ಸಾಮಾನ್ಯ ಜನರ ತಿಳುವಳಿಕೆಯಲ್ಲಿ ಇರುವುದೇನು? ಸರ್ಕಾರದ ಯಾವುದೇ ಯೋಜನೆಯ ಹಿಂದೆ ಸಾಕಷ್ಟು ಅಂಕಿ-ಅಂಶಗಳ ಸಹಿತವಾದ ಆಳ ಜ್ಞಾನ ಇರುತ್ತದೆ ಎಂದು. ಆದರೆ ಹಾಗಿಲ್ಲದೇ ಇರುವುದು ನಿತ್ಯ ಸತ್ಯ.
ರಾಜ್ಯ ಸರ್ಕಾರದ ಕೈ ಮಗ್ಗ ಮತ್ತು ಜವಳಿ ನೀತಿಯ ಉದ್ದೇಶಿತ ಗುರಿಯ ಬಗ್ಗೆ ಸಿಎಜಿ ವರದಿ `ಯುಟೋಪಿಯನ್’ ಎಂದು ಕರೆದಿರುವುದು ಈ ನಿತ್ಯ ಸತ್ಯವನ್ನು ಮತ್ತಷ್ಟು ಪುಷ್ಟೀಕರಿಸಿದೆ. ರಾಜ್ಯದ ಆರ್ಥಿಕ ವಲಯದ ಸಿಎಜಿ ವರದಿಯಲ್ಲಿ (2013-2018) ಸರ್ಕಾರದ ಗೊತ್ತು ಗುರಿಯಿಲ್ಲದ `ನೂತನ ಜವಳಿ ನೀತಿ’ಯ ದಾಖಲೆ ಸಹಿತವಾದ ವಿಮರ್ಶೆ ನಡೆಸಲಾಗಿದೆ. ಇದು ಜನರಲ್ಲಿ ಸರ್ಕಾರದ ಹಾಗೂ ಅಧಿಕಾರ ವಲಯದ ಮೇಲಿನ ಅವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವಂತಿದೆ. ಕೈ ಮಗ್ಗ ಮತ್ತು ಜವಳಿ ಇಲಾಖೆ ಅನುಷ್ಟಾನಗೊಳಿಸಿದ ನೂತನ ಜವಳಿ ನೀತಿ ಹೊಂದಿದ್ದ ಗುರಿ ಬಹಳ ಸರಳವಾಗಿತ್ತು – ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವುದು, ಉದ್ಯೋಗಾವಕಾಶ ಹೆಚ್ಚಿಸುವುದು ಹಾಗೂ ಉದ್ಯಮದ ಎಲ್ಲಾ ವಿಭಾಗಗಳಲ್ಲಿ ನುರಿತ ಕೆಲಸಗಾರರನ್ನು ಸೃಷ್ಟಿಸುವುದು.
ಆದರೆ ಆದದ್ದೇನು?
ಸಿಎಜಿ ವರದಿಯ ಪ್ರಕಾರ ಯೋಜನೆ ಉದ್ದೇಶಿತ ಗುರಿಯ 37% ಹೂಡಿಕೆ ಆಕರ್ಷಿಸುವಲ್ಲಿ ಹಾಗೂ 24% ಉದ್ಯೋಗಾವಕಾಶ ಹೆಚ್ಚಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಅಂಕಿ-ಅಂಶಗಳಲ್ಲಿ ನೋಡುವುದಾದರೆ, 2013 ರಿಂದ 2018ರ ಅವಧಿಯಲ್ಲಿ ಇಲಾಖೆ ಹೊಂದಿದ್ದ ಗುರಿ ರೂ. 10,000 ಕೋಟಿಯ ಬಂಡವಾಳ ಹಾಗೂ 5 ಲಕ್ಷ ಉದ್ಯೋಗಾವಕಾಶ. ಉದ್ದೇಶಿತ ಗುರಿ ತಲುಪುವಲ್ಲಿ ಇಲಾಖೆ ಏಕೆ ವಿಫಲವಾಯಿತು ಎನ್ನುವುದನ್ನು ನೋಡುವುದು ಇದ್ದದ್ದೇ. ಆದರೆ, ಅದಕ್ಕೂ ಮೊದಲು ಇಲಾಖೆ ಈ ಗುರಿ ರೂಪಿಸಿದ್ದು ಯಾವ ಆಧಾರದಲ್ಲಿ ಎನ್ನುವುದನ್ನು ನೋಡಬೇಕಲ್ಲವೇ?
ಜವಳಿ ನೀತಿ 2013-18ರ ಕಾರ್ಯನಿರ್ವಹಣೆ
ಅದನ್ನೇ ಸಿಎಜಿ ತಂಡ ನೋಡಿದೆ. ಇಂತಹ ಯೋಜನೆಗಳನ್ನು ಸಿದ್ದಪಡಿಸುವಾಗ ವಾಸ್ತವಕ್ಕೆ ಹತ್ತಿರವಿರುವ ಸಾಂಖ್ಯಿಕ ವರದಿಗಳನ್ನು ಅಭ್ಯಸಿಸಬೇಕೆ ಅಥವಾ ರಾಜ್ಯದ ಜನತೆಯನ್ನು ಮೆಚ್ಚಿಸಲು ದೊಡ್ಡ ಯೋಜನೆಯೊಂದನ್ನು ಘೋಷಿಸುವುದು ಮುಖ್ಯವೇ? ಒಂದು ಯೋಜನೆಯಿಂದ ನಿರೀಕ್ಷಿಸಬಹುದಾದ ಬಂಡವಾಳ ಹಾಗೂ ಸಾಧಿಸಬಹುದಾದ ಉದ್ಯೋಗಾವಕಾಶದ ಬಗ್ಗೆ ತಿಳಿಯಬೇಕಾದರೆ ಆ ವಲಯದಲ್ಲಿರುವ ಉದ್ಯೋಗಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಇಂಡಸ್ಟ್ರಿಗಳು ಹಾಗೂ ಆ ವಲಯದ ಪ್ರತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯದ ಉದ್ಯೋಗಿಗಳ ಸಂಖ್ಯೆ ಹಾಗೂ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿವು ಅಗತ್ಯ.
ಸಿಎಜಿ ವರದಿ ಪ್ರಕಾರ, ನೂತನ ಜವಳಿ ನೀತಿಯ ರೂಪುರೇಷೆ ಸಿದ್ದಗೊಂಡಿದ್ದು 2009-10ರ ಕೈ ಮಗ್ಗ ನೇಕಾರರ ವಿವರ ಹಾಗೂ 1995-96 ರ ಪವರ್ ಲೂಮ್ ನೇಕಾರರ ಜನಗಣತಿ ಆಧಾರದಲ್ಲಿ. ಅಂದರೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಜವಳಿ ನೀತಿಯಲ್ಲಿ 1996 ರ ನಂತರದ ಅಂಕಿ ಅಂಶಗಳು, ಬದಲಾದ ಔದ್ಯೋಗಿಕ ಪರಿಸ್ಥಿತಿಗಳು, ತಾಂತ್ರಿಕ ಬದಲಾವಣೆಗಳು ಇವ್ಯಾವೂ ಒಳಗೊಂಡಿರಲಿಲ್ಲ. ಇಷ್ಟು ಹಳೆಯ ಸವಕಲು ವರದಿಗಳನ್ನು ಆಧರಿಸಿ ತಯಾರಿಸಲಾಗುವ ಯೋಜನೆಯಿಂದ ಯಾವೆಲ್ಲಾ ಪ್ರಮಾದಗಳು ನಡೆಯಬಹುದು ಎಂಬುದಕ್ಕೆ ಈ ಒಂದು ನೀತಿ ಕನ್ನಡಿ ಹಿಡಿದಂತಿದೆ.
ಹೇಗಿತ್ತು ಯೋಜನೆ?
ಇಲಾಖೆಯ ಅಂದಾಜಿನ ಪ್ರಕಾರ ಒಂದು ಮೆಗಾ (ಬೃಹತ್) ಜವಳಿ ಯೋಜನೆಯ ಪ್ರತಿ ಒಂದು ಕೋಟಿ ಬಂಡವಾಳದಿಂದ 50 ಹೊಸ ಉದ್ಯೋಗಾವಕಾಶಗಳು ತೆರೆಯಬೇಕಿತ್ತು. ಸಿಎಜಿ ಈ ಬಗ್ಗೆ ಆಮೂಲಾಗ್ರ ಆಡಿಟಿಂಗ್ (ಲೆಕ್ಕ ಪರಿಶೋಧನೆ) ನಡೆಸಿದಾಗ ತಿಳಿದಿದ್ದು, ವಾಸ್ತವವಾಗಿ ಈ ಯೋಜನೆಯಡಿ ಸರ್ಕಾರ ಅನುಮೋದನೆ ನೀಡಿದ ಬಂಡವಾಳ ಹೂಡಿಕೆಗಳಲ್ಲಿ ಒಂದು ಕೋಟಿ ಬಂಡವಾಳದಿಂದ 1.5 ರಿಂದ 5 ಉದ್ಯೋಗಗಳು ಸೃಷ್ಟಿಯಾಗಿವೆ ಅಷ್ಟೆ. ಸಿಎಜಿ ವರದಿ ಹೇಳುವಂತೆ ಇದಕ್ಕೆ ಕಾರಣ, “ಯಂತ್ರಗಳ ಬಳಕೆ ಹೆಚ್ಚಿರುವುದನ್ನು ತಿಳಿಯದೇ ಇದ್ದುದೇ ಇಲಾಖೆ ರೂಪಿಸಿದ ಯೋಜನೆಯಲ್ಲಿ ಉದ್ಯೋಗಾವಕಾಶಗ ಬಗ್ಗೆ ಉತ್ಪ್ರೇಕ್ಷೆ ಹೆಚ್ಚಲು ಕಾರಣ.’’ ಇಲಾಖೆಯ ಬಳಿ ಪರಿಣಿತ ಟೆಕ್ಸಟೈಲ್ ಪ್ರಮೋಷನಲ್ ಅಧಿಕಾರಿಗಳು ಹಾಗೂ ಟೆಕ್ಸಟೈಲ್ ಇನ್ಸಪೆಕ್ಟರ್ ಗಳು ಇದ್ದರೂ, ಇತ್ತೀಚಿನ ಅಂಕಿ-ಅಂಶಗಳನ್ನು ಪಡೆದು ಯೋಜನೆ ರೂಪಿಸುವಲ್ಲಿ ಇಲಾಖೆ ವಿಫಲವಾಗಿದೆ.
ಪ್ರೋತ್ಸಾಹ ಧನವೆಂಬ ದೊಡ್ಡ ಮೀನುಗಳ `ವ್ಯಾಪಾರ’!
ಕೈಗಾರಿಕಾ ನೀತಿಯಲ್ಲಿ ಇದು ಮೊದಲಿನಿಂದಲೂ ಕೇಳಿ ಬಂದ ಆರೋಪ. ಸರ್ಕಾರಗಳು ದೊಡ್ಡ ಇಂಡಸ್ಟ್ರಿಗಳಿಗೆ ಪ್ರೋತ್ಸಾಹ ಧನ ನೀಡುವುಲ್ಲಿ ಕೊಡುಗೈ ದಾನಿಯಾಗಿರುತ್ತದೆ. ಆದರೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪ್ರೋತ್ಸಾಹಕ್ಕೆ ತನ್ನ ಬಳಿ ಏನೂ ಇಲ್ಲ ಎಂದು ಕೈ ಚೆಲ್ಲುವುದೇ ಹೆಚ್ಚು. ನೂತನ ಜವಳಿ ನೀತಿಯಲ್ಲಿಯೂ ಸರ್ಕಾರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಇಂಡಸ್ಟ್ರಿಗಳಿಗೆ (Micro, Small and Medium – MSME) ಪ್ರೋತ್ಸಾಹ ಧನ ನೀಡುವ ಯೋಜನೆಯನ್ನೂ ಹಾಕಿಕೊಂಡಿತ್ತು ಇದು ಹೊಸ ಇಂಡಸ್ಟ್ರಿ ಸ್ಥಾಪನೆ, ವಿಸ್ತರಣೆ ಹಾಗೂ ಆಧುನೀಕರಣಕ್ಕೆ ನೀಡಲಾಗುವ ಪ್ರೋತ್ಸಾಹ ಧನ.
ಈ ಯೋಜನೆಯಡಿ ಬಿಡುಗಡೆಗೊಳಿಸಲಾದ ಪ್ರೋತ್ಸಾಹ ಧನ ರೂ 72.74 ಕೋಟಿ. ಒಟ್ಟು 561 MSME ಗಳ ಪಟ್ಟಿಯ ಲೆಕ್ಕ ಪರಿಶೋಧನೆಯಲ್ಲಿ ತಿಳಿದು ಬಂದಿದ್ದೇನೆಂದರೆ, 312 ಇಂಡಸ್ಟ್ರಿಗಳಿಗೆ ಧನ ವಿತರಿಸುವಲ್ಲಿ 12 ತಿಂಗಳುಗಳ ವಿಳಂಬವಾಗಿದೆ. ಇನ್ನು, 158 ಇಂಡಸ್ಟ್ರಿಗಳಿಗೆ ಈ ಧನ ಪಾವತಿ ಆರು ತಿಂಗಳು ವಿಳಂಬವಾಗಿದೆ ಹಾಗೂ 70 ಇಂಡಸ್ಟ್ರಿಗಳಿಗೆ ಇನ್ನೂ ತಲುಪೇ ಇಲ್ಲ.
ಈಗ ಇದೇ ಸರ್ಕಾರಕ್ಕೆ ದೊಡ್ಡ ಮೀನೆಂದರೆ ಎಷ್ಟು ಆಸಕ್ತಿ ನೋಡೋಣ. ಹಿಮತ್ಸಿಂಗಕಾ ಸೀಡ್ (Himatsingka Seide) ಎಂಬ ಟೆಕ್ಸಟೈಲ್ ವಲಯದ ಅತಿ ದೊಡ್ಡ ಕಂಪೆನಿಗೆ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ (ಜವಳಿ ಖಾತೆ ಇದೇ ಇಲಾಖೆಯಡಿ ಬರುತ್ತದೆ) ಅತಿಯಾದ ಮುತುವರ್ಜಿ ವಹಿಸಿ ರೂ 430 ಕೋಟಿಯ ಪ್ರೋತ್ಸಾಹ ಧನ ನೀಡುತ್ತದೆ. ದಾಖಲೆಗಳ ಪ್ರಕಾರ ಕಂಪೆನಿ (Himatsingka Seide) ಈ ವಿಶೇಷ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿತ್ತು. ಈ ವಿಭಾಗದಲ್ಲಿ ರೂ 500 ಕೋಟಿಗೂ ಹೆಚ್ಚಿನ ಬಂಡವಾಳ ಹೂಡುವ ಅರ್ಹ ಕಂಪೆನಿಗಳಿಗೆ ಮಾತ್ರ ಪ್ರೋತ್ಸಾಹ ಧನ (ವಿಶೇಷ ಅನುದಾನ) ನೀಡಲಾಗುತ್ತದೆ.
Himatsingka Seide ರೂ 1,325 ಕೋಟಿಯ ಬಂಡವಾಳ ಹೂಡಿ ಹಾಸನದಲ್ಲಿ ತನ್ನ ಘಟಕದ ವಿಸ್ತರಣೆ ಹಾಗೂ ಆಧುನೀಕರಣಕ್ಕೆ ಯೋಜನೆ ಹಾಕಿಕೊಂಡಿತ್ತು. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ರೂ 769 ಕೋಟಿಯ ಅನುದಾನ ನೀಡಲು ಸಮ್ಮತಿ ಸೂಚಿಸಿತ್ತಾದರೂ, ಕ್ಯಾಬಿನೆಟ್ ಉಪ-ಸಮಿತಿ ರೂ 430 ಕೋಟಿಯ ಪ್ರೋತ್ಸಾಹ ಧನ ಬಿಡುಗಡೆಗೆ ಸಮ್ಮತಿಸಿತ್ತು. ಸಿಎಜಿ ವರದಿ ಪ್ರಕಾರ ರೂ 1350 ಕೋಟಿಯ ಬಂಡವಾಳ ಹೂಡಿಕೆಗೆ ನಿಯಮದಡಿ ನೀಡಬಹುದಾಗಿದ್ದ ಪ್ರೋತ್ಸಾಹ ಧನ ಕೇವಲ ರೂ 116.25 ಕೋಟಿ. ಏಕೆಂದರೆ, ವಿಶೇಷ ಅನುದಾನಕ್ಕೂ, ಪ್ರೋತ್ಸಾಹ ಧನ ನೀಡುವುದಕ್ಕೂ ಮೊದಲು ಪಾಲಿಸಬೇಕಾದ ಮಾನದಂಡಗಳಲ್ಲಿ ವ್ಯತ್ಯಾಸವೇನಿಲ್ಲ. ಸಿಎಜಿ ಅಭಿಪ್ರಾಯದಂತೆ Himatsingka Seide ಕಂಪೆನಿಯ ಅವಶ್ಯಕತೆಗಳಿಗನುಗುಣವಾಗಿ ನಿಯಮಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಹೀಗಾಗಿ Himatsingka Seide ಕಂಪೆನಿಯನ್ನು `ಅರ್ಹ’ ಕಂಪೆನಿ ಎಂದು ಪರಿಗಣಿಸಿದ್ದು ಸಮರ್ಥನೀಯವಲ್ಲ ಎಂಬುದು ಸಿಎಜಿ ಅಭಿಪ್ರಾಯ.
ವಿಶೇಷ ಅನುದಾನಕ್ಕೆ ಸರ್ಕಾರ ರಚಿಸಿದ ನಿಯಮಗಳು ಇಡೀ ಪ್ರಕ್ರಿಯೆ ಪಾರದರ್ಶಕವಾಗಿರದಂತೆ ಮಾಡಿದೆ. ಸಿಎಜಿ ಗಮನಿಸಿದ ಮತ್ತೊಂದು ಆಘಾತಕಾರಿ ಅಂಶವೆಂದರೆ ಇದೇ Himatsingka Seide ಕಂಪೆನಿಗೆ ನೀಡಲಾದ ಹೆಚ್ಚುವರಿ ರೂ 315 ಕೋಟಿ ಪ್ರೋತ್ಸಾಹ ಧನ. ಈ ಹೆಚ್ಚುವರಿ ಅನುದಾನ ನೀಡುವಲ್ಲಿ ಸರ್ಕಾರದ ಸಮರ್ಥನೆ ರಾಜ್ಯದ ಕೈಗಾರಿಕಾ ನೀತಿ ಹೆಚ್ಚಾಗಿ ಏನನ್ನು ಅವಲಂಬಿಸಿ ಇರುತ್ತದೆ ಎಂಬುದನ್ನು ತಿಳಿಸುತ್ತದೆ. ಈ ಬಗ್ಗೆ ಸಚಿವ ಸಂಪುಟ ಉಪ-ಸಮಿತಿಗೆ ಸಮರ್ಥನೆ ನೀಡಿದ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ, ಕಂಪೆನಿ ಕೇಳಿದಷ್ಟು ಅನುದಾನ ನೀಡದೇ ಇದ್ದರೆ ಕಂಪೆನಿ ಬೇರೆ ರಾಜ್ಯದಲ್ಲಿ ಹೂಡಿಕೆ ಮಾಡಲಿದೆ ಎಂದು.
ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಪ್ರಕಾರ, Himatsingka Seide ಕಂಪೆನಿಯ ಒಟ್ಟು ಬಂಡವಾಳಕ್ಕೆ (ರೂ 1,325 ಕೋಟಿ) ಆಂಧ್ರ ಪ್ರದೇಶ (ರೂ 1,820 ಕೋಟಿ), ಮಧ್ಯ ಪ್ರದೇಶ (ರೂ 1,512 ಕೋಟಿ) ಹಾಗೂ ಗುಜರಾತ್ (ರೂ 1,496 ಕೋಟಿ) ಸರ್ಕಾರಗಳು ಹೆಚ್ಚಿನ ಅನುದಾನ ನೀಡಲು ಸಿದ್ಧವಾಗಿವೆ. ಆದರೆ, ಸಿಎಜಿ ಅಭಿಪ್ರಾಯದಲ್ಲಿ ಯಾವುದೇ ರಾಜ್ಯ ಸರ್ಕಾರಗಳೂ ಕಂಪೆನಿಯೊಂದರ ಒಟ್ಟು ಬಂಡವಾಳಕ್ಕಿಂತಲೂ ಹೆಚ್ಚಿನ ಅನುದಾನ ನೀಡಿದ ನಿದರ್ಶನವೂ ಇಲ್ಲ, ನೀಡುವುದೂ ಇಲ್ಲ.
ಇನ್ನು ಕೊನೆಯದಾಗಿ Himatsingka Seide ನಂತಹ ದೊಡ್ಡ ಕಂಪೆನಿಗೆ ನಿಯಮ ಮೀರಿ ಅನುದಾನ ನೀಡುವ ಉತ್ಸಾಹ ತೋರಿದ್ದು ಯಾರು ಎಂಬ ಅಸ್ಪಷ್ಟ ಉತ್ತರ ಇರುವುದು ಜವಳಿ ಇಲಾಖೆ ಆಯುಕ್ತ ಸಿಎಜಿಗೆ ನೀಡಿದ ಪ್ರತಿಕ್ರಿಯೆಯಲ್ಲಿ. ಅವರ ಪ್ರಕಾರ, ಕಂಪೆನಿಗೆ ಇಲಾಖೆ ಮಂಜೂರು ಮಾಡಿದ ಅನುದಾನ ರೂ 114.05 ಕೋಟಿಯಾದರೂ, ಅದನ್ನು ರೂ 430 ಕೋಟಿಗೆ ಏರಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿ!
ಪ್ರಾದೇಶಿಕ ಅಸಮಾನತೆ ಕಳೆವ ಸದವಕಾಶವೂ ಕೈಚೆಲ್ಲಲಾಯಿತು:
ಇದೇ ಯೋಜನೆಯಡಿ (ನೂತನ ಜವಳಿ ನೀತಿ) ಉತ್ತರ ಕರ್ನಾಟಕದ ಹಿಂದುಳಿದ ಯಾದಗಿರಿ ಜಿಲ್ಲೆಯ ಕಡಚೂರು ಹಾಗೂ ಬಾಡಿಹಾಳ ಗ್ರಾಮಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಒಂದನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. 1,000 ಎಕರೆ ವಿಸ್ತೀರ್ಣದ ಈ ಯೋಜಿತ ಪಾರ್ಕ್ ಗೆ ಕೆಐಎಡಿಬಿ ಆಗಲೇ ಸ್ವಾಧೀನಪಡಿಸಿಕೊಂಡಿದ್ದ 3,232 ಎಕರೆ ಜಾಗವನ್ನು ಬಳಸಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿತ್ತು.
ಯೋಜನೆಯ ಉದ್ದೇಶ, ಗುರಿ ಇದ್ದಿದ್ದು, ಯಾದಗಿರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಆ ಮೂಲಕ ಹಿಂದುಳಿದ ಪ್ರದೇಶವೊಂದರ ಆರ್ಥಿಕ ಹಾಗೂ ಸಾಮಾಜಿಕ ಜೀವನ ಶೈಲಿ ಸುಧಾರಿಸುವುದು. ಆದರೆ, ಇವೆಲ್ಲವೂ ಕೊನೆಯವರೆಗೂ ಕಾಗದದಲ್ಲೇ ಉಳಿಯಿತು. ಯಾವೊಬ್ಬ ಹೂಡಿಕೆದಾರರೂ ಈ ಪಾರ್ಕ್ ನಲ್ಲಿ ಆಸಕ್ತಿ ತೋರಲಿಲ್ಲ.
ಸಿಎಜಿ ವರದಿ ಪ್ರಕಾರ ಇದಕ್ಕೆ ಬಹು ದೊಡ್ಡ ಕಾರಣವೆಂದರೆ, ಸರ್ಕಾರ ಜಾಗ ಒದಗಿಸುವುದು ಬಿಟ್ಟರೆ ಬೇರೆ ಯಾವ ಸೌಕರ್ಯವನ್ನೂ ನೀಡದಿರುವುದು. ಹಿಂದುಳಿದ ಪ್ರದೇಶವೊಂದರಲ್ಲಿ ಅಂತರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ನಿರ್ಮಿಸುವ ಉದ್ದೇಶ ಹೊಂದಿದ್ದರೆ, ಸರ್ಕಾರ ಆದ್ಯತೆಯ ಮೇರೆಗೆ ಅಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಈ ಯೋಜನೆಯಲ್ಲಿ ಯಾದಗಿರಿ ಒಂದೇ ಸರ್ಕಾರದ ಪಟ್ಟಿಯಲ್ಲಿರಲಿಲ್ಲ. ಮೂಲತ: ಈ ಯೋಜನೆ ನಾಲ್ಕು ಜಿಲ್ಲೆಗಳಲ್ಲಿ – ತುಮಕೂರು, ಚಾಮರಾಜನಗರ ಹಾಗೂ ಬಳ್ಳಾರಿ – ಪ್ರಸ್ತಾಪಿಸಲಾಗಿತ್ತು. ಆದರೆ, ಯೋಜನೆ ತಯಾರಿಸುವ ಮೊದಲು ಸರ್ಕಾರ ಮಾಡಿದ್ದ ಒಂದೇ ತಯಾರಿಯೆಂದರೆ ಜಾಗ ಇದೆಯೇ ಇಲ್ಲವೇ ಎಂದು ನೋಡಿದ್ದು. ಈ ಎಲ್ಲಾ ಸ್ಥಳಗಳಲ್ಲಿ ಕೆಐಎಡಿಬಿ ಮೊದಲೇ ಭೂ ಸ್ವಾಧೀನಪಡಿಸಿಕೊಂಡಿತ್ತು. ಅಷ್ಟಕ್ಕೇ ಸರ್ಕಾರ ಈ ಯೋಜನೆಗಳನ್ನು ಆ ಜಾಗಗಳಲ್ಲಿ ಆರಂಭಿಸುವ ಯೋಜನೆ ಸಿದ್ದಪಡಿಸಿತ್ತು. ಆದರೆ, ಯೋಜನೆ ಎಲ್ಲಿಯೂ ಕಾರ್ಯಗತವಾಗಲಿಲ್ಲ.
ಈ ರೀತಿಯ ಹಿಂದಿನ ಸರ್ಕಾರದ ತಲೆ ಬುಡವಿಲ್ಲದ ಕೈಗಾರಿಕಾ ನೀತಿಗಳ ನಡುವೆ, ಇದೀಗ 2018-2023 ರ ಜವಳಿ ನೀತಿ ಸಿದ್ಧವಾಗಿದೆ. ಸಿಎಜಿ ವರದಿ ಸದನದಲ್ಲಿ ಮಂಡಿಸುವುದಷ್ಟಕ್ಕೇ ಸೀಮಿತವಾಗಿರದೇ, ಮುಂದಿನ ಕೈಗಾರಿಕಾ ನೀತಿ ಅಂತಿಮಗೊಳಿಸುವ `ಸರ್ಕಾರಿ ಪಂಡಿತರು’ ಕಡ್ಡಾಯವಾಗಿ ಓದಿ ತಪ್ಪನ್ನು ಮರುಕಳಿಸದಂತೆ ರೂಪಿಸುವಲ್ಲಿ ಸಹಾಯಕವಾಗಬೇಕು.