಡಿ ‘ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್’ ಅನ್ನೋ ಹೆಸರಲ್ಲಿ 1906 ಮಾರ್ಚ್ 12 ರಂದು ಬ್ಯಾಂಕ್‌ಗೆ ಚಾಲನೆ ನೀಡಿದ್ದರು. ಇಂದು ಅದೇ ಪುಟ್ಟ ಬ್ಯಾಂಕ್ ದೇಶಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿದೆ ಮಾತ್ರವಲ್ಲದೇ, ವಾರ್ಷಿಕ ಸಾವಿರಾರು ಕೋಟಿ ನಿವ್ವಳ ಲಾಭ ಪಡೆಯುತ್ತಿದೆ. ಇಂತಹ ಬ್ಯಾಂಕ್ ಸಂಸ್ಥಾಪಕ ಖಾಸಿಂ ಸಾಹೇಬರು ವ್ಯಾಪಾರ ಅಥವಾ ಲಾಭದ ಉದ್ದೇಶಕ್ಕಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಬದಲಾಗಿ ನಾಡಿನ ಪ್ರತಿಯೊಬ್ಬನಿಗೂ ಬ್ಯಾಂಕಿAಗ್ ಸೇವೆ ಸಿಗಬೇಕೆನ್ನುವುದು ಅವರ ಪರಿಕಲ್ಪನೆಯಾಗಿತ್ತು. 53 ವರುಷಗಳ ಕಾಲ ಬಾಳಿ ಬದುಕಿದ್ದ ಉಡುಪಿ ಮೂಲದ ಖಾಸಿಂ ಸಾಹೇಬರು ಕೃಷ್ಣನಗರಿಯಲ್ಲಿ ಮಾದರಿ ವ್ಯಕ್ತಿತ್ವ ಹೊಂದಿದ್ದವರು. ಆ ಕಾರಣಕ್ಕಾಗಿಯೆ ಅವರನ್ನ ಖಾನ್ ಸಾಹೇಬ್, ಖಾನ್ ಬಹದ್ದೂರ್ ಅನ್ನೋ ಬಿರುದುಗಳಿಂದ ಗೌರವಿಸಲಾಗಿತ್ತು. ಅಲ್ಲದೇ ನಾಡಿನ ಜನರ ಏಳಿಗೆ, ಸೌಹಾರ್ದತೆಗೆ ಒತ್ತುಕೊಟ್ಟಂತಹ ವ್ಯಕ್ತಿತ್ವವೂ ಖಾಸಿಂ ಸಾಹೇಬರದ್ದಾಗಿತ್ತು. ಆ ಕಾರಣಕ್ಕಾಗಿಯೇ ಹೆಸರಲ್ಲಿ ಅವರು ಮುಸ್ಲಿಂ ಧರ್ಮಾನುಯಾಯಿ ಆಗಿದ್ದರೂ, ಜನಮಾನಸದಲ್ಲಿ ಇಂದಿಗೂ ಓರ್ವ ಶ್ರೇಷ್ಠ ವ್ಯಕ್ತಿತ್ವದ ಸ್ಥಾನ ಪಡೆದಿದ್ದಾರೆ. ‘ಧರ್ಮ’ ರಾಜಕಾರಣ ಅತಿಯಾಗುತ್ತಿರುವ ಈ ಕಾಲಘಟ್ಟದಲ್ಲೂ ಖಾನ್ ಸಾಹೇಬರಿಗೆ ಉಡುಪಿ ಮಾತ್ರವಲ್ಲದೇ ವಿವಿಧ ಭಾಗಗಳಲ್ಲೂ ವಿಶೇಷ ಗೌರವವಿದೆ. ಸಂಸ್ಥಾಪನಾ ದಿನದಂದು ಅವರ ಭಾವಚಿತ್ರದ ಮುಂದೆ ಹಾರ-ತುರಾಯಿ ಇಟ್ಟು, ಟೋಪಿ ಧರಿಸಿದ ಖಾನ್ ಸಾಹೇಬರ ಹಣೆಗೊಂದು ತಿಲಕ, ಹಣ್ಣು ಹಂಪಲು, ಮುಂದೊಂದು ರಂಗೋಲಿ, ಅಗರಬತ್ತಿ ಹಚ್ಚಿ ನೀಡಿದ ದೇವತಾ ರೂಪ. ಜೊತೆಗೆ ಸಂಭ್ರಮಕ್ಕೆ ಪೂರಕವಾಗೋ ಬಲೂನ್ & ಬಂಟಿಗ್ಸ್..
ಹೌದು, ಖಾನ್ ಸಾಹೇಬರು ಜಾತಿ, ಧರ್ಮವನ್ನೆಲ್ಲಾ ಮೀರಿ ಬೆಳೆದ ವ್ಯಕ್ತಿತ್ವ ಅನ್ನೋದಕ್ಕೆ ೧೧೫ ನೇ ಸಂಸ್ಥಾಪನಾ ದಿನವು ಸಾಕ್ಷಿಯಾಗಿದೆ. ಇದುವರೆಗೂ ರಾಜಕೀಯ ದಾಳವಾಗದ ಹಾಜಿ ಖಾಸಿಂ ಸಾಹೇಬರು ಕೃಷ್ಣನಗರಿ ಉಡುಪಿಯಲ್ಲಿ ಹುಟ್ಟಿ ಬೆಳೆದವರು. ಮಸೀದಿ ಮಾತ್ರವಲ್ಲದೇ ಮಠ-ಮಂದಿರಗಳಿಗೂ ಅಪಾರ ಪ್ರಮಾಣದ ದಾನ ನೀಡಿದವರು. ಸಾರ್ವಜನಿಕರಿಗಾಗಿ ಆಸ್ಪತ್ರೆ, ಶಾಲೆ ಕಟ್ಟಿಸಿದ ಮೇರು ವ್ಯಕ್ತಿತ್ವ. ಆದರೆ ಅದೇ ಕರಾವಳಿ ಜಿಲ್ಲೆಗಳು ಇಂದು ಕೋಮು ದ್ವೇಷಕ್ಕೆ ನಲುಗುತ್ತಿದೆ. ಖಾಸಿಂ ಸಾಹೇಬರು ಬದುಕಿದ್ದ ಸಮಯದಲ್ಲಿ ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ನಡೆದ ಲಕ್ಷದೀಪೋತ್ಸವ ಸಂದರ್ಭ ಅಕಾಲಿಕ ಮಳೆ ಸುರಿದಾಗ ಸಾವಿರಾರು ಹಣತೆಗಳಿಗೆ ಎಣ್ಣೆ ಒದಗಿಸಿ ದೀಪ ಬೆಳಗುವಂತೆ ಮಾಡಿದ್ದರು. ಆ ಕಾರಣಕ್ಕಾಗಿಯೇ ಇರಬೇಕು ಪ್ರಬಲ ಹಿಂದುತ್ವ ಪ್ರತಿಪಾದಕರಾಗಿದ್ದ ಪೇಜಾವರ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥರಿಗೂ ಇಷ್ಟವಾಗಿದ್ದರು. 2006ರಲ್ಲಿ ನಡೆದಿದ್ದ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ “ಅಬ್ದುಲ್ಲಾ ಸಾಹೇಬರು ಪ್ರಾತಃ ಸ್ಮರಣೀಯರು” ಎಂದಿದ್ದರು.
ಆದರೆ ಇಂದು ಬೆಳೆಯುತ್ತಿರುವ ಧರ್ಮ ರಾಜಕಾರಣ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಸಮಾಜವನ್ನ ಒಡೆದು ಆಳುವ ನೀತಿಯ ಮೇಲೆ ನಡೆಯುತ್ತಿದೆ. ಇಂತಹ ಮೇರು ವ್ಯಕ್ತಿತ್ವಗಳು ಯಾರಿಗೂ ಮಾದರಿಯಾಗಿ ಉಳಿದಿಲ್ಲ ಅನ್ನೋ ಕೊರಗು ನಿಜಕ್ಕೂ ಕರಾವಳಿ ಭಾಗವನ್ನ ಅಕ್ಷರಶಃ ಕಾಡುತ್ತಿದೆ. ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರೇ ಕರಾವಳಿಯಲ್ಲಿ ಜನಪ್ರತಿನಿಧಿ, ಜನನಾಯಕರಾಗ ತೊಡಗಿರುವುದು ದುರಂತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದಿ ಹೆಸರಲ್ಲಿ ಜಾತಿ-ಧರ್ಮ ಮೀರಿ ಕಟ್ಟಿದ ಶ್ರೀನಿವಾಸ್ ಮಲ್ಯರು, ಮೂಲ್ಕಿ ಸುಂದರರಾಮ್ ಶೆಟ್ಟಿ, ಹಾಜಿ ಅಬ್ದುಲ್ಲ ಖಾಸಿಂ ಸಾಹೇಬರು, ಕುದ್ಮುಲ್ ರಂಗರಾಯರು ಇಂದಿನ ಯುವಕರಿಗೆ ಮಾದರಿಯಾಗದ ಹೊರತು ಕೋಮುದ್ವೇಷದ ವಾತಾವರಣ ದೂರ ಮಾಡುವುದು ತುಸು ಕಷ್ಟದ ಕೆಲಸ. ಅವರು ಮಾಡಿಟ್ಟು ಹೋದ ಪುಣ್ಯದ ಭೂಮಿಯಲ್ಲಿ ಕೋಮು ನೆತ್ತರ ದಾಹ ಕರಾವಳಿಯ ಶಾಂತಿಗೆ ಭಂಗ ತರುತ್ತಲೇ ಇದ್ದಾವೆ.
ಹಾಗಂತ ಸೌಹಾರ್ದತೆ ಬಯಸೋ ಮನಸ್ಸುಗಳಿಗೆ ಅದ್ಯಾವತ್ತಿದ್ದರೂ ಅಡ್ಡಿಯಾಗಲಿಲ್ಲ. ಇಂದಿಗೂ ರಾಮ-ಲಕ್ಷ್ಮಣರಂತೆ ಬಾಳಿ ಬದುಕುವ ಹಿಂದೂ-ಮುಸ್ಲಿಂ ಬಾಂಧವರು ಇದ್ದಾರೆ. ಉಳ್ಳಾಲದ ಸಯ್ಯದ್ ಮದನಿ ದರ್ಗಾಕ್ಕೆ ತೆರಳಿ ಹರಕೆ ತೀರಿಸೋ ಹಿಂದೂಗಳು, ತುಳುನಾಡಿನ ಕಾರಣಿಕ ದೈವಗಳ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಳ್ಳುವ ಮುಸ್ಲಿಮರು, ಅತ್ತೂರು ಚರ್ಚ್ ಜಾತ್ರೆಯಲ್ಲಿ ಕ್ಯಾಂಡಲ್ ಉರಿಸುವ ಕ್ರೈಸ್ತೇತರ ಬಾಂಧವರು ಕಡಲನಗರಿಯ ಸೌಹಾರ್ದತೆಯ ಬಯಸುವವರಾಗಿದ್ದಾರೆ. ಸರಿಸುಮಾರು ಐನೂರು ವರುಷಗಳ ಹಿಂದೆ ತುಳುನಾಡು ಕಂಡಿದ್ದ ಅವಳಿ ವೀರಪುರುಷರಾದ ಕೋಟಿ ಚೆನ್ನಯ್ಯರು ಸತ್ಯ, ನ್ಯಾಯದ ಮೇಲೆ ಸ್ಥಾಪಿಸಿದ ನಾಡಲ್ಲಿ ಇಂದಿಗೂ ಅಪ್ಪೆ ದೇಯಿಬೈದೆತಿಯ ಮಕ್ಕಳಂತೆ ಬದುಕುವವರಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡದ ಕೊಡಾಜೆಯಲ್ಲಿ ಹಿಂದೂ ಅನಾಥ ವೃದ್ಧೆಯ ಶವಸಂಸ್ಕಾರದಲ್ಲಿ ಮುಸ್ಲಿಂ ಯುವಕರು ಜೊತೆಗೂಡಿದರೆ, ಈದ್ ಮಿಲಾದ್ ರ‍್ಯಾಲಿ ಸಂದರ್ಭ ಪಾನೀಯ ವಿತರಿಸುವ ಹಿಂದೂಗಳಿದ್ದಾರೆ. ಶಬರಿಮಲೆ ತೆರಳಿ ವಾಪಾಸ್ ಬರೋ ಯಾತ್ರಿಕರಿಗೆ ಮಸೀದಿ ಆವರಣ ಆಶ್ರಯ ನೀಡಿದರೆ, ಇನ್ನೊಂದೆಡೆ ಮಲೆಗೆ ತೆರಳೋ ಮುನ್ನಾ ಮದ್ರಸಕ್ಕೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ಹಂಚುವ ಸದಾಚಾರಗಳು ಕರಾವಳಿಯಲ್ಲಿದೆ. ಬಪ್ಪ ಬ್ಯಾರಿಯಿಂದ ಹುಟ್ಟಿದ ಬಪ್ಪನಾಡು, ಇಂದಿಗೂ ಹಿಂದೂಗಳಿಂದಲೇ ಸಂರಕ್ಷಿಸಿಕೊಂಡು ಬಂದಿರುವ ಕಾಪು ಕೈಪುಂಜಾಲ್ ದರ್ಗಾಗಳು ಇಂತಹ ಅನೇಕ ಉದಾಹರಣೆಗಳು ಜೀವಂತವಿದೆ.
ಆದರೂ ‘ಧರ್ಮ ದ್ವೇಷ ಹುಟ್ಟು ಹಾಕೋ ರಾಜಕಾರಣ ಅದ್ಯಾವಾಗಿಂದ ತಲೆ ಎತ್ತಿತ್ತೋ ಅಂದಿನಿಂದ ಕರಾವಳಿಯಲ್ಲಿ ಮಾನವೀಯ ಸಂಬಂಧಗಳು ಕುಸಿಯತೊಡಗಿದ್ದಾವೆ. ಅದರಲ್ಲೂ ಇತ್ತೀಚೆಗಂತೂ ಸಿಎಎ ಪರ-ವಿರೋಧ ತಾರಕಕ್ಕೇರಿದ ಪರಿಣಾಮ ಜಾತ್ರಾ ಮಹೋತ್ಸವಗಳಲ್ಲಿ ಸ್ಟಾಲ್ ಇಡಲು ಮುಸ್ಲಿಮರಿಗೆ ಅವಕಾಶವಿಲ್ಲದಾಗಿದ್ದು. ಇತ್ತ ಸಿಎಎ ಪರ ಇರುವ ಹಿಂದೂಗಳ ಅಂಗಡಿಗೆ ತೆರಳ ಕೂಡದು ಅನ್ನೋ ಅಲಿಖಿತ ಫತ್ವಾ ಹೊರಡಿಸುವ ಮನೋಸ್ಥಿತಿಗಳು ನಿಜಕ್ಕೂ ಭಯಾನಕ. ಇವರೆಲ್ಲರಿಗೂ ಅದ್ಯಾವ ವ್ಯಕ್ತಿತ್ವ ಮಾದರಿಯಾಗಗಿದೆ ಅನ್ನೋದನ್ನ ಹುಡುಕಿಕೊಂಡು ಹೋದರೆ ಅವುಗಳು ಯಾವುದೂ ಕರಾವಳಿ ಜಿಲ್ಲೆಗಳಲ್ಲಿ ಇರಲಾರದು. ಅದ್ಯಾವುದೊ ಹಿಟ್ಲರ್, ಮುಸ್ಸೊಲೊನಿಯಂತಹ ವ್ಯಕ್ತಿತ್ವಗಳ ಕಡೆಗೆ ಬೆರಳು ತೋರಿಸುತ್ತಿದೆ.
ಹಾಗಾಗಿ ಉಡುಪಿಯಲ್ಲಿ ಹುಟ್ಟಿ ಇಡೀ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣರಾದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹದ್ದೂರ್ ಸಾಗಿ ಬಂದ ಹಾದಿ ಪ್ರಸ್ತುತ ಸಮಾಜಕ್ಕೆ ಹೆಚ್ಚು ಮಾದರಿಯೋಗ್ಯ. ಮನುಷ್ಯ-ಮನುಷ್ಯನನ್ನೇ ಗೌರವಿಸದೇ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಪುಣ್ಯಾತ್ಮರ ನೆನಪುಗಳು ಸೌಹಾರ್ದ ಸಮಾಜಕ್ಕೊಂದು ಬಲ ನೀಡುತ್ತೆ ಅನ್ನೋ ನಂಬಿಕೆ ಪ್ರಜ್ಞಾವಂತರದ್ದು.