ದೇಶದಲ್ಲಿ ಲೋಕಪಾಲ್ ಜಾರಿಯಾಗಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರ ಆರಂಭಿಸಿದ ಹೋರಾಟಗಾರ ಅಣ್ಣಾ ಹಜ಼ಾರೆ ಎಂದೇ ಪ್ರಖ್ಯಾತರಾಗಿರುವ ಕಿಸಾನ್ ಬಾಬುರಾಲ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಮ್ಮನ್ನು ಉಪಯೋಗಿಸಿಕೊಂಡು ಅಧಿಕಾರ ಹಿಡಿದಿದೆ ಎಂದು ಆರೋಪಿಸಿದ್ದಾರೆ. ತಾನು ಪ್ರಾರಂಭಿಸಿದ್ದ ಚಳವಳಿಯನ್ನು ದಾಳವಾಗಿ ಬಳಸಿಕೊಂಡು ಬಿಜೆಪಿ ಚುನಾವಣೆಯನ್ನು ಎದುರಿಸಿತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
“ಪ್ರತಿಯೊಬ್ಬರಿಗೂ ಗೊತ್ತು. ಲೋಕಪಾಲ್ ಜಾರಯಾಗಬೇಕೆಂದು ಸತ್ಯಾಗ್ರಹವನ್ನು ಆರಂಭಿಸಿದ್ದು ನಾನು. ಆ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷವು ಅಧಿಕಾರವನ್ನು ಹಿಡಿದವು. ಆ ಎರಡೂ ಪಕ್ಷಗಳು ನನ್ನ ದೃಷ್ಟಿಯಲ್ಲಿ ಗೌರವವನ್ನು ಕಳೆದುಕೊಂಡಿವೆ,” ಎಂದು ಅಣ್ಣಾ ಹಜ಼ಾರೆಯವರು ತಮ್ಮ ಹಳ್ಳಿಯಾದ ರಾಲೆಗಾಂವ್-ಸಿದ್ದಿಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಕಾರ್ಯ ವೈಕರಿಯ ಕುರಿತು ಅಸಮಾಧಾನ ಹೊರ ಹಾಕಿದ ಅಣ್ಣಾ, ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ದೇಶದ ಜನರ ದಾರಿ ತಪ್ಪಿಸುತ್ತಿದೆ ಹಾಗೂ ಪ್ರಧಾನಿ ಮೋದಿ ದೇಶವನ್ನು ನಿರಂಕುಶತ್ವದೆಡೆಗೆ ಕೊಂಡೊಯ್ಯುತ್ತಿದ್ದಾರೆ, ಎಂದರು. ಇನ್ನು ಮಹಾರಾಷ್ಟ್ರದ ಹಿಂದಿನ ಬಿಜೆಪಿ ಸರ್ಕಾರದ ಕುರಿತು ಆ ಸರ್ಕಾರವು ಸುಳ್ಳನ್ನು ಹೇಳಿ ನಾಲ್ಕು ವರ್ಷಗಳನ್ನು ಕಳೆದಿದೆ ಎಂದು ಆರೋಪಿಸಿದರು.
“ಸುಳ್ಳು ಎಷ್ಟು ಸಮಯ ಬದುಕಬಹುದು? ಈ ಸರ್ಕಾರ ದೇಶದ ಜನರ ಕೈ ಬಿಟ್ಟಿದೆ. ಹಿಂದಿನ ಮಹಾರಾಷ್ಟ್ರ ಸರ್ಕಾರ ನನ್ನ ಶೇ. 90 ಬೇಡಿಕೆಗಳನ್ನು ಈಡೇರಿಸಿದೆ ಎಂದು ಸುಳ್ಳು ಹೇಳಿತ್ತು. ನನ್ನ ಹೋರಾಟದಿಂದ ಯಾರೆಲ್ಲಾ ಲಾಭ ಪಡೆದುಕೊಂಡಿದ್ದಾರೆಯೋ, ಅವರೆಲ್ಲಾ ನನಗೆ ಕೈ ಕೊಟ್ಟಿದ್ದಾರೆ. ನನ್ನ ಯಾವುದೇ ಬೇಡಿಕೆಗಳನ್ನು ಈವರೆಗೆ ಈಡೇರಿಸಲಾಗಲಿಲ್ಲ,” ಎಂದು ವಿಷಾದ ವ್ಯಕ್ತ ಪಡಿಸಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತಮ್ಮನ್ನು ಭೇಟಿ ಮಾಡಲು ಬರುತ್ತೇನೆಂದು ಕೇಳಿಕೊಳ್ಳುತ್ತಾರೆ. ನನ್ನ ಬೇಡಕೆಗಳನ್ನು ಈಡೇರಿಸುತ್ತೇನೆಂದು ಆಶ್ವಾಸನೆಗಳನ್ನು ನೀಡುತ್ತಾರೆ. ಆದರೆ, ನಾನು ಯಾರನ್ನೂ ಭೇಟಿಯಾಗಲು ಇಚ್ಚಿಸುವುದಿಲ್ಲ. ಅದು ಜನರಿಗೆ ತಪ್ಪು ಸಂದೇಶ ನೀಡುತ್ತದೆ. ರಾಜಕೀಯ ನಾಯಕರು ಒಂದು ಧೃಡ ನಿರ್ಧಾರ ತೆಗೆದುಕೊಳ್ಳಲಿ. ನನ್ನ ಬೇಡಿಕೆಗಳನ್ನು ಈಡೆರಿಸುತ್ತೇವೆಂದು ನನಗೆ ಬರೆದು ನೀಡಲಿ, ಎಂದು 81 ವರ್ಷ ಪ್ರಾಯದ ಹೋರಾಟಗಾರ ಅಣ್ಣಾ ಹಜ಼ಾರೆ ಆಗ್ರಹಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರನ್ನು ನೀವು ಮತ್ತೆ ಸ್ವಾಗತಿಸುತ್ತೀರೋ ಎಂಬ ಪ್ರಶ್ನೆಗೆ, ಅವರಿಗೆ ನನ್ನ ಹೋರಾಟದಲ್ಲಿ ಯಾವಾಗಲೂ ಸ್ವಾಗತವಿದೆ. ಆದರೆ, ನಾನು ಯಾವತ್ತೂ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಸತತ ಏಳು ದಿನಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಅಣ್ಣಾ ಹಜ಼ಾರೆಯವರು ಇನ್ನೂ ಐದು ದಿನಗಳ ಕಾಲ ನನಗೇನು ಆಗುವುದಿಲ್ಲ. ದೇವರು ನನ್ನೊಂದಿಗೆ ಇದ್ದಾರೆ ಎಂಬ ವಿಶ್ವಾಸದ ನುಡಿಗಳನ್ನು ನುಡಿದರು. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.