ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಸ್ಪಷ್ಟ ಹಾಗೂ ದೊಡ್ಡ ಬಹುಮತ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವುದು ಭಾರತದ ರಾಜಕಾರಣ ಪರಿಭಾಷೆ ಬದಲಾಗುತ್ತಿರುವುದರ ಸ್ಪಷ್ಟ ದ್ಯೋತಕದಂತೆ ಭಾಸವಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ಹಾಗೂ ವಿವಾದಾತ್ಮಕ ವಿಚಾರಧಾರೆಗಳಿಗೆ ಬದಲಾಗಿ ಕುಡಿಯುವ ನೀರು, ವಿದ್ಯುತ್, ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಸುಧಾರಣೆಯಂಥ ಅತ್ಯಗತ್ಯ ವಿಚಾರಗಳನ್ನು ಜನರ ಮುಂದಿರಿಸಿ ಸತತ ಎರಡನೇ ಬಾರಿಗೆ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿರುವ ಆಪ್ ಬದಲಾಗುತ್ತಿರುವ ಭಾರತದ ರಾಜಕಾರಣದ ದಿಕ್ಕು-ದಿಸೆಯನ್ನು ಸ್ಪಷ್ಟವಾಗಿ ತಿಳಿಯಪಡಿಸಿದೆ.
ಕಳೆದ ವರ್ಷದ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಬಹುಮತ ಪಡೆದು ಅಧಿಕಾರ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ದೆಹಲಿಯಲ್ಲಿನ ಏಳು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಹಾಗೂ ಆಡಳಿತರೂಢ ಆಪ್ ಗೆ ಮರ್ಮಾಘಾತ ನೀಡಿತ್ತು. ಕೇಜ್ರಿವಾಲ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯುವ ಮೂಲಕ ತೀವ್ರ ನಿರಾಸೆ ಅನುಭವಿಸಿತ್ತು. ಸಮೀಕ್ಷೆಗಳ ಪ್ರಕಾರ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು ಕಳೆದ ಲೋಕಸಭಾ ಚುನಾವಣೆಯಲ್ಲಿ 65ರಲ್ಲಿ ಸ್ಪಷ್ಟ ಮುನ್ನಡೆ ಹೊಂದಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ತಿರುಗಾಮುರುಗಾ ಆಗುವುದು ಸ್ಪಷ್ಟವಾಗಿದ್ದು, ಆಪ್ 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಸಮೀಕ್ಷೆಗಳು ಘೋಷಿಸಿವೆ. ಒಂಭತ್ತು ತಿಂಗಳಲ್ಲಿ ಈ ಪ್ರಮಾಣದ ಬದಲಾವಣೆಗೆ ಕಾರಣವಾಗಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡುವಂಥ ಬೆಳವಣಿಗೆ. ಮತದಾರರು ರಾಜಕಾರಣಿಗಳ ಭರವಸೆಗಳ ಮೇಲೆ ನಂಬಿಕೆ ಇಡುವುದಿಲ್ಲ ಬದಲಾಗಿ ಚುನಾಯಿತರ ಪೈಕಿ ಯಾರೂ ಕೆಲಸ ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ ಎಂಬುದಕ್ಕೆ ದೆಹಲಿ ಚುನಾವಣಾ ಫಲಿತಾಂಶ ಉದಾಹರಣೆಯಾದಂತಿದೆ. ಅಲ್ಲದೇ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಮತದಾರರು ಅರಿತಿದ್ದಾರೆ.
ಸಾಮಾನ್ಯ ವಿಚಾರಗಳಾದ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ವಿದ್ಯುತ್ ಮುಖ್ಯವೇ ವಿನಾ ಹಿಂದೂ-ಮುಸ್ಲಿಂನಂಥ ಧ್ರುವೀಕರಣ ವಿಚಾರಗಳಲ್ಲ ಎಂಬುದು ಸ್ಪಷ್ಟವಾಗಿದೆ. ತನ್ನ ಘೋಷಣಾ ಪತ್ರ ಹಾಗೂ ರಾಜಕೀಯ ಸಿದ್ಧಾಂತವಾದ ಹಿಂದುತ್ವ ಹಾಗೂ ರಾಷ್ಟ್ರೀಯತೆ ವಿಚಾರಗಳನ್ನು ಪ್ರಬಲವಾಗಿ ಮಂಡಿಸಿದ ಬಿಜೆಪಿಯು ಕನಿಷ್ಠ 20 ಸ್ಥಾನಗಳನ್ನು ಪಡೆಯುವುದು ದುರ್ಲಭ ಎನ್ನುತ್ತಿವೆ ಸಮೀಕ್ಷೆಗಳು. ರಾಮ ಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ, ತ್ರಿವಳಿ ತಲಾಖ್, ಮೇಲ್ವರ್ಗಗಳ ಬಡವರಿಗೆ ಮೀಸಲಾತಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಮಾನ್ಯತೆ ರದ್ದತಿ ಹೀಗೆ ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ ವಿಚಾರಗಳನ್ನು ಬಿಜೆಪಿ ಪ್ರಸ್ತಾಪಿಸಿದರೂ ಜನರು ಅವುಗಳಿಗೆ ಮಾನ್ಯತೆ ನೀಡಿಲ್ಲ. ಇದರಿಂದ ಬಿಜೆಪಿಗೆ ಅಭಿವೃದ್ಧಿ ವಿಚಾರಗಳತ್ತ ಗಮನ ನೀಡುವಂತೆ ಜನರು ಸ್ಪಷ್ಟವಾದ ಸೂಚನೆ ನೀಡುತ್ತಿದ್ದಾರೆ ಎಂಬುದು ಸಮೀಕ್ಷೆಯ ಸಾರಾಂಶ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹಣ ಹಾಗೂ ತೋಳ್ಬಲದಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ಮುಂದಿರುವ ಬಿಜೆಪಿಯು ಪ್ರಧಾನ ಮಂತ್ರಿ ಸೇರಿದಂತೆ 70ಕ್ಕೂ ಹೆಚ್ಚು ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಚಾರಕ್ಕೆ ನಿಯೋಜಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರಲ್ಲದೇ ಸ್ವತಃ ತಾವೇ ಒಟ್ಟಾರೆ 47 ಸಾರ್ವಜನಿಕ ಸಭೆ ಹಾಗೂ ರ್ಯಾಲಿಗಳನ್ನು ನಡೆಸಿದ್ದಾರೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಇವ್ಯಾವುವೂ ಲೆಕ್ಕಕ್ಕೆ ಬಂದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸಿ ಸುಮಾರು ಎರಡು ತಿಂಗಳಿಂದ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಹೋರಾಟವನ್ನು ಅವಮಾನಿಸಿದ್ದಾರೆ. ಶಾಹಿನ್ ಬಾಗ್ ಹೋರಾಟವು ಭಾರತವನ್ನು ವಿಭಜಿಸುವ ತಂತ್ರದ ‘ಪ್ರಯೋಗ’ವಾಗಿದೆ ಎನ್ನುವ ಮೂಲಕ ನ್ಯಾಯಯುತ ಹೋರಾಟವನ್ನು ಹಿಂದೂ-ಮುಸ್ಲಿಂ ನಡುವಿನ ಘಟನೆ ಎಂದು ಬಿಂಬಿಸಲು ಯತ್ನಿಸಿ ವಿಫಲರಾಗಿದ್ದಾರೆ. ಸರ್ವಶಕ್ತರಾದ ಮೋದಿಯವರು ಪೊಲೀಸ್ ವ್ಯವಸ್ಥೆ, ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯಂಥ ಅತ್ಯಂತ ಸಮರ್ಥ ತನಿಖಾ ಸಂಸ್ಥೆಗಳನ್ನು ಇಟ್ಟುಕೊಂಡಿದ್ದರೂ ಅವುಗಳ ಮೂಲಕ ಶಾಹಿನ್ ಬಾಗ್ ಹೋರಾಟದ ತಂತ್ರ-ಕುತಂತ್ರಗಳನ್ನು ಏಕೆ ತಿಳಿಯುವ ಪ್ರಯತ್ನ ಮಾಡಲಿಲ್ಲ? ಎಂಬ ಗಂಭೀರ ಪ್ರಶ್ನೆ ಸಹಜವಾಗಿ ಎದ್ದಿದೆ. ಇನ್ನೂ “ದೇಶದೊಳಗಿನ ಭಯೋತ್ಪಾದಕರಿಗೆ ಗುಂಡು ಹೊಡೆಯಿರಿ” ಎನ್ನುವ ಪ್ರಚೋದನಾಕಾರಿ ಭಾಷಣ ಮಾಡಿ ಚುನಾವಣಾ ಆಯೋಗದಿಂದ ನಿಷೇಧಕ್ಕೊಳಗಾದ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಶಾಹಿನ್ ಬಾಗ್ ಮಹಿಳೆಯರು “ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಮಕ್ಕಳನ್ನು ರೇಪ್ ಮಾಡಬಹುದು” ಎನ್ನುವ ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಅರವಿಂದ್ ಕೇಜ್ರಿವಾಲ್ ಅವರು ಶಾಹೀನ್ ಬಾಗ್ ಗೆ ಬಿರಿಯಾನಿ ಪೂರೈಸುತ್ತಾರೆ” ಎನ್ನುವ ಮೂಲಕ ವಿವಾದ ಎಬ್ಬಿಸಿ ಮತ ಧ್ರುವೀಕರಿಸಲು ನಡೆಸಿದ ಯತ್ನ ಸಂಪೂರ್ಣವಾಗಿ ನೆಲಕಚ್ಚಿವೆ. ಹತಾಶವಾದ ಬಿಜೆಪಿಯು ಕೊನೆಗೆ ಚುನಾಯಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಭಯೋತ್ಪಾದಕ” ಎಂದೂ ಕರೆಯುವ ಮೂಲಕ ತೀಟೆ ತೀರಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಹಿಂದೆಂದೂ ಕಂಡಿರದಷ್ಟು ಕೋಮು ಪ್ರಚೋದನೆ, ದ್ವೇಷ ಭಾಷೆಗೆ ಸಾಕ್ಷಿಯಾದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಅಭಿವೃದ್ಧಿಯಿಂದ ವಿಮುಖವಾದ ಚುನಾವಣಾ ಪ್ರಚಾರವನ್ನು ತಿರಸ್ಕರಿಸಿದ್ದಾರೆ. ಜಾತಿ, ಧರ್ಮಗಳನ್ನು ಒಡೆದು ಆಳುವ ರಾಜನೀತಿಯನ್ನು ಸಾರಾಸಗಟವಾಗಿ ಕಸದ ಬುಟ್ಟಿಗೆ ಎಸೆದಿರುವುದು ನಿಚ್ಚಳವಾದಂತಿದೆ.
ಇನ್ನೊಂದೆಡೆ ಲೋಕಸಭಾ ಚುನಾವಣೆಯ ಬಳಿಕ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿರ್ದಯವಾಗಿ ಸೋತಿದೆ. ಲೋಕಸಭೆಯಲ್ಲಿ ಭಾರಿ ಬಹುಮತ ಪಡೆದ ಮೋದಿಯವರ ಪಕ್ಷವು ಹರಿಯಾಣದಲ್ಲಿ ಪ್ರಾದೇಶಿಕ ಪಕ್ಷದ ಜೊತೆಗೂಡಿ ಅಧಿಕಾರ ಉಳಿಸಿಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಮೂಲಕ ನೈತಿಕ ದಿವಾಳಿತನವನ್ನು ಪ್ರದರ್ಶಿಸಿದೆ. ಮಹಾರಾಷ್ಟ್ರದಲ್ಲಿ ದಶಕಗಳ ಮಿತ್ರಪಕ್ಷ ಶಿವಸೇನೆಯೊಂದಿಗೆ ಅಧಿಕಾರಕ್ಕಾಗಿ ಕಿತ್ತಾಡಿಕೊಂಡ ಬಿಜೆಪಿಯು ಅಂತಿಮವಾಗಿ ಏಕಾಂಗಿಯಾಗಿ ವಿರೋಧ ಪಕ್ಷದಲ್ಲಿ ಕುಳಿತಿದೆ. ಬುಡಕಟ್ಟು ಸಮುದಾಯಗಳಿರುವ ಜಾರ್ಖಂಡ್ ನಲ್ಲಿ ಕಾಂಗ್ರೆಸ್-ಜೆಎಂಎಂ ಹಾಗೂ ಆರ್ ಜೆಡಿ ಮೈತ್ರಿಕೂಟದ ಮುಂದೆ ಮುಂಡಿಯೂರಿತ್ತು. ಗಮನಾರ್ಹ ಅಂಶವೆಂದರೆ ಜಾರ್ಖಂಡ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಶೇ.62ರಷ್ಟು ಹಿಂದೂ ಮತ ಪಡೆಯುವ ಮೂಲಕ ಚರಿತ್ರೆ ಸೃಷ್ಟಿಸಿತ್ತು. ಆದರೆ, ಕೆಲವೇ ತಿಂಗಳ ಅಂತರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಿವಾಳಿಯಾಗಿದೆ.
ಈ ವರ್ಷಾಂತ್ಯದಲ್ಲಿ ಬಿಹಾರ ಹಾಗೂ ತಮಿಳುನಾಡು, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಸೇರಿ ಅಧಿಕಾರ ಅನುಭವಿಸುತ್ತಿರುವ ಬಿಜೆಪಿಯು ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್- ಆರ್ ಜೆಡಿ ಒಡಗೂಡಿ ಮಹಾಮೈತ್ರಿ ರಚಿಸಿ ಅಧಿಕಾರ ಹಿಡಿದ ನಿತೀಶ್ ಕುಮಾರ್ ಅವರು ಆನಂತರ ಮೈತ್ರಿ ಉಲ್ಲಂಘಿಸಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು. ಈ ವಚನ ಭ್ರಷ್ಟತೆಯ ಕೂಗಿನ ಜೊತೆಗೆ ಬಿಜೆಪಿ ನೀಡಿದ್ದ ವಿಶೇಷ ಅನುದಾನ ತರುವಲ್ಲಿ ನಿತೀಶ್ ಕುಮಾರ್ ವಿಫಲವಾಗಿದ್ದಾರೆ. ಮೋದಿಯವರ ಬಿಜೆಪಿಯು ಕೇಂದ್ರದಲ್ಲಿ ನಿತೀಶ್ ಪಕ್ಷದ ಸಂಸದರಿಗೆ ಸ್ಥಾನಮಾನ ನೀಡಿಲ್ಲ. ಈ ಮದ್ಯೆ, ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಚಾರದಲ್ಲಿ ಜೆಡಿಯು ಉಪಾಧ್ಯಕ್ಷ ಹಾಗೂ ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರನ್ನು ನಿತೀಶ್ ಉಚ್ಚಾಟಿಸಿದ್ದಾರೆ. ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ನಿತೀಶ್ ಕುಮಾರ್ ವಿಫಲಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ರಾಜಕೀಯವಾಗಿ ನಿತೀಶ್ ಕುಮಾರ್ ಕೈಗೊಂಡ ನಿರ್ಧಾರಗಳು ಅಧಿಕಾರಕ್ಕಾಗಿ ಮಾಡಿದ ತೀರ್ಮಾನಗಳು ಎಂಬ ಅಭಿಪ್ರಾಯ ಬಿಹಾರ ಜನತೆಯಲ್ಲಿ ಮೂಡಲಾರಂಭಿಸಿರುವುದು ಹಾಗೂ ಲಾಲೂ ಪ್ರಸಾದ್ ಕುಟುಂಬದ ಮೇಲಿನ ಅನುಕಂಪವು ನಿತೀಶ್ ಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಉಳಿದಂತೆ ದ್ರಾವಿಡ ರಾಜಕಾರಣದ ಕೋಟೆಯಾದ ತಮಿಳುನಾಡಿನಲ್ಲಿ ಬಿಜೆಪಿ ನೆಲೆಗೊಳ್ಳುವುದು ಸುಲಭ ಸಾಧ್ಯವಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ 18 ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಪ್ರಾದೇಶಿಕ ರಾಜಕಾರಣದ ಪ್ರಬಲ ನಾಯಕಿ ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರಿ ಪೈಪೋಟಿ ಒಡ್ಡಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೋರಾಟದ ಮೇಲೆ ಭಾರಿ ನಿರೀಕ್ಷೆಯಿದೆ. ಸಹಜವಾಗಿ ಹಿಂದೂ-ಮುಸ್ಲಿಂ ಹಾಗೂ ರಾಷ್ಟ್ರೀಯತೆಯ ವಿಚಾರಗಳು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಸ್ಥಾನ ಪಡೆಯಲಿವೆ. ಆದರೆ, ಅವುಗಳು ಎಷ್ಟರ ಮಟ್ಟಿಗೆ ಪ್ರತಿಫಲ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ.
ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಚತ್ತೀಸಗಢದ ರಮಣ್ ಸಿಂಗ್, ಕರ್ನಾಟಕದ ಬಿ ಎಸ್ ಯಡಿಯೂರಪ್ಪ, ರಾಜಸ್ಥಾನದ ವಸುಂಧರಾ ರಾಜೇಯಂಥ ಪ್ರಬಲ ನಾಯಕರು ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಇಲ್ಲ. ಇದು ಕಮಲಪಾಳೆಯದ ಅಧಿಕಾರ ಹಿಡಿಯುವ ಕನಸಿಗೆ ಬಹುದೊಡ್ಡ ಹೊಡೆತ ನೀಡಹುದು. ಅಭಿವೃದ್ಧಿಯ ವಿಚಾರಗಳಿಂದ ವಿಮುಖವಾಗಿರುವ ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಆರ್ಥಿಕತೆಯನ್ನು ಕೆಟ್ಟ ಸ್ಥಿತಿಗೆ ಕೊಂಡೊಯ್ದಿದೆ. ಇವುಗಳು ಅದರ ಚುನಾವಣಾ ಗೆಲುವಿನ ಸಾಧ್ಯತೆಗೆ ಕೊಡಲಿ ಏಟು ನೀಡುವುದು ನಿಶ್ಚಿತ ಎಂಬುದನ್ನು ಪ್ರಜ್ಞಾವಂತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೆಹಲಿ ಚುನಾವಣೆ ಸ್ಪಷ್ಟಗೊಳಿಸಿದೆ. ಆದ್ದರಿಂದ ತನ್ನ ರಾಜಕೀಯ ನಡವಳಿಕೆಯನ್ನು ಬಿಜೆಪಿ ಬದಲಾಯಿಸಿಕೊಳ್ಳದೇ ಇದ್ದಲ್ಲಿ ಮೋದಿಯವರ ನವ ಭಾರತದಲ್ಲಿ ಬಿಜೆಪಿಗೆ ಗೆಲುವು ಮರೀಚಿಕೆಯಾಗುವುದರಲ್ಲಿ ಅನುಮಾನವಿಲ್ಲ.