ಕಾಶ್ಮೀರದ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೇವೀಂದರ್ ಸಿಂಗ್ ಶಂಕಿತ ಉಗ್ರಗಾಮಿಗಳಿಬ್ಬರನ್ನು ಕಾರಿನಲ್ಲಿ ಕೂರಿಸಿಕೊಂಡು ದೆಹಲಿ ಕಡೆಗೆ ಹೋಗುತ್ತಿದ್ದಾಗ ಬಂಧಿಸಿರುವುದು ನಿಸ್ಸಂಶಯವಾಗಿ ಒಂದು ಅತಿದೊಡ್ಡ ಸುದ್ದಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ಇದೊಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ವಿಚಾರವೂ ಆಗಿದೆ. ಆದರೆ, ಇಷ್ಟೊಂದು ಗಂಭೀರವಾದ ಪ್ರಕರಣ ನಡೆದರೂ ಈ ಬಗ್ಗೆ ಏನೂ ಆಗಿಲ್ಲ ಎಂಬಂತೆ ಪ್ರಧಾನಮಂತ್ರಿಗಳಿಗೆ ರಾಷ್ಟ್ರೀಯ ಭದ್ರತೆ ಬಗ್ಗೆ ಸಲಹೆ ನೀಡುವ ಅಜಿತ್ ದೋವಲ್ ನಡೆದುಕೊಳ್ಳುತ್ತಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ನ ಶಂಕಿತ ಉಗ್ರರಾದ ನವೀದ್ ಬಾಬಾ ಮತ್ತು ಅಲ್ತಾಫ್ ಜತೆ ಹೋಗುತ್ತಿದ್ದಾಗ ದೇವೀಂದರ್ ಸಿಂಗ್ ನನ್ನು ಶನಿವಾರ ಬಂಧಿಸಲಾಗಿತ್ತು. ಆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ಕನೇ ವ್ಯಕ್ತಿ ವಕೀಲ ಎಂದು ಹೇಳಲಾಗುತ್ತಿದೆ. ಈ ವ್ಯಕ್ತಿಯನ್ನು ಒಜಿಡಬ್ಲ್ಯೂ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳುತ್ತಿದ್ದಾರೆ. ಅಂದರೆ, overground worker of the militants. ಉಗ್ರಗಾಮಿಗಳ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪ ಈ ವ್ಯಕ್ತಿಯ ಮೇಲಿದೆ. ಈ ನಾಲ್ವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿರುವ ಪೊಲೀಸರು, ಸಿಂಗ್ ಗೆ ಸಂಬಂಧಿಸಿದ ನಿವಾಸ ಮತ್ತು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ವಿಜಯಕುಮಾರ್ ಅವರು, ಬಂಧಿತನಾಗಿರುವ ಸಿಂಗ್ ನನ್ನು ಯಾವುದೇ ಉಗ್ರಗಾಮಿಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಈತನ ವಿರುದ್ಧ ದುಷ್ಕೃತ್ಯ ಚಟುವಟಿಕೆ(ತಡೆ) ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಇನ್ನು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಭಯೋತ್ಪಾದನಾ ನಿಗ್ರಹ ದಳ ಸಿಂಗ್ ಪ್ರಕರಣದ ತನಿಖೆಯನ್ನು ಆರಂಭಿಸಿದೆ ಎಂದಿದ್ದಾರೆ.
ಉಗ್ರಗಾಮಿಗಳೊಂದಿಗೆ ಪ್ರಯಾಣಿಸುತ್ತಿದ್ದ ದೇವೀಂದರ ಸಿಂಗ್ ನನ್ನು ಬಂಧಿಸಿರುವುದು ಬಹುದೊಡ್ಡ ವಿಚಾರವಾಗಿದೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇದರ ಬಗ್ಗೆ ಯಾವುದೇ ವಿವರಣೆಯೂ ಬೇಕಿಲ್ಲ.
ಕೊಳೆದ ಸೇಬು ಅಥವಾ ಕೊಳೆತ ವ್ಯವಸ್ಥೆ?
ಪ್ರತಿಯೊಂದು ಸಂಸ್ಥೆಯಲ್ಲಿಯೂ ಕೊಳೆತ ಸೇಬುಗಳಿರುತ್ತವೆ ಮತ್ತು ಭಾರತದ ಪೊಲೀಸ್ ಪಡೆಯಲ್ಲಿ ಇಂತಹ ಹಲವಾರು ಕೊಳೆತ ಸೇಬುಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಿಂಗ್ ಬಂಧನದ ನಂತರ ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಇನ್ನೂ ಎಷ್ಟು ಕೊಳೆತ ಸೇಬುಗಳಿವೆ ಎಂಬುದನ್ನು ಊಹಿಸಬಹುದಾಗಿದೆ. ಒಂದು ಸಂಸ್ಥೆಯಲ್ಲಿ ವ್ಯವಸ್ಥೆ ಮೇಲೆ ಪ್ರಶ್ನೆಗಳನ್ನು ಕೇಳುವುದಕ್ಕಿಂತ ಸುಲಭವಾಗಿ ಒಬ್ಬ ಪೈಶಾಚಿಕ ಸ್ವಭಾವವನ್ನು ಹೊಂದಿರುವವನ ಮೇಲೆ ಬೆರಳು ತೋರಿಸುವುದು ತುಂಬಾ ಸುಲಭದ ಕೆಲಸವಾಗಿದೆ. ಇಂತಹ ವ್ಯಕ್ತಿಯನ್ನು ಸಂಸ್ಥೆಯು ಉತ್ಪತ್ತಿ ಮಾಡಿ ದಶಕಗಳ ಕಾಲ ಪೋಷಿಸಿರುತ್ತದೆ.
ದೇವೀಂದರ್ ಸಿಂಗ್ ಬಂಧನವು ಎಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿದೆ ಮತ್ತು ಭದ್ರತಾ ವ್ಯವಸ್ಥೆಯ ಘನತೆಯನ್ನು ಕಡಿಮೆ ಮಾಡಿದೆ. ಏಕೆಂದರೆ ಸಿಂಗ್ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದು ಬಯಲಾಗಿರುವುದು ಇದೇನು ಮೊದಲಲ್ಲ.
20 ವರ್ಷಗಳ ಹಿಂದೆ ಅಂದರೆ 2000 ದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಸಿಂಗ್ ಕಿರಿಯ ಅಧಿಕಾರಿಯಾಗಿ ವಿಶೇಷ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಉಗ್ರಗಾಮಿ ಅಫ್ಜಲ್ ಗುರುಗೆ ಹಿಂಸೆ ನೀಡಿ ಅವನಿಂದ ಹಣ ಸುಲಿಗೆ ಮಾಡಿದ್ದ ಮತ್ತು ಆತನಿಗೆ ಸಣ್ಣ ಕೆಲಸ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. 2001 ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಪ್ರಮುಖ ಆರೋಪಿಯಾಗಿದ್ದ ಈ ಉಗ್ರಗಾಮಿ ಅಫ್ಜಲ್ ಗುರುವನ್ನು 2013 ರಲ್ಲಿ ಗಲ್ಲಿಗೇರಿಸಲಾಗಿತ್ತು.
ಈ ದೇವೀಂದರ್ ಸಿಂಗ್ ನ ಪ್ರಲಾಪದ ಬಗ್ಗೆ ತಿಹಾರ್ ಜೈಲಿನಲ್ಲಿದ್ದಾಗ ಅಫ್ಜಲ್ ಗುರು ತನ್ನ ವಕೀಲರಿಗೆ ಒಂದು ಸುದೀರ್ಘ ಪತ್ರ ಬರೆದಿದ್ದ. ಶ್ರೀನಗರದ ಬಳಿ ಇರುವ ಹಮ್ ಹುಮ್ಮಾದ ಎಸ್ಟಿಎಫ್ ಕ್ಯಾಂಪ್ ನಲ್ಲಿ ದೇವೀಂದರ್ ಸಿಂಗ್ ಮತ್ತು ಡಿಎಸ್ ಪಿ ವಿನಯ್ ಗುಪ್ತಾ ಅವರು ನನಗೆ ಅತ್ಯಂತ ಹೇಯಕರವಾದ ರೀತಿಯಲ್ಲಿ ಹಿಂಸೆ ನೀಡಿದ್ದರು. ಹೀಗೆ ನಿರಂತರವಾಗಿ ಹಿಂಸೆ ನೀಡಿ ನನ್ನಿಂದ 80,000 ರೂಪಾಯಿ ಮತ್ತು ಸ್ಕೂಟರ್ ಅನ್ನು ಸುಲಿಗೆ ಮಾಡಿದ್ದರು.
ಈ ಬಗ್ಗೆ ತನಿಖೆಯಾಗಲೇ ಇಲ್ಲ
ಈಗ ಅಫ್ಜಲ್ ಗುರು ಬರೆದಿರುವ ಪತ್ರದ ಬಗ್ಗೆ ನಿರ್ಣಯಿಸಲು ನಮಗೆ ಯಾವುದೇ ದಾರಿ ಕಾಣುತ್ತಿಲ್ಲ ಮತ್ತು ಈ ವ್ಯಕ್ತಿ ತನ್ನ ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಏನು ಹೇಳುತ್ತಾನೆಂಬುದನ್ನು ನಂಬಲು ಯಾವುದೇ ಕಾರಣವೂ ಇಲ್ಲ. ಒಂದು ವೇಳೆ ಅಫ್ಜಲ್ ಗುರು ಬರೆದಿರುವ ಪತ್ರದಲ್ಲಿನ ವಿಚಾರ ಸತ್ಯವೇ ಆಗಿದ್ದರೂ ಗಲ್ಲಿಗೇರಿಸಿರುವ ತೀರ್ಪಿನಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ, ಗಂಭೀರವಾದ ಏಜೆನ್ಸಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಈಗ ಕಾಶ್ಮೀರದ ಎಸ್ಟಿಎಫ್ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕುಖ್ಯಾತಿಯನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಅಫ್ಜಲ್ ಗುರು ಹೇಳಿರುವ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.
ದುಃಖಕರ ವಿಚಾರವೆಂದರೆ ಈ ಬಗ್ಗೆ ಯಾರೊಬ್ಬರೂ ಏನನ್ನೂ ಮಾಡಲೇ ಇಲ್ಲ. ಭಾರತೀಯ ಅಸಮರ್ಥತೆಯೇ ಇದಕ್ಕೆ ಕಾರಣವೇ?
ಇಂತಹ ಹಲವಾರು ವಿಚಾರಗಳ ಬಗ್ಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಏನು ಹೇಳುತ್ತಾರೆ ಎಂಬುದು ಈಗಿರುವ ಪ್ರಶ್ನೆಯಾಗಿದೆ.
ಕೃಪೆ: ದಿ ವೈರ್