ಗಾಢ ನೋವು ಮತ್ತು ಆತಂಕದಿಂದ ಈ ಲೇಖನ ಬರೆಯುತ್ತಿರುವೆ. ಜವಾಹರಲಾಲ್ ವಿಶ್ವವಿದ್ಯಾಲಯ ಮತ್ತೆ ತಳಮಳಕ್ಕೆ ಸಿಲುಕಿದೆ. ಸೂಕ್ಷ್ಮತೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಸಂವಾದದಲ್ಲಿ ನಂಬಿಕೆಯೇ ಇಲ್ಲದ ಆಡಳಿತ ಮತ್ತು ವಿದ್ಯಾರ್ಥಿ ಸಮುದಾಯದ ವ್ಯಥೆಯಲ್ಲಿ ವಿಶ್ವವಿದ್ಯಾಲಯ ಕಳೆದು ಹೋಗತೊಡಗಿದೆ. ಕಲಿಕೆಗೆ ಪೂರಕವಾದ ವಾತಾವರಣಕ್ಕೆ ಅನುಭೂತಿ, ಸಂವಹನ ಹಾಗೂ ಸಂವಾದ ಅತ್ಯಗತ್ಯ. ಈ ಗುಣಗಳು ಕಾಣೆಯಾಗಿವೆ.
ಅಪಪ್ರಚಾರದ ಅಲೆಯೊಂದು ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿ ಸಮುದಾಯವನ್ನು ದಂಡಿಸತೊಡಗಿರುವ ಈ ಹೊತ್ತಿನಲ್ಲಿ ಇಲ್ಲಿನ ನಿಜವಾದ ಸಂಕಟ ಬಿಕ್ಕಟ್ಟುಗಳೇನು ಎಂಬುದನ್ನು ಶಿಕ್ಷಕರಾಗಿ ಹೊರಗಣ ವಿಶಾಲ ಸಮಾಜದ ಜೊತೆಗೆ ನಾವು ಹಂಚಿಕೊಳ್ಳಲೇಬೇಕೆಂಬುದು ನನ್ನ ಅನಿಸಿಕೆ.
ನಮ್ಮ ಉಪಕುಲಪತಿಯವರಿಂದಲೇ ಆರಂಭಿಸುತ್ತೇನೆ. ಅವರನ್ನು ನೋಡಿ ಬಹಳ ಕಾಲವಾಗಿ ಹೋಗಿದೆ. ನಮ್ಮ ಇತರೆ ಉಪಕುಲಪತಿಗಳು ಕ್ಯಾಂಪಸ್ಸಿನಲ್ಲಿ ಅಡ್ಡಾಡುತ್ತಿದ್ದರು. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ನಗುತ್ತ ಮಾತಾಡಿ ಬೆರೆಯುತ್ತಿದ್ದರು. ಶಾಪಿಂಗ್ ಕಾಂಪ್ಲೆಕ್ಸ್ ಗೆ ಬರುತ್ತಿದ್ದರು. ಈರುಳ್ಳಿ ಆಲೂಗೆಡ್ಡೆ ಖರೀದಿಸುತ್ತಿದ್ದರು. ಇತರೆ ಯಾವುದೇ ಪ್ರೊಫೆಸರ್ ರೀತಿ ನಡೆದುಕೊಳ್ಳುತ್ತಿದ್ದರು.
ನಮ್ಮ ಉಪಕುಲಪತಿಯವರನ್ನು ಭೇಟಿ ಮಾಡಿ ವಿಶೇಷವಾಗಿ ಹಾಸ್ಟೆಲ್ ನಿರ್ಬಂಧಗಳ ಹೊಸ ಕೈಪಿಡಿ ಮತ್ತು ಇತರೆ ಹಲವು ವಿಷಯಗಳ ಸುತ್ತಮುತ್ತ ಹುಟ್ಟಿರುವ ಘರ್ಷಣೆ ಕುರಿತು ಮಾತಾಡಲು ವಿದ್ಯಾರ್ಥಿಗಳೂ ಕಾತರದಿಂದ ಕಾಯುತ್ತಿದ್ದಾರೆ. ತಾವೇ ಕಟ್ಟಿಕೊಂಡಿರುವ ‘ಕೋಟೆ’ಯೊಂದಕ್ಕೆ ಅವರು ಬಂದು, ನಮ್ಮಗಳ ಮೇಲೆ ಥರಾವರಿಯ ಸುತ್ತೋಲೆಗಳು, ಶೋಕಾಸ್ ನೋಟೀಸುಗಳನ್ನು ಜಡಿಯುವಂತೆ ತಮ್ಮ ಸಹಾಯಕರಿಗೆ ಸೂಚನೆ ನೀಡುತ್ತಾರೆ. ಆದರೆ ಅವರು ನಮಗೆ ಸಿಗುವುದು ದುಸ್ಸಾಧ್ಯ.
‘ಗಣರಾಜ್ಯ’ದ ಹಣೆಬರೆಹ ಕುರಿತು ನಿತ್ಯ ರಾತ್ರಿ ‘ಹಿಡಿಗೂಟ’ನೊಬ್ಬನ (ಆ್ಯಂಕರ್) ಅರಚಾಟ, ಚೀರಾಟಕ್ಕೆ ಹೆಸರಾಗಿರುವ ಟೆಲಿವಿಷನ್ ಚಾನೆಲ್ ಮೇಲೆ ನಮ್ಮ ಉಪಕುಲಪತಿಯವರನ್ನು ಕಾಣಬುಹುದು ಎಂದು ನಮ್ಮ ವಿದ್ಯಾರ್ಥಿಯೊಬ್ಬ ಮೊನ್ನೆ ನನಗೆ ತಿಳಿಸಿದ. ಭಯಂಕರ-ವಾಸ್ತವ ಟೆಲಿವಿಷನ್ ಶೋ ಗಳು ನನಗೆ ಸೇರುವುದಿಲ್ಲವಾದರೂ, ಆ ಚಾನೆಲ್ ಮೇಲೆ ನಮ್ಮ ವಿ.ಸಿ.ಯವರನ್ನು ಕಂಡೆ.
ಉಪಕುಲಪತಿಯವರು ತಮ್ಮ ‘ಅತಿ ಅಮೂಲ್ಯ’ ಸಮಯವನ್ನು ಈ ‘ರಾಷ್ಟ್ರವಾದಿ’ ಹಿಡಿಗೂಟಿಗನ ಜೊತೆಗೆ ವ್ಯಯಿಸುವ ಬದಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಾತಾಡಬಹುದಿತ್ತು. ಆದರೆ ಅವರ ಆದ್ಯತೆಗಳು ಬೇರೆ ಎಂದು ನನಗೆ ನಾನೇ ಹೇಳಿಕೊಂಡೆ.
ಸದರಿ ಟೆಲಿವಿಷನ್ ಚಾನೆಲ್, ಜೆ.ಎನ್.ಯು ವಿದ್ಯಾರ್ಥಿ ಹೋರಾಟವನ್ನು ವಿಧ್ವಂಸಕ ಕೃತ್ಯವನ್ನಾಗಿ ನೋಡುತ್ತಿದೆ. ಈ ಕುರಿತು ನನಗೆ ಆಶ್ಚರ್ಯವೇನೂ ಆಗುವುದಿಲ್ಲ. ಮಾರುಕಟ್ಟೆ ನಿರ್ದೇಶಿತ ಸಾಂಸ್ಕೃತಿಕ ರಾಷ್ಟ್ರೀಯತೆಯ ಇಂದಿನ ಸಂವಾದದಲ್ಲಿ ಅಂತರ್ಗತವಾಗಿರುವ ಸರ್ವಾಧಿಕಾರದ ಈ ದಿನಮಾನಗಳಿವು. ಜೆ.ಎನ್.ಯು. ಅತಿಯಾಗಿ ಮುದ್ದು ಮಾಡಿ ಕೆಡಿಸಿರುವ ವಿಶ್ವವಿದ್ಯಾಲಯ ಎಂದೂ, ಅದರ ವಿದ್ಯಾರ್ಥಿಗಳು ಅರಾಜಕವಾದಿಗಳು ಮತ್ತು ಶಿಕ್ಷಕರು ಎಡಪಂಥೀಯರೆಂದೂ ವ್ಯವಸ್ಥೆಯು ಈ ಚಾನೆಲ್ ಗಳ ಮೂಲಕ ಸಂದೇಶ ಕಳಿಸಬಯಸುತ್ತಿದೆ. ಶಿಸ್ತನ್ನು ಅಳವಡಿಸಿ, ವ್ಯವಸ್ಥೆಯನ್ನು ‘ಸರಿಪಡಿಸಿ’, ಅಲ್ಲಿನ ರಾಷ್ಟ್ರವಿರೋಧಿ ವಿದ್ಯಾರ್ಥಿಗಳ ‘ದುರ್ವ್ಯವಹಾರಗಳನ್ನು’ ತಿದ್ದುವ ಮೂಲಕ ವಿಶ್ವವಿದ್ಯಾಲಯವನ್ನು ‘ಮುಖ್ಯವಾಹಿನಿ’ಯತ್ತ ತರಲು ಶ್ರಮಿಸುತ್ತಿರುವ ಉಪಕುಲಪತಿಯವರ ವಿರುದ್ಧ ವಿದ್ಯಾರ್ಥಿಗಳನ್ನು ಶಿಕ್ಷಕರು ಎತ್ತಿಕಟ್ಟುತ್ತಿದ್ದಾರೆ ಎಂಬ ಹುಸಿ ಕಥನವನ್ನು ದಾಟಿಸಲು ವ್ಯವಸ್ಥೆಯು ಈ ಚಾನೆಲ್ ಗಳನ್ನು ಬಳಸಿಕೊಳ್ಳತೊಡಗಿದೆ.
ಇಂತಹ ಚಾನೆಲ್ ಮೇಲೆ ಉಪಕುಲಪತಿಗಳು ಕಾಣುವುದು ವಿಷಾದದ ಸಂಗತಿ. ಆದರೆ ಈ ಅರಚಾಡುವ-ಚೀರಾಡುವ ಹಿಡಿಗೂಟಿಗ ಬಳಸುವ ಭಾಷೆ ಮತ್ತು ಉಪಕುಲಪತಿಯವರ ಅಧೀನದಲ್ಲಿ ಕೆಲಸ ಮಾಡುವ ಜೆ.ಎನ್.ಯು. ಆಡಳಿತ ಬಳಸುತ್ತಿರುವ ಭಾಷೆ ಒಂದೇ ಆಗಿದೆ. ಯಾವುದೇ ಪ್ರತಿಭಟನೆ ಮತ್ತು ಭಿನ್ನ ಆಲೋಚನೆಯನ್ನು ‘ಹಿಡಿಯಷ್ಟು’ ಶಿಕ್ಷಕರು-ವಿದ್ಯಾರ್ಥಿಗಳು ನಡೆಸುವ ‘ವಿಚ್ಛಿದ್ರಕಾರಿ’ ವರ್ತನೆಯೆಂದು ಹೀಗಳೆಯಲು ಆಡಳಿತಕ್ಕೆ ತುಸುವಾದರೂ ಹಿಂಜರಿಯುವುದಿಲ್ಲ. ಶಿಕ್ಷಕರಿಗೆ ‘ಛಾರ್ಜ್ ಶೀಟ್’ಗಳನ್ನು ನೀಡಲಾಗುತ್ತಿದೆ. ಜೆ.ಎನ್.ಯು. ಗೇಟಿನ ಹೊರಗೆ ಪೊಲೀಸರನ್ನು ಜಮಾಯಿಸುವ ಮೂಲಕ ವಿದ್ಯಾರ್ಥಿಗಳ ಆಂದೋಲನವು ವಿಧ್ವಂಸಕ ಕ್ರಿಯೆ ಎಂಬ ಭಾವನೆಯನ್ನು ಮೂಡಿಸಲಾಗುತ್ತಿದೆ.
ಈ ಟೆಲಿವಿಷನ್ ಹಿಡಿಗೂಟಿಗರಿಗೆ ತಿಳಿವಳಿಕೆ ಹೇಳುವವರು ಯಾರು? ಜೆ.ಎನ್.ಯು.ದಲ್ಲಿ ಆಡಳಿತವು ತಯಾರಿಸಿ ಹರಿಯಬಿಡುವ ಸುಳ್ಳುಗಳ ಕಂತೆಗಳ ನಡುವೆ ನಾವು ಬದುಕುತ್ತಿದ್ದೇವೆ. ಸುಳ್ಳು ಹೇಳುವುದು ಹೊಸ ಸಹಜತೆ ಆಗಿ ಹೋಗಿದೆ. ಸುಳ್ಳುಗಳೇ ಅಧಿಕೃತ ಸಿದ್ಧಾಂತಗಳು. ಹೊಲಸೇ ಸೊಗಸು. ದುರ್ಗುಣಗಳೇ ಸದ್ಗುಣಗಳು. ಸರ್ವಾಧಿಕಾರವೇ ಜನತಂತ್ರ. ಅಸಂಬದ್ಧ ಸ್ವಗತವೇ ತೀರ್ಮಾನ ಮಾಡುವ ಕಲೆಯಾಗಿ ಪರಿಣಮಿಸಿದೆ. ಇದೆಲ್ಲವನ್ನು ಹಿಡಿಗೂಟಿಗರಿಗೆ ಯಾರು ಹೇಳಬೇಕು?
ಉಪಕುಲಪತಿಯವರೇನಾದರೂ ಇಂದು ವಿಶ್ವವಿದ್ಯಾಲಯವನ್ನು ಮುಖ್ಯಪ್ರವಾಹದ ಸನಿಹಕ್ಕೆ ತಂದಿರುವುದೇ ಆದಲ್ಲಿ ಅದು ಈ ಮೇಲ್ಗಂಡ ಅರ್ಥದಲ್ಲೇ ಬೇರೇನೂ ಅಲ್ಲ. ಪ್ರಾಯಶಃ ಅವರು ‘ಬಿಗ್ ಬಾಸ್’ರಿಂದ ಕೆಲ ಮುಖ್ಯ ಪಾಠಗಳನ್ನು ಕಲಿತಂತಿದೆ.
ನಮ್ಮ ವಿದ್ಯಾರ್ಥಿಗಳ ಕುರಿತು ನನಗೆ ತೀವ್ರ ಚಿಂತೆಯೆನಿಸಿದೆ. ಅವರ ವ್ಯಥೆ ವಿಷಾದಗಳ ಕಾರಣಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಹಠಮಾರಿ ಮತ್ತು ಸಂವಾದವನ್ನು ದೂರ ಇರಿಸಿರುವ ಆಡಳಿತವೇ ಇಂದಿನ ಬಿಕ್ಕಟ್ಟಿನ ಮೂಲ ಕಾರಣ. ಹಾಸ್ಟೆಲ್ ಕೈಪಿಡಿಯಲ್ಲಿ ಮೇಲ್ಪದರದ ನಾಮಕೇವಾಸ್ತೆ ಬದಲಾವಣೆಗಳು ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲಾರವು ಎಂಬುದು ನನಗೆ ಗೊತ್ತು. ಒಂದಲ್ಲ ಒಂದು ಬಗೆಯಲ್ಲಿ ಪ್ರತಿಭಟನೆ ಮುಂದುವರೆಯುವ ಸಾಧ್ಯತೆಯಿದೆ.
ತೀರಾ ಸಿಟ್ಟು ಬಂದಾಗ ದಾರಿ ತಪ್ಪಿದ ವರ್ತನೆಗಳು ಕೆಲವು ನಡದಿವೆಯಾದರೂ (ಉದಾಹರಣೆಗೆ ವಿದ್ಯಾರ್ಥಿಗಳ ಅಸೋಸಿಯೇಟ್ ಡೀನ್ ಅವರನ್ನು ಕೂಡಿ ಹಾಕಿದ್ದು) ನಮ್ಮ ವಿದ್ಯಾರ್ಥಿಗಳು ಅವುಗಳ ಅಪಾಯವನ್ನು ಅರ್ಥ ಮಾಡಿಕೊಳ್ಳುವ ವಿವೇಚನೆ ಇದೆ. ವಿದ್ಯಾರ್ಥಿಗಳು ನಾಗರಿಕತೆಯಿಂದ ವರ್ತಿಸುವ, ವಾದ ಮಾಡುವ, ಬೌದ್ಧಿಕ ಬೆಳಕಿನಿಂದ ಕೂಡಿದ, ಸೈದ್ಧಾಂತಿಕವಾಗಿ ಸಿರಿವಂತವಾಗಿರುವ ವಿರಳ ತಾಣಗಳಲ್ಲಿ ಜೆ.ಎನ್.ಯು. ಕೂಡ ಒಂದು. ಬಹುಸಂಖ್ಯಾತ ಧಾರ್ಮಿಕ ರಾಷ್ಟ್ರವಾದದ ಇಲ್ಲವೇ ಹೊಸ ಶಿಕ್ಷಣ ನೀತಿಯ ವಿರುದ್ಧ ಅವರು ದನಿ ಎತ್ತಿದರೆ, ಅದು ‘ರಾಷ್ಟ್ರವಿರೋಧಿ’ ಕ್ರಿಯೆ ಎಂದು ನನಗೆ ಅನಿಸುವುದಿಲ್ಲ. ಹರೆಯ ಎಂದರೆ ಚುರುಕಾಗಿರುವುದು, ಚಿಂತನಶೀಲರಾಗಿರುವುದು, ಕ್ರಿಯೆಗೆ ಪ್ರತಿಕ್ರಿಯಿಸುವುದು.
ಈ ಕಾರಣಕ್ಕಾಗಿ ನಮ್ಮ ವಿದ್ಯಾರ್ಥಿಗಳ ಬಗ್ಗೆ ಹಲವು ಸಲ ಹೆಮ್ಮೆಯೆನಿಸಿದೆ. ಇತ್ತೀಚೆಗೆ ಜರುಗಿದ ಘಟಿಕೋತ್ಸವವನ್ನು ನನ್ನ ವಿದ್ಯಾರ್ಥಿಯೊಬ್ಬ ಬಹಿಷ್ಕರಿಸಿದಾಗ ನನ್ನ ಎದೆಯುಬ್ಬಿತು. ಆಕೆಯ ಈ ಕ್ರಿಯೆಯಲ್ಲಿ ಉತ್ತಮ ಕಾರಣಕ್ಕಾಗಿ ಈಗಿನ ವಿದ್ಯಾರ್ಥಿಗಳು ನಡೆಸಿರುವ ಹೋರಾಟ ಕುರಿತು ಸಮ್ಮತಿ ಸಹಭಾಗಿತ್ವ ಇತ್ತು. ನನ್ನ ಎಳೆಯ ಎಂ.ಎ. ವಿದ್ಯಾರ್ಥಿಗಳು ಪ್ರಸಕ್ತ ಬಿಕ್ಕಟ್ಟನ್ನು ಸಾಕಷ್ಟು ಪ್ರಾಮಾಣಿಕತೆ ಮತ್ತು ಸ್ವವಿಮರ್ಶೆಯಿಂದ ವಿಶ್ಲೇಷಿಸುವುದರಲ್ಲಿ ನನಗೆ ಆಸೆ-ಭರವಸೆ ಕಾಣುತ್ತದೆ.
ಹಾಲಿ ಆಂದೋಲನದಲ್ಲಿ ಆಳದ ಜೀವನದರ್ಶನ ನನಗೆ ತೋರುತ್ತದೆ. ಈ ಆಂದೋಲನ ಕೇವಲ ಹಾಸ್ಟೆಲ್ ಶುಲ್ಕವನ್ನು ತಗ್ಗಿಸುವ ಬೇಡಿಕೆಗೆ ಸೀಮಿತ ಅಲ್ಲವೇ ಅಲ್ಲ. ಒಂದು ಉತ್ತಮ ಸಾರ್ವಜನಿಕ ವಿಶ್ವವಿದ್ಯಾಲಯ, ಬಡ-ಹಿಂದುಳಿದ ಜನಸಮುದಾಯಗಳ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಆದರ್ಶ ಈ ಆಂದೋಲನದಲ್ಲಿದೆ. ನವ ಉದಾರವಾದಿ ಮಾರುಕಟ್ಟೆ ಚಾಲಿತ ಮೌಲ್ಯಗಳ ಈ ಯುಗದಲ್ಲಿ, ಪ್ರಭುತ್ವವು ಶಿಕ್ಷಣ ಕ್ಷೇತ್ರದಿಂದ ಹಿಂದೆಗೆಯುತ್ತಿದೆ. ಥರಾವರಿ ಥಳುಕಿನ ಖಾಸಗಿ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುತ್ತಿವೆ. ಇಂತಹ ನಿರ್ಣಾಯಕ ಸಂದರ್ಭದ ಕಾರಣಕ್ಕಾಗಿ ಈ ಆಂದೋಲನ ಬಹುಮುಖ್ಯ ಎನಿಸುತ್ತದೆ. ಒಳ್ಳೆಯ ಮತ್ತು ಅರ್ಥಪೂರ್ಣ ಶಿಕ್ಷಣವು ಸರ್ಕಾರಿ ಹಣದಿಂದ ನಡೆಸಲಾಗುವ ಸಾರ್ವಜನಿಕ ಸಂಸ್ಥೆಗಳ ಮೂಲಕ ಎಲ್ಲರಿಗೂ ಎಲ್ಲಿಯವರೆಗೆ ಕೈಗೆಟುಕುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಾಜದ ಜನತಾಂತ್ರೀಕರಣ ಅಪೂರ್ಣ ಎಂಬ ಸತ್ಯವನ್ನು ಜೆ.ಎನ್.ಯು. ವಿದ್ಯಾರ್ಥಿಗಳು ನೆನಪಿಸಿಕೊಡುತ್ತಿದ್ದಾರೆ.
ಸಾಮಾಜಿಕ ಅಸಮಾನತೆಯ ನಿರಂತರ ಪುನರುತ್ಪಾದನೆಯ (ಅತಿ ದುಬಾರಿ ಖಾಸಗಿ ವಿಶ್ವವಿದ್ಯಾಲಯಗಳ ಹೆಚ್ಚಳವು ಅರಿವಿನ ರಾಜಕಾರಣವನ್ನು ಪ್ರತಿಫಲಿಸಿದೆ) ವಿರುದ್ಧ ಇಂತಹ ಹೋರಾಟ ಅತ್ಯಗತ್ಯ. ಅನುದಿನವೂ ‘ರಾಷ್ಟ್ರ’ ಎಂದು ಅರಚಿ ಚೀರಿ ಬಡಬಡಿಸುವ ಅಪ್ರಬುದ್ಧ ಹಿಡಿಗೂಟಿಗರು (ಟೀವಿ ಆ್ಯಂಕರ್ ಗಳು) ಈ ಅಂಶವನ್ನು ಅರ್ಥ ಮಾಡಿಕೊಳ್ಳುವಷ್ಟು ವಿದ್ಯಾವಂತರಲ್ಲ.
ಆದರೆ ವಿಶ್ವವಿದ್ಯಾಲಯದ ಆಡಳಿತಕ್ಕೇನು ಧಾಡಿ? ವಿಶ್ವವಿದ್ಯಾಲಯವೊಂದನ್ನು ನಡೆಸುವುದೆಂದರೆ ‘ಎಲೆಕ್ಟ್ರಿಕಲ್ ಎಂಜಿನಿಯರಿಂಗ್’ ನ ಕ್ರಿಯೆ ಅಲ್ಲ. ಅದಕ್ಕೆ ದೂರದರ್ಶಿತ್ವ ಬೇಕು, ಬೋಧನಕಲೆಯ ಕಲ್ಪನಾಶಕ್ತಿ ಇಲ್ಲವೇ ರಾಜಕೀಯ-ನೈತಿಕ ಸೂಕ್ಷ್ಮ ಸಂವೇದನೆ ಬೇಕು.
ದೃಢ ಸಂಕಲ್ಪಿತರಾಗಿ ಮುಂದುವರೆಯುವಂತೆಯೂ, ಅದೇ ಹೊತ್ತಿನಲ್ಲಿ ಅಪಾರ ಶಾಂತಿಯುತವಾಗಿ ವರ್ತಿಸಬೇಕೆಂದೂ ನಾನು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತೇನೆ. ಯಾಕೆಂದರೆ ಯಾವುದೇ ಬಗೆಯ ಹಿಂಸೆಯೂ (ಸಾಂಕೇತಿಕ ಅಲ್ಲವೇ ಮಾನಸಿಕ ಹಿಂಸೆ ಕೂಡ) ವಿದ್ಯಾರ್ಥಿ ಚೇತನಕ್ಕೆ ವಿರುದ್ಧವಾದದು. ಸಂವಹನ- ಸಂವಾದದ ಎಲ್ಲ ದಾರಿಗಳು ಮುರಿದು ಬಿದ್ದಾಗ, ನಕಾರಾತ್ಮಕವಾದ ಪ್ರತಿಕ್ರಿಯಾತ್ಮಕ ನಡವಳಿಕೆ ಭುಗಿಲೇಳುವ ಸನ್ನಿವೇಶ ಹೊಮ್ಮಬಹುದು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅದರ ಸುಳಿವುಗಳು ಕಾಣತೊಡಗಿವೆ ಎಂಬುದು ನನ್ನನ್ನು ಚಿಂತೆಗೀಡು ಮಾಡಿದೆ. ಯಾವ ಬೆಲೆ ತೆತ್ತಾದರೂ ಅದನ್ನು ತಡೆಯಬೇಕಿದೆ. ವಿವೇಕದ ದನಿಗಳಿಗೆ ಮೇಲುಗೈ ಆಗಲಿ. ನಮ್ಮ ಆಸೆ ಭರವಸೆ ಎಲ್ಲವೂ ವಿದ್ಯಾರ್ಥಿಗಳೇ ವಿನಾ ಅಂತರಾತ್ಮದ ಕಾವ್ಯ ಬತ್ತಿ ಹೋಗಿರುವ ಆಡಳಿತ ಅಲ್ಲ.
(ಸೌಜನ್ಯ- ದಿ ವೈರ್)