ಫೆಬ್ರವರಿ 24-25ರಂದು ದೊಡ್ಡಣ್ಣ ಅಮೇರಿಕಾದ ವಿವಾದಾತ್ಮಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಗುಜರಾತ್‍ನ ಮೂಲಕ ಅವರು ಭಾರತ ಪ್ರವಾಸ ಆರಂಭಿಸಲಿದ್ದಾರೆ. ಅಹಮದಾಬಾದ್‍ನಲ್ಲಿ ಟ್ರಂಪ್ -ಮೋದಿ ಜುಗಲ್‍ಬಂದಿ ಕಾರ್ಯಕ್ರಮದಲ್ಲಿ 1.5 ಲಕ್ಷ ಜನ ಸೇರಲಿದ್ದಾರೆ ಎಂದು ಅಮೇರಿಕಾದ ಅಧಿಕಾರಿಗಳೇ ಘೋಷಿಸಿದ್ದಾರೆ. ಟ್ರಂಪ್ ಕಣ್ಣಿಗೆ ಸ್ಥಳೀಯ ಕೊಳಗೇರಿಗಳು ಬೀಳದಿರಲಿ ಎಂಬ ಕಾರಣಕ್ಕೆ ದೊಡ್ಡ ಗೋಡೆ ನಿರ್ಮಾಣವಾಗುತ್ತಿದೆ. ಇವೆಲ್ಲದರ ನಡುವೆ ಇನ್ನೊಂದು ಆಘಾತಕಾರಿ ಸುದ್ದಿ ಭಾರತದ ಬಡ ರೈತ-ಹೈನುಗಾರರನ್ನು ಅಪ್ಪಳಿಸಿದೆ.
ಈವರೆಗೆ ಭಾರತದ ಹೈನೋದ್ಯಮ ಹಾಗೂ ಕುಕ್ಕುಟೋದ್ಯಮ ಅಮೇರಿಕಾ ಸಂಸ್ಥೆಗಳಿಗೆ ಮುಕ್ತವಾಗಿರಲಿಲ್ಲ. ಏಕೆಂದರೆ, ಒಂದೊಮ್ಮೆ ಅಮೇರಿಕಾ ತನ್ನ ಹೈನುಗಾರಿಕಾ ಹಾಗೂ ಕುಕ್ಕುಟೋದ್ಯಮದ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡಲಾರಂಭಿಸಿದರೆ, ಕನಿಷ್ಠ 80 ಲಕ್ಷ ಕುಟುಂಬಗಳು ಸಮಸ್ಯೆ ಎದುರಿಸಬಹುದು ಎಂಬ ಕಾರಣಕ್ಕೆ ಭಾರತ ಬಿಗಿ ನೀತಿ ಅನುಸರಿಸಿತ್ತು. ಆದರೆ ಇದೀಗ ಅತ್ಯಂತ ವಿಶ್ವಾಸಾರ್ಹ ಅಮೇರಿಕಾ ಮಾಧ್ಯಮಗಳ ಪ್ರಕಾರ ಟ್ರಂಪ್ ಭೇಟಿ ಸಮಯದಲ್ಲಿ ಭಾರತ, ಈ ನೀತಿಯನ್ನು ಸಡಿಲಗೊಳಿಸಿ, ಅಮೇರಿಕಾದ ಹೈನುಗಾರಿಕಾ ಹಾಗೂ ಕುಕ್ಕುಟೋದ್ಯಮದ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿಕೊಡುವ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಭಾರತದ ರೈತರ ಮೇಲೆ ಇನ್ನೊಂದು ಸುತ್ತಿನ ಗದಾ ಪ್ರಹಾರಕ್ಕೆ ಮೋದಿ ಸರಕಾರ ಸಜ್ಜಾಗಿದೆ.
ಅಮೇರಿಕಾ ಸುದ್ದಿ ಮಾಧ್ಯಮಗಳ ಪ್ರಕಾರ, ಟ್ರಂಪ್ ಮನವೊಲಿಕೆ ಪ್ರಯತ್ನದ ಭಾಗವಾಗಿ, 5% ತೆರಿಗೆ ಮೂಲಕ ನಿರ್ದಿಷ್ಟ ಪ್ರಮಾಣದ ಹೈನುಗಾರಿಕಾ ಉತ್ಪನ್ನಗಳನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲು ಭಾರತ ಸಜ್ಜಾಗಿದೆ. ಜತೆಗೆ ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗುವ ಚಿಕನ್ ಹಾಗೂ ಇತರ ಕುಕ್ಕುಟೋದ್ಯಮದ ಸಿದ್ದ ಆಹಾರ ಪದಾರ್ಥಗಳ ಮೇಲೆ ದೊಡ್ಡ ಮಟ್ಟದಲ್ಲಿ (100 ಶೇಕಡಾದಿಂದ 25%ಕ್ಕೆ) ತೆರಿಗೆ ಇಳಿಸಲು ಭಾರತ ಮುಂದಾಗಿದೆ. ಈ ಎಲ್ಲಾ ಹೊಸ ಒಪ್ಪಂದಗಳನ್ನು ಟ್ರಂಪ್ ಹಾಗೂ ಮೋದಿ ನವದೆಹಲಿಲ್ಲಿ 25ಂದು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಭಾರತದ ಮಾಧ್ಯಮಗಳು ಮೋದಿ ವಿರೋದಿ ಎಂಬುದಾದರೆ, ಅಮೇರಿಕಾ ಮಾಧ್ಯಮ ವರದಿಗಳು, ಅಲ್ಲಿನ ಅಧಿಕಾರಿಗಳ ಹೇಳಿಕೆಗಳನ್ನೇ ಗಮನದಲ್ಲಿಟ್ಟುಕೊಂಡರೆ, ಪ್ರಧಾನಿ ಮೋದಿಯವರ ಈ ನಿರ್ಧಾರದ ಹಿಂದಿರುವುದು, ಒಂದು ಗುಂಪಿನ ಕೈಗಾರಿಕೋದ್ಯಮಿಗಳನ್ನು ಮೆಚ್ಚಿಸುವ ಪ್ರಯತ್ನ. ಅದು ಯಾವ ಗುಂಪು ಅನ್ನುವುದು ಓದುಗರ ಊಹೆಗೆ ಬಿಟ್ಟದ್ದು. ಭಾರತದ ಕೃಷಿ ಕ್ಷೇತ್ರ ಐತಿಹಾಸಿಕ ಕುಸಿತ ಕಂಡಿರುವಾಗ, ದಿನ ನಿತ್ಯ ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮೋದಿ ಸರಕಾರ ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಯ ನಡು ಮುರಿಯಲು ಹೊರಟಿರುವುದು ಹೊಸ ದುರಂತದ ಅಧ್ಯಾಯವೊಂದಕ್ಕೆ ಮುನ್ನುಡಿ ಹಾಡಿದೆ.
ಕೆಎಂಎಫ್‍ನ ಅಧಿಕಾರಿಗಳ ಪ್ರಕಾರ, ಇಂತಹ ನಿರ್ಧಾರ ಯಾರ ಗಮನಕ್ಕೂ ಬಂದಿಲ್ಲ. “ಭ್ರಷ್ಟ ಆಡಳಿತದಿಂದಾಗಿ ಕೆಎಂಎಫ್ ಇನ್ನೂ ವಿದೇಶಿ ಕಂಪನಿಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಬೆಳೆದಿಲ್ಲ. ಇಲ್ಲಿ ರೈತರ ಹೆಸರಿನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ. ಆದರೆ ಉತ್ತಮ ಮಾರುಕಟ್ಟೆ ಕಾರಣದಿಂದಾಗಿ, ಎಲ್ಲವೂ ಸರಿ ಇದೆ ಎನ್ನುವ ಭಾವನೆ ಹೈನುಗಾರರಲ್ಲಿದೆ. ಒಂದೊಮ್ಮೆ ಅಮೇರಿಕಾದ ಹೈನುಗಾರಿಕಾ ಉತ್ಪನ್ನಗಳಿಗೆ ನಮ್ಮ ಮಾರುಕಟ್ಟೆಯ ದಿಡ್ಡಿ ಬಾಗಿಲು ತೆಗೆದರೆ ಕರ್ನಾಟದಲ್ಲೆ ಸುಮಾರು 15 ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ,” ಎನ್ನುತ್ತಾರೆ ಈ ಅಧಿಕಾರಿ.
ಕುಕ್ಕುಟೋದ್ಯಮ ಕ್ಷೇತ್ರದ ಸವಾಲುಗಳು ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ದುರಂತವೆಂದರೆ, ಭಾರತದ ಮಾಧ್ಯಮಗಳಲ್ಲಿ ಈ ಹೊಸ ಪ್ರಸ್ತಾಪಗಳು ಸುದ್ದಿಯಾಗುತ್ತಿಲ್ಲ. ನಮ್ಮ ರೈತ ಸಂಘಟನೆಗಳು ಈಗಾಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಟ್ರಂಪ್ ಮೆಚ್ಚಿಸಲು ಕೋಟ್ಯಂತರ ಜನರ ಬದುಕನ್ನು ಬೀದಿಪಾಲು ಮಾಡಲು ಮೋದಿಗೆ ಬಿಡಬಾರದು.