ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು, ನಂತರ ಮೈತ್ರಿ ಸರ್ಕಾರ ಉರುಳಿಸಿ ಸರ್ಕಾರ ರಚಿಸುವಂತಾಗಿದ್ದು, ಇದರ ಬೆನ್ನಲ್ಲೇ ನಡೆದ ವಿಧಾನಸಭೆ ಉಪ ಚುನಾವಣೆಯ ಅಭೂತಪೂರ್ವ ಗೆಲುವುಗಳಿಂದ ಬೀಗುತ್ತಿದ್ದ ಬಿಜೆಪಿಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ ಎನ್ನುತ್ತಿದ್ದಂತೆ ಸ್ವಲ್ಪ ಆತಂಕ ಕಾಣಿಸಿಕೊಂಡಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗುವ ಮುನ್ನವೇ ವಿಶ್ವದ ಬೃಹತ್ ಏಸುವಿನ ಪ್ರತಿಮೆ ನಿರ್ಮಾಣ ವಿವಾದ ಶಿವಕುಮಾರ್ ಅವರನ್ನು ಸುತ್ತಿಕೊಳ್ಳತೊಡಗಿದೆ. ಇದರ ಲಾಭವನ್ನು ಪಡೆದು ಶಿವಕುಮಾರ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಬಿಜೆಪಿಯೂ ತುದಿಗಾಲಲ್ಲಿ ನಿಂತಿದೆ.
ಹೌದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಿದ್ಧವಾಗಿ ನಿಂತಿರುವ ಡಿ.ಕೆ.ಶಿವಕುಮಾರ್, ತಮ್ಮ ವಿರುದ್ಧ ಹೋರಾಟಕ್ಕೆ ಆಡಳಿತಾರೂಢ ಬಿಜೆಪಿಗೆ ತಾವಾಗಿಯೇ ಹೊಸ ಅಸ್ತ್ರವೊಂದನ್ನು ಒದಗಿಸಿದ್ದಾರೆ. ಪ್ರಸ್ತುತ ಜಾತಿ, ಧರ್ಮ ಆಧರಿತ ರಾಜಕಾರಣದಲ್ಲೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಹೀಗಾಗಿ ಆಡಳಿತಾರೂಢ ಬಿಜೆಪಿ, ಶಿವಕುಮಾರ್ ಅವರ ಜಾತಿ, ಏಸು ಕ್ರಿಸ್ತನನ್ನು ಆರಾಧಿಸುವವರ ಧರ್ಮವನ್ನು ಮುಂದಿಟ್ಟುಕೊಂಡು ಈ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುವುದರೊಂದಿಗೆ ಶಿವಕುಮಾರ್ ಅವರನ್ನು ಹಣಿಯುವ ಕೆಲಸಕ್ಕೂ ಮುಂದಾಗಿದೆ.

ಡಿ.ಕೆ.ಶಿವಕುಮಾರ್ ಅವರು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಸಾಕಷ್ಟು ದೇವಸ್ಥಾನ, ಮಠ, ಮಸೀದಿ, ಚರ್ಚ್ ಗಳಿಗೆ ನೆರವು ನೀಡಿದ್ದಾರೆ. ಬೇರೆಯವರಿಂದಲೂ ಹಣಕಾಸಿನ ನೆರವು ಕೊಡಿಸಿದ್ದಾರೆ. ಹೀಗಾಗಿ ಅವರ ನೇತೃತ್ವದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸುವುದು ಅಪರಾಧವೇನೂ ಅಲ್ಲ. ಅದನ್ನು ಡಿ.ಕೆ.ಶಿವಕುಮಾರ್ ಮಾಡಬಾರದು ಎಂದೂ ಇಲ್ಲ. ಇತರೆ ಧರ್ಮಗಳಂತೆ ಕ್ರೈಸ್ತ ಧರ್ಮಕ್ಕೂ ನೆರವು ನೀಡಿದ್ದಾರೆ ಅಷ್ಟೆ. ಆದರೆ, ಈ ಕಾರ್ಯಕ್ಕೆ ಅವರು ಬಳಸಿಕೊಂಡ ಸಮಯ ಮಾತ್ರ ಸರಿಯಿಲ್ಲ. ಏಕೆಂದರೆ, ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬಹುತೇಕ ಈ ಹುದ್ದೆ ಅವರಿಗೆ ಎಂದೇ ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿರುವುದನ್ನು, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಈ ಕೆಲಸ ಮಾಡಲಾಗುತ್ತಿದೆ ಎಂದು ಟೀಕಾಕಾರರು ಹೇಳಲು ಅವಕಾಶವಾದಂತಾಗಿದೆ.
ಇದಷ್ಟೇ ಅಲ್ಲ, ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ವಿಚಾರದಲ್ಲಿ ಪ್ರಾಬಲ್ಯ ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಹಿನ್ನಡೆಯಾಗುತ್ತದೆ. ಆ ಭಾಗದಲ್ಲಿ ಈಗತಾನೇ ಚಿಗುರಿಕೊಳ್ಳಲು ಪ್ರಯತ್ನಿಯುತ್ತಿರುವ ಬಿಜೆಪಿಗೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿಚಾರವನ್ನೇ ಮುಂದಿಟ್ಟುಕೊಂಡು ಆದಿಚುಂಚನಗಿರಿ ಮಠದ ಶಿವೈಖ್ಯ ಬಾಲಗಂಗಾಧರನಾಥ ಸ್ವಾಮೀಜಿ, ಕೆಂಪೇಗೌಡರ ಹೆಸರಿನಲ್ಲಿ ಒಕ್ಕಲಿಗ ಸಮುದಾಯದವರನ್ನು ಶಿವಕುಮಾರ್ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಆರಂಭವಾಗಿದೆ. ಕೆಂಪೇಗೌಡ, ಆದಿಚುಂಚನಗಿರಿ ಶ್ರೀಗಳ ಪ್ರತಿಮೆ ಸ್ಥಾಪಿಸಿಲ್ಲ, ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸಿದ್ದಾರೆ ಎಂಬಿತ್ಯಾದಿ ಟೀಕೆಗಳು ಹೆಚ್ಚಾಗುತ್ತಿವೆ. ಇದರಲ್ಲಿ ಬಿಜೆಪಿಯಂತೆ ಜೆಡಿಎಸ್ ನ ಕೈವಾಡ ಹೊರಗೆ ಕಾಣುತ್ತಿಲ್ಲವಾದರೂ ಒಳಗೊಳಗೇ ಆ ಪಕ್ಷದ ನಾಯಕರು ಶಿವಕುಮಾರ್ ವಿರುದ್ಧ ಕತ್ತಿ ಮಸೆಯುತ್ತಿರುವುದು ಸುಳ್ಳಲ್ಲ.
ಕಾನೂನಾತ್ಮಕವಾಗಿಯೂ ಕಟ್ಟಿ ಹಾಕುವ ಪ್ರಯತ್ನ
ಇದರ ಜತೆಗೆ ಕಾನೂನಾತ್ಮಕವಾಗಿಯೂ ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪ್ರಯತ್ನ ಶುರುವಾಗಿದೆ. ಭೂಮಂಜೂರಾತಿ ಅಕ್ರಮ ಎಂದು ಹೇಳಿ ಮಂಜೂರಾತಿ ವಾಪಸ್ ಪಡೆಯಲು ಬಿಜೆಪಿ ಸರ್ಕಾರ ಮುಂದಾಗಿದೆ. ಇಂತಹ ಅಕ್ರಮಗಳು ಸಾಕಷ್ಟು ಕಡೆ ನಡೆದಿದೆಯಾದರೂ ಶಿವಕುಮಾರ್ ಅವರ ಕಾರಣದಿಂದಾಗಿ ಇದನ್ನು ವಿಶೇಷ ಪ್ರಕರಣ ಎಂಬಂತೆ ಸರ್ಕಾರ ಪರಿಗಣಿಸುತ್ತಿರುವುದು ರಾಜಕೀಯ ಸೇಡಿನ ಕ್ರಮವೇ ಹೊರತು ಬೇರೇನೂ ಅಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇಲ್ಲಿ ಕಾಂಗ್ರೆಸ್ ಹೊರತಾಗಿ ಬೇರೆ ಯಾವ ಪಕ್ಷವೇ ಇದ್ದರು ಇದೇ ಕೆಲಸ ಮಾಡುತ್ತಿತ್ತು ಎಂಬುದೂ ಸ್ಪಷ್ಟ.

ಕಪಾಲಿ ಬೆಟ್ಟದಲ್ಲಿ ಅತಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ಹಂಚಿಕೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಅನುಮೋದನೆ ನೀಡಲಾಗಿತ್ತು. ಉಯ್ಯಂಬಳ್ಳಿ ಹೋಬಳಿ ನಲಹಳ್ಳಿ ಗ್ರಾಮದ ಸರ್ವೇ ನಂ. 283ರಲ್ಲಿ 231.35 ಎಕರೆ ಸರ್ಕಾರಿ ಗೋಮಾಳವಿದೆ. ಈ ಪೈಕಿ 10 ಎಕರೆಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾರೋಬೆಲೆ ಕಪಾಲಿ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಮಂಜೂರು ಮಾಡಲಾಗಿತ್ತು. ಈ ಸಂದರ್ಭದಲ್ಲೇ ಗೋಮಾಳ ಮಂಜೂರು ಮಾಡುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತಾದರೂ ಪ್ರಭಾವ ಬಳಸಿ ವಿವಾದ ಬೆಳೆಯದಂತೆ ನೋಡಿಕೊಳ್ಳಲಾಗಿತ್ತು. ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಈ ಹತ್ತು ಎಕರೆ ಪ್ರದೇಶವನ್ನು ಮಾರುಕಟ್ಟೆ ಬೆಲೆಯ ಶೇ. 10ರಷ್ಟು ಶುಲ್ಕ ಸೇರಿದಂತೆ ನಿಯಮಾನುಸಾರ ಇತರೆ ಶುಲ್ಕ ವಿಧಿಸಿ ಷರತ್ತುಗಳೊಂದಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ಉಚಿತವಾಗಿ ಭೂಮಿ ನೀಡಬೇಕು ಎಂದು ಟ್ರಸ್ಟ್ ಹೇಳಿದ್ದರಿಂದ ಮೈತ್ರಿ ಸರ್ಕಾರ ಉರುಳುವ ಕೆಲವೇ ದಿನಗಳ ಮೊದಲು ಅಂದರೆ 2019ರ ಜುಲೈ 23ರಂದು ಇತರೆ ಶುಲ್ಕ ಮನ್ನಾ ಮಾಡಿ ಮಾರ್ಗಸೂಚಿ ದರದ ಶೇ. 10ರಷ್ಟು ಮಾತ್ರ ಅಂದರೆ 10.80 ಲಕ್ಷ ರೂ.ಗೆ ಭೂಮಿಯನ್ನು ಟ್ರಸ್ಚ್ ಗೆ ಮಂಜೂರಾಗಿತ್ತು. ಆದರೆ, ಟ್ರಸ್ಟ್ ಪರವಾಗಿ ಶಿವಕುಮಾರ್ ಅವರು ಈ ಹಣ ಪಾವತಿಸಿ ಭೂಮಿಯನ್ನು ಟ್ರಸ್ಟ್ ಗೆ ಕೊಡಿಸಿದ್ದಾರೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಗೋಮಾಳ ಜಮೀನಿನಲ್ಲಿ ದೇವಸ್ಥಾನ, ಮಠ-ಮಂದಿರಗಳು, ಮಸೀದಿ, ಚರ್ಚ್, ಬುದ್ದವಿಹಾರಗಳು ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳನ್ನು ನಿರ್ಮಾಣ ಮಾಡುವಂತಿಲ್ಲ. ಭೂ ರಹಿತರಿಗೆ ವಿತರಣೆ ಮಾಡುವುದು, ಗೋಶಾಲೆ ನಿರ್ಮಾಣ, ಸ್ಮಶಾನ ನಿರ್ಮಾಣ ಸೇರಿದಂತೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಗೋಮಾಳ ಜಮೀನು ಬಳಸಿಕೊಳ್ಳಬೇಕೆಂಬ ನಿಯಮವಿದೆ. ಈ ನಿಯಮವನ್ನೇ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಕಪಾಲಿ ಟ್ರಸ್ಟ್ ಗೆ ನೀಡಿದ್ದ ಭೂಮಂಜೂರಾತಿ ಆದೇಶವನ್ನೇ ರದ್ದುಗೊಳಿಸಲು ಮುಂದಾಗಿದೆ.
ಇದಕ್ಕೆ ಪೂರಕವಾಗಿ ಗೋಮಾಳ ಜಮೀನನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ? ಅಲ್ಲದೆ, ಕಪಾಲ ಬೆಟ್ಟದಲ್ಲಿ ಮಾರುಕಟ್ಟೆಯ ಮಾರ್ಗಸೂಚಿ ಪ್ರಕಾರ ಕೇವಲ ಶೇ.10ರಷ್ಟು ಶುಲ್ಕ ಮಾತ್ರ ವಿಧಿಸಿ ಟ್ರಸ್ಟ್ ಗೆ ಭೂಮಿ ಮಂಜಾರು ಮಾಡಲು ಕಾರಣವಾದರೂ ಏನು? ಇದರಲ್ಲಿ ಕಾನೂನು ಉಲ್ಲಂಘನೆಯಾಗಿದೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಸರ್ಕಾರ ಸೂಚನೆ ನೀಡಿದೆ. ಈ ವರದಿ ಬಂದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

ಬಿಜೆಪಿ ವರಿಷ್ಠರಿಂದಲೂ ಬರುತ್ತಿದೆ ಸರ್ಕಾರದ ಮೇಲೆ ಒತ್ತಡ
ಈ ಮಧ್ಯೆ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಹೇಗಾದರೂ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವಂತೆ ಬಿಜೆಪಿ ಸರ್ಕಾರಕ್ಕೆ ಪಕ್ಷದ ಹೈಕಮಾಂಡ್ ಒತ್ತಡ ಹೇರಲಾರಂಭಿಸಿದೆ. ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಆಗಿರುವ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಇದು ಕೂಡ ಒಂದು ಅಸ್ತ್ರ ಎಂದು ಬಿಜೆಪಿ ಭಾವಿಸಿದಂತಿದೆ. ಏಕೆಂದರೆ, ಆದಾಯ ತೆರಿಗೆ ದಾಳಿ, ಜಾರಿ ನಿರ್ದೇಶನಾಲಯದಿಂದ ಬಂಧನ ಹೀಗೆ ಕಾನೂನಿನ ಮೂಲಕ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆಯಾದರೂ ಅದಾವುದಕ್ಕೂ ಅವರು ಕ್ಯಾರೇ ಎನ್ನುತ್ತಿಲ್ಲ. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಹೊರಬಂದ ಬಳಿಕ ಮತ್ತಷ್ಟು ಬಲಿಷ್ಠರಾದರು. ಈ ಮಧ್ಯೆ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿದ್ದರ ವಿರುದ್ಧದ ಹೋರಾಟ ಅವರ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಇದರ ಜತೆ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಅರಸಿಕೊಂಡು ಬರುತ್ತಿದೆ. ಇದೇ ರೀತಿ ಮುಂದುವರಿದರೆ ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ಸಿನ ಶಕ್ತಿವಂತ ನಾಯಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಂತರದಲ್ಲಿ ಅದನ್ನು ರಾಷ್ಟ್ರ ಮಟ್ಟಕ್ಕೂ ವಿಸ್ತರಿಸಿಕೊಳ್ಳಬಹುದು. ಹೀಗಾಗಿ ಆರಂಭದಲ್ಲೇ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆ ಎಂಬ ಹಗ್ಗ ಸಿಕ್ಕಂತಾಗಿದೆ. ಈ ಹಗ್ಗಕ್ಕೆ ಶಿವಕುಮಾರ್ ಕೈ ಕೊಡುವರೋ ಅಥವಾ ಹಗ್ಗ ಕಿತ್ತು ಮೇಲೆದ್ದು ಬರುವರೋ ಕಾದು ನೋಡಬೇಕು.