ಸಾವಿರಾರು ಮಂದಿ ಭಾಗಿಯಾಗಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಝ್ ಸೆಂಟರ್ ನಲ್ಲಿ ತಬ್ಲೀಗ್ ಜಮಾಅತ್ ನಡೆಸಿದ್ದ ಧಾರ್ಮಿಕ ಸಭೆ ದೇಶಾದ್ಯಂತ ಕರೋನಾ ವೈರಸ್ ಪಸರಿಸಲು ಕಾರಣವಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶ ಹಾಗೂ ರಾಜ್ಯಗಳ ಧಾರ್ಮಿಕ ಪಂಡಿತರು ಮಾರ್ಚ್ 10 ರಂದು ಕಾರ್ಯಕ್ರಮ ಆಯೋಜಿಸಿದ್ದರು. 16 ದೇಶಗಳ 310 ಧಾರ್ಮಿಕ ಪಂಡಿತರು ಹಾಗೂ ವಿವಿಧ ರಾಜ್ಯಗಳ ಧಾರ್ಮಿಕ ಗುರುಗಳು ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಈ ರೀತಿ ಭಾಗವಹಿಸಿದ್ದ ಮತ ಪಂಡಿತರಲ್ಲಿ ಕರೋನಾ ವೈರಸ್ ಸೋಂಕು ಹಲವರಲ್ಲಿ ಪತ್ತೆಯಾಗಿದೆ.
ಕಳೆದ ಗುರುವಾರ ಜಮ್ಮು&ಕಾಶ್ಮೀರದ ವೃದ್ಧರೊಬ್ಬರು ಹಾಗೂ ತುಮಕೂರಿನ ಶಿರಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಇಬ್ಬರೂ ನಿಜಾಮುದ್ದೀನ್ ಸೆಂಟರ್‌ನಲ್ಲಿ ನಡೆದಿದ್ದ ತಬ್ಲೀಗ್ ಜಮಾಅತ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ಈ ಸೆಂಟರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಿಬ್ಬಂದಿಗಳು ತಪಾಸಣೆಗೆ ಇಳಿದಿದ್ದಾರೆ. ಸೆಂಟರ್‌ನಲ್ಲಿದ್ದ 700 ಮಂದಿಯನ್ನು ಕ್ವಾರೆಂಟೈನ್ ಹಾಗೂ 335 ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ವಾಪಾಸ್ ತೆರಳುವ ಸಂದರ್ಭ ಮತಪಂಡಿತರು ವಿಮಾನ, ರೈಲು ಹಾಗೂ ಬಸ್ಸುಗಳ ಮೂಲಕ ತವರಿಗೆ ತೆರಳಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕರೋನಾ ವೇಗವಾಗಿ ಹರಡಿರುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಇಲಾಖೆ ಗಮನಹರಿಸಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಮೂಲದ ಹತ್ತು ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಅಲ್ಲದೇ ಇದೇ ಸೆಂಟರ್‌ನಲ್ಲಿರುವ ದೆಹಲಿಯ 24 ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. ಇದರಿಂದಾಗಿ ಕಾರ್ಯಕ್ರಮ ಆಯೋಜಕ ಹಾಗೂ ಮರ್ಕಝ್‌ನ ಮುಖ್ಯಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನು ಕರ್ನಾಟಕದಿಂದಲೂ 45 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಾಪಾಸ್ ರಾಜ್ಯಕ್ಕೆ ಆಗಮಿಸುವಾಗ ರೈಲುಗಳನ್ನು ಅವಲಂಬಿಸಿದ್ದರು. ಇದರಲ್ಲಿ ಈಗಾಗಲೇ 13 ಮಂದಿಯನ್ನು ಪತ್ತೆಹಚ್ಚಿ ನಿಗಾದಲ್ಲಿ ಇಡಲಾಗಿದೆ. ಶಿರಾದ ವಯೋವೃದ್ಧರೊಬ್ಬರು ಬಲಿಯಾಗಿದ್ದಾರೆ. ಉಳಿದವರು ತಕ್ಷಣ ಕರೋನಾ ವೈರಸ್ ತಪಾಸಣೆಗೆ ಒಳಗಾಗುವಂತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿನಂತಿಸಿಕೊಂಡಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ಖಾತೆಯಲ್ಲೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಭಾರತದಲ್ಲಿ 1417 ಪ್ರಕರಣ ದೃಢಪಟ್ಟರೆ, 140 ಮಂದಿ ಗುಣಮುಖರಾಗಿದ್ದಾರೆ, ಸಾವಿನ ಸಂಖ್ಯೆ 47 ಕ್ಕೆ ತಲುಪಿದೆ.