ದೇಶದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿದ್ದ ಜಪಾನ್ ಕಳೆದ ದಶಕದಲ್ಲಿ ಚೀನಾದ ನಾಗಾಲೋಟದ ಮುಂದೆ ಕೊಂಚ ಬದಿಗೆ ಸರಿದಿರುವುದು ಗೋಚರಿಸುತ್ತಿದೆ. ಆದರೆ ತನ್ನ ಮತ್ತೊಂದು ದಿಗ್ಗಜ ಕ್ಷೇತ್ರವಾದ ಆಟೋಮೊಬೈಲ್ಸ್‌ನಲ್ಲಿ ಮಾತ್ರ ಜಪಾನೀ ಕಂಪನಿಗಳು domination ಮತ್ತಷ್ಟು ಹೆಚ್ಚಿದೆ.
ಜಗತ್ತಿನ ಅತ್ಯತ ಕಾಂಪಿಟೇಟಿವ್ ಆಟೋ ಮಾರ್ಕೆಟ್‌ಗಳಲ್ಲಿ ಒಂದಾದ ಭಾರತದಲ್ಲಿ ಕಳೆದ ದಶಕದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸಿದ್ದು, ದೇಶೀ ಹಾಗೂ ಅಂತಾರಾಷ್ಟ್ರೀಯ ಬ್ರಾಂಡ್‌ಗಳು ದೇಶದ ಮಾರುಕಟ್ಟೆಯಿಂದ ಹಿಂದೆ ಸರಿದಿವೆ. ಯೂರೋಪಿನ ಫಿಯಟ್, ಅಮೆರಿಕದ ಜನರಲ್ ಮೋಟರ್ಸ್ ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿವೆ.
ಇವುಗಳ ನಡುವೆ, ಬಿರ್ಲಾ ಗ್ರೂಪ್‌ನ ಐಕಾನಿಕ್ ಕಾರಿನ ಬ್ರಾಂಡ್ ಆದ ಹಿಂದೂಸ್ತಾನ್ ಮೋಟರ್ಸ್ ಸಹ, ಮೇ 2014ರಿಂದ ತನ್ನ ಉತ್ಪಾದನೆಗೆ ತಿಲಾಂಜಲಿ ಹಾಡಿದೆ.
ಮತ್ತೊಂದೆಡೆ, ಅನೇಕ ವಿದೇಶೀ ಬ್ರಾಂಡ್‌ಗಳಾದ ಕಿಯಾ ಮೋಟರ್ಸ್ ಹಾಗೂ ಎಂ.ಜಿ. ಮೋಟರ್ಸ್ ದೇಶದ ಮಾರುಕಟ್ಟೆ ಪ್ರವೇಶಿಸಿವೆ. ಕಿಯಾ ಸೆಲ್ಟೋಸ್ ಹಾಗೂ ಎಂ.ಜಿ ಹೆಕ್ಟರ್ ಹೊಸ ತಂತ್ರಜ್ಞಾನಗಳೊಂದಿಗೆ ಹೊಸ ಟ್ರೆಂಡ್ ಸೃಷ್ಟಿಸಿವೆ. ಮುಂದಿನ ದಿನಗಳಲ್ಲಿ ಪಿಗಾಟ್, FAW ಹೈಮಾ, ಗ್ರೇಟ್ ವಾಲ್ ಮೋಟರ್ಸ್ ಸಹ ದೇಶದ ಮಾರುಕಟ್ಟೆ ಪ್ರವೇಶ ಮಾಡಲು ಸಿದ್ಧತೆ ನಡಿಸಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ದೇಶದ ಕಾರು ಮಾರುಕಟ್ಟೆಯಲ್ಲಿ ಸಿಂಹಪಾಲು ಮುಂದುವರೆಸಿಕೊಂಡು ಹೋಗುತ್ತಿರುವ ಸುಜುಕಿ, ಟೊಯೋಟಾ,ಹೋಂಡಾ ಹಾಗೂ ನಿಸ್ಸಾನ್ ಸೇರಿದಂತೆ ಜಪಾನ್ ಮೂಲದ ಕಂಪನಿಗಳು ಕಳೆದ ದಶಕದಲ್ಲಿ ದೇಶದ ಮಾರ್ಕೆಟ್ ಪಾಲಿನಲ್ಲಿ 8.09 ಪ್ರತಿಶತದಷ್ಟು ವೃದ್ಧಿ ಸಾಧಿಸಿವೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ (ಏಪ್ರಿಲ್ 2019 – ಜನವರಿ 2020) 14,09,614 ವಾಹನಗಳನ್ನು ಮಾರಾಟ ಮಾಡಿರುವ ಜಪಾನೀ ಕಂಪನಿಗಳು, ದೇಶದ ಕಾರು ಮಾರುಕಟ್ಟೆಯ 59.21% ಪಾಲನ್ನು ಹೊಂದಿವೆ. 2010ರಲ್ಲಿ ಜಪಾನ್ ಮೂಲದ ಆಟೊ ದಿಗ್ಗಜರು 51.12% ಪಾಲು ಹೊಂದಿದ್ದವು.
2009-2010ರ ವಿತ್ತೀಯ ವರ್ಷದಲ್ಲಿ 4,59,447 ವಾಹನಗಳನ್ನು ಮಾರಾಟ ಮಾಡುವ, ದೇಶದ ಪ್ರಯಾಣಿಕ ವಾಹನಗಳ ಕ್ಷೇತ್ರದಲ್ಲಿ 23.56% ಶೇರ್ ಹೊಂದಿದ್ದ ಟಾಟಾ, ಮಹೀಂದ್ರ & ಮಹೀಂದ್ರ ಹಾಗೂ ಫೋರ್ಸ್ ನಂಥ ದೇಶೀ ಆಟೋಮೊಬೈಲ್ ದೈತ್ಯರು ಕಳೆದ ದಶಕದಲ್ಲಿ ಇಳಿಮುಖದ ಹಾದಿ ಹಿಡಿದಿವೆ. ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ 2,93,704 ವಾಹನಗಳ ಮಾರಾಟ ಮಾಡುವ ಮೂಲಕ 12.34% ಮಾರುಕಟ್ಟೆ ಪಾಲನ್ನು ದೇಶೀ ಕಂಪನಿಗಳು ಕಾಪಾಡಿಕೊಂಡಿವೆ.
ಇದೇ ಒಂಬತ್ತು ತಿಂಗಳ ಅವಧಿಯಲ್ಲಿ ಕಿಯಾ ಹಾಗೂ ಹ್ಯುಂಡೈನಂಥ ದಕ್ಷಿಣ ಕೊರಿಯಾ ಮೂಲದ ಕಂಪನಿಗಳು 4,79,225 ಕಾರುಗಳನ್ನು ಸೇಲ್ ಮಾಡಿ, ಮಾರುಕಟ್ಟೆಯ 20.13% ಶೇರ್ ಪಡೆದುಕೊಂಡಿವೆ. 2010ರಲ್ಲಿ ಇದೇ ದೇಶದ ಬ್ರಾಂಡ್‌ಗಳು ಭಾರತೀಯ ಮಾರ್ಕೆಟ್‌ನ 16.15% ಪಾಲು ಹೊಂದಿದ್ದವು.
ಇದರಿಂದ ಸ್ಪಷ್ಟವಾಗಿ ಗೋಚರಿಸುವ ವಿಚಾರವೆಂದರೆ, ಭಾರತೀಯ ಕಂಪನಿಗಳು ಕಳೆದುಕೊಂಡ ಪಾಲನ್ನು ಜಪಾನ್ ಮತ್ತು ದಕ್ಷಿಣ ಕೊರಿಯಾ ಸಂಸ್ಥೆಗಳು ಬುಟ್ಟಿಗೆ ಹಾಕಿಕೊಂಡಿವೆ.
ಇನ್ನು ದೊಡ್ಡಣ್ಣ ಅಮೆರಿಕದ ಬ್ರಾಂಡ್‌ಗಳು ಸಹ ದೇಶದ ಮಾರುಕಟ್ಟೆ ಮೇಲೆ ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ. 2017ರಲ್ಲೇ ತನ್ನ ಶೇವರ್ಲೆ ಕಾರುಗಳ ಮಾರಾಟ ಮಾಡುವುದನ್ನು ಜನರಲ್ ಮೋಟರ್ಸ್ ನಿಲ್ಲಿಸಿತ್ತು. ಮಹೀಂದ್ರಾ ಜೊತೆಗೆ ಸೇರಿಕೊಂಡಿರುವ ಫೋರ್ಡ್ ಮಾತ್ರವೇ ಭಾರತದ ಮಾರುಕಟ್ಟೆಯಲ್ಲಿ ಸದ್ಯದ ಮಟ್ಟಿಗೆ ಓಡುತ್ತಿದೆ. ಈ ಅವಧಿಯಲ್ಲಿ ಅಮೆರಿಕ ಮೂಲದ ಕಂಪನಿಗಳ 55,877 ಯುನಿಟ್‌ಗಳು ಸೇಲ್ ಆಗಿದ್ದು, 2.35% ಮಾರ್ಕೆಟ್ ಶೇರ್ ಪಡೆದುಕೊಂಡಿವೆ. 2010ರಲ್ಲಿ 6.38 % ಮಾರ್ಕೆಟ್ ಶೇರ್ ಇದ್ದ ಅಮೆರಿಕನ್ ಬ್ರಾಂಡ್‌ಗಳು ಯೂರೋಪಿಯನ್ ಬ್ರಾಂಡ್‌ಗಳಿಗೆ market space ಬಿಟ್ಟುಕೊಟ್ಟಂತೆ ಕಾಣುತ್ತಿವೆ.
ಐಷಾರಾಮಿ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾದ ಯೂರೋಪಿನ ಆಡಿ, BMW, ಜಾಗ್ವಾರ್ & ಲ್ಯಾಂಡ್ ರೋವರ್, ಮರ್ಸಿಡಿಸ್-ಬೆಂಝ್, ಫೋಕ್ಸ್ ವಾಗನ್ ಹಾಗೂ ಸ್ಕೋಡಾಗಳ ಮಾರ್ಕೆಟ್ ಶೇರ್ ಕಳೆದೊಂದು ದಶಕದಲ್ಲಿ ದುಪ್ಪಟ್ಟಾಗಿದೆ. 2019-2020ರ ವಿತ್ತೀಯ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಯೂರೋಪಿಯನ್ ಬ್ರಾಂಡ್‌ಗಳು 1,23,219 ಘಟಕಗಳ ಮಾರಾಟ ಮಾಡುವ ಮೂಲಕ 5.18% market share ಹೊಂದಿವೆ.
ಸದ್ಯ ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಧೂಂ ಮಚಾಲೆ ಮಾಡುತ್ತಿರುವ ಚೀನಾ ಆಟೋಮೊಬೈಲ್ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ಭಾರತೀಯ ಪ್ರಯಾಣಿಕ ವಾಹನಗಳ ಮಾರ್ಕೆಟ್‌ನ 0.8% ಶೇರ್‌ಅನ್ನು ಚೀನೀ ಬ್ರಾಂಡ್‌ಗಳು ಸದ್ಯದ ಮಟ್ಟಿಗೆ ಇಟ್ಟುಕೊಂಡಿವೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಭಾರತದ ಸಂಚಾರ ದಟ್ಟಣೆ ಹೊರಳುವ ಸಾಧ್ಯತೆಗಳು ಇರುವುದರಿಂದ, ಈ ಕ್ಷೇತ್ರದಲ್ಲಿ ಚೀನೀ ಸಂಸ್ಥೆಗಳು ದೊಡ್ಡ ಮಹತ್ವಾಕಾಂಕ್ಷೆ ಹೊಂದಿವೆ. 2040ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಶಕ್ತಿ ಕೇಂದ್ರವಾಗಬೇಕೆಂದು ಬೀಜಿಂಗ್ ದೊರೆಗಳು ಒತ್ತಿ ಹೇಳುತ್ತಿರುವುದು ಈ ನಿಟ್ಟಿನಲ್ಲಿ ಗಮನಾರ್ಹ.
ದ್ವಿಚಕ್ರ ವಾಹನಗಳ ವಿಚಾರದಲ್ಲೂ ಜಪಾನ್‌ನ ಓಟ ಸಖತ್ತಾಗೇ ನಡೆಯುತ್ತಿದೆ. ಹೋಂಡಾ ಕಂಪನಿಯ ಆಕ್ಟಿವಾ 2020ರ ಜನವರಿ ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದೆ.
ವರ್ಷದ ಮೊದಲ ತಿಂಗಳಲ್ಲಿ 2,34,740 ಆಕ್ಟಿವಾಗಳು ದೇಶದ ರಸ್ತೆಗಳಿಗೆ ಇಳಿದಿವೆ ಎಂದು ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘ (SIAM) ರಿಲೀಸ್ ಮಾಡಿದ ಮಾಹಿತಿ ತಿಳಿಸುತ್ತದೆ. ದೇಶದ ಹೆಂಗಸರಿಗೆ ಭಾರೀ ಫೇವರಿಟ್ ಆಗಿರುವ ಆಕ್ಟಿವಾ ಕಳೆದ ಒಂದೂವರೆ ದಶಕಗಳಿಂದ ಭರ್ಜರಿ ಮಾರಾಟ ಕಾಣುತ್ತಿದೆ. 2019ರ ವರ್ಷದ ಮೊದಲ ತಿಂಗಳಲ್ಲಿ ಒಟ್ಟಾರೆ 2,12,302 ಆಕ್ಟಿವಾಗಳು ಮಾರಾಟವಾಗಿದ್ದವು.
ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನಗಳ ಬ್ರಾಂಡ್ ಆಗಿರುವ ಭಾರತದ್ದೇ ಬ್ರಾಂಡ್ ಹೀರೋ ಮೋಟೋ ಕಾರ್ಪ್‌ನ ಸ್ಪ್ಲೆಂಡರ್ ಜನವರಿ ತಿಂಗಳ ಸೇಲ್ಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಳೆದ ತಿಂಗಳು ಇದೇ ಹೀರೋ ಕಂಪನಿಯ 2,22,578 ಸ್ಪ್ಲೆಂಡರ್‌ಗಳು ರಸ್ತೆಗಿಳಿದಿವೆ.