ಸದ್ಯಕ್ಕೆ ಈಕೆ ಚಂಬಲ್ ಕಣಿವೆಯ ಕಟ್ಟಕಡೆಯ ಮಹಿಳಾ ಡಕಾಯಿತೆ ಇದ್ದಾಳು. ಕಳೆದ ಹದಿನೈದು ವರ್ಷಗಳಲ್ಲಿ ಸಾಧನಾ ಪಟೇಲ್ ವಿನಾ ಮತ್ತೊಬ್ಬ ಮಹಿಳೆ ಡಕಾಯತಿಯಲ್ಲಿ ಕಂಡು ಬಂದಿಲ್ಲ. ಈಕೆಗಿಂತ ಮೊದಲು ಚಂಬಲ್ ನಲ್ಲಿ ಕೇಳಿ ಬಂದ ಮಹಿಳೆಯ ಹೆಸರು ರಾಣಿ ಎಂಬಾಕೆಯದು. ಸಂತಾ ಖೈರವಾರ್ ಎಂಬ ಡಕಾಯಿತನ ಈ ಸಂಗಾತಿ ಮಾತೆತ್ತಿದರೆ ಬಂದೂಕುಕೈಗೆತ್ತಿಕೊಂಡು ಗುಂಡು ಹಾರಿಸುತ್ತಿದ್ದಳೆಂಬ ಖ್ಯಾತಿ ಗಳಿಸಿದ್ದವಳು. 2003ರಲ್ಲಿ ಈಕೆಯನ್ನು ಖೈರವಾರನೊಂದಿಗೆ ಗುಂಡಿನ ಚಕಮಕಿಯಲ್ಲಿ ಕೊಂದೆವೆಂದು ಪೊಲೀಸರು ಹೇಳಿದ್ದಾರೆ.
ತಿಂಗಳ ಹಿಂದೆ ನವೆಂಬರ್ 17ರಂದು 22 ವರ್ಷದ ಈ ಯುವತಿ ಸಾಧನಾ ಪಟೇಲಳನ್ನು ಬಂಧಿಸಿದ ಮಧ್ಯಪ್ರದೇಶದ ಪೊಲೀಸರು ಭಾರೀ ಸಾಧನೆ ಮಾಡಿದ್ದೇವೆಂದು ಬೀಗಿದರು. ಭಯೋತ್ಪಾದನೆಯ ಅವತಾರ, ರಕ್ತದಾಹಿ, ದಸ್ಯು ಸುಂದರಿ ಎಂದೆಲ್ಲ ಬಣ್ಣಿಸಲಾದ ಈಕೆಯನ್ನು ಟೀವಿ ಕ್ಯಾಮೆರಾಗಳ ಮುಂದೆ ಪರೇಡ್ ಮಾಡಿಸಿದರು.
ಹದಿನೈದು ದಿನಗಳ ನಂತರ ಇದೇ ಪೊಲೀಸರ ಪ್ರಕಾರ ಸಾಧನಾ ಪಟೇಲ್ ಸತ್ನಾ ಜೈಲಿನ ಅತ್ಯಂತ ಸಾಧು ಸ್ವಭಾವದ ಕೈದಿ. ಅಕೆಯ ತಲೆಗೆ ಕಟ್ಟಲಾಗಿರುವ ರಕ್ತದಾಹಿಯ ಪಟ್ಟ ಸುಳ್ಳೇ ಇದ್ದೀತು. ಆಕೆ ಯಾರತ್ತಲಾದರೂ ಒಂದೇ ಒಂದು ಸಲವೂ ಬಂದೂಕು ಕೈಗೆತ್ತಿಕೊಂಡು ಗುಂಡು ಹಾರಿಸಿರಲಾರಳು.
ಈಕೆಯನ್ನು ಸತ್ನಾ ಜಿಲ್ಲೆಯ ಅಡವಿಗಳಿಂದ ಬಂಧಿಸಲಾಗಿತ್ತು. ಈಕೆಯಿಂದ .315 ಬೋರ್ ಬಂದೂಕು ಮತ್ತು ಕಾಡತೂಸುಗಳು ಹಾಗೂ ದಿನನಿತ್ಯದ ಅಗತ್ಯವಸ್ತುಗಳಿದ್ದ ಹೆಗಲಿಗೆ ತೂಗಿ ಹಾಕಿಕೊಳ್ಳುವ ಚೀಲವೊಂದನ್ನು ವಶಪಡಿಸಿಕೊಳ್ಳಲಾಯಿತು ಎನ್ನುತ್ತಾರೆ ಪೊಲೀಸರು. ಬಹಳಷ್ಟು ಡಕಾಯಿತರು ಉತ್ತರಪ್ರದೇಶ-ಮಧ್ಯಪ್ರದೇಶ ಗಡಿ ಪ್ರದೇಶದಲ್ಲಿ ಸಕ್ರಿಯರು. ಒಂದು ರಾಜ್ಯದಲ್ಲಿ ಅಪರಾಧ ಎಸಗಿ ಇನ್ನೊಂದು ರಾಜ್ಯಕ್ಕೆ ನುಸುಳಿ ತಪ್ಪಿಸಿಕೊಳ್ಳುವುದು ಅವರ ಕಾರ್ಯತಂತ್ರ.
ಉತ್ತರಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ಜನಿಸಿದ ಸಾಧನಾ ಐದಡಿ ಎತ್ತರದ ಹೆಣ್ಣುಮಗಳು. ಕುಳ್ಳಿಯಾದ ಕಾರಣ ಆಕೆಗೆ ಲಟ್ಟಣಿಗೆ (ಚಪಾತಿ ಲಟ್ಟಿಸುವ ಸಾಧನ) ಎಂಬ ಅಡ್ಡ ಹೆಸರಿನಿಂದ ಕರೆಯಲಾಯಿತಂತೆ. ಆಕೆಯ ಚಿಕ್ಕಮ್ಮ ಚಂಬಲ್ ಕಣಿವೆಯ ಚುನ್ನಿಲಾಲ್ ಪಟೇಲ್ ತಂಡದ ಜೊತೆಗೆ ಸಂಪರ್ಕ ಹೊಂದಿದ್ದಳು. ಈ ತಂಡವೇ ಸಾಧನಾಳನ್ನು ಡಕಾಯಿತ ಲೋಕಕ್ಕೆ ಪರಿಚಯಿಸಿರಬಹುದು. ಸಾಧನಾ ಕುರ್ಮಿ ಜಾತಿಗೆ ಸೇರಿದಾಕೆ. ಸುಂದರ್ ಪಟೇಲ್, ಥೋಕಿಯಾ ಪಟೇಲ್ ಹಾಗೂ ದದುವಾ ಪಟೇಲ್ ಎಂಬ ಕುರ್ಮಿ ಡಕಾಯಿತರ ಹಲವು ತಂಡಗಳು ಚಂಬಲ್ ನಲ್ಲಿವೆ. ಮೇಲ್ಜಾತಿಯಾಗಲು ಬಯಸುವ ಪೂರ್ವೀ ಗಂಗಾ ಬಯಲಿನ ಕೆಳಜಾತಿ ಕುರ್ಮಿ. ಕೃಷಿ ಕರ್ಮಿ ಎಂಬುದು ಕಾಲಾಂತರದಲ್ಲಿ ಕುರ್ಮಿಯಾಗಿ ಅಪಭ್ರಂಶವಾಗಿರಬಹುದು ಎನ್ನಲಾಗಿದೆ.

ಎಂಟನೆಯ ತರಗತಿವರೆಗೆ ಓದಿದ್ದ ಸಾಧನಾಳಿಗೆ ಆಕೆಯ 17 ವಯಸ್ಸಿಗೇ ವಿವಾಹ ಮಾಡಲಾಯಿತು. ಆರೇ ತಿಂಗಳಲ್ಲಿ ಮದುವೆ ಮುರಿದುಬಿತ್ತು. ಈ ಅವಧಿಯಲ್ಲಿ ಆಕೆ ಆಗಾಗ ದೀರ್ಘ ಅವಧಿಯವರೆಗೆ ಮನೆಯಿಂದ ಕಣ್ಮರೆಯಾಗುತ್ತಿದ್ದಳು. ಕೆಲ ವರ್ಷಗಳ ನಂತರ ಸಾಧನಾಳ ತಂದೆಯ ಶವ ಅಡವಿಯಲ್ಲಿ ದೊರೆತಿತ್ತು. ಆಕೆಯನ್ನು ಮನೆಯೊಳಗೆ ಬಿಟ್ಟುಕೊಳ್ಳಲು ಆಕೆಯ ತವರುಮನೆಯವರು ನಿರಾಕರಿಸಿದಾಗ 2015ರಲ್ಲಿ ಸಾಧನಾ ಪಟೇಲ್ ಡಕಾಯಿತ ನವಲ್ ಧೋಬಿ ತಂಡವನ್ನು ಸೇರಿಕೊಂಡಳು. ಜೀವಭಯದಿಂದ ನವಲ್ ಪೊಲೀಸರಿಗೆ ಶರಣಾದ ನಂತರ ತಂಡದ ನೇತೃತ್ವವನ್ನು ಸಾಧನಾ ವಹಿಸಿಕೊಂಡಳು. ತೆಂಡು ಎಲೆಗಳ ಗುತ್ತಿಗೆದಾರರಿಂದ ಆಕೆ ಹಣ ವಸೂಲಿ ಮಾಡುತ್ತಿದ್ದಳು. 2018ರಲ್ಲಿ ಛೋಟೆಲಾಲ್ ಸೇನ್ ಎಂಬುವನನ್ನು ಒತ್ತೆ ಹಣಕ್ಕಾಗಿ ನಡೆಸಿದ ಅಪಹರಣದಲ್ಲಿ ಆಕೆಯ ಹೆಸರು ಕೇಳಿ ಬಂದಿತ್ತು. ಸೇನ್ ಕುಟುಂಬದ ಬಳಿ ಹಣವಿಲ್ಲವೆಂದು ತಿಳಿದ ನಂತರ ಅವನನ್ನು ಬಿಡುಗಡೆ ಮಾಡಲಾಯಿತು. ಹೊರಬಂದ ಸೇನ್ ಆಕೆಯ ಕ್ರೌರ್ಯ ನಿರ್ದಯೀ ಸ್ವಭಾವದ ಕುರಿತು ಅತಿರಂಜಿತ ಕತೆಗಳನ್ನು ಕಟ್ಟಿ ಹೇಳಿದ.
ಬಂಧನವನ್ನು ತಪ್ಪಿಸಿಕೊಳ್ಳಲು ವರ್ಷದ ಹಿಂದೆ ಸಾಧನಾ ಭೂಗತಳಾಗಿ ದೆಹಲಿ, ಹರಿಯಾಣ, ಉತ್ತರಪ್ರದೇಶಗಳಲ್ಲಿ ಕೆಲ ಕಾಲ ತಿರುಗಿದಳು. ಆಕೆಯ ತಂಡದ ಸದಸ್ಯರನ್ನು ಪೊಲೀಸರು ಒಬ್ಬೊಬ್ಬರನ್ನಾಗಿ ಬಂಧಿಸಿದರು. ಮೊನ್ನೆ ಸೆಪ್ಟಂಬರ್ ತಿಂಗಳಿನಲ್ಲಿ 110 ಕೇಸುಗಳಿದ್ದ ಇಬ್ಬರು ಡಕಾಯಿತರನ್ನು ಪೊಲೀಸರು ‘ಗುಂಡಿನ ಚಕಮಕಿಯಲ್ಲಿ’ ಕೊಂದ ನಂತರ ಸಾಧನಾ ಗೆ ಜೀವಭಯ ಹುಟ್ಟಿಕೊಂಡಿತು. ಶರಣಾಗತಳಾದಳು. ಸುಲಿಗೆ, ಅಪಹರಣ, ಲೂಟಿಯ ಆರು ಕೇಸುಗಳು ಈಕೆಯ ಮೇಲಿವೆ.
ಬುಲಂದಶಹರದಲ್ಲಿ ತಬ್ಬಲಿ ಮಗಳ ಹರಾಜು

ಉತ್ತರಪ್ರದೇಶದ ಬುಲಂದಶಹರಿನ ಮನೆಯೊಂದರಲ್ಲಿ ಜರುಗಿದ ಗುಪ್ತ ಹರಾಜಿನಲ್ಲಿ 75 ಸಾವಿರ ರುಪಾಯಿಗೆ ಮಾರಾಟ ಆಗುತ್ತಿದ್ದ 16 ವರ್ಷಗಳ ಕಿಶೋರಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಝಾರ್ಖಂಡದ ರಾಜಧಾನಿ ರಾಂಚಿ ಜಿಲ್ಲೆಯ ಹಳ್ಳಿಯೊಂದರ ಈಕೆ ತಾಯಿಯಿಲ್ಲದ ಮಗಳು. ಮಲತಾಯಿಯು ಕಲಾವತಿ ಎಂಬ ಕುಖ್ಯಾತ ಏಜೆಂಟ್ ಗೆ ಮಾರಾಟ ಮಾಡುತ್ತಾಳೆ. 1,300 ಕಿ.ಮೀ.ದೂರ ಪ್ರಯಾಣ ಮಾಡಿ ಬುಲಂದಶಹರದ ಮನೆಯೊಂದನ್ನು ತಲುಪುವ ಈ ಹೆಣ್ಣುಮಗುವಿನ ಹರಾಜಿನಲ್ಲಿ ಭಾಗವಹಿಸಲು ಆರು ಮಂದಿ ಗಂಡಸರು ಸೇರಿರುತ್ತಾರೆ. ಸುಳಿವಿನ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಕಲಾವತಿ ಮತ್ತು ಈ ಆರು ಮಂದಿ ಗಂಡಸರನ್ನು ಬಂಧಿಸಿದ್ದಾರೆ. ಅಳುತ್ತಲೇ ಇದ್ದ ಹೆಣ್ಣುಮಗು ತೀವ್ರ ಮನೋಕ್ಲೇಶದಿಂದ ಬಳಲಿತ್ತು. ಜಿಲ್ಲಾ ಶಿಶುಕಲ್ಯಾಣ ಸಮಿತಿಯ ಸುಪರ್ದಿನಲ್ಲಿ ಮನೋಚಿಕಿತ್ಸಕರಿಂದ ಮಗುವಿಗೆ ಆಪ್ತ ಸಮಾಲೋಚನೆ ದೊರೆತಿದೆ. ರಾಂಚಿಯಲ್ಲಿ ಪುನರ್ವಸತಿಗೆ ಏರ್ಪಾಡು ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮೀ ಉತ್ತರಪ್ರದೇಶ ಮತ್ತು ಹರಿಯಾಣದ ಜನ ವಿವಾಹಕ್ಕಾಗಿ ‘ವಧು’ ಖರೀದಿಗೆಂದು ಬುಲಂದಶಹರದ ಗುಪ್ತ ಹರಾಜುಗಳಿಗೆ ಬರುತ್ತಾರೆ. ಝಾರ್ಖಂಡ ಮತ್ತು ಬಿಹಾರದಿಂದ ‘ಕದ್ದು’ ತರಲಾಗುವ ಹೆಣ್ಣುಮಕ್ಕಳು ಇಲ್ಲಿ ಹರಾಜಿಗೆ ಒಳಗಾಗುತ್ತಾರೆ.
ತಲೆಮಾರಿನಿಂದ ತಲೆಮಾರಿಗೆ ಕುಟುಂಬಗಳು ವಿಭಜನೆಯಾದಂತೆ ಭೂ ಹಿಡುವಳಿಗಳು ಕುಗ್ಗುತ್ತ ನಡೆಯುತ್ತವೆ. ಜೊತೆ ಜೊತೆಗೆ ಹೆಣ್ಣು ಭ್ರೂಣಹತ್ಯೆಯ ಕಾರಣ ಗಂಡು-ಹೆಣ್ಣಿನ ಅನುಪಾತ ಹರಿಯಾಣ- ಪಂಜಾಬ್ ಹಾಗೂ ಉತ್ತರಪ್ರದೇಶದ ಹಲವು ಭಾಗಗಳಲ್ಲಿ ತೀವ್ರ ಕುಸಿತ ಕಂಡಿದೆ. ಈ ಎರಡು ಕಾರಣಗಳಿಂದಾಗಿ ಹಳ್ಳಿಗಾಡಿನ ಗಂಡುಗಳಿಗೆ ಸ್ಥಳೀಯವಾಗಿ ಹೆಣ್ಣು ದೊರೆಯುವುದು ದುಸ್ತರವಾಗಿದೆ. ವಿವಾಹವಾಗದೆ ಉಳಿಯಬೇಕಾಗುತ್ತದೆ.
ಲಗ್ನವಾಗದೆ ಉಳಿದಿರುವ ಗಂಡಸರಿಗೆ ಬಿಹಾರದಿಂದ ವಧುಗಳನ್ನು ತರುವುದಾಗಿ ಈ ಸೀಮೆಯಲ್ಲಿ ರಾಜಕಾರಣಿಗಳು ಚುನಾವಣೆಗಳಲ್ಲಿ ಭರವಸೆ ನೀಡುವುದುಂಟು. ಹರಿಯಾಣದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿರುವ ಓಂಪ್ರಕಾಶ್ ಧನಕರ್ ಅವರು ಇಂತಹ ಆಶ್ವಾಸನೆ ನೀಡಿ ಚುನಾವಣೆ ಗೆದ್ದಿರುವುದು ಹೌದು. ಬಿಜೆಪಿಗೆ ಬಲ ತುಂಬುವುದೆಂದರೆ ವಧುವಿಲ್ಲದೆ ಅಡ್ಡಾಡುತ್ತಿರುವ ಯುವಕರಿಗೆ ವಧು ದೊರೆತಂತೆಯೇ ಲೆಕ್ಕ ಎಂದು ಅವರು ಪ್ರಚಾರ ಮಾಡಿದ್ದರು. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೆಯ ಕಲಮಿನ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಮೋದಿ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಇನ್ನು ಮೇಲೆ ಹರಿಯಾಣದ ಗಂಡುಗಳಿಗೆ ಕಾಶ್ಮೀರದ ಹೆಣ್ಣುಗಳನ್ನು ತರುವ ಅಗ್ಗದ ಹೇಳಿಕೆ ನೀಡಿ ತೀವ್ರ ಟೀಕೆ ಎದುರಿಸಬೇಕಾಗಿತ್ತು.
ಹಾಲಿ ಅಸ್ಸಾಮ್, ಛತ್ತೀಸಗಢ, ತ್ರಿಪುರ, ಬಿಹಾರ, ರಾಜಸ್ತಾನ, ಪಶ್ಚಿಮ ಬಂಗಾಳ ಹಾಗೂ ನೇಪಾಳದಿಂದ ಬಡ ಹೆಣ್ಣುಮಕ್ಕಳನ್ನು ಖರೀದಿಸಿ ತಂದು ಇಲ್ಲಿನ ಗಂಡುಗಳಿಗೆ ಮದುವೆ ಮಾಡಲಾಗುತ್ತದೆ. ಈ ನತದೃಷ್ಟ ಹೆಣ್ಣುಮಕ್ಕಳ ಪೈಕಿ ಅನೇಕರು ಮದುವೆಯ ಒಳಗೆ ಮತ್ತು ಹೊರಗೆ ತೀವ್ರ ಲೈಂಗಿಕ ಶೋಷಣೆಗೆ ಗುರಿಯಾಗುತ್ತಾರೆ. ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟವಾಗುತ್ತಲೇ ಹೋಗುವ ಪ್ರಕರಣಗಳೂ ಅನೇಕ.
ತಾಯಿನಾಡಿಗೆ ಮರಳಲೊಲ್ಲದ ನೈಜೀರಿಯನ್ನರು

ಹೊಟ್ಟೆಪಾಡಿಗಾಗಿ ಭಾರತದ ನಗರಗಳಿಗೆ ಪ್ರವಾಸಿ ವೀಸಾದಲ್ಲಿ ಬಂದು ಇಲ್ಲಿಯೇ ಅಕ್ರಮವಾಗಿ ಬೀಡು ಬಿಡುವ ಆಫ್ರಿಕನ್ ದೇಶಗಳ ಬಡಜನರ ಪೈಕಿ ನೈಜೀರಿಯನ್ನರ ಸಂಖ್ಯೆ ದೊಡ್ಡದು. ದೆಹಲಿ ಮತ್ತು ಸುತ್ತಮುತ್ತಲ ನೋಯ್ಡಾ ಹಾಗೂ ಘಾಜಿಯಾಬಾದ್ ನಗರಗಳಲ್ಲೂ ಇವರು ಕಾಣಬರುತ್ತಾರೆ.
ತಮ್ಮ ದೇಶಕ್ಕೆ ವಾಪಸಾಗಲು ಒಲ್ಲದ ಇವರು ಹುಸಿ ಜಗಳವಾಡಿದಂತೆ ಮಾಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರುವ ತಂತ್ರಗಳನ್ನು ಹೆಣೆಯುವುದುಂಟು. ಈ ತಂತ್ರಗಳು ಫಲ ನೀಡಬಹುದು, ಇಲ್ಲವೇ ಹುಸಿ ಹೋಗಲೂಬಹುದು. ಮೊನ್ನೆ ನೋಯ್ಡಾದಲ್ಲಿ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಜಗಳ ಕಾದು ಪೊಲೀಸರನ್ನು ಆಕರ್ಷಿಸಿ ಬಂಧನಕ್ಕೆ ಒಳಗಾದರು ಇಬ್ಬರು ನೈಜೀರಿಯನ್ನರು. ಆದರೆ ಹುಸಿ ಜಗಳವೆಂದು ತಿಳಿದು ಹೋಯಿತು. 2014ರಿಂದ ಇಲ್ಲಿ ಅಕ್ರಮವಾಗಿ ವಾಸಿಸಿದ ಇವರನ್ನು ವಾಪಸು ಕಳಿಸಲಾಗುವುದು.