ಕಾಂಗ್ರೆಸ್ ಪಕ್ಷವೇ ಸೋತು ಸುಣ್ಣವಾಗಿದೆ. 63 ಅಭ್ಯರ್ಥಿಗಳಿಗೆ ಠೇವಣಿಯೂ ಬರಲಿಲ್ಲಾ. ಹೀಗಿದ್ದಾಗ ಬಿಜೆಪಿ ಸೋಲಿಗೆ ಕಾಂಗ್ರೆಸ್ ಹೇಗೆ ಕಾರಣ? ಎನ್ನುವ ಪ್ರಶ್ನೆ ಹುಟ್ಟಿರಬಹುದು. ಕಳೆದ ಏಳೆಂಟು ವರ್ಷದಿಂದ ಭಾರತದಲ್ಲಿ ತನ್ನದೇ ಆದ ಅಬ್ಬರ ಸೃಷ್ಟಿಸಿಕೊಂಡು ಜಯಭೇರಿ ಬಾರಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಹಾಗೂ ಹಲವಾರು ಸಣ್ಣಪುಟ್ಟ ಪಕ್ಷಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದೆಯೇ? ಎನ್ನುವ ನಿಮ್ಮ ಅನುಮಾನಕ್ಕೆ ಉತ್ತರ ಹೌದು. ಕಾಂಗ್ರೆಸ್ ಸೇರಿದಂತೆ ಬೇರೆಲ್ಲಾ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಬೆಂಬಲವಾಗಿ ಇರುವುದರಿಂದಲೇ ಬಿಜೆಪಿ ಶೇಕಡವಾರು ಮತಗಳ ಅರ್ಧದಷ್ಟು ಜನಬೆಂಬಲ ಪಡೆಯಲು ಸಾಧ್ಯವಾಗದಿದ್ದರೂ ಬಿಜೆಪಿ ಗೆಲ್ಲುವ ಸ್ಥಾನಗಳ ಸಂಖ್ಯೆಯಲ್ಲಿ ಇತಿಹಾಸ ಸೃಷ್ಟಿಸುತ್ತಿದೆ.
ದೆಹಲಿಯಲ್ಲಿ ಬಿಜೆಪಿ ಕೇವಲ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಹೀನಾಯವಾಗಿ ಸೋಲುಂಡಿದೆ. ಇದಕ್ಕೆ ಕಾರಣ ಕಾಂಗ್ರೆಸ್. ಹೇಗೆಂದರೆ ಕಾಂಗ್ರೆಸ್ ಸ್ವಲ್ಪ ಸಶಕ್ತವಾಗಿ ಹೆಚ್ಚಿನ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಆಮ್ ಆದ್ಮಿ ಪಕ್ಷದ ನಾಗಾಲೋಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿತ್ತು. ಆದರೆ, ಕಾಂಗ್ರೆಸ್ ಮತ ಸೆಳೆಯುವಲ್ಲಿ ನಿಶಕ್ತಿ ಅನುಭವಿಸಿದ್ದು, ಭಾರತೀಯ ಜನತಾ ಪಾರ್ಟಿಗೆ ಹೀನಾಯ ಸೋಲಿನ ದರ್ಶನ ಮಾಡಿಸಿದೆ. ಕಾಂಗ್ರೆಸ್ ಕೇವಲ ಶೇಕಡ 4.3ರಷ್ಟು ಮತ ಗಳಿಸಿದ್ದು ಬಿಜೆಪಿ ಪಾಲಿಗೆ ಶಾಪವಾಗಿ ಪರಿಣಮಿಸಿತು. ಒಂದು ವೇಳೆ ಕಾಂಗ್ರೆಸ್ ಶೇಕಡ 15ರಷ್ಟು ಮತಗಳಿಸಲು ಸಫಲವಾಗಿದ್ದರೆ ಆಮ್ ಆದ್ಮಿ ಪಾರ್ಟಿಯ ಶೇಕಡ 53.5 ರಷ್ಟು ಮತಗಳಲ್ಲಿ ಇಳಿಕೆ ಆಗುತ್ತಿತ್ತು. ಆಗ ಬಿಜೆಪಿಯ ಮತಗಳಿಕೆ ಶೇಕಡ 39.9ರಿಂದ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಿತ್ತು. ಆಗ ಬಿಜೆಪಿ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸುತ್ತಿದ್ದರು.
ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ತುಂಬಾ ವಿಶೇಷ. ಏಕ ಪಕ್ಷದ ಆಡಳಿತ ಹೊರತುಪಡಿಸಿ, ದ್ವಿಪಕ್ಷ ಹೊಂದಿರುವ ರಾಷ್ಟ್ರಗಳಲ್ಲಿ ಎರಡು ಪಕ್ಷಗಳು ಮಾತ್ರವೇ ಚುನಾವಣಾ ಅಖಾಡದಲ್ಲಿ ಇರುತ್ತೆ. ಎರಡರ ಒಳಗ ಮಾತ್ರ ಅಖಾಡ ರಂಗೇರುತ್ತೆ. ಎರಡು ಪಕ್ಷಗಳಲ್ಲಿ ಯಾರಾದರೂ ಒಬ್ಬರು ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಾರೆ. ಆದರೆ ಭಾರತದ ಸಂವಿಧಾನದಲ್ಲಿ ಬಹುಪಕ್ಷ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಸಾಕಷ್ಟು ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಇರಲಿದ್ದು, ಒಂದು ಪಕ್ಷದ ಸ್ಪರ್ಧೆ, ಇನ್ನೊಂದು ಪಕ್ಷದ ಗೆಲುವಿಗೆ ಸಹಕಾರಿ ಆಗಲಿದೆ. ಭಾರತದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ದೊಡ್ಡ ಪಕ್ಷಗಳಾಗಿದ್ದು, ಈ ಎರಡು ಪಕ್ಷಗಳ ನಡುವೆ ನೂರಾರು ಸಣ್ಣ ಸಣ್ಣ ಪಕ್ಷಗಳು ತನ್ನದೇ ಆದ ಸವಾಲು ಒಡ್ಡುತ್ತಿವೆ. ತನ್ನದೇ ಆದ ಮತ ಬ್ಯಾಂಕ್ ಸೃಷ್ಟಿಸಿಕೊಂಡು ಎರಡು ಪ್ರಬಲ ಪಕ್ಷಗಳ ಸೋಲು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಭಾರತದಲ್ಲಿ ಕಾಂಗ್ರೆಸ್ ಜಾತ್ಯಾತೀತ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ಅಜೆಂಡ ಅನುಸರಿಸಿ ಸಾಕಷ್ಟು ಸಣ್ಣ ಪುಟ್ಟ ಪಕ್ಷಗಳು ನೆಲೆ ಕಂಡುಕೊಂಡಿವೆ. ಬಿಜೆಪಿ ಏಕಾಂಗಿಯಾಗಿ ಹಿಂದುತ್ವ ಅಜೆಂಡಾದ ಮೇಲೆ ಶೇಕಡಾವರು ಹೆಚ್ಚು ಮತಗಳಿಸಿ ಅಧಿಕಾರ ಹಿಡಿಯುತ್ತಿದ್ದರೆ, ಕಾಂಗ್ರೆಸ್ ಮಾತ್ರ ಸಣ್ಣ ಪುಟ್ಟ ಜಾತ್ಯಾತಿತ ಪಕ್ಷಗಳ ಜೊತೆಗೂ ಮತಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಉದ್ಬವವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಶೇಕಡವಾರು ಮತ ಗಳಿಕೆಯಲ್ಲಿ ಸಾಕಷ್ಟು ಕುಸಿತ ಅನುಭವಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಶೇಕಡವಾರು ಮತದಾನದಲ್ಲಿ ಶೇಕಡ 50ರಷ್ಟು ದಾಟಿರಲಿಲ್ಲ. ಆದರೂ ಕಳೆದ 25 ವರ್ಷಗಳಲ್ಲಿ ರಾಜಕೀಯ ಪಕ್ಷವೊಂದು ಗಳಿಸಲು ಸಾಧ್ಯವಾಗದ 300ರ ಗಡಿಯನ್ನು ದಾಟುವ ಮೂಲಕ ಕಳೆದೆರಡೂ ಅವಧಿಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲದಂತ ಜಯ ಕಂಡಿದೆ.
ಕಾಂಗ್ರೆಸ್ ಜಾತ್ಯಾತಿತ ಮತಗಳ ಮೇಲೆ ಕಣ್ಣಿಟ್ಟಿರುತ್ತದೆ. ಅದೇ ರೀತಿ ಪ್ರಾದೇಶಿಕ ಪಕ್ಷಗಳೂ ಸಹ ಜಾತ್ಯಾತಿತ ಮತಗಳ ಬುಟ್ಟಿಗೆ ಕೈ ಹಾಕುತ್ತದೆ. ಇದೇ ಕಾರಣದಿಂದ ಕಾಂಗ್ರೆಸ್ ಸತತ ಸೋಲಿನಿಂದ ಕಂಗೆಟ್ಟು ಬಸವಳಿದಿದೆ. ಬಿಜೆಪಿ ಹಿಂದುತ್ವ ಅಜೆಂಡಾ ಹಿಡಿಯುವುದನ್ನು ತಪ್ಪಿಸಲು ಕಾಂಗ್ರೆಸ್ ಕಸರತ್ತು ಮಾಡಬೇಕಿದೆ. ಒಂದು ವೇಳೆ ಬಿಜೆಪಿಯ ಹಿಂದುತ್ವ ಅಜೆಂಡಾ ಬಿಡಿಸಲು ಸಾಧ್ಯವಾಗದಿದ್ದರೆ, ಬಿಜೆಪಿಯನ್ನು ಎದುರಿಸಲಾಗದೆ, ಪ್ರಾದೇಶಿಕ ಪಕ್ಷಗಳಿಂದ ಮತಬ್ಯಾಂಕ್ ಕಸಿದುಕೊಳ್ಳಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಕಾಂಗ್ರೆಸ್‌ಗೆ ತಪ್ಪಲಾರದು.