ಈ ತಿಂಗಳ 8 ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಆಮ್ ಆದ್ಮಿ ಪಾರ್ಟಿ ತಾನು ಕಳೆದ ಐದು ವರ್ಷಗಳಲ್ಲಿ ದೆಹಲಿ ಜನತೆಗೆ ನೀಡಿರು ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೆ, ಭಾರತೀಯ ಜನತಾ ಪಕ್ಷ ಅಭಿವೃದ್ಧಿ ಯೋಜನೆಗಳ ಬದಲಾಗಿ ಕೋಮುಭಾವನೆಯನ್ನು ಕೆರಳಿಸುವಂತಹ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಬಿಜೆಪಿ ಮಾಡುತ್ತಿರುವ ದ್ವೇಷದ ಭಾಷಣದಿಂದಾಗಿ ಪ್ರೇರೇಪಿತರಾದ ದುಷ್ಕರ್ಮಿಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಮೇಲೆ ಗುಂಡು ಹಾರಿಸುವ ಮಟ್ಟಕ್ಕೆ ಹೋಗಿದೆ.
ಈ ಕೋಮುಭಾವನೆಯನ್ನು ಕೆರಳಿಸುವಂತಹ ಪರಿಪಾಠವನ್ನು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 2014 ರಿಂದಲೂ ನಡೆಸುತ್ತಿದೆ. ದೆಹಲಿಯಷ್ಟೇ ಅಲ್ಲ, ದೇಶಾದ್ಯಂತ ಕೋಮುಗಲಭೆ ಸೃಷ್ಟಿಸುವ ರೀತಿಯಲ್ಲಿ ಬಿಜೆಪಿ ನಾಯಕರು ಪ್ರಚಾರ ಮಾಡುವ ಮೂಲಕ ಮುಸ್ಲಿಂರ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಇದಲ್ಲದೇ, ಬಹುಸಂಖ್ಯಾತ ಹಿಂದೂ ಮತಗಳನ್ನು ಕಬಳಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಈ ನಕಾರಾತ್ಮಕ ಪ್ರಚಾರಕ್ಕೆ ಕೆಲವು ರಾಜ್ಯಗಳಲ್ಲಿ ಫಲವೂ ಸಿಕ್ಕಿದೆ.
ಆದರೆ, 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದ ನಂತರ ಕೆಲವು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಇನ್ನು ಇಡೀ ವಿಶ್ವದ ಗಮನ ಸೆಳೆದಿರುವ ಪ್ರತಿಷ್ಠಿತ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ 15 ವರ್ಷಗಳ ನಂತರ ಅಧಿಕಾರದ ಗದ್ದುಗೆ ಏರಬೇಕೆಂಬ ಇರಾದೆಯನ್ನು ಹೊಂದಿರುವ ಬಿಜೆಪಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ.
2019 ರ ಲೋಕಸಭೆ ಚುನಾವಣೆ ಮತ್ತು ಅದಕ್ಕಿಂತ ಮುನ್ನ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮೋದಿ ಅಲೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಗೆಲುವು ಸಾಧಿಸಿ ಅಧಿಕಾರವನ್ನು ಹಿಡಿದಿತ್ತು. ಆದರೆ, ಈಗ ದೆಹಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ವೇಳೆ ಬಿಜೆಪಿಗೆ ಪ್ರಚಾರದ ಸರಕುಗಳೇ ಸಿಗುತ್ತಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಕೋಮುಭಾವನೆ ಕದಡುವಂತಹ ಭಾಷಣಗಳನ್ನು ಮಾಡುತ್ತಿದ್ದಾರೆ.
ಸಿಎಎ ಮತ್ತು ಎನ್ಆರ್ ಸಿ ಬಿಟ್ಟರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಾದಿಯಾಗಿ ಈ ಪಕ್ಷದ ನಾಯಕರಿಗೆ ಯಾವುದೇ ವಿಷಯಗಳು ಸಿಕ್ಕಿಲ್ಲ. ಹೀಗಾಗಿ ಈ ವಿಚಾರಗಳನ್ನೇ ಚುನಾವಣೆ ಪ್ರಚಾರದ ಅಸ್ತ್ರಗಳನ್ನಾಗಿ ಮಾಡಿಕೊಂಡಿದ್ದಾರೆ.
ಬಿಜೆಪಿ ಮುಖಂಡರಾದ ವರ್ಮ, ಅನುರಾಗ್ ಸೇರಿದಂತೆ ಇನ್ನಿತರೆ ನಾಯಕರು ಸಿಎಎ ವಿರುದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಶಾಹೀನ್ ಬಾಗ್ ಹೋರಾಟಗಾರರ ವಿರುದ್ಧ ಅವಹೇಳನಾಕಾರಿ ಭಾಷಣ ಮಾಡಿದ್ದಲ್ಲದೇ, ಇವರೆಲ್ಲಾ ದೇಶದ್ರೋಹಿಗಳು. ಇವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದೆಲ್ಲಾ ಅರಚಾಡಿದ್ದರಿಂದ ದೇಶಪ್ರೇಮಿಗಳ ಸೋಗನ್ನು ಹಾಕಿಕೊಂಡ ಕೆಲವು ದುಷ್ಕರ್ಮಿಗಳು ಹೋರಾಟಗಾರರ ಮೇಲೆ ಗುಂಡು ಹಾರಿಸಿ ಕೊಲೆ ಮಾಡುವ ಯತ್ನಕ್ಕೆ ಕೈ ಹಾಕಿದ್ದಾರೆ.
ಚುನಾವಣೆ ಪ್ರಚಾರವೆಂದರೆ ಅದಕ್ಕೊಂದು ರೀತಿ-ನೀತಿ ಇರುತ್ತದೆ. ನಿಯಮಾವಳಿಗಳಿರುತ್ತವೆ. ಕೇವಲ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿಟ್ಟು ಮತ ಯಾಚನೆ ಮಾಡಬೇಕು. ಯಾವುದೇ ವ್ಯಕ್ತಿಗತ ಚಾರಿತ್ರ್ಯ ಹರಣ ಮಾಡುವಂತಹ, ಒಂದು ಕೋಮಿನ ವಿರುದ್ಧ ಮತ್ತೊಂದು ಕೋಮನ್ನು ಎತ್ತಿ ಕಟ್ಟುವ ರೀತಿಯಲ್ಲಿ ಅಪಪ್ರಚಾರದಲ್ಲಿ ತೊಡಗುವುದು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ.
ಇಂತಹ ಪ್ರಚಾರ ಭಾಷಣಗಳ ಮೇಲೆ ಚುನಾವಣೆ ಆಯೋಗ ನಿಗಾ ವಹಿಸಬೇಕಾಗುತ್ತದೆ. ಆದರೆ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣೆ ಆಯೋಗ ಕಣ್ಣಿದ್ದೂ ಕುರುಡಾಗಿದ್ದು, ಕಿವಿ ಇದ್ದೂ ಕಿವುಡನಂತಿದೆ. ಬಿಜೆಪಿ ನಾಯಕರು ಇಷ್ಟೆಲ್ಲಾ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಒಂದು ವಾರ ಕಳೆದರೂ ಅವರ ವಿರುದ್ಧ ಕೇಸು ದಾಖಲಿಸುವುದಿರಲಿ, ಕನಿಷ್ಠ ಪಕ್ಷ ಎಚ್ಚರಿಕೆಯ ನೊಟೀಸ್ ಅನ್ನೂ ಕಳುಹಿಸುವ ಧೈರ್ಯ ತೋರಿಲ್ಲದಿರುವುದು ವಿಪರ್ಯಾಸವೇ ಸರಿ.
ಈ ಮೂಲಕ ಚುನಾವಣೆ ಆಯೋಗ ಇಂತಹ ಹರಕು ಬಾಯಿಯ, ಕೊಳಕು ಮನಸಿನ ನಾಯಕರ ರಕ್ಷಣೆಗೆ ನಿಂತಿದೆ. ಚುನಾವಣೆ ಆಯೋಗದ ಈ ರಕ್ಷಣೆಯಿಂದ ಈ ಕೊಳಕು ಮನಸುಗಳಿಗೆ ಮತ್ತಷ್ಟು ದ್ವೇಷವನ್ನು ಹುಟ್ಟು ಹಾಕಲು ಹಾದಿಯನ್ನು ಸುಗಮ ಮಾಡಿಕೊಟ್ಟಂತಾಗುತ್ತದೆ.
ದೆಹಲಿ ಜನರಲ್ಲಿ ಮನೆ ಮಾತಾಗಿರುವ ಆಮ್ ಆದ್ಮಿ ಪಾರ್ಟಿಯ ಜನಪ್ರಿಯತೆಯನ್ನು ಕಟ್ಟಿ ಹಾಕಲು ಬಿಜೆಪಿ ನಾಯಕರು ತಮ್ಮ ಭೀಕರವಾದ ಭಾಷಣಗಳ ಮೂಲಕ ರಾಜಕೀಯ ಥಿಯೇಟರ್ ಮಾಡಲು ಹೊರಟಿದ್ದಾರೆ. ಒಂದು ದ್ವೇಷದ ಹತಾಶೆಯ ಭಾಷಣಗಳು ಒಂದು ಹತಾಶೆಯಾಗಿರುವ ರಾಜಕೀಯ ಪಕ್ಷದ ಪ್ರತಿಫಲನದಂತಿರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಆಡಳಿತದ ವಿಚಾರಗಳು ಬೇಡವಾಗಿವೆ. 2014 ರಲ್ಲಿ ವಿಕಾಸದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಇಂದು ಅದು ಬೇಡದ ಕೂಸಾಗಿದೆ. ಈಗೇನಿದ್ದರೂ ಧರ್ಮದ ಆಧಾರದಲ್ಲಿ ಮತಗಳನ್ನು ಕ್ರೋಢೀಕರಿಸುವುದೇ ಈ ಕೋಮುವಾದಿ ಪಕ್ಷದ ನಿಲುವಾಗಿದೆ. ಈ ಮೂಲಕ ಕೋಮುವಾದವನ್ನು ಬಿತ್ತಿ ದೇಶದ ಗಮನವನ್ನು ಸೆಳೆಯುವತ್ತ ಹೆಜ್ಜೆ ಇಟ್ಟಿದೆ.
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರವರೆಗೆ ಎಲ್ಲರೂ ಕೇವಲ ಗನ್ ಮತ್ತು ಗುಂಡುಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೀಗೆ ಒಬ್ಬರ ನಂತರ ಮತ್ತೊಬ್ಬರು ಸ್ಪರ್ಧೆಗೆ ಇಳಿದವರಂತೆ ನಾಲಗೆಯನ್ನು ಹರಿಯ ಬಿಡುತ್ತಿದ್ದಾರೆ.
ಈ ಅವಿವೇಕಿ ಅನುರಾಗ್ ಠಾಕೂರ್ ಅವರಂತಹ ಜವಾಬ್ದಾರಿ ಸ್ಥಾನದಲ್ಲಿರುವವರ ಭಾಷಣ ಕೇಳಿದ ಕುರುಡು ದೇಶಪ್ರೇಮಿಗಳು ಗುಂಡಿಕ್ಕುವ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಶನಿವಾರ ಶಾಹೀನ್ ಬಾಗ್ ನಲ್ಲಿ ಕಪಿಲ್ ಗುಜ್ಜಾರ್ ಎಂಬ ಅಂಧ ಭಕ್ತನೊಬ್ಬ ಗುಂಡು ಹಾರಿಸುವ ಒಂದು ದಿನ ಮೊದಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೂರ್ವ ದೆಹಲಿಯಲ್ಲಿನ ಚುನಾವಣೆ ರ್ಯಾಲಿಯಲ್ಲಿ ಮಾತನಾಡುತ್ತಾ, ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬೆಂಬಲಿಸುವವರು ಎಂದು ಹೇಳಿಕೆ ನೀಡಿದ್ದರು.
ಇನ್ನೂ ಮುಂದುವರಿದ ಆದಿತ್ಯನಾಥ್ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿರಿಯಾನಿಯನ್ನು ಪೂರೈಕೆ ಮಾಡುತ್ತಿದ್ದಾರೆ. ಈ ಮೂಲಕ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದಿದ್ದರು. ಅಲ್ಲದೇ, ಈ ಪ್ರತಿಭಟನಾಕಾರರಿಗೆ ಭಾರತ ವಿಶ್ವದ ಒಂದು ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವುದು ಇಷ್ಟವಿಲ್ಲ ಎಂದು ಟೀಕಿಸಿದ್ದರು.
ಶಾಹೀನ್ ಬಾಗ್ ನಲ್ಲಿ ಗುಂಡು ಹಾರಿಸಿದ ವ್ಯಕ್ತಿಯು ಹಿಂದೂರಾಷ್ಟ್ರ ಜಿಂದಾಬಾದ್, ನನಗೆ ಹಿಂದೂ ರಾಷ್ಟ್ರ ಬೇಕು, ಇಲ್ಲಿ ಹಿಂದೂಗಳು ಮಾತ್ರ ಇರಬೇಕು ಎಂದು ಬಡಬಡಾಯಿಸಿ ಜೈ ಶ್ರೀರಾಂ ಎಂದು ಹೇಳಿ ಗುಂಡು ಹಾರಿಸಿದ್ದ. ಇಂತಹ ಕೃತ್ಯಗಳಲ್ಲೇ ಗೊತ್ತಾಗುತ್ತದೆ ಕೋಮುದ್ವೇಷದ ಬೀಜವನ್ನು ಬಿತ್ತುತ್ತಿರುವವರು ಯಾರು ಎಂಬುದು.
ಇಲ್ಲಿ ಗಮನಿಸಬೇಕಾದ ವಿಚಿತ್ರವೆಂದರೆ ಬಜೆಟ್ ದಿನ ಹಣಕಾಸು ಖಾತೆ ರಾಜ್ಯ ಸಚಿವರೂ ಆಗಿರುವ ಅನುರಾಗ್ ಠಾಕೂರ್ ತಮ್ಮ ಮನೆಯಲ್ಲಿರುವ ಹನುಮಾನ್ ಮೂರ್ತಿ ಮುಂದೆ ನಿಂತು ಮೋದಿ ಸರ್ಕಾರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಲ್ಲಿ ನಂಬಿಕೆ ಇಟ್ಟಿದೆ ಎಂದು ಹೇಳಿಕೊಂಡಿದ್ದರು.
ಆದರೆ, ಇದೇ ಅನುರಾಗ್ ಠಾಕೂರ್ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯಿಂದ ಪ್ರೇರೇಪಿತರಾದ ದುಷ್ಕರ್ಮಿಗಳಿಬ್ಬರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಕೃತ್ಯವನ್ನು ನಡೆಸಿದ್ದರು.
ಇಲ್ಲಿ ಮನೆಗೆ ಯಜಮಾನನಂತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಇಂತಹ ಹಿಂಸಾಚಾರ ಕೃತ್ಯಗಳಿಗೂ ತನಗೂ ಸಂಬಂಧವಿಲ್ಲದವರಂತೆ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರನ್ನು ಬಿಟ್ಟು ಗುಂಡು ಹಾರಿಸಿ ಹತ್ಯೆಗೈದಾಗಲೂ ಮೋದಿ ಒಂದು ಬಾರಿಯೂ ಪ್ರಸ್ತಾಪ ಮಾಡಲಿಲ್ಲ. ಇದಲ್ಲದೇ ದೇಶಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಅಂದರೆ ಎಲ್ಲದಕ್ಕೂ ಮೌನಂ ಸಮ್ಮತಿ ಲಕ್ಷಣಂ ಎಂಬಂತಿದೆ ಮೋದಿಯವರ ಧೋರಣೆ.
ತಾವೊಬ್ಬ ಪ್ರಧಾನಿಯಾಗಿ ಇಡೀ ದೇಶವನ್ನು ಒಂದು ಎಂದು ಪರಿಗಣಿಸಿ ಕನಿಷ್ಠ ಪಕ್ಷ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಮಾಡಬೇಕೇ ಹೊರತು, ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬೇಡಿ ಎಂದು ತಮ್ಮ ಸಹೋದ್ಯೋಗಿಗಳಿಗೆ, ತಮ್ಮ ಪಕ್ಷದ ಮುಖಂಡರಿಗೆ ತಿಳಿ ಹೇಳುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ, ಮೋದಿ ಈ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಅವರ ಈ ಜಾಣ ನಡೆಯನ್ನು ಗಮನಿಸಿದರೆ ಈ ಎಲ್ಲಾ ಹೇಳಿಕೆಗಳಿಗೆ ಸಹಮತಿ ಕೊಟ್ಟೇ ಹೇಳಿಸುತ್ತಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗಿ ಬರತೊಡಗಿವೆ.
ಕೃಪೆ: ದಿ ವೈರ್