“ಜೋ ಬೈಡೆನ್ ಒಬ್ಬ ದುರ್ಬಲ ಅಧ್ಯಕ್ಷ, ತನ್ನ ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೇ ನಮ್ಮೊಂದಿಗೆ ಯುದ್ದಕ್ಕಿಳಿಯುವ ಸಾಧ್ಯತೆ ಇದೆ” ಎಂದು ಚೀನಾ ಸರ್ಕಾರದ ಉನ್ನತ ಸಲಹೆಗಾರ ಝೆಂಗ್ ಯಾಂಗ್ನಿಯಾನ್ ವಿಶ್ಲೇಷಿಸಿದ್ದಾರೆ. ಈ ಸಂಬಂಧ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತಾಡಿರುವ ಝೆಂಗ್ ಯಾಂಗ್ನಿಯಾನ್, ದೇಶಿಯ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾದರೇ ಬೈಡನ್ ರಾಜತಾಂತ್ರಿಕ ಹಾದಿಯಲ್ಲಿ ಚೀನಾದ ವಿರುದ್ಧ ಯುದ್ದ ಸಾರುವ ಅಪಾಯ ಇದೆ ಎಂದಿದ್ದಾರೆ.
ಜೋ ಬೈಡನ್ ಆಡಳಿತದಲ್ಲಿ ಅಮೆರಿಕಾ ಜತೆಗಿನ ಚೀನಾ ಬಾಂಧವ್ಯವೂ ಸುಧಾರಿಸಲಿದೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಚೀನಾದ ವಿರುದ್ಧ ಬೈಡನ್ ಕಠಿಣ ನಿಲುವು ತಾಳಬಹುದು. ನಾವು ಈ ಯುದ್ದವನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯಲ್ಲೂ ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಲವು ವರ್ಷಗಳಿಂದ ಅಮೆರಿಕಾದೊಂದಿಗೆ ಚೀನಾ ಸಂಬಂಧವೂ ಅಷ್ಟಕಷ್ಟೇ. ಹೀಗಾಗಿ ಶೀತಲ ಸಮರದ ರಣಹದ್ದುಗಳು ಸನ್ನದ್ಧ ಸ್ಥಿತಿಯಲ್ಲಿವೆ. ಅವು ರಾತ್ರೋರಾತ್ರಿ ಕಣ್ಮರೆಯಾಗಲಾರವು. ಟ್ರಂಪ್ಗೆ ಎಂದೂ ಯುದ್ಧದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ಡೆಮಾಕ್ರಾಟ್ ಅಧ್ಯಕ್ಷ ಬೈಡನ್ಗೆ ಯುದ್ದದಲ್ಲಿ ಆಸಕ್ತಿ ಇದೆ. ಯಾವಾಗ ಬೇಕಾದರೂ ಚೀನಾದ ವಿರುದ್ಧ ಯುದ್ಧ ಆರಂಭಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೈಡನ್ ಶ್ವೇತಭವನ ಪ್ರವೇಶಿಸಿದ ಬಳಿಕ ಈ ಕಾರ್ಯ ಶುರುವಾಗಲಿದೆ. ಅಮೆರಿಕಾದ ಸಮಾಜ ಚೂರು ಚೂರಾಗಿ ಹೊಡೆದು ಹೋಗಿದೆ. ಎಲ್ಲರನ್ನೂ ಬೈಡನ್ ಒಂದು ಮಾಡಬಹುದು. ಅಮೆರಿಕಾದ ರಾಜಕೀಯಕ್ಕಾಗಿ ಚೀನಾದ ಮೇಲೆ ಸಮರ ಸಾರಬಹುದು ಎಂದರು.
ಕರೋನಾ ಕಾಲದಿಂದಲೂ ಡೊನಾಲ್ಡ್ ಟ್ರಂಪ್ ವಿರುದ್ಧ ಕೊನೆಯವರೆಗೂ ಗುಟುರು ಹಾಕಿದ್ದ ಚೀನಾ ಈಗ ಮತ್ತೆ ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ತನ್ನ ಚಾಳಿ ಮುಂದುವರಿಸಿದೆ. ಹಾಗಾಗಿ ಚೀನಾ ಮತ್ತು ಅಮೆರಿಕಾದ ಈ ರಾಜಕೀಯ ಕೆಸರು ಎರಚಾಟಗಳಿಗೆ ಅಂತ್ಯ ಯಾವಾಗ? ಎಂದು ಕಾಲವೇ ಉತ್ತರಿಸಲಿದೆ.