ಮಕ್ಕಳ ಕೈಗೆ ಮೊಬೈಲ್ ಗಳನ್ನು ಕೊಟ್ಟರೆ ಏನೆಲ್ಲಾ ಅವಾಂತರಗಳು ಆಗುತ್ತವೆ ಎಂಬುದಕ್ಕೆ ಮುಂಬೈನ ಹೆಸರಾಂತ ಶಾಲೆಯೊಂದರ ಮಕ್ಕಳು ನಡೆಸಿರುವ ಕೃತ್ಯ ನಿದರ್ಶನವಾಗಿದೆ.
ಇಲ್ಲಿನ ಕೆಲವು ಬಾಲಕರು ತಮ್ಮ ಸಹಪಾಠಿ ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಾಕಾರಿ ಮತ್ತು ಅಶ್ಲೀಲ ಸಂದೇಶಗಳನ್ನು ವಾಟ್ಸಪ್ ನಲ್ಲಿ ಹರಿ ಬಿಟ್ಟು ವಿದ್ಯಾರ್ಥಿನಿಯರಿಗೆ, ಪೋಷಕರಿಗೆ ಮತ್ತು ಶಾಲೆಗೆ ಇರಿಸು ಮುರಿಸು ಉಂಟು ಮಾಡಿದ್ದಾರೆ.
ಈ ತಪ್ಪಿಗಾಗಿ 8 ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಇವರೆಲ್ಲಾ 13 ರಿಂದ 14 ವರ್ಷ ವಯೋಮಾನದವರಾಗಿದ್ದಾರೆ.
ದೇಶದ ಹೆಸರಾಂತ ಶಾಲೆಯಾಗಿರುವ ಐಬಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿರುವುದು.
ಎಂಟು ವಿದ್ಯಾರ್ಥಿಗಳು ಸೇರಿ ನವೆಂಬರ್ 8 ರಿಂದ 30 ರ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬಾರಿ ಚಾಟ್ ಮಾಡಿದ್ದಾರೆ. ಅಶ್ಲೀಲ ಪದಗಳ ಬಳಕೆ, ಅತ್ಯಾಚಾರ, ಕೊಲೆ ಮಾಡುವುದು. . . ಹೀಗೆ ಹಲವು ವಿಧದಲ್ಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಇಬ್ಬರು ಬಾಲಕಿಯರನ್ನು ಗುರಿಯಾಗಿಟ್ಟುಕೊಂಡು ಅವರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ ಎಂದೆಲ್ಲಾ ಮನಸಿಗೆ ಬಂದಂತೆ ಮೆಸೇಜ್ ಗಳನ್ನು ಮಾಡಿಕೊಂಡಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರ ತಾಯಂದಿರ ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಶಾಲೆಗೆ ಈ ಬಗ್ಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಕೆಲವು ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಭಯವಾಗುತ್ತಿದೆ ಎಂದು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೆ, ಪೋಷಕರು ಈ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿರಲಿಲ್ಲ.
ಬಾಲಕರು ನಡೆಸಿರುವ ಚಾಟ್ 100 ಪೇಜಿಗೂ ಅಧಿಕವಾಗಿದೆ. ‘gang bang’, ‘rape’, “for one night”, “Then one night we just go and bang her”, “should I go full on and kill her existence” ಹೀಗೆ ಹಲವು ರೀತಿಯಲ್ಲಿ ಅಸಹ್ಯ ಹುಟ್ಟಿಸುವಂತಹ ಸಂದೇಶಗಳನ್ನು ಈ ವಿದ್ಯಾರ್ಥಿಗಳು ಪರಸ್ಪರ ಹಂಚಿಕೊಂಡಿದ್ದಾರೆ.
ನವೆಂಬರ್ 23 ರಂದು ನಡೆಸಿರುವ ಸಂಭಾಷಣೆಯಲ್ಲಿ ಬಾಲಕನೋರ್ವ ಹುಡುಗಿಯರನ್ನು ಒಂದು ರಾತ್ರಿಗೆ ಕರೆದೊಯ್ಯುವುದು ಎಂಬರ್ಥ ಬರುವ ರೀತಿಯಲ್ಲಿ ಹೇಳಿದ್ದಾನೆ.
ಇನ್ನೊಬ್ಬ ಕಿರಾತಕ ಬಾಲಕ ಹಾಗಾದರೆ ನಾವು ಆ ಹುಡುಗಿಯನ್ನು ಒಂದು ರಾತ್ರಿ ಕರೆತಂದು ….. ಮಾಡೋಣ ಎಂದು ಹೇಳಿದ್ದಾನೆ. ಈ ಹುಡುಗರು ಚಾಟ್ ಮಾಡಿದ ಬಹುತೇಕ ಸಂದರ್ಭಗಳಲ್ಲಿ ಹುಡುಗಿಯರನ್ನು ಕೀಳಾಗಿ ಕಂಡಿದ್ದಾರೆ ಮತ್ತು ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿಕೊಂಡಿದ್ದಾರೆ.
ಅತ್ಯಾಚಾರ, ಸಲಿಂಗಕಾಮ, ಸಲಿಂಗಕಾಮಿಗಳ ರೀತಿಯಲ್ಲಿ ಹುಡುಗರು ಅಣಕ ಮಾಡಿದ್ದಾರೆ. ಈ ರೀತಿ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಮತ್ತು ಅಶ್ಲೀಲ ಶಬ್ದಗಳ ಬಳಕೆ ಮಾಡಿರುವುದು ಮಕ್ಕಳ ವಿಕೃತ ಮನಸ್ಥಿತಿಯನ್ನು ಅನಾವರಣ ಮಾಡಿದೆ.
ಇನ್ನೂ ಪ್ರೌಢಶಾಲೆಯಲ್ಲಿರುವ ಮಕ್ಕಳು ಈ ರೀತಿ ಹಾಳಾಗುತ್ತಿರುವುದು ಪ್ರಜ್ಞಾವಂತ ಸಮಾಜಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕಾಗುತ್ತದೆ. ಒಂದು ವೇಳೆ ಅಡ್ಡದಾರಿ ತುಳಿಯುತ್ತಿರುವ ಸೂಕ್ಷ್ಮಗಳು ಗೊತ್ತಾದ ತಕ್ಷಣ ಅವರನ್ನು ಸರಿ ದಾರಿಗೆ ತರುವಂತೆ ಮಾಡಬೇಕು.
ಇದರೊಂದಿಗೆ ಇಂತಹ ಮನಸ್ಥಿತಿಯ ಮಕ್ಕಳಿಗೆ ಸೂಕ್ತವಾದ ಕೌನ್ಸೆಲಿಂಗ್ ನಡೆಸಿ ಅವರ ಭವಿಷ್ಯದ ಬಗ್ಗೆ ಚಿಂತನೆ ನಡೆಸುವಂತೆ ಮಾಡಬೇಕಿದೆ.