ದೇಶಕ್ಕೆ ದೇಶವೇ ನಿಂತು ಹೋರಾಡಬೇಕಾದ ಕಾಲ ಸನ್ನಿಹಿತವಾಗಿದೆ. ಅಣುವಿನಷ್ಟು ಗಾತ್ರದ ವೈರಾಣು ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮೊದಲೇ ಆರ್ಥಿಕವಾಗಿ ಬಳಲಿ ಬೆಂಡಾಗಿರುವ ಭಾರತಕ್ಕೆ ಕರೋನಾ ವೈರಸ್ ದೊಡ್ಡ ಪೆಟ್ಟನ್ನೇ ನೀಡಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿಗಳು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ವಿಶೇಷವಾಗಿ ಭಾರತದ ಉದ್ಯಮಿಗಳು, ಸೆಲೆಬ್ರಿಟಿಗಳು, ಶತಕೋಟಿ ಒಡೆಯರೆಲ್ಲ ಸ್ಪಂದಿಸಲೇ ಬೇಕಾದ ಸಮಯವಿದು. ಯಾಕೆಂದರೆ ಕೇವಲ ಸೋಂಕಿನ ವಿರುದ್ಧ ಮಾತ್ರವಲ್ಲ, ಈ ಸೋಂಕಿನಿಂದ ದೇಶ ಕಂಡಿರುವ ಲಾಕ್‌ಡೌನ್‌ನಿಂದ ಕಷ್ಟಪಡುತ್ತಿರುವ ಅರ್ಧದಷ್ಟು ಭಾರತದ ಬಡಮಂದಿಗೂ ನೆರವಿನ ಅಗತ್ಯವಿದೆ. ಆ ನಿಟ್ಟಿನಲ್ಲಿ ಈಗಾಗಲೇ ಹಲವು ಸೆಲೆಬ್ರಿಟಿಗಳು ತಮ್ಮಿಂದಾದ ಕೊಡುಗೆ ನೀಡಲು ಆರಂಭಿಸಿದ್ದಾರೆ. ಅದರಲ್ಲೂ ಕಾಲಿವುಡ್ ಸ್ಟಾರ್‌ಗಳಾದ ಮಹೇಶ್ ಬಾಬು, ಪವನ್ ಕಲ್ಯಾಣ್, ರಾಮ್ ಚರಣ್ ತೇಜ ಹಾಗೂ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ನೆರವಿಗೆ ಮುಂದಾಗಿದ್ದಾರೆ. ಇದೀಗ ಸೆಲೆಬ್ರಿಟಿಗಳ ಸಾಲಿಗೆ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರ್ಪಡೆಗೊಂಡಿದ್ದು, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 250 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
ʼಮಹಾತಾಯಿʼಯಿಂದ ದಕ್ಷಿಣ ಕನ್ನಡಕ್ಕೆ ಹರಿದು ಬಂದ ನೆರವು :
ಹೌದು, ಸಂಕಷ್ಟಕ್ಕೀಡಾದಗಲೆಲ್ಲಾ ಕರುನಾಡ ಮಹಾತಾಯಿ ಅಂತಲೇ ಕರೆಸಿಕೊಳ್ಳುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಅವರು ರಾಜ್ಯದಲ್ಲಿ ಕರೋನಾ ವೈರಸ್ ಗೆ ಮೊದಲ ಬಲಿ ಆದ ಸಂದರ್ಭದಲ್ಲಿಯೇ ರಾಜ್ಯ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಫೋನಾಯಿಸಿ ಇದರ ವಿರುದ್ಧ ಜೊತೆಯಾಗಿ ಹೋರಾಡೋಣ, ಯಾವುದಾದರೊಂದು ಆಸ್ಪತ್ರೆಯನ್ನ ಕರೋನಾ ವೈರಸ್‌ಗಾಗಿ ಸೀಮಿತಗೊಳಿಸಿದರೆ ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಸುಧಾ ಮೂರ್ತಿ ಅವರು ಸಚಿವರಿಗೆ ಭರವಸೆ ನೀಡಿದ್ದರು. ಇದನ್ನ ಖುದ್ದು ಸಚಿವ ಸುರೇಶ್ ಕುಮಾರ್ ಅವರೇ ತನ್ನ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಇದೇ ಮಾತನ್ನು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೂ ತಿಳಿಸಿದ್ದರು. ಆದರೆ ದುರಂತ ಅಂದ್ರೆ ಆರಂಭದಲ್ಲಿ ಎಚ್ಚೆತ್ತುಕೊಳ್ಳದ ಸರಕಾರ ʼಬಂದ್ಮೇಲೆʼ ನೋಡಿಕೊಳ್ಳುವ ಅನ್ನೋ ಗೋಜಿಗೆ ಬಿದ್ದು ಕಾಲಹರಣ ನಡೆಸಿದೆ. ಪರಿಣಾಮ ಈಗ ದೇಶವೇ ಲಾಕ್‌ಡೌನ್ ಆಗಿ ಕರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಲ್ಲುವಂತಾಗಿದೆ..
ಆದರೆ ಸುಧಾ ಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ಈಗಲೂ ಸಹಾಯ ಹಸ್ತ ಚಾಚಲು ಸಿದ್ಧವಾಗಿ ನಿಂತಿದೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ತಾನೇ ಆಹಾರ ಪೊಟ್ಟಣ ಕಟ್ಟಿದ್ದು ಮಾತ್ರವಲ್ಲದೇ, ಹತ್ತು ಕೋಟಿ ರೂಪಾಯಿ ಪರಿಹಾರ ನೀಡಿ ಸರಕಾರ ಜೊತೆಗೆ ಬೆನ್ನೆಲುಬಾಗಿ ನಿಂತು ರಾಜ್ಯದಲ್ಲಿಯೇ ಮನೆಮಾತಾದವರು. ಇದೀಗ ಮತ್ತೆ ಸುಧಾ ಮೂರ್ತಿ ಅವರು ಕರೋನಾ ವಿರುದ್ಧ ಹೋರಾಟಕ್ಕೂ ಸರಕಾರದ ಜೊತೆ ಕೈ ಜೋಡಿಸಿದ್ದಾರೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾದ ವಸ್ತುಗಳನ್ನು ಇನ್ಫೋಸಿಸ್ ಫೌಂಡೇಶನ್ ಕಳುಹಿಸಿಕೊಟ್ಟಿದೆ. ಅದರಲ್ಲೂ ವಿಶೇಷವಾಗಿ 500 ಮಿಲಿ ಲೀಟರ್ ನ 5000 ಬಾಟಲ್ ಸ್ಯಾನಿಟೈಸರ್, 1,65,000 ಮಾಸ್ಕ್, 2000 ಎನ್-95 ಮಾಸ್ಕ್, 50 ಕ್ಯಾಪ್‌ಗಳು, 60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್, 3 ಬ್ಲ್ಯಾಕ್ ಸರ್ಜಿಕಲ್ ಗ್ಲೌಸ್, 85 ಗಾಗಲ್ಸ್, 300 ಫಾಗ್ ಫ್ರೀ ಮಾಸ್ಕ್‌ಗಳನ್ನ ಒಳಗೊಂಡಿದೆ. ಇದನ್ನು ಹೊತ್ತು ಬೆಂಗಳೂರಿನಿಂದ ಹೊರಟಿದ್ದ ಟ್ರಕ್ ಮಂಗಳೂರನ್ನು ತಲುಪಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಧಾ ಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ಧಾರೆ.
ಟಾಟಾ ಒಡೆಯನಿಂದಲೂ ಕೋಟ್ಯಾಂತರ ರೂಪಾಯಿ ಘೋಷಣೆ:
ಇನ್ನು ಕರೋನಾ ವಿರುದ್ಧ ಹೋರಾಡಲು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಕೂಡಾ ಕೈ ಜೋಡಿಸಿದ್ದಾರೆ. ಭಾರತದ ಉದ್ಯಮಿಗಳಲ್ಲಿ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿರುವ ರತನ್ ಟಾಟಾ ಆರಂಭದಲ್ಲಿ ಟಾಟಾ ಟ್ರಸ್ಟ್ ವತಿಯಿಂದ 500 ಕೋಟಿ ರೂಪಾಯಿ ನೆರವು ಘೋಷಿಸಿದ್ರೆ, ತದನಂತರ ಟಾಟಾ ಸಮೂಹ ಸಂಸ್ಥೆ ಇನ್ನೂ ಹೆಚ್ಚುವರಿ 1000 ಕೋಟಿ ರೂಪಾಯಿಯ ನೆರವು ಘೋಷಿಸಿದ್ದು, ಹಾಗೆ ಒಟ್ಟು 1500 ಕೋಟಿ ರೂಪಾಯಿ ನೆರವನ್ನು ಟಾಟಾ ಸಮೂಹ ಸಂಸ್ಥೆಗಳು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದೆ. ಈ ಬಗ್ಗೆ ಅದು ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿಯೇ ತಿಳಿಸಿದೆ.
ಕರೋನಾ ವಿರುದ್ಧ ಹೋರಾಟಕ್ಕೆ ʼಮಹೀಂದ್ರಾʼ ಕೊಡುಗೆ :
ದೇಶ ಕರೋನಾ ಸೋಂಕಿನ ವಿರುದ್ಧ ಹೋರಾಡಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ದೇಶಕ್ಕೆ ಬೇಕಾದ ಅತ್ಯಗತ್ಯ ವೈದ್ಯಕೀಯ ಸಲಕರಣೆಯ ತಯಾರಿಗೆ ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ಮುಂದಾಗಿದೆ. ಅಂದಹಾಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕರೋನಾ ಸೋಂಕು ಪ್ರಮುಖವಾಗಿ ಬಾಧಿಸುವುದೇ ಶ್ವಾಸಕೋಶದ ಮೇಲೆ. ಪರಿಣಾಮ ರೋಗಿ ಉಸಿರಾಟದ ತೊಂದರೆಗೆ ಒಳಗಾಗುತ್ತಾನೆ. ಆ ಸಂದರ್ಭದಲ್ಲಿ ಆತನಿಗೆ ಕೃತಕ ಉಸಿರಾಟ ನೀಡಲು ವೆಂಟಿಲೇಟರ್‌ನ ಅಗತ್ಯವಿರುತ್ತದೆ. ಆದರೆ ಬಹುತೇಕ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವೆಂಟಿಲೇಟರ್ ಧಾರಾಳ ಲಭ್ಯವಿರದು. ಆದ್ದರಿಂದ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ ವಿಭಿನ್ನವಾಗಿ ಚಿಂತನೆ ನಡೆಸಿದೆ. ಹಾಗಂತ ಖುದ್ದು ಮಹೀಂದ್ರಾ ಕಂಪೆನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರೇ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ಅಂದಹಾಗೆ ಮಹೀಂದ್ರಾ ಕಂಪೆನಿ ಮಾಡಲು ಹೊರಟಿರುವ ಕೆಲಸವೇನೆಂದರೆ, ಉಸಿರಾಟದ ಸಮಸ್ಯೆ ಎದುರಿಸುವ ಕರೋನಾ ರೋಗಿಯ ಕೃತಕ ಉಸಿರಾಟಕ್ಕೆ ಬೇಕಾಗುವ ವೆಂಟಿಲೇಟರ್ ಗಳನ್ನು ತಯಾರಿಸಲು ಮುಂದಾಗಿದೆ. 5 ರಿಂದ 10 ಲಕ್ಷದ ವೆಂಟಿಲೇಟರ್ ತಯಾರಿಸಿದ ಕೆಲ ಎಕ್ಸ್‌ಪರ್ಟ್‌ಗಳೇ ಇಲ್ಲೂ ಕೂಡಾ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಇವರು ತಯಾರಿಸುತ್ತಿರುವ ವೆಂಟಿಲೇಟರ್ ವಿಭಿನ್ನವಾಗಿದ್ದು ಇದನ್ನ ಆಂಬು ಬ್ಯಾಗ್ ಎಂದು ಕರೆಯಲಾಗುತ್ತದೆ. ಈ ಆಂಬು ಬ್ಯಾಗ್ ರೋಗಿಯೊಬ್ಬನ ಕೃತಕ ಉಸಿರಾಟಕ್ಕೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ. ಅಷ್ಟಕ್ಕೂ ಮಹೀಂದ್ರಾ ಕಂಪೆನಿ ತಯಾರಿಸಲಿರುವ ಈ ಆಂಬೂ ಬ್ಯಾಗ್ ನ ಬೆಲೆ ಕೇವಲ 7500 ರೂಪಾಯಿ ಅಷ್ಟೇ..
ಮಹಾರಾಷ್ಟ್ರದ ಕಂಡಿವಲಿ ಮತ್ತು ನಾಸಿಕ್ ನ ಇಗತ್‌ಪುರಿಗಳಲ್ಲಿ ಇರುವ ಕಂಪೆನಿಯಲ್ಲಿ ಇದನ್ನು ತಯಾರಿಸಲಾಗಿದ್ದು, ಅದರ ವೀಡಿಯೋವನ್ನ ಆನಂದ್ ಮಹೀಂದ್ರಾ ಅವರೇ ಖುದ್ದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಸಾಧಕ-ಬಾಧಕ ಕುರಿತು ತಜ್ಞರ ಅಭಿಪ್ರಾಯಕ್ಕೆ ಎದುರು ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಹಾಗೇನಾದರೂ ಯಶಸ್ವಿ ಕಂಡಲ್ಲಿ ಭಾರತ ಕರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸಲಿದೆ ಅಂತಾನೂ ಆನಂದ್ ಮಹೀಂದ್ರಾ ತಿಳಿಸಿದ್ದಾರೆ. ಅಲ್ಲದೇ ಇದೇ ಕಂಪೆನಿಗಳಲ್ಲಿ ಅತೀ ಕಡಿಮೆ ಬೆಲೆಯ 7500 ರೂಪಾಯಿಯಲ್ಲಿ ಈ ಆಂಬು ಬ್ಯಾಗ್ ತಯಾರಾಗಲಿದೆ.
ಒಟ್ಟಿನಲ್ಲಿ ದೇಶದ 60 ಜನ ಉದ್ಯಮಿಗಳು ಕಳೆದ 2019 ರ ವರದಿ ಪ್ರಕಾರ ಶತಕೋಟಿ ಒಡೆಯರಾಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆನಂದ್ ಮಹೀಂದ್ರಾ, ರತನ್ ಟಾಟಾ, ಸುಧಾ ಮೂರ್ತಿ ಮುಂತಾದ ಉದ್ಯಮಿಗಳ ಹೆಸರುಗಳಷ್ಟೇ ಕಾಣುತ್ತಿದೆ. ಶತಕೋಟಿ ಒಡೆಯರಾದರೂ ದೇಶ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಇವರು ತೋರುತ್ತಿರುವ ಕಾಳಜಿಗೊಂಡು ಹ್ಯಾಟ್ಸ್ ಆಫ್ ಎನ್ನಲೇಬೇಕು.