ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅನ್ವಯ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ ನಲ್ಲಿ ರದ್ದುಗೊಳಿಸುವ ಮೂಲಕ ತನ್ನ ಪ್ರಣಾಳಿಕೆಯ ವಿವಾದಾತ್ಮಕ ತೀರ್ಮಾನಕ್ಕೆ ತಾನು ಬದ್ಧ ಎಂದು ಸಾರಿದ್ದ ಬಿಜೆಪಿಯು ಮಹತ್ವದ ಬೆಳವಣಿಗೆಯಲ್ಲಿ ಕಾಶ್ಮೀರದ ಭದ್ರತೆಗೆ ನಿಯೋಜಿಸಿದ್ದ ವಿವಿಧ ಪಡೆಗಳ ಸುಮಾರು 7,000 ಪೊಲೀಸರನ್ನು ಮೂಲ ಸ್ಥಾನಕ್ಕೆ ಕಳುಹಿಸಿದೆ. ಏಕಪಕ್ಷೀಯ ನಿರ್ಧಾರದ ಮೂಲಕ ಕಾಶ್ಮೀರಿಗರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಹಲವು ರಾಷ್ಟ್ರಗಳ ನಾಯಕರು, ಜಾಗತಿಕ ಮಾಧ್ಯಮಗಳು, ತಜ್ಞರಿಂದ ಕಟುಟೀಕೆಗೆ ಒಳಗಾಗಿದ್ದ ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಜೀವನವನ್ನು ಸಹಜ ಸ್ಥಿತಿಗೆ ಮರಳಿ ತರಲಾಗುತ್ತಿದೆ ಎಂಬ ಸಂದೇಶವನ್ನು ವಿಶ್ವ ಸಮುದಾಯಕ್ಕೆ ರವಾನಿಸುವ ಯತ್ನ ಆರಂಭಿಸಿದೆ.
ಕಳೆದ 140 ದಿನಗಳಿಂದ ಅಕ್ಷರಶಃ ಸ್ತಬ್ಧವಾಗಿರುವ ಕಾಶ್ಮೀರದಲ್ಲಿ ಮೊದಲ ಬಾರಿಗೆ ಕಳೆದ ಶುಕ್ರವಾರ 14ನೇ ಶತಮಾನದ ಸುಪ್ರಸಿದ್ಧ ಜಾಮೀಯಾ ಮಸೀದಿಯಲ್ಲಿ ನಮಾಜ್ ಸಲ್ಲಿಸಲು ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಸರ್ಕಾರವು ಕಾಶ್ಮೀರದ ಕಥನದ ಉತ್ತರಾರ್ಧ ಆರಂಭಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಿ ಅದಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಮೋದಿ ಸರ್ಕಾರವು ಕಳೆದ ನಾಲ್ಕು ತಿಂಗಳಿಂದ ಕಾಶ್ಮೀರವನ್ನು ಅಕ್ಷರಶಃ ಭದ್ರತಾ ಪಡೆಗಳ ವಶದಲ್ಲಿಟ್ಟಿದೆ. ಭಾರತದ ಏಕೈಕ ಮುಸ್ಲಿಮ್ ಪ್ರಾಬಲ್ಯ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲದಾಕ್ ಪ್ರಾಂತ್ಯಗಳನ್ನು ವಿಂಗಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿರಿಸಿರುವುದು, ಹೋರಾಟಗಾರರು, ಹುರಿಯತ್ ನಾಯಕರು, ವಿದ್ಯಾರ್ಥಿಗಳನ್ನು ಬಿಜೆಪಿಯ ಸರ್ಕಾರವು ಜೈಲಿಗಟ್ಟಿದ್ದು, ಸ್ವತಂತ್ರ ಮಾಧ್ಯಮಗಳು ವರದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಂಟರ್ನೆಟ್ ನಿರ್ಬಂಧ ವಿಧಿಸಿರುವುದರಿಂದ ಅಲ್ಲಿನ ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗದ ಸ್ಥಿತಿ ತಲುಪಿವೆ. ಜನಜೀವನ, ಶಾಲಾ-ಕಾಲೇಜು, ಉದ್ಯಮ ಸಂಪೂರ್ಣವಾಗಿ ಬಂದ್ ಆಗಿವೆ. ಸರ್ಕಾರದ ನಿರ್ಧಾರದಿಂದಾಗಿ ಸುಮಾರು 15 ಸಾವಿರ ಕೋಟಿಗೂ ಅಧಿಕ ನಷ್ಟ ಜಮ್ಮು ಮತ್ತು ಕಾಶ್ಮೀರದಲ್ಲಾಗಿದೆ ಎನ್ನಲಾಗಿದೆ.

ದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕಾಶ್ಮೀರಕ್ಕೆ ತೆರಳುವುದಕ್ಕೆ ನಿರ್ಬಂಧ ವಿಧಿಸಿರುವ ಸರ್ಕಾರದ ನಿರ್ಧಾರವನ್ನು ಹಲವರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಕಟು ನಿರ್ಧಾರಗಳಿಂದ ಕಾಶ್ಮೀರವನ್ನು ಉಳಿದ ಜಗತ್ತಿನಿಂದ ತುಂಡರಿಸಿದ ಮೋದಿ ಸರ್ಕಾರದ ಬಗ್ಗೆ ಜಾಗತಿಕ ಸಮುದಾಯ ಹಾಗೂ ಮಾಧ್ಯಮಗಳು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಮುಖವಾಗಿಟ್ಟುಕೊಂಡು ಮೋದಿಯವರನ್ನು ಸರ್ವಾಧಿಕಾರಿ ಎಂದು ಕರೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮೋದಿ ಸರ್ಕಾರವು ಟೀಕಾಕಾರರು ಹೇಳುವಂತೆ ಕಾಶ್ಮೀರದಲ್ಲಿ ಪರಿಸ್ಥಿತಿ ಕೆಟ್ಟಿಲ್ಲ ಎಂದು ವಾದಿಸಿತ್ತು. ಅದಕ್ಕಾಗಿ ಬಲಪಂತೀಯ ಜನಪ್ರತಿನಿಧಿಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ನಿಯೋಗವನ್ನು ಕಾಶ್ಮೀರಕ್ಕೆ ಕಳುಹಿಸಿ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿಸುವ ತಂತ್ರ ಭಗ್ನಗೊಂಡು ಭಾರಿ ಮುಖಭಂಗ ಅನುಭವಿಸಿದೆ.
Delighted to witness d first ever football match in last several months in Kashmir between Real Kashmir and Chennai clubs at Srinagar. Congratulations to Real Kashmir FC for winning d match. They are playing so well n r favourites for championship this season. Goodluck
— Ram Madhav (@rammadhavbjp) December 26, 2019
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದು ನೆರೆಯ ಪಾಕಿಸ್ತಾನ. ತನ್ನ ಕುತಂತ್ರಗಳ ಮೂಲಕ ಭಾರತದ ವಿರುದ್ಧ ಯುದ್ಧ ಸಾರುತ್ತಿರುವ ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಜಾಗತಿಕ ವಿಷಯವಾಗಿಸಲು ಚೀನಾದ ಜೊತೆಗೂಡಿ ಯತ್ನಿಸಿ ವಿಫಲವಾಗಿದೆ. ಇದರ ಮಧ್ಯೆ, ಟರ್ಕಿ, ಸೌದಿ ಅರೇಬಿಯಾ, ಮಲೇಷಿಯಾ ಹಾಗೂ ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಸದಸ್ಯರು, ಬ್ರಿಟಿನ್ನಿನ ಲೇಬರ್ ಪಕ್ಷದ ಸದಸ್ಯರು ಹಾಗೂ ಜರ್ಮನಿಯ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ಮೋದಿ ಸರ್ಕಾರಕ್ಕೆ ಅಪಥ್ಯವಾದ ಮಾತುಗಳನ್ನಾಡಿದ್ದಾರೆ. ಇದಕ್ಕಾಗಿಯೇ ಮೋದಿ ಟರ್ಕಿ ಪ್ರವಾಸ ರದ್ದುಗೊಳಿಸಿದ್ದರು. ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಭಾರತೀಯ ಸಂಜಾತೆ ಪ್ರಮೀಳಾ ಜೈಪಾಲ್ ಅವರನ್ನು ಭೇಟಿ ಮಾಡಲು ಇತ್ತೀಚೆಗೆ ಅಮೆರಿಕದ ಪ್ರವಾಸದಲ್ಲಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ನಿರಾಕರಿಸಿದ್ದರು ಎಂಬುದು ಗಮನಾರ್ಹ.

ಈ ಎಲ್ಲಾ ಟೀಕೆಗಳ ಉತ್ತರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದೆ ಎಂಬ ಸಂದೇಶ ರವಾನಿಸುವ ಭಾಗವಾಗಿ 7,000 ಪೊಲೀಸರನ್ನು ಮರಳಿ ಕರೆಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ವಾದದ ಪ್ರಕಾರ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟವು ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿರುವುದರಿಂದ ಭದ್ರತಾ ಪಡೆಗಳ ಅಗತ್ಯ ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಕೈಗೊಂಡಿದೆ ಎಂಬ ಚರ್ಚೆಯೂ ಇದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆಯ ರದ್ದತಿಯ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಿಲ್ಲದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸುವುದು, ಅಲ್ಲಿನ ಪ್ರತ್ಯೇಕತೆಯ ಕೂಗನ್ನು ತಣಿಸುವುದು ಮಿಗಿಲಾಗಿ ಅಲ್ಲಿನ ಜನರನ್ನು ಅಭಿವೃದ್ಧಿಯ ಭಾಗವಾಗಿಸುವುದು ತನ್ನ ನಿರ್ಧಾರದ ಹಿಂದಿನ ಉದ್ದೇಶ ಎಂದು ಮೋದಿ ಸರ್ಕಾರ ಹೇಳಿದರೂ ಅದಕ್ಕೂ ಮಿಗಿಲಾದ ರಾಜಕೀಯ ಉದ್ದೇಶ ತನಗಿದೆ ಎಂಬುದನ್ನು ಬಿಜೆಪಿ ಹೇಳಲಾರಂಭಿಸಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ನೇತೃತ್ವದ ಸರ್ಕಾರ ಮಾಡಿದ್ದ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ನಿಟ್ಟಿನಿಂದ ಹಾಗೂ ಭಾರತವನ್ನು ಒಂದುಗೂಡಿಸುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಆಶಯದಂತೆ ಕಾಶ್ಮೀರ ವಿವಾದವನ್ನು ಬಗೆಹರಿಸಲಾಗಿದೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ.
ಈ ಘನ ನಿರ್ಧಾರವನ್ನು ಮುಂದಿರಿಸಿಕೊಂಡು ರಾಷ್ಟ್ರೀಯತೆಯ ವಿಚಾರವನ್ನು ಪ್ರಮುಖ ಚುನಾವಣಾ ವಿಷಯವಾಗಿ ಉಳಿಸುವ ಬಿಜೆಪಿಯ ಪ್ರಯತ್ನಕ್ಕೆ ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ಮತದಾರರು ಸೊಪ್ಪುಹಾಕಿಲ್ಲ. ಆದರೆ, ಮುಂದಿನ ದಿನಗಳಲ್ಲಿ ತನ್ನ ಪ್ರಣಾಳಿಕೆಯ ಭರವಸೆಯ ಈಡೇರಿಕೆ ವಿಷಯವನ್ನು ಜನರಿಗೆ ಒಪ್ಪಿಸಿ, ಮತಗಳಿಸಲು ಯಾವ ಆಯಾಮವನ್ನು ಬಿಜೆಪಿ ಕಂಡುಕೊಳ್ಳಲಿದೆ ಎಂಬುದು ಸಹಜವಾಗಿ ಕುತೂಹಲ ಮೂಡಿಸಿದೆ.