ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ವರ್ಗಾವಣೆಯೊಂದಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರ ಹೆಸರಿನಲ್ಲಿ ಸರಕಾರ ಕೂಡಿಟ್ಟ ಬೃಹತ್ ಪ್ರಮಾಣದ ವಂತಿಗೆಯನ್ನು ಖರ್ಚು ಮಾಡದಿರುವುದು ಬೆಳಕಿಗೆ ಬಂದಿದೆ. ಅದರೊಂದಿಗೆ, ಖಾಲಿ ಖಜಾನೆ ಹೊಂದಿರುವ ಸರಕಾರ ಕಾರ್ಮಿಕರ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಖರ್ಚು ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.
1996ರಿಂದ ಇಂದಿನ ವರೆಗೆ ದೇಶದಲ್ಲಿ ಕಟ್ಟಡ ಕಾರ್ಮಿಕರ ವಂತಿಗೆ ಸಂಗ್ರಹ ಆಗಿರುವುದು ಬರೋಬ್ಬರಿ 50,000 ಕೋಟಿ ರೂಪಾಯಿ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿರುವ ಕಾಯಿದೆ ಪ್ರಕಾರ ಸರಕಾರ ಕಟ್ಟಡ ನಿರ್ಮಾಣ ಮಾಡುವವರಿಂದ ಶೇಕಡ 1ರಷ್ಟು ಸೆಸ್ ಸಂಗ್ರಹ ಮಾಡುತ್ತಿದೆ. 2019 ಮಾರ್ಚ್ ಅಂತ್ಯದ ವೇಳೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂಗ್ರಹ ಮಾಡಿರುವ ಒಟ್ಟು ದೇಣಿಗೆ 49,688 ಕೋಟಿ ರೂಪಾಯಿ. ಇದರಲ್ಲಿ ಖರ್ಚು ಮಾಡಿರುವುದು ಕೇವಲ 19, 379 ಕೋಟಿ ರೂಪಾಯಿ. 30 ಸಾವಿರ ಕೋಟಿ ರೂಪಾಯಿಯನ್ನು ಪ್ರತಿ ರಾಜ್ಯಗಳಲ್ಲಿ ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳು ಖರ್ಚು ಮಾಡಿಲ್ಲ.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಪ್ರಧಾನ ಮಂತ್ರಿಯವರಿಂದಲೇ ಪ್ರಶಂಸಿಲ್ಪಟ್ಟ ರೋಹಿಣಿ ಸಿಂಧೂರಿ ಅವರು ಕಳೆದ ಕೆಲವು ತಿಂಗಳಿನಿಂದ ಕಾರ್ಯದರ್ಶಿಯಾಗಿ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯವೈಖರಿಯನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಸುಮಾರು 8,000 ಕೋಟಿ ರೂಪಾಯಿ ಮಂಡಳಿಯಲ್ಲಿ ಕೊಳೆಯುತ್ತಾ ಬಿದ್ದಿತ್ತು. ಅದನ್ನು ಅಧಿಕ ಬಡ್ಡಿ ದರದಲ್ಲಿ ಠೇವಣಿ ಇರಿಸಲು ಸರಕಾರ ಒಪ್ಪಿರಲಿಲ್ಲ.
ಇದೀಗ ಕೇಂದ್ರ ಸರಕಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಮಂಡಳಿಯ 8,000 ಕೋಟಿ ರೂಪಾಯಿಯ ಮೇಲೆ ಕಣ್ಣಿಟ್ಟಿತ್ತು. ಕನಿಷ್ಟ 3,000 ಕೋಟಿ ರೂಪಾಯಿಯನ್ನು ವರ್ಗಾಯಿಸಬೇಕೆಂಬ ಇರಾದೆಯನ್ನು ಬಿ. ಎಸ್. ಯಡಿಯೂರಪ್ಪ ಸರ್ಕಾರ ಹೊಂದಿತ್ತು. ಅದು ಸಾಧ್ಯವಾಗದೇ ಹೋದಾಗ ಸಂತ್ರಸ್ತರಿಗೆ ಆಹಾರ ಪೊಟ್ಟಣ ವಿತರಿಸಲು 1,000 ಕೋಟಿ ರೂಪಾಯಿ ಪಡೆಯುವ ಕೆಲಸ ನಡೆದಿತ್ತು.

ಸರ್ಕಾರದ ಪರವಾಗಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರೇ ಈ ಫಂಡ್ ವರ್ಗಾವಣೆ ಮಾಡಲು ರೋಹಿಣಿ ಸಿಂಧೂರಿಗೆ ಸೂಚಿಸಿದ್ದರು ಎಂಬುದು ಮಣಿವಣ್ಣನ್ ಅವರ ಪತ್ರವೇ ಖಚಿತ ಪಡಿಸಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದಿರುವ ಮಹಾನ್ ಬುದ್ಧಿವಂತ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ರೋಹಿಣಿ ಸಿಂಧೂರಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಬಹುದು ಎಂದಿದ್ದರು. ಮಾತ್ರವಲ್ಲದೆ, ಸರಕಾರದ ಪರವಾಗಿ ಮಣಿವಣ್ಣನ್ ಅವರೇ ಫಂಡ್ ಕೇಳಿದ್ದರು ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರೋಹಿಣಿ ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕ ಸಹಾಯವಾಣಿ ರೂಪಿಸಲು ಕಿಯೋನಿಕ್ಸ್ ಕಂಪೆನಿ ಮೂಲಕ ನೇರ ಗುತ್ತಿಗೆ ನೀಡದೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು ಕೂಡ ಸರ್ಕಾರದ ಮೇಲಿನ ಹಂತದವರಿಗೆ ರುಚಿಸಲಿಲ್ಲ. ಉತ್ತರ ಕನ್ನಡ ಜಿಲ್ಲೆಯೊಂದರಿಂದಲೇ ಕಾರ್ಮಿಕರಿಗೆ ವಿವಾಹ ಸಹಾಯಧನ ನೀಡಲು ಐದು ಕೋಟಿ ರೂಪಾಯಿ ಪ್ರಸ್ತಾಪ ಬಂದಿರುವುದು ರೋಹಿಣಿ ಸಿಂಧೂರಿ ಅವರನ್ನು ಎಚ್ಚರಿಸಿದೆ ಎಂದರೂ ತಪ್ಪಾಗಲಾರದು.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹದಿನಾರಕ್ಕೂ ಹೆಚ್ಚು ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿವೆ. ಅವುಗಳಲ್ಲಿ ವಿವಾಹ ಸಂದರ್ಭದಲ್ಲಿ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡುವುದು ಕೂಡ ಒಂದು. ಉತ್ತರ ಕನ್ನಡ ಜಿಲ್ಲೆಯಿಂದ ಅಂದಾಜು ಒಂದು ಸಾವಿರ ಮಂದಿಗೆ ವಿವಾಹ ಸಹಾಯಧನ ನೀಡುವ ಪ್ರಸ್ತಾಪದ ಫೈಲ್ ಗುಮಾನಿ ಹುಟ್ಟಿಸುವಂತೆ ಇತ್ತು.
ಸಿಂಧೂರಿ ಅವರ ಪ್ರಕಾರ ಬಹುತೇಕ ಪ್ರಸ್ತಾಪಗಳು ಬೋಗಸ್ ಆಗಿದ್ದವು. ಈ ನಿಟ್ಟಿನಲ್ಲಿ ಮಂಡಳಿಯ ಹನ್ನೆರಡು ಸೇವೆಗಳನ್ನು ಆನ್ ಲೈನ್ ಮೂಲಕ ನೀಡಿ ಪಾರದರ್ಶಕಗೊಳಿಸುವ ಪ್ರಕ್ರಿಯೆ ಆರಂಭ ಆಗಿತ್ತು. ಕಾರ್ಮಿಕ ಕಲ್ಯಾಣ ಮಂಡಳಿಯ ಬಹುತೇಕ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲಪುತ್ತಿರಲಿಲ್ಲ. ಕರ್ನಾಟಕ ರಾಜ್ಯದಲ್ಲಿ 8,000 ಕೋಟಿ ರೂಪಾಯಿ ಸಂಗ್ರಹ ಇದ್ದರೂ ಖರ್ಚಾಗಿರುವುದು ಶೇಕಡ 10ಕ್ಕಿಂತಲೂ ಕಡಿಮೆ.

ದೇಶದಲ್ಲಿ ಕೂಡ ಕೆಲವು ರಾಜ್ಯಗಳು ಕಾರ್ಯಕ್ರಮಗಳ ಅನುಷ್ಠಾನ, ಕಾರ್ಮಿಕರ ನೋಂದಾವಣೆಯಲ್ಲಿ ಮುಂದಿದ್ದರೂ ಬಹುತೇಕ ರಾಜ್ಯಗಳು ಅನುಷ್ಠಾನದಲ್ಲಿ ಹಿಂದಿದ್ದವೆ. ಈ ಹಿನ್ನೆಲೆಯಲ್ಲಿ, 2006ರಲ್ಲೇ ಕಾರ್ಮಿಕ ಪರವಾದ ಸಂಘಟನೆಯೊಂದು ಕಾರ್ಮಿಕ ಮಂಡಳಿಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾನೂನು ಹೋರಾಟ (WP (C)318/ 2006) ನಡೆಸುತ್ತಲೇ ಬಂದಿದೆ. ಇತ್ತೀಚಿಗಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯ ಬಳಕೆಯನ್ನು ಗಮನಿಸುತ್ತಿದೆ. ಮಾತ್ರವಲ್ಲದೆ, ಲೆಕ್ಕ ಪರಿಶೋಧಕರಿಗೂ ಕಾರ್ಮಿಕ ಮಂಡಳಿಯ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ಕಣ್ಣಿಡುವಂತೆ ಆದೇಶ ನೀಡಿದೆ.
ಆ ಕಾರಣಕ್ಕಾಗಿಯೇ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಆಗಿದ್ದ ಸಿಂಧೂರಿ ಮಂಡಳಿಯ ನಿಧಿಯನ್ನು ಬೇರೆಡೆ ವರ್ಗಾಯಿಸಲು ಒಪ್ಪಿಗೆ ನೀಡಿಲ್ಲ. ಮಾತ್ರವಲ್ಲದೆ, ಸುಪ್ರೀಂ ಕೋರ್ಟಿನ ನಿರ್ದೇಶನ ಇರುವುದರಿಂದ ಆ ರೀತಿ ಮಾಡಲು ಆಗುವುದಿಲ್ಲ ಎಂದು ತನ್ನ ಹಿರಿಯ ಅಧಿಕಾರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಕಾರ್ಮಿಕ ಮಂಡಳಿಯನ್ನು ಚುರುಕುಗೊಳಿಸುವ ಕಾರ್ಯದಲ್ಲಿದ್ದ ಅಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.