ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಆರ್ಥಿಕ ಪ್ರಗತಿ ದಿನದಿಂದ ದಿನಕ್ಕೆ ಪಾತಾಳ ಮುಟ್ಟುತ್ತಿವೆ ಎಂದು ಆರ್ಥಿಕತೆಯನ್ನು ಅಳೆಯುವ ಎಲ್ಲಾ ವಿಶ್ಲೇಷಣಾ ಸಂಸ್ಥೆಗಳ ವರದಿಗಳು ಹೇಳಿವೆ. ದೇಶದ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಈ ಸಾಲಿನಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಶೇ.5ನ್ನೂ ತಲುಪುವುದಿಲ್ಲ ಎಂದು ಪ್ರಮುಖ ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆಗಳು ಹೇಳಿವೆ. ಕೃಷಿ ಕ್ಷೇತ್ರವೂ ಗಂಭೀರ ಹಿನ್ನಡೆ ಕಂಡಿದೆ.
ರೈತರ ಆತ್ಮಹತ್ಯೆಗಳು ನಿರಂತರವಾಗಿ ಮುಂದುವರೆದಿವೆ. ಕಳೆದ ವರ್ಷ ಮಹಾರಾಷ್ಟ್ರದ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಸಿಕ್‍ನಿಂದ ಮುಂಬೈವರೆಗೂ ಪಾದಯಾತ್ರೆ ನಡೆಸಿದ್ದರು. ತಯಾರಿಕೆ ವಲಯ, ವಿದ್ಯುತ್, ಆಟೋಮೊಬೈಲ್, ಉಕ್ಕು, ಗಣಿಗಾರಿಕೆ ಸೇರಿದಂತೆ ಪ್ರಮುಖ ಎಂಟು ಕ್ಷೇತ್ರಗಳ ಪ್ರಗತಿಯೂ ನಿರಂತರ ಹಿನ್ನಡೆ ಕಾಣುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಯಾವೊಂದು ಕ್ಷೇತ್ರವೂ ಪ್ರಗತಿ ಸಾಧಿಸದಿರುವುದನ್ನು ಕಾಣುತ್ತಿದ್ದೇವೆ.
ಕೇಂದ್ರ ಸರ್ಕಾರ ಕಳೆದ ಆಗಸ್ಟ್‍ನಲ್ಲಿ ಬಂಡವಾಳ ಶಾಹಿಗಳ ರೂ.1.45 ಲಕ್ಷ ಕೋಟಿಗಳ ತೆರಿಗೆ ವಿನಾಯಿತಿ ನೀಡಿತು. ಇದು ತುಂಬಾ ಅನಪೇಕ್ಷಿತವಾದ ತೀರ್ಮಾನ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೊರೆ ಹೆಚ್ಚಲಿದೆಯೇ ವಿನಃ ಆರ್ಥಿಕತೆ ಚೇತರಿಕೆ ಕಾಣುವಲ್ಲಿ ಇದರ ಪಾತ್ರ ಏನೇನೂ ಇಲ್ಲ. ಇಂದು ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಗಂಭೀರ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ತಯಾರಿಕಾ ಕ್ಷೇತ್ರ ನೆಲ ಕಚ್ಚಿದೆ. ಖಾಸಗಿ ಉದ್ದಿಮೆಗಳು, ಬಂಡವಾಳಶಾಹಿಗಳು ಹೆಚ್ಚು ಹೂಡಿಕೆ ಮಾಡಲಿ ಎಂದು ವಿನಾಯಿತಿ ನೀಡಲಾಗಿದೆ ಎಂಬುದು ಕೇಂದ್ರದ ಸಮಜಾಯಿಷಿ. ಆದರೆ ಕಾರ್ಯರೂಪದಲ್ಲಿ ಇದು ಬಂಡವಾಳಶಾಹಿಗಳನ್ನು ಮತ್ತಷ್ಟು ಶ್ರೀಮಂತಗೊಳಿಸುವ ನೀತಿಯಲ್ಲದೆ ಮತ್ತೇನೂ ಅಲ್ಲ.
ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ನೀತಿಗಳು ದೇಶದ ಆರ್ಥಿಕತೆ ಮೇಲೆ ಸರ್ಜಿಕಲ್ ದಾಳಿ ನಡೆಸಿದವು. ನೋಟು ಅಮಾನ್ಯೀನೀಕರಣ ದೇಶದಲ್ಲಿ ಲಕ್ಷಾಂತರ ಸಣ್ಣ, ಪುಟ್ಟ ಮತ್ತು ಗುಡಿ ಕೈಗಾರಿಕೆಗಳನ್ನು ಮುಚ್ಚುವಂತೆ ಮಾಡಿತು. ಸುಮಾರು 50 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾದವು. ಈ ಉದ್ಯೋಗ ನಷ್ಟ ಮತ್ತು ಕುಸಿದ ಆರ್ಥಿಕತೆಯನ್ನು ಸರಿಪಡಿಸಲು ಸರ್ಕಾರ ಇದುವರೆಗೂ ಒಂದೇ ಒಂದು ಕ್ರಮ ಜರುಗಿಸಲಿಲ್ಲ.
ನೋಟು ಅಮಾನ್ಯೀಕರಣಗೊಂಡು ನಾಲ್ಕು ವರ್ಷಗಳ ನಂತರವೂ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ಜಿಎಸ್‍ಟಿ ಜಾರಿ ನಂತರ ತೆರಿಗೆ ಸಂಗ್ರಹಣೆ ಗಣನೀಯವಾಗಿ ಕುಸಿದಿದೆ. ಇದು ಕೇಂದ್ರ ಸರ್ಕಾರವನ್ನು ದಿಕ್ಕು ತೋಚದಂತೆ ಮಾಡಿದೆ. ಜಿಎಸ್‍ಟಿ ಜಾರಿಯಲ್ಲಿನ ದೋಷಗಳನ್ನು ಪತ್ತೆ ಹಚ್ಚಿ ತೆರಿಗೆ ಸೋರಿಕೆ ತಡೆಗಟ್ಟಲು ಸಾಧ್ಯವಾಗಿಲ್ಲ.
ಕೇಂದ್ರ ಸರ್ಕಾರವನ್ನು ಕಾಡುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆ ಅನುತ್ಪಾದಕ ಸಾಲ(ಎನ್‍ಪಿಎ). ವಸೂಲಾಗದಿರುವ ಸಾಲ 12 ಲಕ್ಷ ಕೋಟಿಗೂ ಹೆಚ್ಚಾಗಿದೆ. ವಾಸ್ತವವಾಗಿ ಬ್ಯಾಂಕ್‍ಗಳು ಬಂಡವಾಳ ಇಲ್ಲದೆ ಪರಿತಪಿಸುತ್ತಿವೆ. ಇದರಿಂದ ಸರ್ಕಾರಿ ಹೂಡಿಕೆ ಸಂಪೂರ್ಣವಾಗಿ ಕುಸಿಯಲಿದೆ ಎಂದೇ ಅರ್ಥ. ಬ್ಯಾಂಕ್‍ಗಳಿಗೆ ಬಂಡವಾಳವನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಾಗಿತ್ತು.
ಅರುಣ್‍ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ಈ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಎನ್‍ಪಿಎ ವಸೂಲಿ ಮಾಡಲು ಕೇಂದ್ರ ಸರ್ಕಾರ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿಲ್ಲ. ಇದರ ಬದಲಿಗೆ ಎನ್‍ಪಿಎಗಳನ್ನು ರೈಟ್ ಆಫ್(ಮನ್ನಾ) ಮಾಡುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಇದರಿಂದ ಉದ್ಯಮಿಗಳು ಒಬ್ಬರ ನಂತರ ಮತ್ತೊಬ್ಬರು ದೇಶ ಬಿಟ್ಟು ಹೋಗುತ್ತಿದ್ದರೆ ಉಳಿದವರು ಸಾಲ ಹಿಂತಿರುಗಿಸುವ ಭೀತಿ ಇಲ್ಲದೆ ಮೆರೆಯುತ್ತಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ಆರ್‍ಬಿಐ ಮೇಲೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸಿದೆ. ಆರ್‍ಬಿಐನಲ್ಲಿನ ಸಾರ್ವಭೌಮ ನಿಧಿ ಮೇಲೂ ಕಣ್ಣು ಹಾಕಿದ್ದು 3 ಲಕ್ಷ ಕೋಟಿ ರೂ.ಗಳನ್ನು ಪಡೆಯುವ ಹವಣಿಕೆ ನಡೆಸಿದೆ. ಒಂದು ವೇಳೆ ಇದು ಯೋಜಿತ ರೀತಿಯಲ್ಲಿ ನಡೆದಿದ್ದೇ ಆದರೆ ಆರ್‍ಬಿಐ ದಿವಾಳಿಯಾಗುವ ಕಾಲ ದೂರವಿಲ್ಲ.
ಆರ್ಥಿಕತೆ ಹಿನ್ನಡೆ ಕಾಣಲು ಮತ್ತೊಂದು ಪ್ರಮುಖ ಕಾರಣ ಸಾಮಾನ್ಯ ಜನರಲ್ಲಿ ಖರೀದಿ ಶಕ್ತಿ ಕುಂಠಿತಗೊಂಡಿರುವುದು. ಪಾರ್ಲೆ-ಜಿ ಬಿಸ್ಕಿಟ್ ಕಂಪನಿ ಮೂರು ತಿಂಗಳ ಹಿಂದೆ ಹತ್ತು ಸಾವಿರ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತು. ಕಂಪನಿ ಮುಖ್ಯಸ್ಥರನ್ನು ಕೇಳಿದಾಗ ಮಾರುಕಟ್ಟೆಯಲ್ಲಿ ಕಂಪನಿ ಉತ್ಪನ್ನಗಳನ್ನು ಖರೀದಿಸುವವರು ಕಡಿಮೆಯಾಗಿದ್ದಾರೆ. 5 ರೂ.ಮೌಲ್ಯದ ಬಿಸ್ಕಿಟ್ ಪಾಕೆಟ್ ಖರೀದಿಸುವ ಸಾಮರ್ಥ್ಯವೂ ಜನರಿಗೆ ಇಲ್ಲದಾಗಿದೆ ಎಂದು ಹೇಳಿದ್ದರು. ಎಲ್ಲ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಆಟೋಮೊಬೈಲ್ ಕಂಪನಿಗಳು ವಾಹನಗಳ ಮಾರಾಟ ಇಲ್ಲದೆ ಉತ್ಪಾದನೆ ಸ್ಥಗಿತಗೊಳಿಸಿವೆ.
ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕದಲ್ಲಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ಕಂಪನಿಗಳು ಬೀಗ ಹಾಕಿವೆ. ಕೃಷಿ ಕ್ಷೇತ್ರ ಗಂಭೀರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದೆ ಕೃಷಿಯನ್ನೇ ಬಿಟ್ಟು ಬೇರೆ ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಇದ್ದಾರೋ ಇಲ್ಲವೋ ಎಂಬಷ್ಟರ ಮಟ್ಟಿಗೆ ತಲುಪಿದೆ.
ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಇಲ್ಲದೆ ನಗರಗಳಲ್ಲಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಾ ಬದುಕು ಸಾಗಿಸುತ್ತಿದ್ದಾರೆ. ಕೃಷಿ ನಂತರ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರ ರಿಯಲ್‍ಎಸ್ಟೇಟ್. ಆದರೆ ನೋಟು ಅಮಾನ್ಯೀಕರಣದ ನಂತರ ರಿಯಾಲ್ಟಿ ಕ್ಷೇತ್ರವೂ ಗಂಭೀರ ಹಿನ್ನಡೆ ಕಂಡಿದೆ. ಇವೆಲ್ಲ ಅಂಶಗಳು ಒಟ್ಟಾರೆ ದೇಶದ ಆರ್ಥಿಕತೆಯನ್ನು ಗಂಭೀರ ಸ್ಥಿತಿಗೆ ತಂದು ನಿಲ್ಲಿಸಿವೆ.
ಈ ಹಿನ್ನೆಲೆಯಲ್ಲಿ 2020-21ರ ಕೇಂದ್ರ ಬಜೆಟ್ ಮೇಲೆ ಎಲ್ಲರ ನೋಟ ನೆಟ್ಟಿದೆ. ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನೋಡಲು ದೇಶದ ಎಲ್ಲ ವರ್ಗಗಳೂ ಕಾತರದಿಂದ ಕಾಯುತ್ತಿವೆ. ಕೇಂದ್ರ ಸರ್ಕಾರದ ಮುಂದಿರುವ ಪ್ರಮುಖ ಆದ್ಯತೆ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವುದು. ಅಂದರೆ ಉದ್ಯೋಗಗಳನ್ನು ಸೃಷ್ಟಿಸಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚು ಹಣವನ್ನು ಮೀಸಲಿಡಬೇಕು.
ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಈ ಯೋಜನೆಯನ್ನು ಸಂಪತ್ತು ಸೃಷ್ಟಿಸುವ ಪ್ರಮುಖ ಆದ್ಯತೆಯಾಗಿ ಪರಿಗಣಿಸಬೇಕು. ಈಗಿರುವ 150 ದಿನಗಳ ಕೆಲಸವನ್ನು 250 ದಿನಗಳಿಗೆ ಹೆಚ್ಚಿಸಬೇಕು. ಕೃಷಿ, ನೀರಾವರಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಇದರೊಂದಿಗೆ ಜೋಡಿಸಬೇಕು. ಹೆಚ್ಚು ಅನುದಾನವನ್ನು ಕಲ್ಪಿಸಬೇಕು.
ಆಗ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಕೃಷಿ ಕೂಲಿ ಕಾರ್ಮಿಕರು, ಯುವಕರು, ರೈತರು ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅವರ ಕೈಗೆ ಕೂಲಿ ಹಣ ತಲುಪಿದರೆ ಅವರ ಖರೀದಿ ಶಕ್ತಿ ಹೆಚ್ಚಲಿದೆ. ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕತೆ ಚೇತರಿಸಿಕೊಳ್ಳಲಿದೆ. ಹೀಗಾಗಿ ಈ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಆದ್ಯತೆಯಾಗಿ ಪರಿಗಣಿಸಬೇಕು. ಇದರ ಜೊತೆಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳವನ್ನು ತೊಡಗಿಸಬೇಕು. ಇದರಿಂದ ಉದ್ಯೋಗಗಳು ಸೃಷ್ಟಿಯಾಗಿ ಜನರ ಕೈಗೆ ಹಣ ತಲುಪಲಿದ್ದು, ಅವರಲ್ಲಿನ ಖರೀದಿ ಶಕ್ತಿ ಹೆಚ್ಚಲಿದೆ. ಆಗ ಆರ್ಥಿಕತೆ ಒಂದಷ್ಟು ಚೇತರಿಕೆ ಕಾಣಲು ಸಾಧ್ಯವಾಗಲಿದೆ.
ಆರ್ಥಿಕ ನಿಯಮಗಳ ಅನುಸಾರ ಸರ್ಕಾರಗಳು ಎರಡು ರೀತಿಯ ಕ್ರಮಗಳನ್ನು ಜರುಗಿಸಲಿವೆ. ಮೊದಲನೆಯದು ಸಪ್ಲೇಸೈಡ್ ಕ್ರಮಗಳು ಮತ್ತು ಡಿಮಾಂಡ್ ಸೈಡ್ ಕ್ರಮಗಳು. ಕಳೆದ ಆರೇಳು ವರ್ಷಗಳಿಂದ ಕೇಂದ್ರ ಸರ್ಕಾರ ಕೈಗೊಂಡಿರುವುದು ಸಪ್ಲೆಸೈಡ್ ಕ್ರಮಗಳು. ಈಗ ಬೇಕಾಗಿರುವುದು ಡಿಮಾಂಡ್ ಸೈಡ್ ಕ್ರಮಗಳು. ಅದರ ಪ್ರಮುಖ ಭಾಗವೇ ಕೂಲಿಕಾರ್ಮಿಕರು, ಕಾರ್ಮಿಕರು, ಸಾಮಾನ್ಯ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವುದು. ಈ ಕ್ರಮಕ್ಕೆ ಮುಂದಾದರೆ ಮಾತ್ರ ದೇಶದ ಆರ್ಥಿಕತೆ ಚೇತರಿಕೆ ಕಾಣಲಿದೆ. ತಪ್ಪಿದಲ್ಲಿ ಈ ಅಧೋಗತಿ ಮುಂದುವರಿಯಲಿದೆ ಎಂಬುದು ನಿಶ್ಚಿತ.