ದಿನ ಬೆಳಗಾದರೆ ಮಾಧ್ಯಮಗಳ ಮುಂದೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ʼತುಕ್ಡೆ ತುಕ್ಡೆ ಗ್ಯಾಂಗ್ʼ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿಯ ನಾಯಕರುಗಳಿಗೆ ಸ್ಪಷ್ಟವಾದ ಉತ್ತರವನ್ನು ಆರ್‌ಟಿಐ ಕಾರ್ಯಕರ್ತರೊಬ್ಬರು ನೀಡಿದ್ದಾರೆ. ಗೃಹ ಸಚಿವಾಲಯಕ್ಕೆ ತುಕ್ಡೆ ತುಕ್ಡೆ ಗ್ಯಾಂಗ್ ಕುರಿತು ಮಾಹಿತಿಯನ್ನು ಕೇಳಿ ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಗೃಹ ಸಚಿವಾಲಯ ಈ ಕುರಿತು ಯಾವುದೇ ಮಾಹಿತಿ ಸಚವಾಲಯದಲ್ಲಿ ಲಭ್ಯವಿಲ್ಲ ಎಂದು ಹೇಳಿದೆ.
ಪ್ರತಿ ಬಾರಿಯೂ ತಮ್ಮ ವಿರೋಧೀಗಳನ್ನು ಸಂಭೋದಿಸಲು ತುಕ್ಡೆ ತುಕ್ಡೆ ಗ್ಯಾಂಗ್ ಎಂಬ ಪದ ಪ್ರಯೋಗ ಮಾಡುತ್ತಿದ್ದ ಅಮಿತ್ ಶಾ ಹಾಗೂ ಇತರ ನಾಯಕರುಗಳು, ದೇಶವನ್ನು ಇಬ್ಬಾಗ ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳು ಇವು ಎಂದು ಆರೋಪಿಸುತ್ತಿದ್ದರು. ದೆಹಲಿಯ ಜವಹರ್‌ಲಾಲ್ ನೆಹರು ಯತೂನಿವರ್ಸಿಟಿಯಲ್ಲಿ (ಜೆಎನ್‌ಯು) 2016ರಲ್ಲಿ ಆರಂಭವಾದ ಪ್ರತಿಭಟನೆಗಳ ಸಂದರ್ಭದಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಎಂಬ ಪದ ಪ್ರಯೋಗವನ್ನು ಬಿಜೆಪಿಯು ಆರಂಭಿಸಿತ್ತು. ಈಗ ಆರ್‌ಟಿಐಗೆ ಗೃಹ ಸಚಿವಾಲಯ ನೀಡಿರುವ ಉತ್ತರವನ್ನು ನೋಡಿ, ಸಾಕೇತ್ ಅವರು ತುಕ್ಡೆ ತುಕ್ಡೆ ಗ್ಯಾಂಗ್ ಎನ್ನುವುದು ಅಮಿತ್ ಶಾ ಅವರ ಕಲ್ಪನೆಯ ಒಂದು ಭಾಗವಷ್ಟೇ ಎಂದು ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಸಾಕೇತ್ ಅವರು, ಯಾವುದೇ ರಾಜಕೀಯ ಸಮಾರಂಭಗಳಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಎಂಬ ಪದ ಪ್ರಯೋಗವನ್ನು ಬಳಸಿದರೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. “ಅಮಿತ್ ಶಾ ಅವರು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ವಿರೋಧಿಗಳನ್ನು ಕರೆಯಲು ಸ್ಪಷ್ಟವಾದ ಕಾರಣವನ್ನು ನೀಡಬೇಕು. ಇಲ್ಲವಾದಲ್ಲಿ ಜನರ ದಿಕ್ಕು ತಪ್ಪಿಸಿದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಸುಳ್ಳು ಹೇಳಿದಕ್ಕಾಗಿ ದೇಶದ ಜನರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

ಜನವರಿ 5ರಂದು ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ನಡೆದ ಮರುದಿನ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮಾತನಾಡುತ್ತಾ, ತಾವು ಜೆಎನ್‌ಯುನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಯಾವುದೇ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಸಕ್ರೀಯವಾಗಿರಲಿಲ್ಲ ಎಂದು ಹೇಳಿದ್ದರು. ಈ ಮಾತುಗಳನ್ನಾಡುವ ಹಿಂದಿನ ದಿನ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದ ದುಷ್ಕರ್ಮಿಗಳ ತಂಡವೊಂದು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಹಲ್ಲೆಗಳಿಗೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯನ್ನು ಹೊಣೆಗಾರರನ್ನಾಗಿಸಿತ್ತು.
ಇನ್ನು ಮಾಜಿ ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯನ್ನು ರಾಃಉಲ್ ಗಾಂಧಿಯವರ ಆಪ್ತ ತುಕ್ಡೆ ತುಕ್ಡೆ ಗ್ಯಾಂಗ್ ಸಿದ್ದಪಡಿಸಿದೆ. ಆ ಪ್ರಣಾಳಿಕೆಯನ್ನು ದೇಶದಲ್ಲಿ ಅನುಷ್ಟಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇನ್ನು ಡಿಸೆಂಬರ್ 26ರಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಗೃಹ ಸಚಿವ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಕಾರಣ ಎಂದು ಆರೋಪಿಸಿದ್ದರು. ಏಪ್ರಿಲ್ 10, 2019ರಲ್ಲಿ ಚುನಾವಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ ಅಮಿತ್ ಶಾ ಅವರು ಮೋದಿಯವರಿಂದ ಮಾತ್ರ ಬಲಿಷ್ಠ ಆಡಳಿತ ನೀಡಲು ಸಾಧ್ಯ ತುಕ್ಡೆ ತುಕ್ಡೆ ಗ್ಯಾಂಗ್‌ನಿಂದ ಅಲ್ಲ ಎಂದಿದ್ದರು.
ಈಗ, ತುಕ್ಡೆ ತುಕ್ಡೆಗ್ಯಾಂಗ್ ಕುರಿತು ಯಾವುದೇ ಮಾಹಿತಿ ತಮ್ಮಲಿಲ್ಲ ಎಂದು ಗೃಹ ಸಚಿವಾಲಯ ಹೇಳುವ ಮೂಲಕ ತಮ್ಮದೇ ಸಚಿವಾಳಯದ ಸಚಿವರು ಮಾಡುವ ಆರೋಪಗಳಿಗೆ ಬುನಾದಿಯಿಲ್ಲ ಎಂದು ನಿರೂಪಿಸಿದೆ. ಯಾವ ಆಧಾರದ ಮೇಲೆ ತುಕ್ಡೆ ತುಕ್ಡೆ ಗ್ಯಾಂಗ್ ಎಂಬ ಪದ ಪ್ರಯೋಗವನ್ನು ಬಿಜೆಪಿಯ ನಾಯಕರು ಪದೇ ಪದೇ ಮಾಡುತ್ತಿದ್ದಾರೆ ಎನ್ನುವುದರ ಕುರಿಉ ಸ್ಪಷ್ಟನೆ ನೀಡುವ ಅಗತ್ಯವಿದೆ.
ಕೃಪೆ: ಸ್ಕ್ರಾಲ್.ಇನ್