ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಕಣ ರಂಗೇರಿದೆ. ಈ ಬಾರಿ ದೆಹಲಿ ಗದ್ದುಗೆಯಿಂದ ಅರವಿಂದ್ ಕೇಜ್ರಿವಾಲ್ ಕೆಳಕ್ಕಿಳಿಸಿ ಕಮಲ ಪತಾಕೆ ಹಾರಿಸಬೇಕೆಂದು ಪಣ ತೊಟ್ಟಿರುವ ಅಮಿತ್ ಸೇನೆ ಮಾತಿನ ಯುದ್ಧವನ್ನೇ ಸಾರಿದೆ. ಎಲ್ಲಾ ವರ್ಗದ ಜನರೂ ಕೇಜ್ರಿವಾಲ್ ಪರ ವಾಲಿರುವ ಅಂಶ ಸಮೀಕ್ಷೆಗಳ ಮೂಲಕ ಹೊರ ಬೀಳ್ತಿದ್ದು, ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆಯಲ್ಲೂ ಪಕ್ಷದ ಸಾಧನೆ ಹೇಳುವ ಮಟ್ಟಕ್ಕೆ ಇಲ್ಲ ಎನ್ನಲಾಗಿದೆ. ದೆಹಲಿಯಲ್ಲಿ ಬಹುತೇಕ ವಲಸಿಗರೇ ತುಂಬಿಕೊಂಡಿದ್ದು, ಯಾವುದೇ ಚುನಾವಣಾ ಅಸ್ತçದ ಮೂಲಕ ಜನರನ್ನು ಸೆಳೆಯಲು ಸಾಧ್ಯವಾಗ್ತಿಲ್ಲ. ದೆಹಲಿ ಜನರನ್ನು ಸೆಳೆಯುವ ತಂತ್ರ ಹೆಣೆಯಲು ಭಾರೀ ಕಸರತ್ತು ಮಾಡುತ್ತಿರುವ ಕೇಸರಿ ಪಡೆ ಇದೀಗ ರಾಮ ಮಂದಿರ ದಾಳ ಉರುಳಿಸಿದೆ.
ದೆಹಲಿಯಲ್ಲಿ ಬಹುತೇಕ ವಲಸಿಗರೇ ತುಂಬಿಕೊಂಡಿದ್ದಾರೆ. ಜೀವನ ಸಾಗಿಸಲು ಕಷ್ಟಪಟ್ಟು ಕೆಲಸ ಮಾಡುವ ಉದ್ದೇಶದಿಂದ ನಾನಾ ರಾಜ್ಯಗಳಿಂದ ದೆಹಲಿ ಪಟ್ಟಣ ಸೇರಿದ್ದಾರೆ. ಈ ಜನರಿಗೆ ಬೇಕಿರುವುದು ರಸ್ತೆ, ನೀರು, ಸಾರಿಗೆ, ವಿದ್ಯುತ್ ಸೌಲಭ್ಯ. ಅದನ್ನು ಬಿಟ್ಟು ಬೇರೇನು ಘೋಷಣೆ ಮಾಡಿದರೂ ಜನರು ಮತ ಹಾಕುವಂತೆ ಮಾಡುವುದು ಸಾಧ್ಯವಿಲ್ಲ. ಇದೇ ಕಾರಣದಿಂದ ದಿನದಿಂದ ದಿನಕ್ಕೆ ಬಿಜೆಪಿ ಹೊಸ ಹೊಸ ದಾಳ ಉರುಳಿಸುತ್ತಿದೆ. ಇವತ್ತು ಅಮಿತ್ ಷಾ ಹಾಗು ನರೇಂದ್ರ ಮೋದಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪಿಸುವ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿ ಚುನಾವಣೆಗೂ ರಾಮಮಂದಿರ ಟ್ರಸ್ಟ್ಗೂ ಎಲ್ಲಿಂದ ಸಂಬಂಧ ಎನ್ನಬಹುದು. ಆದರೆ ದೆಹಲಿಯಲ್ಲಿರುವ ಕೆಳವರ್ಗದ ಜನರನ್ನು ಸೆಳೆಯಲು ಮುಂದಾಗಿರುವ ಅಮಿತ್ ಷಾ ಬಳಗ, 15 ಜನರ ಟ್ರಸ್ಟ್ನಲ್ಲಿ ಓರ್ವ ದಲಿತರನ್ನು ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ
ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಸಾರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಬೆರಳು ತೋರಿಸದಂತೆ ಕೆಲಸ ಮಾಡಿದೆ. ಮೊದಲ ಎರಡು ವರ್ಷಗಳ ಕಾಲ ಮೋದಿಯನ್ನು ಟೀಕಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ದೆಹಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಜನgರಿಂದ ದೂರವಾಗುತ್ತಿರುವ ಸುಳಿವು ಕಂಡುಕೊಂಡ ಅರವಿಂದ್ ಕೇಜ್ರಿವಾಲ್, ತಾನು ಮಾತನಾಡುವುದಕ್ಕಿಂತ ಕೆಲಸ ಮಾಡುವುದು ಸೂಕ್ತವೆಂದು ಕೇವಲ ಕೆಲಸಕ್ಕಷ್ಟೇ ಆದ್ಯತೆ ನೀಡುತ್ತಾ ಸಾಗಿದರು. ಅರವಿಂದ್ ಕೇಜ್ರಿವಾಲ್ ಮಾಡಿದ ಈ ತಂತ್ರಗಾರಿಗೆ ದೆಹಲಿ ಜನರ ಮನಸ್ಸು ಸೆಳೆದಿದ್ದು, ಈ ಬಾರಿ ಕೂಡ ನರೇಂದ್ರ ಮೋದಿ ಸೇನೆಗೆ ಸೋಲಾಗುವುದು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳದಿಂದ ಆಗಮಿಸಿರುವ ಜನರನ್ನು ಜನರನ್ನು ಸೆಳೆಯಲು ಏನೆಲ್ಲಾ ಕಸರತ್ತ ಮಾಡಬೇಕು ಅಷ್ಟನ್ನೂ ಮಾಡಿ ಆಗಿದೆ. ಇದೀಗ ಅಂತಿಮವಾಗಿ ರಾಮ ಮಂದಿರ ಟ್ರಸ್ಟ್ನಲ್ಲಿ ದಲಿತರಿಗೆ ಸ್ಥಾನ ನೀಡುವುದಾಗಿ ಘೋಷಣೆ ಮಾಡುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.
ನವೆಂಬರ್ 9 ರಂದು ಅಯೋಧ್ಯೆ ವಿವಾದದ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಮುಂದಿನ ಮೂರು ತಿಂಗಳ ಒಳಗಾಗಿ ರಾಮಮಂದಿರ ನಿರ್ಮಾಣದ ಉಸ್ತುವಾರಿಗಾಗಿ ಟ್ರಸ್ಟ್ ಸ್ಥಾಪನೆ ಮಾಡಿ, ಟ್ರಸ್ಟ್ ಮೂಲವೇ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿತ್ತು. ಇದೀಗ ದೆಹಲಿ ಚುನಾವಣೆ ಮುಗಿದ ಮರುದಿನವೇ ಸುಪ್ರೀಂಕೋರ್ಟ್ ಕೊಟ್ಟಿರುವ ಡೆಡ್ಲೈನ್ ಮುಕ್ತಾಯವಾಗಲಿದ್ದು, ಅಂದೇ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆ ಮಾಡ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ. ಈ ಟ್ರಸ್ಟ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಎಂದು ಹೆಸರಿಡಲಾಗುವುದು ಎಂದೂ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆಯಾಗಲಿದ್ದು, ಅದರಲ್ಲಿ 15 ಮಂದಿ ಸದಸ್ಯರಿರುತ್ತಾರೆ. ಎಲ್ಲಾ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ಇರಲಿದೆ. ಈ ಕಮಿಟಿಯಲ್ಲಿ ಓರ್ವ ದಲಿತ ಇರುತ್ತಾರೆ ಎನ್ನುವ ಮೂಲಕ ದಲಿತ ಕಾರ್ಡ್ ಪ್ಲೇ ಮಾಡಿದ್ದಾರೆ. ಬಿಜೆಪಿಯ ಚುನಾವಣಾ ರಣತಂತ್ರ ಫೆಬ್ರವರಿ 8ರಂದು ನಡೆಯುವ ಮತದಾನದಲ್ಲಿ ವರ್ಕೌಟ್ ಆಗುತ್ತಾ ಎನ್ನುವುದು ಫೆಬ್ರವರಿ 11ರ ಫಲಿತಾಂಶದಲ್ಲಿ ಗೊತ್ತಾಗಲಿದೆ.