ಭಾರತ ಮತ್ತು ಚೀನಾ ನಡುವೆ ಕಳೆದೆರಡು ತಿಂಗಳುಗಳಿಂದ ಹುಟ್ಟಿಕೊಂಡಿರುವ ಗಡಿ ತಕರಾರು ನಿಧಾನವಾಗಿ ತಣ್ಣಗಾಗುವ ಹೊತ್ತಿನಲ್ಲಿ, ಭಾರತದ ನೌಕಾದಳವು ಅಮೇರಿಕಾದ ನೌಕಾದಳದೊಂದಿಗೆ ಜಂಟಿ ಸಮರಾಭ್ಯಾಸ ಸಡೆಸಿ ಚೀನಾಕ್ಕೆ ಖಡಕ್ ಸಂದೇಶ ರವಾನಿಸುವ ಕೆಲಸ ಮಾಡುವ ಪ್ರಯತ್ನ ಮಾಡಿತ್ತು. ಭಾರತದ ಗಡಿಯನ್ನು ಅತಿಕ್ರಮಣ ಮಾಡಿ ಚೀನಾ ವಶಪಡಿಸಿಕೊಂಡಿರುವ ನೆಲವನ್ನು ಮತ್ತು ತನ್ನ ಸೇನೆ ಜಮಾವಣೆಯ ಕಾರ್ಯವನ್ನು ಕೈಬಿಡುವ ರೀತಿ ಚೀನಾಗೆ ಧಮ್ಕಿ ನೀಡುವ ಪ್ರಯತ್ನ ಇದಾಗಿತ್ತು.
ಒಟ್ಟು 72 ಗಂಟೆಗಳ ಸುಧೀರ್ಘ ಸಮರಾಭ್ಯಾಸದಲ್ಲಿ ಭಾರತ ಮತ್ತು ಅಮೇರಿಕಾದ ತಲಾ ನಾಲ್ಕು ಯುದ್ದನೌಕೆಗಳು ಪಾಲ್ಗೊಂಡಿದ್ದವು. ಇದರಲ್ಲಿ ಅಮೇರಿಕಾದ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಹೊಂದಿರುವ ʼಯುಎಸ್ ನಿಮಿಟ್ಜ್ʼ ನೌಕೆಯೂ ಪಾಲ್ಗೊಂಡಿತ್ತು. ಈ ಸಮರಾಭ್ಯಾಸದ ಕುರಿತು ಹೇಳಿಕೆ ನೀಡಿರುವ ಅಮೇರಿಕಾದ ನೌಕಾದಳದ ವಕ್ತಾರರು, ಇಂತಹ ಸಮರಾಭ್ಯಾಸ ಭಾರತ ಮತ್ತು ಅಮೇರಿಕಾ ನಡುವಿನ ನೌಕಾದಳದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಕಾರಿ. ಸಮುದ್ರದಲ್ಲಿ ಕಾರ್ಯಚರಣೆ ನಡೆಸಲು ಉತ್ತಮ ಅನುಭವವನ್ನು ನೀಡುತ್ತದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಲ್ಲದೇ, ಭಾರತದಿಂದ ನಾವು ಮತ್ತು ನಮ್ಮಿಂದ ಭಾರತ ಹೊಸತನ್ನು ಕಲಿತುಕೊಳ್ಳುವುದು ಸಾಧ್ಯ ಎಂದು ಹೇಳಿದ್ದರು.
The Nimitz Carrier Strike Group is transiting through IOR. During the passage, #IndianNavy units undertook Passage Exercise (PASSEX) with #USNavy.
Indian Navy had also conducted similar PASSEXs with #JMSDF and #FrenchNavy in recent past.@USNavy@SpokespersonMoD @MEAIndia pic.twitter.com/ntj5gFFNqC— SpokespersonNavy (@indiannavy) July 20, 2020
ಇತ್ತ ಕಡೆ ಭಾರತದ ನೌಕಾದಳದ ವಕ್ತಾರರು ಅಷ್ಟೇನು ಉತ್ತೇಜನಕಾರಿಯಲ್ಲದ ಹೇಳಿಕೆಯನ್ನು ಟ್ವಿಟರ್ ಮುಖಾಂತರ ನೀಡಿದ್ದರು. “ಭಾರತ ಮತ್ತು ಅಮೇರಿಕಾದ ನೌಕಾದಳಗಳು ಜಂಟಿ ಸಮರಾಭ್ಯಾಸದಲ್ಲಿ ತೊಡಗಿಕೊಂಡಿವೆ. ಇಂತಹ ಸಮರಾಭ್ಯಾಸವನ್ನು ಭಾರತವು ಈ ಹಿಂದೆ ಜಪಾನ್ ಹಾಗೂ ಫ್ರೆಂಚ್ ನೌಕಾದಳದೊಂದಿಗೂ ಮಾಡಿತ್ತು,” ಎಂದು ಭಾರತೀಯ ನೌಕಾದಳ ಹೇಳಿದೆ.
ಆದರೆ, ಭಾರತದ ಮಾಧ್ಯಮದವರು ಇದನ್ನೆಲ್ಲಾ ಅತೀರಂಜನೀಯವಾಗಿ ವರ್ಣಿಸಿ, ಚೀನಾಗೆ ವಾರ್ನಿಂಗ್ ನೀಡಿದ ಭಾರತ ಎಂಬಂತಹ ತಲೆಬರಹಗಳಡಿಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡಿದ್ದವು. ಈ ಜಂಟಿ ಸಮರಾಭ್ಯಾಸದ ನಂತರ ವಾಸ್ತಾವಿಕ ಗಡಿ ರೇಖೆಯಿಂದ ಚೀನಾ ತನ್ನ ಸೇನೆಯನ್ನು ತಕ್ಷಣವೇ ವಾಪಾಸ್ ತೆಗೆದುಕೊಂಡಿತು ಎಂಬ ರೀತಿಯನ್ನು ಸುದ್ದಿಗಳು ಪ್ರಸಾರವಾಗಲು ಆರಂಭವಾದವು. ಈ ಸಮರಾಭ್ಯಾಸದಿಂದ ಬೀಜಿಂಗ್ ನಡುಗುತ್ತದೆ ಎಂಬ ಭಾವನೆಯನ್ನು ಇವುಗಳಲ್ಲಿ ಕಾಣಬಹುದಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇವು ಯಾವುದೂ ಆಧಾರರಹಿತವಾಗಿರಲಿಲ್ಲ ಎಂಬುದನ್ನು ಕೂಡಾ ನಾವು ಒಪ್ಪಿಕೊಳ್ಳಬೇಕು. ಏಕೆಂದರೆ, ಭಾರತ, ಅಮೇರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾದ ನಡುವಿನ ಚತುರ್ಪಕ್ಷೀಯ ಸಂಬಂಧ ನಿಜವಾಗಿಯೂ ಚೀನಾಗೆ ತೀಕ್ಷ್ಣವಾದ ಸಂದೇಶವನ್ನು ರವಾಸಿತ್ತು. ಚೀನಾದ ಪ್ರಬಲ ಸೇನೆಯನ್ನು ಹಿಮ್ಮೆಟ್ಟಿಸುವ ದೃಷ್ಟಿಯಿಂದ ಹಾಗೂ ʼಮಲಾಕ್ಕ ಡೈಲೆಮಾʼವನ್ನು ಒಡೆಯುವ ದೃಷ್ಟಿಯಿಂದ ಈ ಚತುರ್ಪಕ್ಷೀಯ ಸಂಬಂಧ ಬಹಳ ಪ್ರಮುಖವಾದದ್ದು.
ಮಲಾಕ್ಕ ಡೈಲೆಮಾ ಎಂಬ ಪದವನ್ನು 2003ರಲ್ಲಿ ಚೀನಾದ ಅಂದಿನ ಅಧ್ಯಕ್ಷ ಹು ಜಿಂಟಾವೋ ಮೊದಲ ಬಾರಿಗೆ ಉಪಯೋಗಿಸಿದರು. ಎದುರಾಳಿ ನೌಕಾದಳದ ಸೈನಿಕರಿಗೆ ಅತೀ ಕ್ಲಿಷ್ಟಕರವೆನಿಸುವ ಹಾಗೂ ತಾಂತ್ರಿಕವಾಗಿ ಆಯಕಟ್ಟಿನ ಪ್ರದೇಶವಾಗಿರುವ ʼಮಲಾಕ್ಕ ಸ್ಟ್ರೈಟ್ʼ ಎಂಬ ಪ್ರದೇಶದಲ್ಲಿನ ಗೊಂದಲಗಳ ಕುರಿತಾಗಿ ಅವರು ಆ ಪದವನ್ನು ಬಳಸಿದ್ದರು. ಮಲೇಷಿಯಾ ಹಾಗೂ ಇಂಡೋನೇಷಿಯಾದ ನಡುವೆ ಹಾದು ಹೋಗುವ ಅತೀ ಕಿರಿದಾದ 890 ಮೈಲಿಗಳ ಸಮುದ್ರ ದಾರಿಯನ್ನು ʼಮಲಾಕ್ಕ ಸ್ಟ್ರೈಟ್ʼ ಎಂದು ಕರೆಯುತ್ತಾರೆ.
ಅಚ್ಚರಿಯ ವಿಚಾರವೆಂದರೆ ಚೀನಾಗೆ ಆಮದಾಗುವ 80% ತೈಲ ಪದಾರ್ಥ ಹಾಗೂ ಹೈಡ್ರೋಕಾರ್ಬನ್ ಉತ್ಪನ್ನಗಳು ಇದೇ ʼಮಲಾಕ್ಕ ಸ್ಟ್ರೈಟ್ʼನಿಂದ ಬರುತ್ತವೆ. ಚೀನಾದ ದೃಷ್ಟಿಕೋನದಲ್ಲಿ ನೋಡುವುದಾದರೆ ಈಗಿರುವಂತಹ ಚತುರ್ಪಕ್ಷೀಯ ಸಂಬಂಧ ಚೀನಾದ ಸಮುದ್ರ ದಾರಿಯನ್ನು ಮುಚ್ಚಿಬಿಡುವ ಸಾಧ್ಯತೆಗಳಿವೆ. ಇದರಿಂದಾಗಿ ಕನಿಷ್ಟ ಸದ್ಯದ ಪರಿಸ್ಥಿತಿಯಲ್ಲಂತೂ ಚೀನಾ ತನ್ನ ಪ್ರಮುಖ ಶಕ್ತಿ ಕಳೆದುಕೊಳ್ಳುವ ಭಯವಿದೆ.
ಸದ್ಯಕ್ಕೆ ಭಾರತದ ನಂಬಿಕೆ ಏನೆಂದರೆ ಈಗಿರುವ ಚತುರ್ಪಕ್ಷೀಯ ಸಂಬಂಧದೊಂದಿಗೆ ಇಂಡೋನೇಷಿಯಾ, ಸಿಂಗಾಪೂರ್, ಥೈಲೆಂಡ್, ಮಲೇಷಿಯಾ ಹಾಗೂ ವಿಯೆಟ್ನಾಂ ಕೂಡಾ ಭಾರತಕ್ಕೆ ಬೆಂಬಲ ಸೂಚಿಸುತ್ತದೆ ಎಂದು. ಚೀನಾದ ಮಲಾಕ್ಕ ಸ್ಟ್ರೈಟ್‌ನ ಉಪಯೋಗದಿಂದಾಗಿ ಈ ದೇಶಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೇನೆಂದರೆ ಚೀನಾ ಮತ್ತು ಪಾಕಿಸ್ತಾನದ ನಡುವಿನ ಬಾಂಧವ್ಯ. ಪಾಕಿಸ್ತಾನದ ಗ್ವಾದರ್ ಬಂದರನ್ನು ತನ್ನ ಸುಪರ್ದಿಗೆ ಪಡೆಯಲು ಯಶಸ್ವಿಯಾಗಿರುವ ಚೀನಾ ಮಧ್ಯ ಏಷಿಯಾ ರಾಷ್ಟ್ರಗಳಿಂದ ತೈಲವನ್ನು ಅಲ್ಲಿಗೆ ತರಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಪಾಕಿಸ್ತಾನ ಮತ್ತು ಚೀನಾದ ನಡುವೆ ಈಗಾಗಲೇ ಕಾರಕಾಮ್ ಹೆದ್ದಾರಿಯನ್ನು ಬಳಸಿ ಭೂ ಮಾರ್ಗವಾಗಿಯೇ ಎಲ್ಲಾ ತೈಲ ಪದಾರ್ಥ ಹಾಗೂ ಹೈಡ್ರೋಕಾರ್ಬನ್ ಉತ್ಪನ್ನಗಳನ್ನು ಚೀನಾಗೆ ಆಮದು ಮಾಡಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ಈಗಾಗಲೇ, ಕಾರಕಾಮ್ ಹೆದ್ದಾರಿಯನ್ನು ಗ್ವಾದರ್ ಬಂದರಿಗೆ ಚೀನಾದ ರಹದಾರಿ ಎಂದು ಕರೆಯಲಾಗುತ್ತಿದೆ. ಹೀಗಾಗಿ, ಈ ಹೆದ್ದಾರಿಯನ್ನು ಚೀನಾ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ, ಚತುರ್ಪಕ್ಷೀಯ ರಾಷ್ಟ್ರಗಳು ʼಮಲಾಕ್ಕ ಸ್ಟ್ರೈಟ್ʼನಲ್ಲಿ ಚೀನಾದ ಸರಕು ಸಾಗಾಟವನ್ನು ನಿರ್ಬಂಧಿಸಿದರೂ, ಈ ಹೆದ್ದಾರಿ ಚೀನಾದ ಪಾಲಿಗೆ ವರವಾಗಿ ಪರಿಣಮಿಸುವುದು.
ಇನ್ನು, ಚೀನಾದ ʼBelt and Road Initiative’ (BRI) ಹಾಗೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಚೀನಾಕ್ಕೆ ಇನ್ನಷ್ಟು ಬಲ ತುಂಬುತ್ತದೆ ಎಂಬುದನ್ನು ಗಮನಿಸಬೇಕು. ಈ ಯೋಜನೆಯ ಅಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನದ ನಡುವೆ ಸುಮಾರು 2,390 ಕಿ.ಮೀ.ಗಳ ರಸ್ತೆ, ರೈಲ್ವೇ ಮಾರ್ಗ ನಿರ್ಮಾಣ ಹಾಗೂ ತೈಲ ಮತ್ತು ಗ್ಯಾಸ್ ಪೈಪ್ ಲೈನ್‌ಗಳ ನಿರ್ಮಾಣವಾಗಲಿದೆ. ಇದರಿಂದಾಗಿ ಚೀನಾ ತೈಲ ಆಮದಿನ ಸಂಕಷ್ಟದಿಂದ ಎಲ್ಲಾ ರೀತಿಯಲ್ಲೂ ಪಾರಾಗಲಿದೆ.
ಇವೆಲ್ಲದರ ಮಧ್ಯೆ ಚೀನಾ ಸೇನೆಯನ್ನು ಭಾರತದ ಉತ್ತರ ಭಾಗದಿಂದ ಹಿಮ್ಮೆಟ್ಟಿಸುವಲ್ಲಿ ಸಫಲವಾಗಲಿವೆಯೇ ಎಂಬ ಕುರಿತು ಸಾಕಷ್ಟು ಚಿಂತನೆ ನಡೆಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಚೀನಾ ನಾ ಕೊಡೆ ನೀ ಬಿಡೆ ಎಂಬ ರೀತಿಯಲ್ಲಿ ತಮ್ಮ ಹಠವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ನೇರವಾಗಿ ಯುದ್ದವನ್ನು ಮಾಡಲು ಎರಡೂ ರಾಷ್ಟ್ರಗಳು ಮುಂದಾಗದಿದ್ದರೂ, ಆರ್ಥಿಕವಾಗಿ ಒಂದು ಇನ್ನೊಂದನ್ನು ಮಣಿಸಲು ಪ್ರಯತ್ನಿಸುವ ಮೂಲಕ ಮುಸುಕಿನ ಗುದ್ದಾಟವನ್ನು ಮುಂದುವರೆಸುತ್ತಲೇ ಬಂದಿವೆ.
ಕೃಪೆ: ದ ವೈರ್






