ದೆಹಲಿ ಗಲಭೆಯನ್ನು ದಂಗೆ ಎನ್ನುವುದೇ ಸರಿ ಎನ್ನುವಷ್ಟರ ಮಟ್ಟಿಗೆ ಸಾವುನೋವುಗಳು ಸಂಭವಿಸಿವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಗಳು ಏರುತ್ತಲೇ ಇವೆ. ಎಷ್ಟು ಭಯಂಕರವಾಗಿ ಜನರು ಮೃತಪಟ್ಟಿದ್ದಾರೆಂದರೆ ಶವಗಳು ಒಂದೊಂದಾಗಿ ಚರಂಡಿ, ಕಸದ ಬುಟ್ಟಿ, ಮೋರಿಗಳಲ್ಲೆಲ್ಲಾ ಸಿಗುತ್ತಿವೆ. ಇಲ್ಲಿಯವರೆಗೆ ಒಟ್ಟು 46 ಜನರು ಮೃತಪಟ್ಟಿದ್ದಾರೆ, ಕೇಂದ್ರ ಹಾಗೂ ದೆಹಲಿ ಸರ್ಕಾರ ವಿಶೇಷ ತನಿಖಾ ತಂಡವನ್ನ ರಚಿಸಿದೆ, ಇದುವರೆಗೆ 254 ಎಫ್‌ಐಆರ್ ದಾಖಲಾಗಿದ್ದು 903 ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 41 ಜನರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
ಸಣ್ಣದಾಗಿ ಹೊತ್ತಿಕೊಂಡ ಕಿಡಿ, ಪೌರತ್ವ ಕಾಯ್ದೆಯನ್ನ ಸೇರಿಕೊಂಡು, ಕೋಮು ದಳ್ಳುರಿ ರೂಪವನ್ನೂ ತಾಳಿತು. ಈ ಗಲಭೆಯ ಮಧ್ಯೆ ಮುಗ್ಧ ಮನಸ್ಸುಗಳು ಮಾತ್ರ ತಮ್ಮ ಸುತ್ತ ಜರುಗುತ್ತಿದ್ದ ಘಟನೆಗಳನ್ನ ನೋಡಿ ದಿಗಿಲು ಬಡಿದಂತಾಗಿ ಜಾತಿ, ಧರ್ಮವೆನ್ನದೇ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಾಮರಸ್ಯದ ಪಾಠ ಹೇಳುತ್ತಿವೆ. ಅಂತಹ ಸಾಕಷ್ಟು ಉದಾಹರಣೆಯಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆ ಬಿತ್ತರಿಸಿದ ಸುದ್ದಿ, ಬಹುಸಂಖ್ಯಾತ ಮುಸ್ಲಿಂ ಕಾಲೊನಿಯಲ್ಲಿ ಅಲ್ಪ ಸಂಖ್ಯಾತ ಹಿಂದೂ ಕುಟುಂಬದ ಮದುವೆ!

ಕಳೆದ ಮಂಗಳವಾರ ದೆಹಲಿಯ ಚಾಂದ್ ಬಾಘ್ ಬೆಂಕಿಯ ಜ್ವಾಲೆಯಲ್ಲಿ ದಹಿಸುತ್ತಿತ್ತು, ಮನೆಗಳ ಚಾವಣಿಗಳು ಮುರಿದು ಬಿದ್ದಿದ್ದವು, ಕಾರುಗಳ ಗಾಜುಗಳೆಲ್ಲಾ ಪುಡಿ ಪುಡಿಯಾಗಿತ್ತು, ಇಟ್ಟಿಗೆಗಳಿಂದ ಅರೆಬರೆ ಕಟ್ಟಿದ್ದ ಪುಟ್ಟ ಮನೆ, ಸುತ್ತಲೂ ಮುಸ್ಲಿಂ ಸಮುದಾಯದವರ ಮನೆಗಳು, ದಿಢೀರ್ ದಂಗೆಯ ಅರಿವಿಲ್ಲದೇ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದ ಬೋಧೆ ಪ್ರಸಾದ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಅವರ ಮಗಳು ಸಾವಿತ್ರಿ ಪ್ರಸಾದ್ ತನ್ನ ಮದುವೆ ನಡೆಯುವುದು ಕಷ್ಟ ಎಂದುಕೊಂಡು ಬುಧವಾರವಾದರೂ ಗಲಭೆ ಶಾಂತವಾಗಬಹುದು ಎಂದುಕೊಂಡಿದ್ದರು. ಆದರೆ ಮರುದಿನ ಗಲಭೆ ಇನ್ನಷ್ಟು ಹಿಂಸಾರೂಪ ತಾಳಿತು. ಮದುವೆ ನಿಂತರೆ ಮಧ್ಯಮ ವರ್ಗದ ಪ್ರಸಾದ್ ಕುಟುಂಬ ಸಾಕಷ್ಟು ಹೊರೆ ಬೀಳುತ್ತಿತ್ತು. ಆಗ ಇವರ ನೆರವಿಗೆ ಬಂದಿದ್ದು ಇದೇ ಕಾಲೋನಿಯ ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು. ಹೊರಗಡೆ ಗಲಭೆ ಜೋರಾಗಿದ್ದರೆ, ಪ್ರಸಾದ್ ಮನೆಯಲ್ಲಿ ಪುರೋಹಿತರಿಂದ ಮಂತ್ರ ಮೊಳಗುತ್ತಿತ್ತು, ಮನೆಯಲ್ಲಿ ಮುಸ್ಲಿಂ ಸಮುದಾಯದವರೇ ತುಂಬಿಕೊಂಡಿದ್ದರು, ಹೊರಗಡೆ ಕಾವಲಾಗಿ ನಿಂತುಕೊಂಡು ವರನನ್ನ ಕರೆದೊಯ್ಯಲೂ ಭದ್ರತೆ ನೀಡಿದ್ದರು. ಮದುವೆ ಸಾಂಗವಾಗಿ ನೆರವೇರಿತು.
‘ದ ವೈರ್’ ಡಿಜಿಟಲ್ ಮಿಡಿಯಾದ ಪತ್ರಕರ್ತೆ ನೋಮಿ ಬಾರ್ಟನ್, ಇದೇ ಚಾಂದ್ ಭಾಗ್ ನಲ್ಲಿ ಸಂಚರಿಸಿ ಅಧ್ಭುತ ವರದಿಗಳನ್ನು ಮಾಡಿದ್ದಾರೆ. ಅತೀ ಹೆಚ್ಚು ಬೆಂಕಿ ಹೊತ್ತಿಕೊಂಡ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ, ಎರಡು ಮೂರು ತಲೆಮಾರುಗಳಿಂದ ಸೌಹಾರ್ದತೆಯಿಂದ ಬದುಕಿದ್ದಾರೆ, ಆದರೆ ಇವರ ಮಧ್ಯೆ ತಮ್ಮ ನೆರೆಹೊರೆಯನ್ನ ಹಾಳುಗೆಡುವುತ್ತಿರುವ ಮೂರನೇ ಸಮುದಾಯ ಯಾವುದು ಎಂಬ ಅನುಮಾನ ಇಲ್ಲಿನ ಜನರಿಗೆ ಕಾಡುವ ಪ್ರಶ್ನೆಯಾಗಿತ್ತು. ಪತ್ರಕರ್ತೆ ಬಾರ್ಟನ್ ನಿರೂಪಿಸುವಂತೆ ಅಂದು ಈ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಅಫ್ಜಲ್, ಬ್ರಿಜ್ ಮೋಹನ್ ಶರ್ಮಾ ಸೇರಿ ಅನೇಕರು ನನಗೆ ರಕ್ಷಣೆ ನೀಡಿದರು, ಎಲ್ಲರೂ ಗೊಂದಲದಲ್ಲಿದ್ದರು. ಸ್ಮಶಾನದಂತಾದ ನೆರೆಹೊರೆಯನ್ನ ನೋಡಿ ದೊಂಬಿಗೆ ಕಾರಣರಾದವರನ್ನ ಶಪಿಸುತ್ತಿದ್ದರು. ಕಪಿಲ್ ಮೋಹನ್ ಮೇಲೆ ಕೆಂಡಕಾರುತ್ತಿದ್ದರು.

ದೆಹಲಿಯ ಅಶೋಕನಗರಲ್ಲಿ ಸುಮಾರು ನಲವತ್ತು ಮಂದಿ ಮುಸ್ಲಿಂ ಸಮುದಾಯದವರು ಹಿಂದೂ ಮನೆಗಳಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿದ್ದಾರೆಂದು ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಂದಿನಿಂದ ಸಂಸತ್ ಕಲಾಪ ಆರಂಭವಾಗುತ್ತಿದೆ, ಗಲಭೆ ಸಂತ್ರಸ್ಥರಂತೆ ರಾಜಕಾರಣದಲ್ಲಿ ಅಶಕ್ತವಾಗಿರುವ ಕಾಂಗ್ರೆಸ್ ಆಡಳಿತರೂಢ ಪಕ್ಷ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸುತ್ತಾ ಗೊತ್ತಿಲ್ಲ ಆದರೆ ದೆಹಲಿ ಗಲಭೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನ ಸಾಬೀತು ಮಾಡಿದೆ. ಆದಷ್ಟು ಬೇಗ ಈ ಗಲಭೆ ಹಾಗೂ ಹಿಂಸಾಚಾರಕ್ಕೆ ಕಾರಣವಾದ ತೃತೀಯ ಸಮುದಾಯವನ್ನು ಪತ್ತೆ ಹಚ್ಚಿ ಮುಂಬರುವ ದಿನಗಳಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಬೇಕಾಗಿದೆ.