ಬಿಜೆಪಿ ಸರ್ಕಾರ ಈಗ ಯಾವುದೇ ಧರ್ಮಗುರುಗಳಾಗಲೀ, ಬುದ್ಧಿಜೀವಿಗಳಾಗಲೀ ಏನೇ ಸಲಹೆಗಳನ್ನು ನೀಡಿದರೂ ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿದ್ದಂತೆ ಕಾಣುತ್ತಿಲ್ಲ. ಧರ್ಮದ ಆಧಾರದಲ್ಲಿ ಜನತೆಯನ್ನು ವಿಭಜಿಸುವುದು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಸರ್ಕಾರ ಮಾಡುತ್ತಿರುವುದು ಅದನ್ನೇ. ಅಧಿಕಾರಕ್ಕೆ ಬಂದ ದಿನದಿಂದಲೇ ಹಿಂದೂ ಮತಗಳನ್ನು ಕ್ರೋಢೀಕರಿಸಲು ಕೈ ಹಾಕಿರುವ ಬಿಜೆಪಿ ಇದಕ್ಕಾಗಿ ಭಾರೀ ಕಸರತ್ತನ್ನು ನಡೆಸುತ್ತಲೇ ಬಂದಿದೆ. ತನ್ನ ಥಿಂಕ್ ಟ್ಯಾಂಕ್ ಆಗಿರುವ ಸಂಘಪರಿವಾರದ ಹಿಡನ್ ಅಜೆಂಡಾವನ್ನು ಒಂದಲ್ಲಾ ಒಂದು ವಿಧದಲ್ಲಿ ಜಾರಿಗೆ ತರಲು ಮುನ್ನಡಿ ಇಡುತ್ತಲೇ ಬಂದಿದೆ.
ಇದೀಗ ಮುಸ್ಲಿಂರನ್ನು ಹೊರಗಿಟ್ಟು ಹಿಂದೂ ಸೇರಿದಂತೆ ಆರು ಧರ್ಮಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ವಿವಾದಿತ ಕಾನೂನನ್ನು ತರಲು ಹೊರಟಿದೆ. ಇದಕ್ಕೆ ದೇಶಾದ್ಯಂತ ತೀವ್ರ ವಿವಾದ, ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.
ಈ ಮಧ್ಯೆ, ಯಾವುದೇ ಕಾರಣಕ್ಕೂ ಧರ್ಮದ ಆಧಾರದಲ್ಲಿ ಪೌರತ್ವ ನೀಡಬೇಡಿ. ಹಾಗೊಂದು ವೇಳೆ ನೀಡಿದ್ದೇ ಆದಲ್ಲಿ ದೇಶದ ದೊಡ್ಡ ಮಾರಕವಾಗುತ್ತದೆ ಎಂಬ ಅಭಿಪ್ರಾಯ ಮತ್ತು ಆತಂಕಗಳು ಧಾರ್ಮಿಕ ಗುರುಗಳು, ಬುದ್ಧಿಜೀವಿಗಳಿಂದ ಬರುತ್ತಿವೆ.
ಈ ಸಂಬಂಧ ಕಳವಳ ವ್ಯಕ್ತಪಡಿಸಿರುವ ಬೆಂಗಳೂರಿನ ಆರ್ಚ್ ಬಿಷಪ್ ರೆವರಂಡ್ ಡಾ.ಪೀಟರ್ ಮಚಡೋ ಅವರು ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ರಾಜ್ಯದ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದು, ನೀವು ನಿರ್ದಿಷ್ಟ ಧರ್ಮದ ಅಕ್ರಮ ನಿವಾಸಿಗಳಿಗೆ ಪೌರತ್ವ ನೀಡುವ ಬದಲು ಎಲ್ಲಾ ಧರ್ಮದವರನ್ನೂ ಒಂದೇ ರೀತಿಯಲ್ಲಿ ನೀಡಬೇಕು ಮತ್ತು ಮಾನವೀಯತೆ ಆಧಾರದಲ್ಲಿ ಅವರನ್ನೆಲ್ಲಾ ಪರಿಗಣಿಸಿ ಪೌರತ್ವ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪೌರತ್ವ ಕಾನೂನಿನ ವಿಚಾರದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಅಹಿತಕರ ಘಟನೆಗಳು ದುರದೃಷ್ಟಕರ. ಇಂತಹ ಬೆಳವಣಿಗೆಗಳು ಆಗಬಾರದು. ಇದನ್ನು ತಹಬದಿಗೆ ತರುವ ಪ್ರಯತ್ನಗಳು ಸರ್ಕಾರದಿಂದ ಆಗಬೇಕು ಮತ್ತು ಎಲ್ಲಾ ಸಮುದಾಯ, ಧರ್ಮಗಳ ಜನರಿಗೂ ಒಂದೇ ರೀತಿಯ ಕಾನೂನನ್ನು ತಂದು ಅದರ ಪ್ರಕಾರ ಇವರೆಲ್ಲರಿಗೂ ಸಮಾನ ಅವಕಾಶವನ್ನು ನೀಡಬೇಕು ಎಂದು ಆರ್ಚ್ ಬಿಷಪ್ ಮನವಿ ಮಾಡಿದ್ದಾರೆ.
ಇದೇ ವೇಳೆ, ದೇಶದ ನಾಗರಿಕರು ಪ್ರತಿಭಟನೆ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕು. ಶಾಂತಿಯುತ ಪ್ರತಿಭಟನೆ ಮೂಲಕ ನ್ಯಾಯವನ್ನು ಪಡೆಯಬೇಕು. ಎಲ್ಲಿಯೂ ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ.

ಯಾವುದೇ ಒಂದು ಸಮಸ್ಯೆಗೆ ಹಿಂಸಾಚಾರ ಪರಿಹಾರವಾಗುವುದಿಲ್ಲ. ಯಾವುದೇ ಕಾನೂನು ನ್ಯಾಯಸಮ್ಮತವಾಗಿರಬೇಕು, ಸಮಾನತೆಯನ್ನು ಹೊಂದಿರಬೇಕು, ಪಕ್ಷಪಾತದಿಂದ ಕೂಡಿರಬಾರದು. ಹೀಗಾದಲ್ಲಿ ಮಾತ್ರ ದೇಶ ಪ್ರಗತಿಪಥದೆಡೆಗೆ ಸಾಗಲು ಸಾಧ್ಯವಾಗುತ್ತದೆ ಮತ್ತು ದೇಶದಲ್ಲಿ ಸಾಮರಸ್ಯದ ವಾತಾವರಣ ಮೂಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಎಲ್ಲಾ ಅಕ್ರಮ ನಿವಾಸಿಗಳಿಗೆ ಪೌರತ್ವದಂತಹ ಹಕ್ಕು ದೊರೆಯುತ್ತದೆ ಮತ್ತು ಅವರಿಗೆಲ್ಲರಿಗೂ ನ್ಯಾಯ ಸಿಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿದಂತಾಗುತ್ತದೆ. ಯಾವುದೇ ತಾರತಮ್ಯವಿಲ್ಲದೇ, ಎಲ್ಲಾ ಸಮುದಾಯ, ಧರ್ಮದವರಿಗೂ ಸಮಾನತೆಯ ಹಕ್ಕು ನೀಡಿದ ಕೀರ್ತಿಗೆ ಸರ್ಕಾರ ಪಾತ್ರವಾಗುತ್ತದೆ ಎಂಬ ಕಿವಿಮಾತನ್ನು ಆರ್ಚ್ ಬಿಷಪ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಈ ಮನವಿ ಪತ್ರದ ಮೂಲಕ ನಾವು ದೇಶದ ಕ್ರಿಶ್ಚಿಯನ್ ಸಮುದಾಯದವರೆಲ್ಲರೂ ತಾರತಮ್ಯವಿಲ್ಲದ ರೀತಿಯಲ್ಲಿ ಸೌಹಾರ್ದಯುತವಾದ ವಾತಾವರಣ ನಿರ್ಮಾಣ ಮಾಡಿ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡುತ್ತೇವೆ ಮತ್ತು ಸಮಾಜದ ಉನ್ನತಿಗೆ ಶ್ರಮವಹಿಸುತ್ತೇವೆ ಎಂದು ವಾಗ್ದಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಧರ್ಮದ ಹೆಸರಿನಲ್ಲಿ ಅನ್ಯಾಯಕ್ಕೆ ಒಳಗಾಗುವ ಆತಂಕದಲ್ಲಿರುವ ಧರ್ಮ, ಪಂಗಡಗಳ ಧ್ವನಿಗೆ ಧ್ವನಿಯಾಗಿ ನಾವು ನಿಲ್ಲಲಿದ್ದೇವೆ ಎಂದು ಧೈರ್ಯ ತುಂಬಿರುವ ಆರ್ಚ್ ಬಿಷಪ್ ಅವರು, ಅವರಿಗೆ ನೆಲದ ಕಾನೂನಿನಡಿಯಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಅಭಯ ನೀಡಿದ್ದಾರೆ.