ಎಲ್ಲರೂ ನಿನ್ನೆ ಮಧ್ಯರಾತ್ರಿ ನಂತರ ಹೊಸ ವರ್ಷವನ್ನು ಸಂತಸದಿಂದ ಸ್ವಾಗತಿಸಿ ಇಂದು ಬೆಳಗ್ಗೆ ಕಣ್ಣು ಬಿಡುತ್ತಿರುವಂತೆಯೇ `ದುಬಾರಿ’ ಶಬ್ಧ ಕೇಳಿ ದಂಗಾಗಿದ್ದಾರೆ. 2019 ಕ್ಕೆ ಗುಡ್ ಬೈ ಹೇಳಿ, ಹೊಸ ವರ್ಷ 2020 ರಲ್ಲಾದರೂ ಎಲ್ಲವೂ ನಮ್ಮ ಕೈಗೆಟುಕುವ ಬೆಲೆಯಲ್ಲಿ ಸಿಗಲಿ ಎಂದು ಪ್ರಾರ್ಥಿಸಿದವರಿಗೆ ಸರ್ಕಾರ ಬೆಲೆ ಏರಿಕೆಯ ಬಿಸಿಯನ್ನು ಹೊಸ ವರ್ಷದ ಉಡುಗೊರೆಯಾಗಿ ನೀಡಿದೆ.
ಸಬ್ಸಿಡಿ ರಹಿತವಾದ ಅಡುಗೆ ಅನಿಲ, ರೈಲು ಪ್ರಯಾಣ ದರ ಸೇರಿದಂತೆ ಮತ್ತಿತರೆ ಅಗತ್ಯ ವಸ್ತುಗಳ ಬೆಲೆಯನ್ನು ಸರ್ಕಾರ ತುಸು ಹೆಚ್ಚು ಮಾಡಿದೆ. ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಅದರಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಸದ್ಯಕ್ಕೆ ಇಳಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸರ್ಕಾರವೂ ಈರುಳ್ಳಿ ಬೆಲೆಯನ್ನು ತಹಬದಿಗೆ ತರುವ ಗೋಜಿಗೆ ಹೋಗಿಲ್ಲ.
ಭಾರತೀಯ ರೈಲ್ವೆಯು ತನಗಾಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಕಿಲೋಮೀಟರ್ ಗೆ ಒಂದರಿಂದ ನಾಲ್ಕು ಪೈಸೆಗಳಷ್ಟು ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಈ ಪ್ರಯಾಣ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಇನ್ನು ಸಬ್ಸಿಡಿರಹಿತವಾದ ಸಿಲಿಂಡರ್ ಬೆಲೆ 19 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಇದರೊಟ್ಟಿಗೆ ಅಕ್ಕಿ, ಬೇಳೆ ಕಾಳುಗಳು, ಹಣ್ಣು ತರಕಾರಿ ಬೆಲೆಯೂ ಹೆಚ್ಚಳವಾಗತೊಡಗಿದೆ. ಜನಸಾಮಾನ್ಯರ ಪಕ್ಷ ನಮ್ಮದು ಎಂದು ಹೇಳಿಕೊಳ್ಳುತ್ತಲೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಕಳೆದ ಎರಡು ತಿಂಗಳಿಂದಲೂ ಸಿಎಎ, ಎನ್ಆರ್ ಸಿ ಸೇರಿದಂತೆ ಮತ್ತಿತರೆ ವಿವಾದಿತ ಕಾನೂನುಗಳನ್ನು ತರುವುದೇ ಮುಖ್ಯವಾಗಿದೆ. ಈ ತನ್ನ ಸ್ವಪ್ರತಿಷ್ಠೆಯ ಕಾನೂನುಗಳನ್ನು ತರುವುದರಲ್ಲೇ ತಲೆ ಕೆಡಿಸಿಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಜನ ಸಾಮಾನ್ಯರ ಗೋಳು ಕೇಳಲು ಕಿವಿಯೇ ಇಲ್ಲವಾಗಿದೆ.
ಭಾರತೀಯ ರೈಲ್ವೆಯು ಎಲ್ಲಾ ಎಸಿ ದರ್ಜೆಯ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ ಗೆ 4 ಪೈಸೆಯನ್ನು ಏರಿಸಿದ್ದರೆ, ನಾನ್ ಎಸಿ ಮತ್ತು ಮೀಸಲು ಇಲ್ಲದ ವಿಭಾಗದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ ಗೆ 1 ಪೈಸೆಯನ್ನು ಹೆಚ್ಚಳ ಮಾಡಿದೆ. ದೂರ ಪ್ರಯಾಣದ ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಪ್ರಯಾಣ ಮಾಡಿದರೆ ಪ್ರತಿ ಕಿಲೋಮೀಟರ್ ಗೆ ಎರಡು ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಜನಸಾಮಾನ್ಯರು ಪ್ರಯಾಣದ ದರದ ಮೇಲೆ ಬರೆ ಎಳೆದಿದೆ.
ಸರ್ಕಾರ ಕಳೆದ ಆಗಸ್ಟ್ ತಿಂಗಳಿಂದ ಸಬ್ಸಿಡಿ ರಹಿತವಾದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ಹೆಚ್ಚಿಸುತ್ತಾ ಬಂದಿದೆ. ಈ ಮೂಲಕ ಇಲ್ಲಿಯವರೆಗೆ ಇದರ ಬೆಲೆ 140 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಐಟಿ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ಅನಿಲ ಸಿಲಿಂಡರ್ ಬೆಲೆ ಇದುವರೆಗೆ 697.50 ರೂಪಾಯಿ ಇದ್ದರೆ, ಈಗ 716.50 ರೂಪಾಯಿಗೆ ಹೆಚ್ಚಳವಾಗಿದೆ. ಅದೇ ರೀತಿ 1269 ರೂಪಾಯಿಗೆ ಸಿಗುತ್ತಿದ್ದ 19 ಕೆಜಿ ತೂಕದ ಅನಿಲ ಸಿಲಿಂಡರ್ ಬೆಲೆಯಲ್ಲಿ 30 ರೂಪಾಯಿ ಹೆಚ್ಚಳವಾಗಿದೆ.
ಕಳೆದ ಎರಡು ತಿಂಗಳ ಹಿಂದಿನಿಂದಲೂ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಬೆಳೆದು ನಿಂತಿದ್ದ ಈರುಳ್ಳಿ ಫಸಲು ಭಾರೀ ಮಳೆ ಬಿದ್ದ ಪರಿಣಾಮ ಅರ್ಧಕ್ಕರ್ಧ ನಾಶವಾಯಿತು. ಇದರ ಪರಿಣಾಮ ಈರುಳ್ಳಿ ಪೂರೈಕೆಯಲ್ಲಿ ಕೊರತೆ ಉಂಟಾಗಿ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿತು. ಆದರೆ, ಈ ಹೆಚ್ಚಳವಾದ ಬೆಲೆಯ ಫಲವನ್ನು ಮಾತ್ರ ರೈತ ಉಣ್ಣುವಂತಾಗಲಿಲ್ಲ. ಬಹುತೇಕ ಬೆಲೆ ಹೆಚ್ಚಳದ ಲಾಭ ಮಧ್ಯವರ್ತಿಗಳಿಗೆ ಹೋಯಿತು.
ದೇಶಾದ್ಯಂತ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸಂಸತ್ತಿನಲ್ಲಿಯೂ ಈರುಳ್ಳಿ ಬೆಲೆಯನ್ನು ತಗ್ಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬಂದರೂ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ. ಇದರ ಹೊಣೆಗಾರಿಕೆಯನ್ನು ಹೊತ್ತಿರುವ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮನೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ಬಳಸುವುದಿಲ್ಲ. ಹೀಗಾಗಿ ಬೆಲೆ ಹೆಚ್ಚಳದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿ ಕೈತೊಳೆದುಕೊಂಡದ್ದನ್ನು ಬಿಟ್ಟರೆ, ಹೊರ ದೇಶಗಳಿಂದ ಈರುಳ್ಳಿಯನ್ನು ಸಮರ್ಪಕವಾಗಿ ಆಮದು ಮಾಡಿಕೊಂಡು ಬೆಲೆ ಇಳಿಕೆಗೆ ಮನಸ್ಸು ಮಾಡಲೇ ಇಲ್ಲ.
ವಿವಾದಿತ ಕಾನೂನುಗಳನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿ ಉಂಟು ಮಾಡುವ ಬದಲು ಸರ್ಕಾರ ಜನ ಸಾಮಾನ್ಯರ ಕಣ್ಣೊರೆಸುವ ಕೆಲಸ ಮಾಡಿದ್ದರೆ ಜನರಿಂದ ಸಹಾನುಭೂತಿಯನ್ನಾದರೂ ಗಳಿಸಬಹುದಿತ್ತು. ಆದರೆ, ಸಮಾಜದ ಒಂದು ವರ್ಗದ ಓಲೈಕೆಯಲ್ಲೇ ನಿರತವಾಗುವ ಮೂಲಕ ಬಿಜೆಪಿ ಸರ್ಕಾರ ಕೇವಲ ರಾಜಕೀಯ ಮಾಡುತ್ತಾ ಕಾಲ ಕಳೆಯುತ್ತಿದೆ. ಇದಕ್ಕೆ ಕೆಲವು ರಾಜ್ಯಗಳಲ್ಲಿ ಸೋಲಿನ ಕಹಿಯನ್ನು ತಿನ್ನುವ ಮೂಲಕ ಫಲವನ್ನೂ ಕಂಡಿದೆ. ಇದೇ ರೀತಿ ಕೇವಲ ವಿವಾದಗಳನ್ನು ಸೃಷ್ಟಿಸುತ್ತಾ ಜನಸಾಮಾನ್ಯರನ್ನು ಕಡೆಗಣಿಸುತ್ತಾ ಹೋದರೆ ಉಳಿದ ರಾಜ್ಯಗಳಲ್ಲಿ ಮತ್ತು ದೇಶದಲ್ಲಿಯೂ ಇದೇ ಕಹಿಯನ್ನು ಉಣ್ಣುವ ದಿನಗಳು ದೂರವಿಲ್ಲ.